ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ಅಕ್ಷರದವ್ವನ ಋಣ ತೀರಿಸಲಾಗದೆಂದೂ”.✍🏻 -ಚಿರಂಜೀವಿ ರೋಡಕರ್.

“ಎಲ್ಲಿ ಹೆಣ್ಣು ಗೌರವಿಸುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ” ಎಂದು ಹೇಳಿದ ದೇಶ ಸಾವಿರಾರು ವರ್ಷಗಳಿಂದ ಸ್ತ್ರೀಯನ್ನು “ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ “(ಮನುಸ್ಮೃತಿ ಅಧ್ಯಾಯ -9, 3ನೇ ಶ್ಲೋಕ ) ಎಂದು ಕಟ್ಟಳೆಗಳಲ್ಲಿ ಕಟ್ಟಿ ಹಾಕಿದ್ದು ಮಾತ್ರ ವಿಪರ್ಯಾಸ. “ಸ್ತ್ರೀಯರಿಗೆ ಮಂತ್ರ ಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಅವರು ಅಶುದ್ಧರೆಂದು ” (ಮನುಸ್ಮೃತಿ ಅಧ್ಯಾಯ-9, 18ನೇ ಶ್ಲೋಕ ) ಶತಶತಮಾನಗಳಿಂದ ಅಕ್ಷರ ವಿದ್ಯೆಯಿಂದ ಸ್ತ್ರೀಯನ್ನು ವಂಚಿತರನ್ನಾಗಿ ಮಾಡಲಾಗಿತ್ತು.

ಜಾತಿ ವ್ಯವಸ್ಥೆ ಮತ್ತು ಲಿಂಗ ಅಸಮಾನತೆ ಈ ದೇಶದ ಸಂಪ್ರದಾಯವಾದಿಗಳ ಕಟ್ಟುನಿಟ್ಟಾದ ವ್ಯವಸ್ಥೆ. ಜಾಸ್ತಿ ವ್ಯವಸ್ಥೆ ಬಗ್ಗೆ ಆಯಾ ಕಾಲಘಟ್ಟಗಳಲ್ಲಿ ಹೋರಾಟವಾಗಿದೆ . ಆದರೆ ಲಿಂಗ ಅಸಮಾನತೆ ಬಗ್ಗೆ ಅಷ್ಟೊಂದು ಹೋರಾಟಗಳಾಗಿಲ್ಲ. ಈ ಹಿಂದೆ ಒಂದು ಕುಟುಂಬವನ್ನು ಪೋಷಿಸುವ ಸ್ತ್ರೀಯನ್ನು ಅದೇ ಕುಟುಂಬ ಹತೋಟಿಯಲ್ಲಿಡಲು ಪ್ರಯತ್ನಿಸುತ್ತಿತ್ತು . ಹೆಣ್ಣೆಂದರೆ ವಸ್ತುವಾಗಿತ್ತು ಇಂತಹ ಕಾಲಘಟ್ಟದಲ್ಲಿ ಪುಲೆ ದಂಪತಿಗಳು ಶೂದ್ರಾತಿಶೂದ್ರರಿಗೆ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶ್ರಮಿಸಿ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದರು ಅದು ಹಲವಾರು ಸಮಸ್ಯೆಗಳನ್ನು ಎದುರಿಸಿ. ಪುಲೆ ದಂಪತಿಗಳು “ಜ್ಞಾನವನ್ನು ಮೂರನೇ ಕಣ್ಣು” ಎನ್ನುತ್ತಿದ್ದರು. ಮಾತೆ ಸಾವಿತ್ರಿಬಾಯಿಯಂತೂ ಹೆಣ್ಣುಮಕ್ಕಳ ತಿಳುವಳಿಕೆ ಸುಧಾರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಜೀವನವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮತ್ತು ಜೊತೆಯಲ್ಲಿ ಶೂದ್ರಾತಿಶೂದ್ರರ ಶಿಕ್ಷಣಕ್ಕೆ ಮುಡುಪಾಗಿ ಇರಿಸಿದ್ದರು.

