ಆಕಾಶದಲ್ಲಿ ನಡೆಯುವ ವಿದ್ಯಮಾನಗಳು ತುಂಬ ಕುತೂಹಲಕಾರಿ ಅಷ್ಟೇ ರೋಮಾಂಚನಕಾರಿ ಆಗಿರುತ್ತವೆ. ಪ್ರತಿಯೊಂದು ಪ್ರಕ್ರಿಯೆಯ ಒಳಾರ್ಥ ಅರಿಯಲು ಸಾಕಷ್ಟು ಸಮಯ ಹಿಡಿಯುತ್ತದೆ. ನಭೋಮಂಡಲದಲ್ಲಿ ಗೋಚರಿಸುವ ಅಸಂಖ್ಯಾತ ಆಕಾಶಕಾಯಗಳು ನಮ್ಮನ್ನು ಪದೇ ಪದೇ ಆಕರ್ಷಿಸುತ್ತವೆ. ಪ್ರತಿಯೊಂದು ಆಕಾಶಕಾಯ ಬಹಳ ವಿಶಿಷ್ಟವಾಗಿದ್ದು, ರಚನೆ ಮತ್ತು ಸ್ವರೂಪವು ಕ್ಲಿಷ್ಟಕರವು ಆಗಿರುತ್ತದೆ. ಅನಾದಿಕಾಲದಿಂದಲೂ ಈ ನಿಗೂಢ ಆಕಾಶಕಾಯಗಳು ಮನುಕುಲವನ್ನು ತಮ್ಮತ್ತ ಸೆಳೆಯುತ್ತಲೇ ಇವೆ. ನಭೋಮಂಡಲದಲ್ಲಿ ಹಲವಾರು ಸ್ಮರಣೀಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಈ ರೀತಿಯ ಚಟುವಟಿಕೆಗಳಲ್ಲಿ ‘ಗ್ರಹಣ’ ಎನ್ನುವುದು (Eclipse) ಬಹಳ ಪ್ರಮುಖವಾದದ್ದು.
ಅಂದಹಾಗೆ ಗ್ರಹಣವೆಂದರೆ ಕೆಲವರು ಭಯ ಹುಟ್ಟಿಸುತ್ತಾರೆ. ಕೆಲವರಿಗೆ ಇದರಿಂದ ಲಾಭವು ದೊರೆಯುತ್ತದೆ… ಏನಿದರ ಗುಟ್ಟು? ಈ ಪ್ರಶ್ನೆಗಳಿಗೆ ಖಚಿತ ಉತ್ತರ ಸಿಗುವುದು ಕಷ್ಟ. ಖಗೋಳ ಭಾಷೆಯಲ್ಲಿ ವಿವರಿಸಬೇಕಾದರೆ, ಇದೊಂದು ಸಹಜ ಹಾಗೂ ಸರಳ ಪ್ರಕ್ರಿಯೆ. (ಆದರೂ ಸಹ ಇದರ ಹೆಸರು ಹೇಳಿ ಕೆಲವರು ಸಮಾಜದ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ದುರಂತವೇ ಸರಿ.)
ಸೂರ್ಯ, ಚಂದ್ರ ಮತ್ತು ಭೂಮಿಯ ಚೆಲ್ಲಾಟದ ಮೂಲವೇ ಗ್ರಹಣ. ಈ ರೀತಿಯ ಪ್ರಕ್ರಿಯೆ ಖಗೋಳ ವಿಜ್ಞಾನಿಗಳನ್ನು ಆಕರ್ಷಿಸಿ, ಅನೇಕ ವೈಜ್ಞಾನಿಕ ಅಂಶಗಳನ್ನು ತಿಳಿಯಲು ಸಹಾಯ ಮಾಡುತ್ತದೆ. ಸೂರ್ಯ ಮತ್ತು ಚಂದ್ರ ಗ್ರಹಣಗಳು ಪ್ರತಿ ವರ್ಷವೂ ನಡೆಯುತ್ತಲೇ ಇರುತ್ತವೆ. ವಿಜ್ಞಾನಿಗಳ ಹೊಸ ಹೊಸ ಅನ್ವೇಷಣೆಗಳಿಗೆ ಈ ಗ್ರಹಣಗಳು ಸಹಾಯ ಮಾಡುತ್ತಿರುತ್ತವೆ.
