ಶಿರಹಟ್ಟಿ ಆರ್.ಸಿ. ನಂ.1 ನಿವಾಸಿಗಳಿಗೆ ನ್ಯಾಯ ನೀಡುವಂತೆ ಸರ್ಕಾರಕ್ಕೆ ಮನವಿ..!
ಬೆಳಗಾವಿ/ಅಥಣಿ: ತಾಲೂಕಿನ ಶಿರಹಟ್ಟಿ ಗ್ರಾಮದ ಆರ್.ಸಿ. ನಂ.1 ಪ್ರದೇಶದಲ್ಲಿ ಕಳೆದ ಸುಮಾರು ನಾಲ್ಕು ದಶಕಗಳಿಂದ ವಾಸಿಸುತ್ತಿರುವ ಸುಮಾರು 500 ಕುಟುಂಬಗಳ ಪರವಾಗಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಅಥಣಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿ ಎಸ್ ಪಿ ಬೆಳಗಾವಿ ವಲಯ ಉಸ್ತುವಾರಿ ಹಾಗೂ ವಕೀಲ ಬಾಹುಸಾಹೇಬ್ ಕಾಂಬಳೆ, ಬಿ ಎಸ್ ಪಿ ಜಿಲ್ಲಾಧ್ಯಕ್ಷ ಸಂಜು ಕಾಂಬಳೆ, ವಕೀಲೆ ಗೀತಾ ಕಾಂಬಳೆ ಹಾಗೂ ಸ್ಥಳೀಯ ನಿವಾಸಿಗಳಾದ ರಾಜು ಕಾಂಬಳೆ, ಮುರುಗೇಶ್ ಅಥಣಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ನಿವಾಸಿಗಳು ಭಾಗವಹಿಸಿ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಮನವಿಯ ಪ್ರಕಾರ, ಶಿರಹಟ್ಟಿ ಗ್ರಾಮದ ಆರ್.ಸಿ. ನಂ.1 ಪ್ರದೇಶದಲ್ಲಿ ಸುಮಾರು 40 ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೆ ಜೂನ್ 11ರಂದು ಅಧಿಕಾರಿಗಳು ಭೇಟಿ ನೀಡಿ, ಈ ಜಾಗ ಕೃಷ್ಣ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರದ ಸ್ವಾಧೀನದಲ್ಲಿದೆ ಎಂದು ತಿಳಿಸಿ ಸ್ಥಳ ತೆರವುಗೊಳಿಸುವ ಸೂಚನೆ ನೀಡಿದ್ದಾರೆ. ಆದರೆ ಯಾವುದೇ ಪೂರ್ವ ನೋಟಿಸ್ ಅಥವಾ ಸೂಕ್ತ ಮಾಹಿತಿ ನೀಡದೆ ಇಂತಹ ಕ್ರಮ ಕೈಗೊಂಡಿರುವುದು ನಿವಾಸಿಗಳಲ್ಲಿ ಭಯ ಮತ್ತು ಅನಿಶ್ಚಿತತೆ ಉಂಟುಮಾಡಿದೆ ಎಂದು ಆರೋಪಿಸಲಾಗಿದೆ.
ಬಹುಜನ ಸಮಾಜ ಪಕ್ಷದ ಮುಖಂಡರು, ಈಗಾಗಲೇ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳನ್ನು ಏಕಾಏಕಿ ಸ್ಥಳಾಂತರಿಸಲು ಮುಂದಾಗಿರುವುದು ಮಾನವೀಯ ದೃಷ್ಟಿಯಿಂದ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಸರ್ಕಾರ ಮೊದಲು ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದರೊಂದಿಗೆ, ಪ್ರದೇಶದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿರುವುದರಿಂದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು. ಮೂಲಭೂತ ಸೌಲಭ್ಯಗಳ ಕೊರತೆಯಿಂದ ನೂರಾರು ಕುಟುಂಬಗಳ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದ್ದು, ತಕ್ಷಣವೇ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.
ಬಿ ಎಸ್ ಪಿ ಮುಖಂಡರು, ದಶಕಗಳಿಂದ ವಾಸಿಸುತ್ತಿರುವ ಕುಟುಂಬಗಳಿಗೆ ಶಾಶ್ವತ ಪುನರ್ವಸತಿ ವ್ಯವಸ್ಥೆ ಕಲ್ಪಿಸಿ, ಅವರ ಬದುಕಿನ ಭದ್ರತೆ ಹಾಗೂ ಮೂಲಭೂತ ಹಕ್ಕುಗಳನ್ನು ರಕ್ಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಜನರೊಂದಿಗೆ ಸೇರಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಆರ್.ಸಿ. ನಂ.1 ಪ್ರದೇಶದ ನಿವಾಸಿಗಳು ಉಪಸ್ಥಿತರಿದ್ದರು.
ವರದಿ ವಿಠ್ಠಲ ಖೋಕಾಟೆ




















