ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತೆಗ್ಗಿ ಗ್ರಾಮದೇವತೆಗಳ ಜಾತ್ರೆಯ ಪರಂಪರೆ ಮತ್ತು ಸಂಪ್ರದಾಯ

(ಶ್ರೀ ಶಾಲಿವಾಹನ ಶಕೆ ೧೯೪೮ ಪರಾಭವನಾಮ ಸಂವತ್ಸರ ವೈಶಾಖ ಮಾಸ ಶುಕ್ಲಪಕ್ಷ ದಿನಾಂಕ: ೨೨ ರಿಂದ ೨೫ ಎಪ್ರೀಲ್ ೨೦೨೬ ವರಗೆ ನಡೆಯುವ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ
ದ್ಯಾಮಾಂಬಿಕಾದೇವಿ ಮತ್ತು ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಈ ಲೇಖನ)

ಕನ್ನಡ ನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಗ್ರಾಮೀಣ ಪರಿಸರದ ಗ್ರಾಮದೇವತೆಗಳ ಜಾತ್ರೆಗಳ ಆಚರಣೆ ವೈಶಿಷ್ಟತೆಗಳು ಪಾರಂಪರಿಕವಾಗಿ ನಡೆದುಕೊಂಡು ಬಂದಿವೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದ (ದ್ಯಾಮವ್ವಮ್ಮ ಮತ್ತು ದುರಗವ್ವಮ್ಮನ) ಗ್ರಾಮದೇವತೆಗಳ ಭಕ್ತಿಯ ಪರಂಪರೆ, ಸಾಂಸ್ಕೃತಿಕ ಮತ್ತು ಸಂಪ್ರದಾಯ ತುಂಬಾ ಶ್ರೀಮಂತವಾಗಿವೆ. ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮವು ಕಲ್ಯಾಣ ಚಾಲುಕ್ಯರ ಕಾಲದ್ದು ಎಂಬುದು ಶಾಸನದಿಂದ ತಿಳಿಯುತ್ತದೆ. ಈ ಗ್ರಾಮದ ಗ್ರಾಮದೇವತೆಗಳ ಜಾತ್ರೆಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವದ ಸಂಪ್ರದಾಯಗಳು, ಆಚರಣೆಗಳು ತುಂಬಾ ಅರ್ಥಪೂರ್ಣ ಮತ್ತು ಐತಿಹಾಸಿಕ ಮಹತ್ವವನ್ನ ಪಡೆದುಕೊಂಡಿವೆ ತೆಗ್ಗಿ ಗ್ರಾಮದ ಜಾತ್ರೆಯ ಪರಂಪರೆಗೆ ಶ್ರೀಮಂತವಾದ ಇತಿಹಾಸವಿದ್ದು, ಈ ಜಾತ್ರೆಯು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತಿದ್ದು ಯುಗಾದಿಯ ನಂತರದ ದವನದ ಹುಣ್ಣಿಮೆ ಮತ್ತು ಕಡ್ಲಿಗರ ಹುಣ್ಣಿಮೆಯ ಒಳಗಾಗಿ ಜಾತ್ರೆ ಪ್ರಾರಂಭವಾಗಿ ಮುಕ್ತವಾಗೊಳ್ಳುತ್ತದೆ.
ತೆಗ್ಗಿ ಗ್ರಾಮದೇವತೆಗಳ ಜಾತ್ರೆಯೂ ತುಂಬಾ ಸಂಪ್ರದಾಯ ಬದ್ಧವಾಗಿ ಮತ್ತು ಸಾಂಸ್ಕೃತಿಕವಾಗಿ ನಡೆದುಕೊಂಡು ಬಂದಿರುವುದು ತುಂಬಾ ವೈಶಿಷ್ಟ ಪೂರ್ಣವಾಗಿದೆ.

