
ಪುಸ್ತಕದ ಹೆಸರು… ಮನಸಿನ ಮಾತು.
(ನೂರಾ ಐವತ್ತು ಕನ್ನಡ ಶಾಯಿರಿಗಳು)
ಕವಿ : ಡಾ. ಪರಮೇಶ್ವರಪ್ಪ ಕುದರಿ.
ಮುದ್ರಣ : ಭವಾನಿ ಪ್ರಿಂಟರ್ಸ್ ಬೆಟಗೇರಿ -ಗದಗ.
ಪ್ರಥಮ ಮುದ್ರಣ.. 2026.
ಬೆಲೆ. ರೂ. 150.
ಪುಟಗಳು : 100.
ಕನ್ನಡ ಸಾಹಿತ್ಯ ಲೋಕಕ್ಕೆ, ಪರಮೇಶ್ವರಪ್ಪ ಕುದರಿಯವರು ಅಪರಿಚಿತರಲ್ಲ, ಶ್ರೀಯುತರು ಈಗಾಗಲೇ, ತಮ್ಮ, ಹನಿಗವನ, ಕಥೆ, ಮಕ್ಕಳ ಸಾಹಿತ್ಯ, ಗಣ್ಯರೊಂದಿಗೆ ಸಂದರ್ಶನದಂತಹ ಪುಸ್ತಕಗಳ ಮೂಲಕ, ಸಾಹಿತ್ಯ ಪ್ರಿಯರ ಗಮನ ಸೆಳೆದಿರುವರು, ಇತ್ತೀಚಿಗೆ, ಪ್ರೀತಿ, ಪ್ರೇಮ, ಪ್ರಣಯ ಎಂಬ ಸ್ವರಚಿತ ಶಾಯಿರಿ ಸಂಕಲನ, ಪ್ರಕಟಿಸಿದ ಬೆನ್ನಲ್ಲೇ
ಮತ್ತೇ ನೂರಾ ಐವತ್ತು ಕನ್ನಡ ಶಾಯಿರಿಗಳು, ಪುಸ್ತಕ ಪ್ರಕಟಿಸಿರುವುದು, ಅವರ ಕ್ರಿಯಾಶೀಲತೆ, ಮತ್ತು ಸೃಜನಶೀಲ ಸಾಹಿತ್ಯ ಪ್ರೀತಿಯ
ಪ್ರತೀಕವಾಗಿದೆ.
ಶಾಯಿರಿ ಸಾಹಿತ್ಯ ಪ್ರಕಾರ ಮೂಲತಃ ನಮ್ಮದಲ್ಲವಾದರೂ ನಮ್ಮ ಸಾಹಿತಿಗಳನ್ನು ಆಕರ್ಷಣೆಗೊಳಗಾಗುವಂತೆ ಮಾಡಿದ್ದು ಸತ್ಯ, ಈ ಆಕರ್ಷಣೆಗೊಳಗಾದ ಕವಿಗಳಲ್ಲಿ, ಪರಮೇಶ್ವರಪ್ಪ ಕುದರಿಯವರೂ ಒಬ್ಬರಾಗಿರುವುದು, ಸಾಹಿತ್ಯಪ್ರಿಯರಿಗೆ, ಶಾಯಿರಿ ಕವಿಗಳು, ಎಂದೇ ಪರಿಚಯವಾಗಿರುವುದು, ಸಹೃದಯರಿಗೆಲ್ಲಾ ಹೆಮ್ಮೆಯ ಸಂಗತಿ.
ಮೂಲತಃ ಧಾರವಾಡ ಜಿಲ್ಲೆಯ ಹೆಬ್ಬಳ್ಳಿಯವರಾದ ಕುದರಿಯವರು, ವೃತ್ತಿಯ ನೆಪದಿಂದ ಚಿತ್ರದುರ್ಗದಲ್ಲಿ
ನೆಲೆ ನಿಂತು, ಶಿಕ್ಷಕ ವೃತ್ತಿಯಿಂದ ನಿವೃತ್ತರಾದರೂ,
ಪ್ರವೃತ್ತಿಯಿಂದ, ಸಾಹಿತ್ಯ ರಚನೆಯಲ್ಲಿ ಸಕ್ರಿಯರಾಗಿದ್ದಾರೆ.