ಜ್ಯೋತಿಬಾಪುಲೆ ಸಾಮಾನ್ಯವಾಗಿರಲಿಲ್ಲ ಇಂಗ್ಲಿಷ್ ಕಲಿತು ಅರಿವಿನ ಸ್ಪೋಟಕ್ಕೆ ಒಳಗಾಗಿದ್ದ ಯುವಕ. ಹದಿಹರೆಯದ ಯುವಕನನ್ನು ಅವರಿಗಿಂತ ನಾಲ್ಕು ವರ್ಷ ಕಿರಿಯರಾದ ಸಾವಿತ್ರಿ ಮದುವೆಯಾದರು. ಸಾವಿತ್ರಿ ಅನಕ್ಷರಸ್ಥೆ ಶಾಲೆ ಕಲಿಯದ ಜೀವನ ಸಂಗಾತಿಗೆ ತಾನೇ ಶಿಕ್ಷಕನಾಗಿ ಅಕ್ಷರ ಕಲಿಸಿದರು ಜ್ಯೋತಿಬಾ. ಹಾಗೆಯೇ ಅಕ್ಷರ ಕಲಿಯದ ತನ್ನ ಪತ್ನಿಯಂತ ಹುಡುಗಿಯರಿಗೆ ಮತ್ತು ಅಸ್ಪೃಶ್ಯರಿಗೆ ಶಾಲೆ ತೆರೆಯುವ ಆಶಯ ಹುಟ್ಟಿತು ಅದೇ ಸಮಯದಲ್ಲಿ ಸುಧಾರಣೆಯ ಗಾಳಿ ಬೀಸುತ್ತಿತ್ತು ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಅರಿವಾಗತೊಡಗಿತ್ತು.
ಜ್ಯೋತಿಬಾ ಪುಲೆ ಅವರಿಗೆ ಅಸ್ಪೃಶ್ಯ ತಳಸಮುದಾಯದ ವಿದ್ಯಾರ್ಥಿಗಳು ಮತ್ತು ಹೆಣ್ಣುಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕೆಂಬ ಹಂಬಲ ಹೆಚ್ಚಾಯಿತು . ಹೆಂಡತಿ ಸಾವಿತ್ರಿಯನ್ನು ಅಹಮದ್ ನಗರದ ಸ್ಕೂಲಿಗೆ ಶಿಕ್ಷಕ ತರಬೇತಿ ಪಡೆಯಲೆಂದು ಕಳಿಸಿದರು. ಅಲ್ಲಿ “ಫಾತಿಮಾ” ಎಂಬುವವರು ಸಹ ಕಲಿತರು ಸಾವಿತ್ರಿ “ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ” ಸಾವಿತ್ರಿ ಬಾಯಿ ಹೊರಹೊಮ್ಮಿದರು. ಶಿಕ್ಷಕಿಯ ತರಬೇತಿ ಮುಗಿಸಿ ಸಾವಿತ್ರಿಬಾಯಿ ಬಂದ ಮೇಲೆ ಅವರ ಕುಟುಂಬ ಪುಣೆಯ ದಲಿತ ಕೇರಿಯಲ್ಲಿ ವಾಸವಾಯಿತು 9 ವಿದ್ಯಾರ್ಥಿಗಳೊಂದಿಗೆ 1849 ರಲ್ಲಿ ಮೊದಲ ಶಾಲೆ ಪುಣೆಯ ಬಿಡೆ ವಾಡಿಯಲ್ಲಿ ಶುರುವಾಯಿತು. ಅದರಲ್ಲಿ ದಲಿತ -ಮುಸ್ಲಿಂ ಹೆಣ್ಣು ಮಕ್ಕಳೇ ಬಹುವಾಗಿದ್ದರು. ಅಹ್ಮದ್ ನಗರದ ಜಡ್ಜ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಸದಾಶಿವ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕ ಒದಗಿಸಿದರು. ಆದರೆ ಶಾಲೆಗಾಗಿ ಸ್ಥಳ ಕೊಡುವವರು ಮನಸ್ಸು ಬದಲಾಯಿಸುತ್ತಾ ಇದ್ದಿದ್ದರಿಂದ ಶಾಲೆಯು ನಿರಂತರ ಸ್ಥಳ ಬದಲಾಯಿಸುತ್ತಾ ಮುಚ್ಚುತ್ತಾ ತೆರೆಯುತ್ತಾ ಹೋಯಿತು.