ಆ ವೈಶಿಷ್ಟ್ಯತೆಗಳೆಂದರೆ ಹೀಗಿವೆ
ಬಿಳಿಜೋಳದ ಸೊಪ್ಪೆ ತಗೆಯುವುದು:
ರೈತ ಪರಂಪರೆಯಲ್ಲಿ ಹಿಂಗಾರು ಪ್ರಧಾನವಾದ ಬಿಳಿಜೋಳ ರಾಶಿಯ ಪ್ರಾರಂಭದಲ್ಲಿ ಗ್ರಾಮದ ಮುತ್ತಲಗೇರಿ ಮನೆತನವದವರು ಜಾತ್ರೆಯ ಹಂದರಕ್ಕೆ ಬಿಳಜೋಳದ ಸೊಪ್ಪೆಯನ್ನು ತಗೆಯುವ ಮೂಲಕ ಜಾತ್ರೆಯ ಮಾಡುವ ಸಾಂಕೇತಿಕವಾಗಿ ಮುನ್ನುಡಿಯನ್ನು ಹಾಕಲಾಗುತ್ತದೆ.

ಯುಗಾದಿ ಪಾಡ್ಯದಂದು ದೇವತೆಗಳ ಬಣ್ಣ ಕೊಡಲು ಕೀಲು ಸಡಿಲಗೊಳಿಸುವುದು: ಈ ದಿನ ಗ್ರಾಮದ ಸಮಸ್ತ ಗುರು ಹಿರಿಯರು ದೇವಸ್ಥಾನದಲ್ಲಿ ಕೂಡಿಕೊಂಡು ಗ್ರಾಮದೇವತೆಗಳ ಅರ್ಚಕರಾದ ಬಡಿಗೇರ ಮನೆತನದವರಿಗೆ ಹೇಳಿ ದೇವತೆಗಳನ್ನು ಬಣ್ಣಕ್ಕೆ ಕೊಡಲು ನಿಶ್ಚಿಯಿಸುತ್ತಾರೆ.

ಒಂಬತ್ತು ಬಾಬದ ಮನೆಯ ಕಳಸಗಳೊಂದಿಗೆ ಅಂಕಿ ಹಾಕುವುದು:
ಗ್ರಾಮದ ಜಾತ್ರೆಯು ಒಟ್ಟು ಹದಿನೈದು ದಿನಗಳ ಕಾಲ ನಡೆಯುತ್ತದೆ. ಅಂದರೆ ಮಂಗಳವಾರದಂದು ಸಂಜೆ ೯ ಗಂಟೆಗೆ ಅಂಕಿ ಹಾಕುವುದು. ಪ್ರಾರಂಭವಾಗುತ್ತದೆ. ಗೌಡರ ಅವರ ಮನೆತನ, ಮೊಕಾಶಿ ಅವರ ಮನೆತನ, ಕಾಳನ್ನವರ ಮನೆತನ, ಗಾಜಿ ಅವರ ಮನೆತನ, ಕುಲಕರ್ಣಿ ಅವರ ಮನೆತನ, ಮೇಟಿ ಅವರ ಮನೆತನ, ಪೂಜಾರ ಅವರ ಮನೆತನ, ಮುತ್ತಲಗೇರಿ ಅವರ ಮನೆತನ, ಹೊಸಗೌಡ್ರ ಅವರ ಮನೆತನ ಈ ಒಂಬತ್ತು ಬಾಬದ ಮನೆಯವರಿಂದ ಒಂಬತ್ತು ಕಳಸಗಳನ್ನು ಶ್ರೀ ಗ್ರಾಮದೇವತೆಯ ದೇವಾಲಯಕ್ಕೆ ತಂದು ಅಂಕಿ ಹಾಕುವುದು. ಅಲ್ಲಿಂದ ಹೊಸಗೌಡ್ರ ಮನೆತನಯಲ್ಲಿ ಸೊನ್ನಿಮಗಿಯನ್ನು ಇಟ್ಟು ಬರುವುದು ನಂತರ ತಳವಾರ ಮನೆಯಲ್ಲಿ ಘಟೆಗಡಿಗಿಯನ್ನು ಇಟ್ಟು ನಂತರ ಶ್ರೀ ಗ್ರಾಮದೇವತೆಗಳ ದೇವಾಲಯಕ್ಕೆ ಎಲ್ಲಾ ೯ ಬಾಬದ ಮನೆಯ ಕಳಸಗಳನ್ನು ತಂದು ನಂತರ ತಮ್ಮ ತಮ್ಮ ಮನೆಗಳಿಗೆ ಕಳಸಗಳನ್ನು ತೆಗೆದುಕೊಂಡು ಹೋಗುವುದು. ಇಲ್ಲಿಗೆ ಅಂಕಿ ಹಾಕುವುದು ಪೂರ್ಣಗೊಳ್ಳುವುದು.