ಅವರ ಎರಡನೇ ಶಾಯಿರಿ ಸಂಕಲನ, ಮನಸಿನ ಮಾತು, ನೂರಾ ಐವತ್ತು ಕನ್ನಡ ಶಾಯಿರಿಗಳು,
ಪುಸ್ತಕಾವಲೋಕನವೇ ಈ ಬರಹ.
ಈ ಹಿಂದೆ ಶಾಯಿರಿ, ಎಂದರೆ ಇಟಗಿ ಈರಣ್ಣ, ಇಟಗಿ ಈರಣ್ಣ ಎಂದರೆ ಶಾಯಿರಿ, ಅನ್ನುವಂತೆ ಇತ್ತು, ಆದರೆ ಈಗ ಶಾಯಿರಿ ಬರೆಯುವವರ ಸಂಖ್ಯೆಯೂ ಹೆಚ್ಚಾಗಿದೆ, ಇಟಗಿ ಈರಣ್ಣನವರ ಶಾಯಿರಿಗಳು, ಇವತ್ತು ಶಾಯಿರಿ ಬರೆಯುವ ಕವಿಗಳ ಮೇಲೆ ಪ್ರಭಾವ ಬೀರಿರುವುದು ಅಲ್ಲಗಳೆಯಲಾಗದು, ಈ ಮಾತನ್ನು ಯಾಕೆ ಹೇಳುತ್ತಿದ್ದೇನೆಂದರೆ, ಇಟಗಿ ಈರಣ್ಣನವರ ಪ್ರಭಾವಲಯಕ್ಕೆ ಒಳಗಾದವರಲ್ಲಿ ಪರೇಮೇಶ್ವರಪ್ಪ ಕುದರಿಯವರೂ ಹೊರತಾಗಿಲ್ಲ, ಅವರ ಈ ಮನಸಿನ ಮಾತು, ಕೃತಿಯಲ್ಲಿನ ಹತ್ತಾರು ಶಾಯಿರಿಗಳು, ಸಹೃದಯರ ಗಮನ ಸೆಳೆಯುವ ಶಕ್ತಿ ಪಡೆದಿವೆ,
ಬನ್ನಿ, ಹಾಗಾದರೆ, ಕುದರಿಯವರ ಮನಸಿನ ಮಾತಿನ ಶಾಯಿರಿಗಳನ್ನು ಸವಿಯೋಣ..
ಪ್ರೀತಿಗೆ ಅದೆಂತಹ ಅದ್ಭುತ ಶಕ್ತಿ ಇದೆ, ಎಂಬುದನ್ನು ಕೆಳಗಿನ ಶಾಯಿರಿಯಲ್ಲಿ ಕಾಣಬಹುದು.
ಹಣ್ಣ ಹಣ್ಣ ಮುದುಕಿಯಾದ್ರೂ
ನಿನ್ನ ಮುಖದಾಗಿನ ನಗು ಮಾಸದಂಗಿರ್ಲಿ!
ನಾವಿಬ್ರೂ ಹಣ್ ಹಣ್ಣ ಮುದುಕರಾದ್ರೂ ಪ್ರೀತಿ ಮಾತ್ರ
ಸದಾ ಹಸಿರಾಗಿರ್ಲಿ!
ಈ ಶಾಯಿರಿಯಲ್ಲಿ, ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಾಗದು ಎಂಬ ಮಾತಿನ ಅರ್ಥ ವನ್ನು ಕಾಣುತ್ತೇವೆ,
ಇವರ ಇನ್ನೊಂದು ಶಾಯಿರಿ ಹೀಗಿದೆ.