ಜ್ಯೋತಿಬಾ ಕುಟುಂಬ ನಿರ್ವಹಣೆಗಾಗಿ ಮಿಷನರಿ ಶಾಲೆಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ ಬೋಧಿಸುತ್ತಿದ್ದರೆ ಸಾವಿತ್ರಿಬಾಯಿ ಯಾವ ಸಂಬಳವಿಲ್ಲದೆ ಜ್ಯೋತಿಬಾ ಶಾಲೆಗಳಲ್ಲಿ ಉಚಿತವಾಗಿ ದುಡಿದರು. 1852ರಲ್ಲಿ ಶಿಕ್ಷಣ ಇಲಾಖೆಯು ಸಾವಿತ್ರಿಬಾಯಿಪುಲೆ ಅವರನ್ನು “ಮಾದರಿ ಶಿಕ್ಷಕಿಯೆಂದು” ಸನ್ಮಾನಿಸಿತು.

ಆದರೆ, ಹೆಣ್ಣು ಮಕ್ಕಳಿಗೆ ಮನೆಗೆಲಸ ಸ್ವತಃ ಕಥೆ,ಹಾಡು-ಹಸೆ, ಪುರಾಣ ಪಠಣಗಳನ್ನು ಹೇಳಿಕೊಡುವುದು ಬಿಟ್ಟು ವಿಚಾರಗಳ ಕಿಡಿ ಹೊತ್ತಿಸುವುದು ಸಂಪ್ರದಾಯವಾದಿಗಳಿಗೆ ಸುತರಾಂ ಇಷ್ಟವಾಗಲಿಲ್ಲ. ಅವರು ಸಾವಿತ್ರಿಗೆ ನಾನಾ ತರಹ ಹಿಂಸೆ ಕೊಡಲು ಶುರುಮಾಡಿದರು ಶಾಲೆಗೆ ಹೋಗುವಾಗ ಪ್ರತಿದಿನ ಹಿಂದಿನಿಂದ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿದ್ದರು. ಅವಮಾನಕರವಾಗಿ ಕೂಗುತ್ತಿದ್ದರು ಮೇಲೆ ನಡೆದು ಬರುವಾಗ ಕಲ್ಲು ಮಣ್ಣು ಸಗಣಿ ಉಂಡೆಗಳು ತೂರಿ ಬರುತ್ತಿದ್ದವು. ಮೊದಮೊದಲು ಸಹನೆಯಿಂದ ಅವರ ಪೀಡನೆಗಳನ್ನೆಲ್ಲಾ ಸಹಿಸಿದ ಸಾವಿತ್ರಿ ಎದೆಗುಂದದೆ ಪಾಠ ಹೇಳಿದರು ಒಂದು ಹಳೆ ಸೀರೆ ಉಟ್ಟು ಮತ್ತೊಂದು ಸೀರೆ ಒಯ್ಯುತ್ತಿದ್ದ ಆಕೆ ಶಾಲೆಗೆ ಹೋದನಂತರ ಸೀರೆ ಬದಲಿಸಿ ಪಾಠ ಮಾಡುತ್ತಿದ್ದರು.
