ಮುಧೋಳ : ಈ ನಾಡಿಗೆ ಅಮೂಲ್ಯವಾದ ಷಟ್ ಶಾಸ್ತ್ರಿಗಳನ್ನು ನೀಡಿದ ನಮ್ಮ ನಾಡಿನ ಶ್ರೇಷ್ಠ ತತ್ವಜ್ಞಾನಿ ಶ್ರೀಮನ್ ನಿಜಗುಣ ಶಿವಯೋಗಿಶ್ವರ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯವಾಗಬೇಕಾಗಿದೆ ಎಂದು ಬೆಳಗಾವಿ ಜಿಲ್ಲೆಯ ಕಬ್ಬೂರಿನ ಯೋಗ ಸಾಧಕ ಶ್ರೀಧರ ಮುರಾಳೆ ಶರಣರು ಹೇಳಿದರು. ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳನ್ನು ಗೌರವಿಸಿ ನಿಜಗುಣರ “ಯೋಗ” ಗ್ರಂಥವನ್ನು ನೀಡಿ ಮಾತನಾಡಿದರು. ಗೌರವವನ್ನು ಸ್ವೀಕರಿಸಿ ಮಾತನಾಡಿದ ಶರಣಬಸವ ಶಾಸ್ತ್ರಿಗಳು ಮುಮುಕ್ಷುಗಳ ಕಲ್ಯಾಣಕ್ಕಾಗಿ ನಿಜಗುಣರು ಸಾರಿದ ಸಂದೇಶವನ್ನು ಸರ್ವರಿಗೂ ತಲುಪಿಸುವ ಕಾರ್ಯ ನಮ್ಮೆಲ್ಲರದ್ದು ಎಂದರು. ನಂತರ ಆಶ್ರಮದಿಂದ ಸಾಧಕರುಗಳಾದ ಶ್ರೀಧರ ಮುರಾಳೆ ಶರಣದಂಪತಿಗಳನ್ನು ಶಾಲು ಮಾಲೆ ವಸ್ತ್ರಗಳನ್ನು ನೀಡಿ ಗೌರವಿಸಲಾಯಿತು. ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ. ಕಿರಣ್ ಕುಮಾರ್ ದಳವಾಯಿ. ಕುಮಾರ್ ಗುರುಪ್ರಸಾದ್ ಸ್ವಾಮೀಜಿ. ಎಲ್ ಶ್ರೀನಿವಾಸ್ ಪ್ರಸಾದ್ ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















