
ವರ್ಷಗಳಿಂದ ಬಾಕಿ ಉಳಿದ ಅರ್ಜಿಗಳ ಬಗ್ಗೆ ಅಧಿಕಾರಿಗಳ ವಿರುದ್ಧ ಆಕ್ರೋಶ : 56 ದೂರುಗಳ ಸ್ವೀಕಾರ, 37 ಅರ್ಜಿಗಳ ತನಿಖೆಗೆ ಆದೇಶ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗ್ರಾಮೀಣ ಭಾಗದ ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಇಲಾಖೆಗಳ ಮುಂದೆ ಅಲೆದಾಡಿ ನ್ಯಾಯಕ್ಕಾಗಿ ಕಾಯುತ್ತಿದ್ದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಕರ್ನಾಟಕ ಲೋಕಾಯುಕ್ತದ ಜನಸ್ಪಂದನ ಸಭೆಯಲ್ಲಿ ಮಂಡಿಸಿದ ಘಟನೆ ಕೊರಟಗೆರೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಲೋಕಾಯುಕ್ತ ತುಮಕೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಈ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಹಾಗೂ ಹಿರಿಯ ಅಧಿಕಾರಿಗಳು, ಹಲವು ವರ್ಷಗಳಿಂದ ಸಲ್ಲಿಕೆಯಾಗಿದ್ದ ಅರ್ಜಿಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ 2019ರಿಂದ 2026ರವರೆಗೆ ವಿವಿಧ ಇಲಾಖೆಗಳ ವಿರುದ್ಧ ಸಲ್ಲಿಕೆಯಾಗಿದ್ದ ಅನೇಕ ಅರ್ಜಿಗಳಿಗೆ ಸಮರ್ಪಕ ತನಿಖೆ ನಡೆಸದಿರುವುದು ಹಾಗೂ ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿರುವುದಾಗಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಮಾತನಾಡಿದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಿವೇಕಾನಂದ ಜಿ. ತುಳಸಿಗೇರಿ, ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳು ಅತಿ ಹೆಚ್ಚು ಪ್ರಮಾಣದಲ್ಲಿ ಬಂದಿರುವುದಾಗಿ ತಿಳಿಸಿದರು. ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳಿಗೆ ಸ್ವೀಕೃತಿ ಪತ್ರ ನೀಡದಿರುವುದು, ಅರ್ಜಿಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡುವುದು ಮತ್ತು ಸಮರ್ಪಕ ದಾಖಲೆ ನಿರ್ವಹಣೆ ಇಲ್ಲದಿರುವ ಬಗ್ಗೆ ಹೆಚ್ಚಿನ ದೂರುಗಳು ದಾಖಲಾಗಿವೆ ಎಂದು ಹೇಳಿದರು.
ಸಭೆಯಲ್ಲಿ ಒಟ್ಟು 56 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 37 ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತನಿಖೆ ಹಾಗೂ ಅಗತ್ಯ ಕ್ರಮಕ್ಕಾಗಿ ವರ್ಗಾಯಿಸಲಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಎರಡು ತಿಂಗಳ ಅವಧಿಯಲ್ಲಿ ಪ್ರಕರಣಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವ ಭರವಸೆ ನೀಡಿದ್ದಾರೆ.
ಸಭೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ವಿವೇಕಾನಂದ ಜಿ. ತುಳಸಿಗೇರಿ, ತಾಲೂಕು ದಂಡಾಧಿಕಾರಿ ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ ಅಪೂರ್ವ ಸೇರಿದಂತೆ ಕಂದಾಯ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳು
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇಳಿಬಂದ ಅಹವಾಲುಗಳಲ್ಲಿ ಜಮೀನು ಸರ್ವೆ, ಪಹಣಿ ತಿದ್ದುಪಡಿ, ಸಾಗುವಳಿ ಚೀಟಿ ವಿತರಣೆ, ರಸ್ತೆ ಮತ್ತು ನದಿ ಒತ್ತುವರಿ ತೆರವು, ಗ್ರಾಮ ಪಂಚಾಯಿತಿ ಆಸ್ತಿ ವಿವಾದಗಳು, ಪಡಿತರ ಚೀಟಿ ನೀಡುವಲ್ಲಿ ವಿಳಂಬ, ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದಿರುವುದು, ಅಕ್ರಮ ಕಟ್ಟಡ ನಿರ್ಮಾಣ ಹಾಗೂ ಕಲ್ಲುಕ್ವಾರೆಗಳಿಂದ ರೈತರಿಗೆ ಉಂಟಾಗುತ್ತಿರುವ ತೊಂದರೆಗಳು ಪ್ರಮುಖವಾಗಿದ್ದವು.