ಆದರೆ ಪ್ರತಿದಿನ ಶಾಲೆಗೆ ಹೋಗುವಾಗ ನಿಂದನೆಗಳ ಕೇಳಿಕೇಳಿ ಒಂದು ಹಂತದಲ್ಲಿ ಸೂಕ್ಷ್ಮ ಮನದ ಸಾವಿತ್ರಿ ಕೈಚೆಲ್ಲಿದರು. ಆಗ ಅವರ ಬೆಂಬಲಕ್ಕೆ ನಿಂತು ಧೈರ್ಯ ಹೇಳಿದ ಜ್ಯೋತಿಬಾ ಸಂದರ್ಭವನ್ನು ದಿಟ್ಟವಾಗಿ ಎದುರಿಸಲು ಸೂಚಿಸಿದರು. ಕಿಡಿಗೇಡಿಗಳ ಬೇಜವಾಬ್ದಾರಿಯ ನಡವಳಿಕೆಗಳು ಉದಾತ್ತ ಗುರಿ ಹೊತ್ತ ಹೋರಾಟವನ್ನು ಕಂಗೆಡಿಸಬಾರದು. ಅವಮಾನಿಸುವರೆದುರು ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು ಎಂದು ತಿಳಿ ಹೇಳಿದರು . ತಮ್ಮ ದೀರ್ಘ ಹೋರಾಟದ ದಾರಿಯಲ್ಲಿ ಇಂಥ ಸಣ್ಣಪುಟ್ಟ ಕಿರಿಕಿರಿಗಳು ಪರೀಕ್ಷೆಯೆಂದು ತಿಳಿಯಬೇಕೆಂದು ಸಾವಿತ್ರಿಗೂ ಅನಿಸಿತು. ಉದಾತ್ತತೆಯೊಡನೆ ಅವಶ್ಯವಿರುವಲ್ಲಿ ದಿಟ್ಟತನವೂ ಅವಶ್ಯವೆಂದು ಅವರ ತಾಯಿ ಮನಸ್ಸು ಅರಿತುಕೊಂಡಿತು . ಈ ತಿಳುವಳಿಕೆ ಮೂಡಿದ್ದೇ ಕಲ್ಲು ಬಿಸಾಡುತ್ತಿದ್ದವರನ್ನು ಒಂದು ದಿನ ಸಾವಿತ್ರಿ ತಾವೇ ಹಿಡಿದರು ತಳಿಸಿ ಬುದ್ಧಿ ಹೇಳಿದರು. ನಂತರ ನಿಂದೆ ಕಲ್ಲು ತೂರಾಟಗಳು ಕ್ರಮೇಣ ನಿಂತು ಹೋದವು.
ಆದರೆ ಗಂಭೀರ ಸ್ವಭಾವದ ಸಹನಾಮಯಿ ಮಹಿಳೆ ಸಾವಿತ್ರಿ ಶಾಲೆಯಲ್ಲಿ ಹಾಸ್ಟೆಲಿನಲ್ಲಿ ಎಂದೂ ವಿದ್ಯಾರ್ಥಿಗಳನ್ನು ನಿಂದಿಸಿದವರಲ್ಲ, ಶಿಕ್ಷಿಸಿದವರಲ್ಲ. ಗ್ರಾಮೀಣ ಭಾಗದ ಅನಕ್ಷರಸ್ಥ ಕುಟುಂಬದ ಮಕ್ಕಳಿಗೆ ಕಲಿಕೆ ಸುಲಭವಾಗಲೆಂದು ನಾನಾ ಉಪಾಯ ಬಳಸಿ ಕಲಿಸುತ್ತಿದ್ದರು.