ಇದೇ ಸೆಪ್ಟೆಂಬರ್ 7 ರಂದು ಚಂದ್ರ ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ವೀಕ್ಷಣೆಗೆ ಎಲ್ಲರೂ ಕುತೂಹಲದಿಂದ ಕಾದಿದ್ದಾರೆ.
ಈ ನಿಟ್ಟಿನಲ್ಲಿ ಚಂದ್ರಗ್ರಹಣದ ಕುರಿತು ವಾಸ್ತವ ಕೆಲ ಸಂಗತಿಗಳು ತಮ್ಮೆಲ್ಲರ ಮುಂದೆ ಹಂಚಿಕೊಳ್ಳುವ ಸಣ್ಣ ಪ್ರಯತ್ನ ಈ ಲೇಖನದ ಮುಖಾಂತರ ಮಾಡಲಾಗಿದೆ.
ಗ್ರಹಣವು ಒಂದು ಬಾಹ್ಯಾಕಾಶದ ವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಒಂದು ಖಗೋಳಶಾಸ್ತ್ರೀಯ ಘಟನೆ ಗ್ರಹಣ ಎನ್ನುತ್ತೇವೆ.
ಆಗಸದಲ್ಲಿ ನಡೆಯುವ ನೆರಳು ಬೆಳಕಿನ ಆಟವೇ ಗ್ರಹಣ. ಪ್ರಕೃತಿಯ ಈ ಪ್ರಕ್ರಿಯೆಯನ್ನು ಮೂಢನಂಬಿಕೆಯಾಗಿ ಬಿಂಬಿಸಿ ಇತ್ತಿಚೆಗೆ ಕೆಲ ವ್ಯಕ್ತಿಗಳಿಂದ ಹಣಗಳಿಸುವ ಪ್ರವೃತ್ತಿ ಮಾಡಲಾಗುತ್ತಿರುವುದು ಅಕ್ಷರಶಃ ಅಪರಾಧ…
ಸೂರ್ಯ ಹಾಗೂ ಭೂಮಿಯ ನಡುವೆ ಕೆಲ ಕಾಲ ಅನ್ಯ ಗ್ರಹಗಳು ಬರುವ ಕಾರಣ ಗ್ರಹಣ ಸಂಭವಿಸುತ್ತವೆ. ಬ್ರಹ್ಮಾಂಡದಲ್ಲಿ ವರ್ಷದ ಬಹುತೇಕ ದಿನಗಳಲ್ಲಿ ಗ್ರಹಣ ನಡೆಯುತ್ತಲೇ ಇರುತ್ತದೆ. ಪ್ರಕೃತಿಯ ಈ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ದಾಖಲಿಸಿದ್ದಾರೆ.
ಚಂದ್ರಗ್ರಹಣ ಎಂದರೆ ಭೂಮಿ, ಸೂರ್ಯ ಮತ್ತು ಚಂದ್ರನ ನಡುವೆ ನೇರವಾಗಿ ಬಂದಾಗ ಸಂಭವಿಸುವ ಒಂದು ಖಗೋಳ ಘಟನೆಯಾಗಿದೆ. ಇದು ಭೂಮಿಯು ಸೂರ್ಯನ ಬೆಳಕನ್ನು ಚಂದ್ರನ ಮೇಲೆ ಬೀಳದಂತೆ ನಿರ್ಬಂಧಿಸಿದಾಗ ಉಂಟಾಗುತ್ತದೆ, ಮತ್ತು ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ, ಇದರಿಂದ ಚಂದ್ರನು ಮಬ್ಬಾಗಿ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸುತ್ತಾನೆ.
ಇನ್ನು ಸರಳವಾಗಿ ಹೇಳುವುದಾದರೆ, ಭೂಮಿಯು ನೇರವಾಗಿ ಸೂರ್ಯ ಮತ್ತು ಚಂದ್ರನ ನಡುವೆ ಚಲಿಸಿದಾಗ ಮತ್ತು ಚಂದ್ರನು ಭೂಮಿಯ ನೆರಳಿನಲ್ಲಿ ಹಾದು ಹೋದಾಗ ಇದು ಸಂಭವಿಸುವ ಒಂದು ಘಟನೆಯಾಗಿದೆ. ಹುಣ್ಣಿಮೆಯ ಸಮಯದಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರರು ನೇರ ರೇಖೆಯಲ್ಲಿ ಒಟ್ಟುಗೂಡಿದಾಗ ಚಂದ್ರಗ್ರಹಣ ಸಂಭವಿಸುತ್ತದೆ.