ವಿಶೇಷವಾಗಿ ಸುವರ್ಣಮುಖಿ ನದಿಯ ಒತ್ತುವರಿ ಪ್ರಕರಣಗಳು ಹಾಗೂ ಸರ್ಕಾರಿ ಜಾಗಗಳ ಅಕ್ರಮ ಬಳಕೆಯ ಬಗ್ಗೆ ಹಲವು ದೂರುಗಳು ದಾಖಲಾಗಿವೆ. ಕೆಲವು ಗ್ರಾಮಗಳಲ್ಲಿ ನದಿ ಹಳ್ಳಗಳನ್ನು ಮುಚ್ಚಿ ಖಾಸಗಿ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಇದರಿಂದ ಪರಿಸರ ಹಾಗೂ ಕೃಷಿ ಚಟುವಟಿಕೆಗಳಿಗೆ ಧಕ್ಕೆಯಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡರು.
ಮಠದ ಆಸ್ತಿ ಅಕ್ರಮ ವರ್ಗಾವಣೆ ಆರೋಪ ಗಂಭೀರ ಚರ್ಚೆಗೆ
ಸಭೆಯಲ್ಲಿ ಹೆಚ್ಚಿನ ಗಮನ ಸೆಳೆದ ಪ್ರಕರಣಗಳಲ್ಲಿ ಕೋಡ್ಲಹಳ್ಳಿಯ ಬಳ್ಳಾರಿ ಉಜ್ಜಯಿನಿ ಪೀಠದ ಖಾಸಾ ಶಾಖೆಯಾದ ಸತ್ಯಧರ್ಮ ಮಠಕ್ಕೆ ಸೇರಿದ ಇನಾಂ ಭೂಮಿಯ ಅಕ್ರಮ ವರ್ಗಾವಣೆ ಆರೋಪವೂ ಒಂದಾಗಿದೆ.
ಈ ಕುರಿತು ಹೈಕೋರ್ಟ್ ವಕೀಲ ಪರಮೇಶಾರಾಧ್ಯ ಅವರು ದೂರು ಸಲ್ಲಿಸಿ, ಮಠಕ್ಕೆ ಸೇರಿದ ಸುಮಾರು 18 ಎಕರೆ ಇನಾಂ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು. ಅಲ್ಲದೆ ಅಸ್ತಿತ್ವದಲ್ಲೇ ಇಲ್ಲದ ದೇವರ ಹೆಸರಿನಲ್ಲಿ 15 ಕೋಟಿಗೂ ಅಧಿಕ ತಸ್ತಿಕ್ ಹಣವನ್ನು ಬೆಂಗಳೂರಿನ ಉತ್ತರಾಧಿ ಮಠಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಪ್ರಕರಣದಲ್ಲಿ ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ಲೋಕಾಯುಕ್ತ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ದೂರಿನ ಕುರಿತು ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಪಾರದರ್ಶಕ ಆಡಳಿತಕ್ಕೆ ಲೋಕಾಯುಕ್ತ ಒತ್ತು ನೀಡುತ್ತದೆ
ಸಭೆಯಲ್ಲಿ ಮಾತನಾಡಿದ ಲೋಕಾಯುಕ್ತ ಅಧಿಕಾರಿಗಳು, ಜನರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದರು. ಸಾರ್ವಜನಿಕರಿಂದ ಬರುವ ಪ್ರತಿಯೊಂದು ಅರ್ಜಿಗೂ ಸ್ವೀಕೃತಿ ನೀಡಬೇಕು ಹಾಗೂ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ಅಲ್ಲದೆ ಭೂ ದಾಖಲೆಗಳ ಡಿಜಿಟಲೀಕರಣ, ಕಂದಾಯ ಸೇವೆಗಳ ಸರಳೀಕರಣ, ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .
ವರದಿ : ಪ್ರಸನ್ನಕುಮಾರ್. ಎಸ್. ಕೊರಟಗೆರೆ




