ಆಗಲೂ ಸಹ ಮಕ್ಕಳು ಶಾಲೆಯನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದರು ಅರ್ಧಕ್ಕೆ ಶಾಲೆ ನಿಲ್ಲಿಸುವುದನ್ನು ತಡೆಯಲು ವಿದ್ಯಾರ್ಥಿಗಳಿಗೆ ಭತ್ಯೆ ಕೊಡುವುದು , ಪಾಠ ಅರ್ಥವಾಗುವಂತೆ ಅವರ ಭಾಷೆಯಲ್ಲಿ ಮಾಡುವುದು , ಸುಲಭದಲ್ಲಿ ನೆನಪಿಡುವ ವಿಧಾನ ಹೇಳಿಕೊಡುವುದು, ಮಕ್ಕಳ ತಾಯ್ತಂದೆಯರಿಗೆ ಶಿಕ್ಷಣದ ಪ್ರಾಮುಖ್ಯತೆ ಕುರಿತು ಹೇಳುವುದು ಪಾಲಕರಿಗೂ ಅಕ್ಷರ ಕಲಿಸುವುದು ಮುಂತಾದ ಮಾರ್ಗಗಳನ್ನು ಸಾವಿತ್ರಿ ಅನುಸರಿಸಿದರು. ಮಕ್ಕಳು ಶಾಲೆ ಮುಗಿಸಿದ ನಂತರ ಉದ್ಯೋಗ ಮಾಡಲು ಅನುಕೂಲವಾಗುವಂತೆ ಕೆಲವು ಕೈಕೆಲಸಗಳನ್ನು ಕಲಿಸುತ್ತಿದ್ದರು. ಅರ್ಧಕ್ಕೆ ಓದು ನಿಲ್ಲಿಸುವುದನ್ನು ತಡೆಯಲು “ಜಾತ್ರಾ ಖೇತ್ರ” ವಿಧಾನ ಅನುಸರಿಸಿದರು. ಸಂತೆ ಜಾತ್ರೆ ತೀರ್ಥಕ್ಷೇತ್ರವೆನ್ನದೇ ಎಲ್ಲೆಡೆ ಶಿಕ್ಷಣದ ಮಹತ್ವ ಸಾರುವ ವಿಷಯಗಳನ್ನು ಪ್ರಚಾರ ಮಾಡತೊಡಗಿದರು. ಹೀಗೆ ಸಾವಿತ್ರಿ ಮಾತೆಯವರ ಶಿಕ್ಷಕ ವೃತ್ತಿ ಮಾದರಿಯನಿಸಿತು.

ವಿದ್ಯೆ ಇಲ್ಲದಿರುವುದು ಪಶುತ್ವಕ್ಕೆ ಸಮ. ಜ್ಞಾನ ಸಂಪಾದನೆ ವ್ಯಕ್ತಿಗೆ ಉನ್ನತ ಸ್ಥಾನಮಾನ ತಂದುಕೊಡುತ್ತದೆ ಎಂದು ಅವರು ಬಲವಾಗಿ ನಂಬಿದ್ದರು.ಯಾವುದೇ ಚಳುವಳಿ ಅಥವಾ ಹೋರಾಟ ಶುರುವಾದದ್ದು ಬಲಗೊಳ್ಳಬೇಕಾದರೆ ಅದಕ್ಕೆ ತಕ್ಕ ಬೌದ್ಧಿಕತೆಯ ಬೆಳೆಯಬೇಕಾಗುತ್ತದೆ . ವಿಚಾರಗಳು ಹರಡಲು ಬರವಣಿಗೆ, ಭಾಷಣ, ಮುದ್ರಣಗಳಲ್ಲೂ ತೊಡಗಿಸಿಕೊಳ್ಳಬೇಕಾಗುತ್ತದೆ ಇದನ್ನು ಪುಲೆಗಳು ಅರಿತಿದ್ದರು. ಇಬ್ಬರು ವಿಸ್ತೃತ ಬರಹ ಕೃಷಿ ನಡೆಸಿದರು . ತಮ್ಮ ವಿಚಾರಗಳನ್ನು ಜನಸಾಮಾನ್ಯರಲ್ಲೂ, ಕಲಿತವರಲ್ಲೂ ಹರಡುವಂತಹ ಮರಾಠಿ, ಇಂಗ್ಲಿಷ್ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು. ಸೂಕ್ಷ್ಮ ಮನದ ಸಾವಿತ್ರಿಬಾಯಿಗೆ ಸಾಮಾಜಿಕ ಕಳಕಳಿ ಇತ್ತು ಸಹಜವಾಗಿ ಅವರು ಕವಿತೆಗಳನ್ನು ಬರೆದರು. ಅವರನ್ನು “ಆಧುನಿಕ ಮರಾಠಿಯ ಮೊದಲ ಕವಯತ್ರಿ ” ಎಂದು ಗುರುತಿಸಲಾಗಿದೆ.