ಚಂದ್ರಗ್ರಹಣದ ಪ್ರಮುಖ ಅಂಶಗಳು ಹೀಗಿವೆ –
ಒಂದು ಜೋಡಣೆ: ಚಂದ್ರಗ್ರಹಣ ಸಂಭವಿಸಲು, ಸೂರ್ಯ, ಭೂಮಿ ಮತ್ತು ಚಂದ್ರರು ಸರಿಸುಮಾರು ಒಂದು ಸಾಲಿನಲ್ಲಿ ಜೋಡಿಸಲ್ಪಟ್ಟಿರಬೇಕು. ಇಲ್ಲದಿದ್ದರೆ, ಭೂಮಿಯು ಚಂದ್ರನ ಮೇಲ್ಮೈ ಮೇಲೆ ನೆರಳು ಬೀಳಲು ಸಾಧ್ಯವಿಲ್ಲ ಮತ್ತು ಗ್ರಹಣ ಸಂಭವಿಸಲು ಸಾಧ್ಯವಿಲ್ಲ.
ಭೂಮಿಯ ನೆರಳು:
ಸೂರ್ಯ, ಭೂಮಿ ಮತ್ತು ಚಂದ್ರರು ಒಂದೇ ನೇರ ರೇಖೆಯಲ್ಲಿ ಬಂದಾಗ, ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಭೂಮಿಯ ನೆರಳು ಚಂದ್ರನನ್ನು ಭಾಗಶಃ ಆವರಿಸುವ ರೀತಿಯಲ್ಲಿ ಮೂರು ಕಾಯಗಳು ಜೋಡಿಸಿದಾಗ, ಭಾಗಶಃ ಚಂದ್ರಗ್ರಹಣ ಉಂಟಾಗುತ್ತದೆ. ಮತ್ತೊಂದೆಡೆ, ಭೂಮಿಯ ನೆರಳಿನ ಹೊರ ಭಾಗ ಮಾತ್ರ ಚಂದ್ರನನ್ನು ಆವರಿಸಿದರೆ, ಪೆನಂಬ್ರಲ್ ಚಂದ್ರಗ್ರಹಣ ಸಂಭವಿಸುತ್ತದೆ.
ಹುಣ್ಣಿಮೆಯ ದಿನ:
ಚಂದ್ರಗ್ರಹಣ ಯಾವಾಗಲೂ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ, ಏಕೆಂದರೆ ಈ ಹಂತದಲ್ಲಿಯೇ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬರಲು ಸಾಧ್ಯ.
ಕೆಂಪು ಚಂದ್ರನ ಪರಿಣಾಮ:
ಭೂಮಿಯ ವಾತಾವರಣವು ಇತರ ಬಣ್ಣಗಳನ್ನು ಹೀರಿಕೊಂಡು, ಸೂರ್ಯನ ಕೆಂಪು ಬಣ್ಣದ ಬೆಳಕನ್ನು ಚಂದ್ರನ ಕಡೆಗೆ ಬಾಗಿಸುತ್ತದೆ. ಇದರಿಂದಾಗಿ ಸಂಪೂರ್ಣ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಗಾಢವಾದ ಕೆಂಪು ಬಣ್ಣದಲ್ಲಿ ಕಾಣಿಸಬಹುದು. ಅಥವಾ ಚಂದ್ರಗ್ರಹಣವು ಹಳದಿ, ಕಿತ್ತಳೆ ಅಥವಾ ಕಂದು ಬಣ್ಣದ್ದಾಗಿರಬಹುದು. ಏಕೆಂದರೆ ಭೂಮಿಯ ವಾತಾವರಣದಲ್ಲಿರುವ ವಿವಿಧ ರೀತಿಯ ಧೂಳಿನ ಕಣಗಳು ಮತ್ತು ಮೋಡಗಳು ವಿಭಿನ್ನ ತರಂಗಾಂತರಗಳನ್ನು ಚಂದ್ರನ ಮೇಲ್ಮೈಯನ್ನು ತಲುಪಲು ಅನುವು ಮಾಡಿಕೊಡುತ್ತದೆ.