ನನ್ನ ಜೀವನದಾಗ ನೀ
ಬರೂದ ಬಂದಿ ಆವಾಗಿಂದ
ನಾ ಈ ಜಗತ್ತ ಮರ್ತ ಬಿಟ್ಟೀನಿ,
ನಿನಗ ನನ್ನ ನೆನಪು
ಆಗ್ತೖತೋ ಬಿಡತೖತೋ ನಾನು ಮಾತ್ರ ನಿನ್ನ ಮರಿಯೂದ ಮರ್ತಬಿಟ್ಟೀನಿ!.ಅಂತಾ ಹೇಳೋದು ನೋಡಿದರ, ಪ್ರೀತಿಗಿರುವ ಶಕ್ತಿ ಎಂಥಾದ್ದು ಎನ್ನುವುದು ಗೊತ್ತಾಗುವುದು.
ಕುದರಿಯವರ ಎಲ್ಲಾ ಶಾಯಿರಿಗಳೂ, ಗಂಡು ಹೆಣ್ಣಿನ
ಪ್ರೀತಿ, ಪ್ರೇಮ, ಪ್ರಣಯದ, ಸುತ್ತಲೇ ಗಿರಕಿ ಹೊಡೆಯುವುದಾದರೂ, ಎಲ್ಲಿಯೂ ಏಕತಾನತೆ ಕಾಣದೇ, ವೈವಿದ್ಯತೆಯಿಂದ
ಸರಳ, ಸಹಜ ಪದಗಳ ಬಳಕೆಯಿಂದಾಗಿ, ಓದುಗರ ಮನಸ್ಸಿಗೆ ತಾಕುವ, ಶಕ್ತಿ ಪಡೆದಿವೆ. ಕುದರಿಯವರ ಶಾಯಿರಿಗಳಲ್ಲಿ, ವಿರಹದ ನೋವು, ತೀರ ಸಹಜವಾಗಿ ಚಿತ್ರಿತವಾಗಿವೆ, ಅಂತಹ ಒಂದೆರಡು ಶಾಯಿರಿಗಳನ್ನಿಲ್ಲಿ
ನೋಡೋಣ.
ಕಾರಣ ಇಲ್ಲದನಾ ದಿನಾಲೂ
ಬರೀ ಕನಸಿಸನ್ಯಾಗ
ಬರಾಕ ಹತ್ತಿದ್ದಿ!
ಕಾರಣಾನಾದ್ರೂ
ಹೇಳಿ ಹೋಗು, ಯಾಕ ದೂರಾದಿ ಅಂತ!
ವಿರಹದ ವೇದನೆ ಅದು ಅನುಭವಿಸಿದವರಿಗೇ ಗೊತ್ತು.
ಮತ್ತೊಂದು ಶಾಯಿರಿಯಲ್ಲಿ
ಕುದರಿಯವರು ಹೀಗೆ ಹೇಳ್ತಾರೆ..
ಸದಾ ಎಣ್ಣಿ ಗುಂಗಿನ್ಯಾಗ
ಇರೋ ನನಗ ಎಲ್ಲಾ ತಿಳೀತೈತಿ, ಆದ್ರೂ ಮೌನವಾಗೇ
ಇರ್ತೀನಿ,
ಅದನ್ನ ನೆಪ ಮಾಡ್ಕೊಂಡು
ಮರ್ಯಾದೆ ತೆಗಿಯಾಕ ಪ್ರಯತ್ನ ಪಟ್ರ
ನಾನೂ ಅವರ
ಜೊತೆಗೇ ಇರ್ತೀನಿ!, ಎಂತಹ
ಮಾರ್ಮಿಕ ಮಾತುಗಳಿವು!.
