
೧೧ ನೇಯ ಶತಮಾನದ ಮಹಾನ ಶಿವಶರಣ ಎಲೇಶ್ವರ ಕೇತಯ್ಯನವರಿಂದ ಪೂಜಿಸಲ್ಪಟ್ಟ ಶಿವಾಲಯ.
ಗುರುಮಠಕಲ್/ ಎಲ್ಹೇರಿ: ತಾಲೂಕಿನ ಎಲ್ಹೇರಿ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಗೊಂಡಿರುವ ದೇವಾಲಯಗಳು ಶಿಥಿಲಾವಸ್ಥೆಯಲ್ಲಿ ಕಾಣ ಸಿಗುತ್ತವೆ.
ಸುತ್ತಲೂ ಹಬ್ಬಿರುವ ಮುಳ್ಳಿನ ಪೊದೆಗಳು, ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಬಿದ್ದ ಕಲ್ಲಿನ ರಾಶಿ, ಆಕರ್ಷಕವಾದ ಕೆತ್ತನೆಗಳು, ಹೊಳ ಹೊಕ್ಕರೆ ಇತಿಹಾಸ ಹಾಗೂ ಶಿಲ್ಪಕಾರರ ಕಲಾ ಸಂಪತ್ತನ್ನು ವಿವರಿಸಲು ಕಾತುರದಲ್ಲಿರುವಂತೆ ಭಾಸವಾಗುವ ಕಲಾಕೃತಿಗಳು.

ಕಲ್ಯಾಣದ ಚಾಲುಕ್ಯರ ಸಮಯದಲ್ಲಿ ಅಥವಾ ಅದಕ್ಕೂ ಪೂರ್ವದಲ್ಲಿ ನಿರ್ಮಿಸಲ್ಪಟ್ಟ ಯಲ್ಲೇರಿ ಗ್ರಾಮದ ಯಲ್ಲೇಶ್ವರ ದೇವಸ್ಥಾನವು ಶಿಲ್ಪಕಲೆಯ ಮೇರು ಕೃತಿಯಾಗಿದ್ದು ಪ್ರಸ್ತುತ ಅವಸಾನದ ಹಂತಕ್ಕೆ ಬಂದು ತಲುಪಿದೆ.
ಅದ್ಭುತ ವಾಸ್ತುಕಲೆ ಕಲ್ಲಿನ ಗೋಡೆಯಲ್ಲಿ ನಿರ್ಮಾಣದ ಶಿಲೆಗಳು, ಮಾಹಿತಿ ಪ್ರಕಾರ ದೇಗುಲ ನಿರ್ಮಾಣದ ಸರಿ ಸುಮಾರು ಹನ್ನೊಂದು ಹನ್ನೆರಡನೇ ಶತಮಾನವಿರಬಹುದು ಎಂದು ಅಂದಾಜಿಸಲಾಗುತ್ತದೆ. ಇಂದಿಗೂ ಈ ದೇವಸ್ಥಾನದ ಕೆತ್ತನೆಗಳು ಮನಸ್ಸಿಗೆ ಮುದ ನೀಡುತ್ತಿರುವುದು ಕಲಾಕಾರನ ಕೌಶಲಕ್ಕೆ ಹಿಡಿದ ಕನ್ನಡಿಯಾಗಿದೆ.
ಸುಮಾರು ಆರು ಅಡಿಗಳಷ್ಟು ಎತ್ತರದ ವರೆಗೆ ನುಣುಪಾದ ಬಳಪದ ಕಲ್ಲಿನಿಂದ ಕಟ್ಟಿರುವುದು ಆಕರ್ಷಣೆ ಯನ್ನು ಹೆಚ್ಚಿಸಿದೆ. ಬಳಪದ ಕಲ್ಲಿನಿಂದ ಮೇಲಿನ ಭಾಗವು ಉತ್ಕೃಷ್ಟ ಮಟ್ಟದ ಕಪ್ಪಿಶಿಲೆಯಿಂದ ನಿರ್ಮಿಸಲಾಗಿದ್ದು, ಗೋಡೆಗಳಲ್ಲಿ ಸೂಕ್ಷ್ಮ ಕೆತ್ತನೆಗಳ ಮೂಲಕ ಆಕರ್ಷಿಸುತ್ತವೆ ಈ ದೇವಸ್ಥಾನ ಸ್ವಲ್ಪ ಮಟ್ಟಿಗೆ ಮಹಾ ಮಂಡಲೇಶ್ವರನಿಂದ ಚಿತಾಪುರ ತಾಲೂಕಿನ ಕಾಳಗಿಯ ಸೂರ್ಯನಾರಾಯಣ ದೇವಸ್ಥಾನ ಹೋಲುತ್ತದೆ.
ದೇವಸ್ಥಾನದಲ್ಲಿನ ಕಲ್ಲಿನ ಗೋಡೆಯ ಮೇಲೆ ನಾಟ್ಯ ಭಂಗಿಯ ಶಿಲಾ ಬಾಲಕಿಯರು, ಸಾಲಾಗಿ ಸಾಗುವಂತೆ ಬಾಸವಾಗುವ ಗಜಪಡೆ, ಸೂಕ್ಷ್ಮವಾದ ಕೆತ್ತನೆಯಿಂದ ಹೂವು, ಎಲೆ, ಬಳ್ಳಿಯ ನಿರ್ಮಿಸಿದ್ದು ಶಿಲ್ಪಕಲೆ ಯನ್ನು ಅಭ್ಯಸಿಸುವವರಿಗೆ ಉತ್ತಮ ಸ್ಥಳವಾಗಿದೆ.
ಕ್ರಿ. ಶ. 1166 ಕಾಲದಲ್ಲಿ ಇದ್ದ ಮಹಾನ್ ಶಿವ ಭಕ್ತ ಕೇತಯ್ಯನವರಿಂದ ಪೂಜಿಸಲ್ಪಟ್ಟ ದೇವಾಲಯದ ಶಿವಲಿಂಗ ಯಲ್ಲೇಶ್ವರನೆಂದು ಹೇಳಲಾಗುತ್ತದೆ. ಢಾಂಬಿಕ ಭಕ್ತಿ, ತೋರಿಕೆಯ ಆಚಾರವನ್ನು ಕಟುಶಬ್ದಗಳಿಂದ ಟೀಕಿಸುತ್ತಿದ್ದ ಕೇತಯ್ಯನ ವರು ‘ಏಲೇಶ್ವರ’ ಎಂಬುದನ್ನು ತಮ್ಮ ವಚನಗಳ ಅಂಕಿತವಾಗಿಸಿದ್ದರು.
ಮಡದಿ ಸಾಯಿದೇವಮ್ಮ, ಮಕ್ಕಳಾದ ಶಿವಣ್ಣ ಮತ್ತು ಶಿವಕ್ಕರೊಂದಿಗೆ ಬೇಸಾಯವನ್ನೇ ಕಾಯಕ ಮಾಡಿಕೊಂಡು ದೇವರ ಇರುವಿಕೆಯನ್ನು ವ್ಯಕ್ತಿಯ ಅಂತರಂಗದ ಒಳ್ಳೆಯ ಮನಸ್ಸು ಮತ್ತು ಬಹಿರಂಗದ ಕ್ರಿಯೆಗಳಲ್ಲಿ ಕಾಣುತ್ತಿದ್ದರು, ಹೆಚ್ಚಾಗಿ ಸ್ತ್ರೀಯರಿಗೆ ಸಿಗಬೇಕಾದ ಸ್ಥಾನಮಾನಗಳಿಗಾಗಿ ಸೂಕ್ಷವಾಗಿ ವಚನಗಳ ಮೂಲಕ ನೇಮ,ವ್ರತ,ಆಚರಣೆ ಗಳ ಕುರಿತು, ಸುಮಾರು 200 ಕ್ಕೂ ಹೆಚ್ಚು ವಚನ ಬರೆದಿದ್ದಾರೆ, ಈಗ ಕೆಲವು ಸುಮಾರು 74 ವಚನಗಳು ಮಾತ್ರ ಸಿಕ್ಕಿವೆ, ಅಂತಹ ಮಹಾನ ಶಿವ ಭಕ್ತ ವಚನಕಾರರಿಂದ ಪ್ರತಿನಿತ್ಯ ಪೂಜೆ ಮಾಡುತ್ತಿದ್ದ ದೇವಾಲಯ ಇಂದು ಈ ಸ್ಥಿತಿಗೆ ತಲುಪಿದೆ.
ನಿಧಿಯಾಸೆಗೆ ಬಲಿಯಾದ ಬೆಲೆಕಟ್ಟಲಾಗದ ಶಿಲ್ಪಕಲೆ ಪುರಾತನವಾದ ಈ ದೇಗುಲದಲ್ಲಿ ನಿಧಿ ಸಿಗುತ್ತದೆ ಎಂಬ ದುರಾಸೆಯಿಂದ ಎಲ್ಲೆಂದರಲ್ಲಿ ಅಗೆದಿದ್ದು, ದೇವಾಲಯ ಸಂಪೂರ್ಣ ಶಿಥಿಲಗೊಂಡಿದೆ. ಸಂಬಂಧ ಪಟ್ಟ ಯಾವುದೇ ಇಲಾಖೆ, ಅಧಿಕಾರಿ, ಚುನಾಯಿತ ಜನ ಪ್ರತಿನಿಧಿಗಳು ಮತ್ತು ಸ್ಥಳೀಯ ಸಾರ್ವಜನಿಕರಿಂದಲೂ ನಿರ್ಲಕ್ಷ್ಯಕ್ಕೊಳಗಾಗಿರುವ ಈ
ದೇವಾಲಯವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ.
ಈಗಲಾದರೂ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಈ ಅಮೂಲ್ಯವಾದ ಕಲಾಕೃತಿಯನ್ನು ಸಂರಕ್ಷಿಸಬೇಕು ಮತ್ತು ಜಿಲ್ಲಾಡಳಿತ ಇತ್ತ ಗಮನಹರಿಸಿ ಇದನ್ನು ಅಭಿವೃದ್ಧಿಪಡಿಸಬೇಕು. ನಿರ್ಲಕ್ಷ್ಯಕ್ಕೆ ತುತ್ತಾಗಿ ಶಿಥಿಲಗೊಂಡ ಶಿಲ್ಪಕಲೆ ಇದರಿಂದ ಪುರಾತನವಾದ ಈ ಶಿಲ್ಪಕಲಾಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಿದಂತಾಗುತ್ತದೆ ಎನ್ನು ವುದು ಸ್ಥಳೀಯರಾದ ಅಭಿಪ್ರಾಯ.
ವರದಿ: ಜಗದೀಶ್ ಕುಮಾರ್ ಭೂಮಾ



