ಅಂಬ್ರಾ ಮತ್ತು ಪೆನಂಬ್ರಾ:
ಭೂಮಿಯ ನೆರಳಿನಲ್ಲಿ ಎರಡು ಭಾಗಗಳಿವೆ, ಗಾಢವಾದ ಅಂಬ್ರಾ ಮತ್ತು ಭಾಗಶಃ ನೆರಳಿರುವ ಪೆನಂಬ್ರಾ. ಪೂರ್ಣ ಗ್ರಹಣದ ಸಮಯದಲ್ಲಿ ಚಂದ್ರನು ಅಂಬ್ರಾದಲ್ಲಿರುತ್ತಾನೆ.
ಖಗೋಳ ಘಟನೆ: ಚಂದ್ರಗ್ರಹಣವು ಒಂದು ಖಗೋಳ ಘಟನೆಯಾಗಿದ್ದು , ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸಿದಾಗ ಚಂದ್ರನು ಕತ್ತಲೆಯಾಗುತ್ತಾನೆ. ಅಂತಹ ಜೋಡಣೆಯು ಗ್ರಹಣ ಋತುವಿನಲ್ಲಿ , ಸರಿಸುಮಾರು ಪ್ರತಿ ಆರು ತಿಂಗಳಿಗೊಮ್ಮೆ, ಹುಣ್ಣಿಮೆಯ ಹಂತದಲ್ಲಿ, ಚಂದ್ರನ ಕಕ್ಷೆಯ ಸಮತಲವು ಭೂಮಿಯ ಕಕ್ಷೆಯ ಸಮತಲಕ್ಕೆ ಹತ್ತಿರದಲ್ಲಿದ್ದಾಗ ಸಂಭವಿಸುತ್ತದೆ. ಸೂರ್ಯ , ಭೂಮಿ ಮತ್ತು ಚಂದ್ರನು ಇತರ ಎರಡರ ನಡುವೆ ಭೂಮಿಯೊಂದಿಗೆ ನಿಖರವಾಗಿ ಅಥವಾ ತುಂಬಾ ಹತ್ತಿರದಲ್ಲಿ ( ಸಿಜಿಜಿಯಲ್ಲಿ ) ಜೋಡಿಸಲ್ಪಟ್ಟಾಗ ಮಾತ್ರ ಇದು ಸಂಭವಿಸಬಹುದು , ಇದು ಚಂದ್ರನು ಯಾವುದೇ ಚಂದ್ರನ ನೋಡ್ ಬಳಿ ಇರುವಾಗ ಹುಣ್ಣಿಮೆಯ ರಾತ್ರಿಯಲ್ಲಿ ಮಾತ್ರ ಸಂಭವಿಸಬಹುದು. ಚಂದ್ರಗ್ರಹಣದ ಪ್ರಕಾರ ಮತ್ತು ಉದ್ದವು ಚಂದ್ರನ ನೋಡ್‌ಗೆ ಸಾಮೀಪ್ಯವನ್ನು ಅವಲಂಬಿಸಿರುತ್ತದೆ.
ದೃಶ್ಯಕತೆ:
ಭೂಮಿಯ ಮೇಲೆ ಚಂದ್ರನು ಗೋಚರಿಸುವ ಎಲ್ಲಾ ಪ್ರದೇಶಗಳಿಂದ ಚಂದ್ರಗ್ರಹಣವನ್ನು ನೋಡಬಹುದು, ಸೂರ್ಯಗ್ರಹಣದಂತೆ ನಿರ್ಬಂಧಿತ ಪ್ರದೇಶಗಳಲ್ಲಿ ಮಾತ್ರವಲ್ಲ. ಅಲ್ಲದೆ ಪ್ರಪಂಚದ ತುಲನಾತ್ಮಕವಾಗಿ ಸಣ್ಣ ಪ್ರದೇಶದಿಂದ ಮಾತ್ರ ವೀಕ್ಷಿಸಬಹುದಾದ ಸೂರ್ಯಗ್ರಹಣಕ್ಕಿಂತ ಭಿನ್ನವಾಗಿ , ಚಂದ್ರಗ್ರಹಣವನ್ನು ಭೂಮಿಯ ರಾತ್ರಿಯ ಬದಿಯಲ್ಲಿ ಎಲ್ಲಿಂದಲಾದರೂ ವೀಕ್ಷಿಸಬಹುದು. ಚಂದ್ರನ ನೆರಳು ಚಿಕ್ಕದಾಗಿರುವುದರಿಂದ ಒಟ್ಟು ಚಂದ್ರಗ್ರಹಣವು ಸುಮಾರು ಎರಡು ಗಂಟೆಗಳವರೆಗೆ ಇರುತ್ತದೆ (ಆದರೆ ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ಒಟ್ಟು ಸೂರ್ಯಗ್ರಹಣವು ಕೆಲವೇ ನಿಮಿಷಗಳವರೆಗೆ ಇರುತ್ತದೆ). ಅಲ್ಲದೆ, ಸೂರ್ಯಗ್ರಹಣಗಳಿಗಿಂತ ಭಿನ್ನವಾಗಿ, ಯಾವುದೇ ಕಣ್ಣಿನ ರಕ್ಷಣೆ ಅಥವಾ ವಿಶೇಷ ಮುನ್ನೆಚ್ಚರಿಕೆಗಳಿಲ್ಲದೆ ಚಂದ್ರಗ್ರಹಣಗಳನ್ನು ವೀಕ್ಷಿಸಬಹುದಾಗಿದೆ. ವಿಶೇಷವಾಗಿ. ಹೇಳಬೇಕೆಂದರೆ ಗ್ರಹಣಗಳನ್ನು ಭಯಪೂರಿತ ಮನಸ್ಸಿನಿಂದ ಬರಮಾಡಿಕೊಳ್ಳುವ ಬದಲು ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸತ್ಯಾನ್ವೇಷಕರಂತೆ ನಿರೀಕ್ಷಿಸಬೇಕು. ಗ್ರಹಣಗಳು ಆಕಾಶಕಾಯಗಳ ಬಗೆಗಿನ ನೂತನ ಸತ್ಯಗಳನ್ನು ಆವಿಷ್ಕರಿಸಲು ಅತ್ಯಂತ ವಿರಳ ಅವಕಾಶವನ್ನು ಒದಗಿಸುತ್ತವೆ.
ವೈಜ್ಞಾನಿಕ ಸತ್ಯ: ರಾಹುಕೇತುಗಳು ಸೂರ್ಯ ಚಂದ್ರರನ್ನು ನುಂಗುವ ಕಾರಣದಿಂದ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳು ಸಂಭವಿಸುತ್ತದೆನ್ನುವ ಮೂಢನಂಬಿಕೆಯನ್ನು ಜನಸಾಮಾನ್ಯರ ಮನದಲ್ಲಿ ಆಳವಾಗಿ ಬಿತ್ತಲಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜನರು ಸತ್ಯವನ್ನು ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು. ಚಂದ್ರನನ್ನು ಭೂಮಿಯು ಪೂರ್ತಿಯಾಗಿ ಮರೆಮಾಚಿದಾಗ ‘ಚಂದ್ರ ಗ್ರಹಣ’ ಸಂಭವಿಸುತ್ತದೆ. ಗ್ರಹಣ ಸಂಭವಿಸುವ ವಿಧಾನ, ಅದರಲ್ಲಿ ಅಡಗಿರುವ ವೈಜ್ಞಾನಿಕ ಸಂಗತಿಗಳು ಜನರಲ್ಲಿ ಮನದಟ್ಟಾಗ ಬೇಕಾಗಿದೆ. ಗ್ರಹಣ ಸಂಭವಿಸುವಾಗ ವಿವಿಧ ಘಟ್ಟಗಳನ್ನು ವೀಕ್ಷಿಸಿದರೆ ಅದರ ಹಿಂದಿರುವ ವೈಜ್ಞಾನಿಕ ಮಾಹಿತಿ ಅರ್ಥವಾಗುತ್ತದೆ. ಯಾಕೆಂದರೆ ಸೂರ್ಯ, ಚಂದ್ರ ಸೇರಿ ಎಲ್ಲಾ ಗ್ರಹಗಳು ಲಕ್ಷ, ಮಿಲಿಯನ್ ಕಿ.ಮೀ ದೂರದಲ್ಲಿವೆ. ರಾಶಿ, ನಕ್ಷತ್ರ, ಗ್ರಹಣ ಮಾನವ ಹಾಗೂ ಜೀವ ಜಂತುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅನೇಕ ವರ್ಷಗಳ ನಂತರ ಬರುವ ಗ್ರಹಣವನ್ನು ನೋಡಿ ಸಂಭ್ರಮಿಸಿ. ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಾಗ ಈ ರೀತಿಯ ಮೂಢನಂಬಿಕೆಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ವಿಶೇಷವಾಗಿ ವಿದ್ಯಾರ್ಥಿ ದೆಸೆಯಿಂದ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳುವುದು ಒಳ್ಳೆಯದು.