ಸಾವಿತ್ರಿಬಾಯಿ ಅವರು ಕೇವಲ ಶಿಕ್ಷಕಿಯಾಗದೆ ಅವರು ಮಹಿಳಾ ಸಂಘಟಕರಾಗಿ , ವಿಧವಾ ವಿಮೋಚಕರಾಗಿ , ಸಾಮಾಜಿಕ ಕಳಕಳಿ ಉಳ್ಳವರಾಗಿ , ಕವಯಿತ್ರಿಯಾಗಿ ಭಾರತೀಯ ಮಹಿಳಾ ಇತಿಹಾಸದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಮಕ್ಕಳ ಇರದೆ ಇದ್ದಂತಹ ಪುಲೆ ದಂಪತಿಗಳು ಯಾವತ್ತೂ ಮಕ್ಕಳ ಬಗ್ಗೆ ವಿಚಾರ ಮಾಡಲೇ ಇಲ್ಲ ಈ ದೇಶದ ಶೂದ್ರಾತಿಶೂದ್ರರನ್ನು ಮಹಿಳೆಯರನ್ನು ಶತಶತಮಾನಗಳಿಂದ ಸಾಮಾಜಿಕ ಶೋಷಣೆಗೆ ಒಳಗಾಗಿದ್ದ ಬಹುದೊಡ್ಡ ಸಮುದಾಯವನ್ನು ಅಕ್ಷರವಂತವರನ್ನಾಗಿ ಮಾಡುವುದೇ ಅವರ ಗುರಿಯಾಗಿತ್ತು. ಅಂತೆಯೇ ಅವರು ಈ ದೇಶದ ಬಹುಜನರಿಗಾಗಿ ದುಡಿದರು.
ಫುಲೆ ದಂಪತಿಗಳು ಜೀವಮಾನವಿಡಿ ಸ್ಥಾಪಿತ ವ್ಯವಸ್ಥೆಯನ್ನು ಮತ್ತು ಅದರ ಮುಖ್ಯ ಸ್ಥಾನಗಳಲ್ಲಿರುವರನ್ನು ಎದುರು ಹಾಕಿಕೊಂಡರು. ಆದರೆ ಪ್ರಯತ್ನ ಹಾಗೂ ಚಿಂತನೆಗಳಿಗೆ ಪೂರಕವಾಗಿ ಅವರಲ್ಲಿ ಜ್ಞಾನದ ಬಲವಿತ್ತು ತಮ್ಮ ವಿಚಾರಗಳಲ್ಲಿ ಸ್ಪಷ್ಟತೆ ಇದ್ದ ಕಾರಣ ಎಲ್ಲವನ್ನು ಎದುರಿಸುವ ಛಾತಿ ಪಡೆದುಕೊಂಡರು. 1897 ರಲ್ಲಿ ಪ್ಲೇ ಬಂದೆರಗಿದಾಗ ಪ್ಲೇ ರೋಗಿಗಳ ಚಿಕಿತ್ಸೆಯಲ್ಲಿ ಸಾವಿತ್ರಿಬಾಯಿ ತೊಡಗಿಕೊಂಡರು ಹೀಗೆ ದಣಿವರಿಯದೆ ರೋಗಿಗಳ ಶುಶ್ರೂಷೆ ಮಾಡಿದ ಸಾವಿತ್ರಿ ಅವರಿಗೆ ಪ್ಲೇಗ್ ತಗುಲಿತು. ಐದು ದಶಕ ಕಾಲ ಜನರ ನಡುವೆ ಸೇವೆ ಮಾಡುತ್ತಾ ಬದುಕು ಸವೆಸಿದ ಜೀವ ಸೇವೆ ಮಾಡುತ್ತಲೇ ಮಾರ್ಚ್ 10 1897ರಲ್ಲಿ ಭಾರತೀಯ ಬಹುಜನರನ್ನು ಅಗಲಿತು.