ಕುದರಿಯವರ ಶಾಯಿರಿಗಳ ಮತ್ತೊಂದು ವಿಶೇಷತೆ ಎಂದರೆ ನೋವಿನಲ್ಲೂ ನಗು ಹೊಮ್ಮಿಸಿ, ಹಾಸ್ಯ ಪ್ರಜ್ಞೆ ಮೆರೆದು, ಓದುಗರನ್ನು ನಗೆಗಡಲಿನಲ್ಲಿ ತೇಲಿಸುವ ಗುಣ ಹೊಂದಿವೆ ಎನ್ನಬಹುದು. ಅಂತಹ ಒಂದು ಶಾಯಿರಿ ಹೀಗಿದೆ,
ಸಿಟ್ಟ ಮಾಡಿಕೊಂಡಾಗೆಲ್ಲಾ
ನೀನ ಎಷ್ಟ ಚಂದ
ಕಾಣತೀ ಅಂದ್ರ!!
ಇಡೀ ದಿನ ನಿನಗ
ಸಿಟ್ಟ ಬರಿಸಿಗೊಂತನ
ಇರಬೇಕನಸತೈತಿ! ಅಂದಾಗ
ಎಂಥಾ ಸಿಟ್ಟಿದ್ರೂ ಇಳದು ಹೋಗುತ್ತದೆ, ಅಲ್ಲವೇ ಓದುಗರೇ?
ಪರಮೇಶ್ವರಪ್ಪ ಕುದರಿಯವರ ಈ ಮನಸಿನ ಮಾತು, ಶಾಯಿರಿಗಳಲ್ಲಿ, ಪ್ರೀತಿ, ಪ್ರೇಮ, ಪ್ರಣಯದಲ್ಲಿ
ಬಿದ್ದವರನ್ನು ಮೇಲೆತ್ತಿ ನಿಲ್ಲಿಸುವ, ಅವರಿಂದ ಸಮಾಜಕ್ಕೆ ಒಳ್ಳೆಯದಾಗಲಿ, ಎಂಬ ಸಂದೇಶವೂ ಇದೆ ಮನಸಿನ ಮಾತು, ಕೃತಿಯು ಶಾಯಿರಿಯ ಸಾಹಿತ್ಯ ಕ್ಷೇತ್ರದಲ್ಲಿ, ಅತ್ಯುತ್ತಮವಾದ
ಸ್ಥಾನ ಪಡಯುವಲ್ಲಿ ಯಾವ ಸಂದೇಹವೂ ಇಲ್ಲ, ಎಂದು ನಾನು ನಿಸ್ಸಂಶಯವಾಗಿ ಹೇಳಬಲ್ಲೆ, ಯಾಕೆಂದರೆ ಇಲ್ಲಿನ ಶಾಯಿರಿಗಳು ಕೇವಲ ಓದಿ ಬಿಡುವ ಶಾಯಿರಿಗಳಲ್ಲ, ನಿಜಕ್ಕೂ ಇವು ಮನಸಿನ ಮಾತೆ ಸರಿ!,
ಬರೆಯಬೇಕೆಂದರೆ ಬಹಳವಿದೆ, ಆದರೆ ಪುಟಮಿತಿಗೊಳಪಡಿಸುವ ಅನಿವಾರ್ಯತೆಯಿಂದ, ನನ್ನ ಈ ಪುಸ್ತಕಾವಲೋಕನ ಬರಹಕ್ಕೆ ವಿರಾಮ ನೀಡುವ…

- ಶಿವಪ್ರಸಾದ್ ಹಾದಿಮನಿ.
ಕೊಪ್ಪಳ.583231.
ಚೆನ್ನಬಸವ ನಗರ,
ಕಿನ್ನಾಳ ರಸ್ತೆ -ಕೊಪ್ಪಳ.
ತಾ. ಜಿ. ಕೊಪ್ಪಳ.
ಮೊಬೈಲ್ ಸಂಖ್ಯೆ.
7996790189.




