ಅಲ್ಲದೆ ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳುವುದು ಉತ್ತಮ.
ಗ್ರಹಣ ಸಂದರ್ಭದಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ಜನಸಾಮಾನ್ಯರೆಲ್ಲ ತಮ್ಮ ನಿತ್ಯದ ಎಲ್ಲ ಕೆಲಸಗಳನ್ನು ಮಾಡಬಹುದು. ಆಹಾರ– ಪಾನೀಯಗಳನ್ನೂ ಸೇವಿಸಬಹುದು. ಇದರಿಂದ ಯಾವ ತೊಂದರೆ ಆಗುವುದಿಲ್ಲ, ಇದು ವೈಜ್ಞಾನಿಕವಾಗಿಯೂ ಸತ್ಯವಾಗಿದೆ.
ವೀಕ್ಷಣೆ: ಚಂದ್ರಗ್ರಹಣದ ಈ ಕೌತುಕದ ಕ್ಷಣವನ್ನು ಕಣ್ತುಂಬಿಕೊಳ್ಳಲು ವಿದ್ಯಾರ್ಥಿಗಳು, ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದ ಅಲ್ಲಲ್ಲಿ ಖಗೋಳ ವಿಜ್ಞಾನ ಕೇಂದ್ರಗಳು, ಖಗೋಳ ವಿಜ್ಞಾನ ಆಸಕ್ತರು ಟೆಲಿಸ್ಕೋಪ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಬಹುದು. ಗ್ರಹಣ ವೇಳೆ ಅಡುಗೆ ಸಿದ್ಧಪಡಿಸಿ ಸೇವಿಸುವ ವ್ಯವಸ್ಥೆಗಳನ್ನೂ ಹಲವು ಕಡೆಗಳಲ್ಲಿ ಮಾಡಿರುತ್ತಾರೆ. ವಿಶೇಷವಾಗಿ ಚಂದ್ರಗ್ರಹಣದ ಕುರಿತು ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಜ್ಞಾನ ವಿಜ್ಞಾನ ಸಮಿತಿಯವರು ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳು ಹಮ್ಮಿಕೊಂಡು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಇಲ್ಲಸಲ್ಲದ ಹೇಳಿಕೆಗಳ ಬಗ್ಗೆ ಎಚ್ಚರಿಕೆ:
ಗ್ರಹಣದ ಬಗ್ಗೆ ಟಿ. ವಿ. ಗಳಲ್ಲಿ ಜೋತಿಷಿಗಳು ಇಲ್ಲಸಲ್ಲದ ಹೇಳಿಕೆ ನೀಡಬಹುದು. ಚಂದ್ರ ಗ್ರಹಣದಿಂದ ಅನೇಕ ಗಂಡಾಂತರ ಕಾದಿದೆ ಎಂದು ಆಕಾಶ ತೋರಿಸಿ ಜನರನ್ನು ಹೆದರಿಸಬಹುದು.ಆದರೆ, ಇದು ನಭೋಮಂಡಲದಲ್ಲಿ ಅಪರೂಪಕ್ಕೆ ಸಂಭವಿಸುವ ಕುತೂಹಲಕಾರಿ ಸಂಗತಿ. ಇದನ್ನು ಎಲ್ಲರೂ ಖುಷಿಯಿಂದ ವೀಕ್ಷಿಸಿ ಜ್ಞಾನ ಪಡೆದುಕೊಳ್ಳಬೇಕು. ಶುಭ–ಅಶುಭ ಎಂಬುದೆಲ್ಲಾ ಕೇವಲ ಮೂಢನಂಬಿಕೆ.
ಕೊನೆಯ ಮಾತು: ಮಾಧ್ಯಮಗಳು ಚಂದ್ರಗ್ರಹಣದ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಪ‍್ರಸಾರ ಮಾಡಬಹುದು. ಇದನ್ನು ಸುಳ್ಳು ಎಂದು ಬಿಂಬಿಸುವಲ್ಲಿ ಜಾಗೃತಿ ಕಾರ್ಯಕ್ರಮಗಳ ಅವಶ್ಯವಿದೆ.

- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ.



