ಇಂದು ನಾವು-ನೀವು ಅಕ್ಷರವನ್ನು ಕಲಿತು ವಿದ್ಯಾವಂತರಾಗಿದ್ದೂ ಅಂದಿನ ಮಾತೆ ಸಾವಿತ್ರಿಬಾಯಿ ಪುಲೆ ಮತ್ತು ಅವರ ಪತಿ ಜ್ಯೋತಿಬಾಪುಲೆ ಅವರ ತ್ಯಾಗದ ಪ್ರತಿಫಲವೇ ಹೊರತು ಮತ್ಯಾವ ವಿದ್ಯಾದೇವರು ಎಂದು ಹೇಳಿಕೊಳ್ಳುವ ಯಾವ ದೇವರುಗಳಿಂದನೂ ಅಲ್ಲ. ಸ್ವತಂತ್ರ ಸಿಕ್ಕು ಸುಮಾರು ಎಪ್ಪತ್ತು ವರ್ಷಗಳ ನಂತರವೂ ಶಿಕ್ಷಣ ವ್ಯವಸ್ಥೆ ಇನ್ನೂ ಸುಧಾರಿಸಬೇಕಾಗಿದೆ. ಹೀಗಿದ್ದಾಗಲೂ ಅವತ್ತಿನ ಬ್ರಿಟಿಷ್ ಭಾರತದಲ್ಲಿ ಶಿಕ್ಷಣದ ಒಂದು ಮಹಾ ಕ್ರಾಂತಿಯನ್ನು ಮಾಡಿದ್ದು ಪುಲೆ ದಂಪತಿಗಳ ಮಹಾ ಸಾಧನೆಯಾಗಿದೆ. ಇಂದು ಶಾಲೆಬಿಟ್ಟ ಮಕ್ಕಳನ್ನು ಕರೆತರಲು ಸರಕಾರ ಹಾಕಿಕೊಳ್ಳುವ ಅನೇಕ ಯೋಜನೆಗಳನ್ನು ಅಂದೆಯೇ ಪುಲೆ ದಂಪತಿಗಳು ಹಾಕಿಕೊಂಡಿದ್ದರು. ಇಂತಹ ಹತ್ತು ಹಲವಾರು ಕಾರಣಗಳಿಂದ ಸಾವಿತ್ರಿ ಮಾತೆಯನ್ನು ಇಡೀ ಭಾರತೀಯ ಬಹುಜನ ಸಮಾಜವೇ ಮಾತೆಯೆಂದು ಜ್ಯೋತಿಬಾಪುಲೆ ಅವರನ್ನು ತಂದೆ ಎಂದು ಕರೆಯುತ್ತಾರೆ.

ಮಾನ್ಯ ಕರ್ನಾಟಕ ಸರ್ಕಾರವು ಸಾವಿತ್ರಿ ಮಾತೆಯವರ ಜನ್ಮ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುತ್ತಿರುವುದು ತುಂಬಾ ಸಂತಸದ ವಿಷಯ. ಎಂದೊ ಸಲ್ಲಬೇಕಾಗಿದ್ದ ಗೌರವ ಈಗ ಸಲ್ಲುತ್ತಿರುವದಕ್ಕೆ ನನಗೆ ತುಂಬಾ ಖುಷಿ ನೀಡಿದೆ . ಇದಕ್ಕೆ ನಾನು ಮಾನ್ಯ ಕರ್ನಾಟಕ ಸರ್ಕಾರಕ್ಕೆ ಆಭಾರಿಯಾಗಿದ್ದೆನೆ.

(ಆಕರ: ಕ್ರಾಂತಿ ಜ್ಯೋತಿ ಸಾವಿತ್ರಿ ಬಾಯಿ ಪುಲೆ.
ಲೇಖಕರು: ಡಾ ||ಎಚ್ ಎಸ್ ಅನುಪಮಾ, ಖ್ಯಾತ ವೈದ್ಯರು, ಚಿಂತಕಿ)

✍🏻 -ಚಿರಂಜೀವಿ ರೋಡಕರ್. ರಾಯಚೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!