ಮಂಗಳವಾರ ರಾತ್ರಿ ದೇವತೆಗಳ ರಥ ಹೊಂದುವುದು : ಅಂಕಿ ಹಾಕಿದ ನಂತರದ ಬರುವ ಮಂಗಳವಾರದಂದು ರಾತ್ರಿ ಒಂಬತ್ತು ಗಂಟೆಗೆ ನಂತರ ಗ್ರಾಮದ ಸಮಸ್ತ ಗುರು ಹಿರಿಯ ಸಮಕ್ಷಮ ಹಾಗೂ ಒಂಬತ್ತು ಬಾಬದ ಮನೆಯವರು ಕೂಡಿಕೊಂಡು ಬಣ್ಣಕ್ಕೆ ಕೊಟ್ಟಿರುವ ಗ್ರಾಮದೇವತೆಗಳನ್ನು ದೇವಾಲಯಕ್ಕೆ ತಂದು ದೇವತೆಗಳನ್ನು (ಜೋಡಿಸುತ್ತಾರೆ) ಸಂಪ್ರದಾಯ ಬದ್ಧವಾಗಿ ರಥ ಹೊಂದಿಸುವ ಕಾರ್ಯಕ್ರಮ ನಡೆಯುತ್ತದೆ.

ದೇವತೆಗಳ ಮಡಿಗಳ (ಸೀರೆಗಳ) ಹೊಳೆ ಪೂಜೆ ಮಾಡುವುದು :
ಬುಧವಾರ ಮುಂಜಾನೆ ೭ ಗಂಟೆಗೆ ಗ್ರಾಮದ ದೇವಸ್ಥಾನದಿಂದ ಡೊಳ್ಳು, ಶಹನಾಯಿ ಮುಂತಾದ ವಾದ್ಯಗಳೊಂದಿಗೆ ಒಂಬತ್ತು ಬಾಬದ ಮನೆಯ ಕಳಸದವರು ಹೊಳೆಗೆ ಅಂದರೆ ನದಿಯ ಸಂಕೇತವಾದ ಹಳ್ಳಕ್ಕೆ ಹೋಗಿ ಅಲ್ಲಿ ಗ್ರಾಮ ದೇವತೆಗಳ ಸೀರೆಯನ್ನು ಪೂಜೆ ಮಾಡಿಕೊಂಡು ಬರುತ್ತಾರೆ. ನಂತರ ಜಾತ್ರೆಗೆ ಸಿದ್ಧಗೊಂಡಿರುವ ದೇವಾಲಯದಲ್ಲಿರುವ ಗ್ರಾಮ ದೇವತೆಗಳಿಗೆ ಹೊಳೆ ಪೂಜೆ ಮಾಡಿಕೊಂಡು ತಂದ ಸೀರೆಗಳ ಮಡಿಗಳನ್ನು ದೇವತೆಗಳಿಗೆ ಉಡಿಸಿ, ದೇವತೆಗಳನ್ನು ದೇವಸ್ಥಾನದಿಂದ ಉಡಿ ತುಂಬಲು ಎಬ್ಬಿಸುತ್ತಾರೆ.

ಗ್ರಾಮ ದೇವತೆಗಳ ತವರ ಮನೆಯಾದ ಬಡಿಗೇರ ಅವರ ಮನೆಯಿಂದ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ ಪ್ರಾರಂಭ :
ಬುಧವಾರ ಮುಂಜಾನೆ ೮ ಗಂಟೆಯಿಂದ ಗ್ರಾಮ ದೇವತೆಗಳ ತವರು ಮನೆಯಾದ ಬಡಿಗೇರ ಮನೆತನದಿಂದ ಉಡಿ ತುಂಬುವುದು ಪ್ರಾರಂಭವಾಗಿ ನಂತರ ಗಾಮದ ಒಂಬತ್ತು ಬಾಬದ ಮನೆಗಳು ಹಾಗೂ ಗ್ರಾಮದ ಪ್ರತಿಯೊಂದು ಮನೆಯವರು ದೇವತೆಗಳಿಗೆ ಭಕ್ತಿಯಿಂದ ಬೇಡಿಕೊಂಡಿರುವ ಭಕ್ತರು ಬಂಗಾರ, ಬೆಳ್ಳಿ ಹಾಕುತ್ತಾರೆ. ಗ್ರಾಮ ದೇವತೆಗಳಿಗೆ ಹೂವು, ಹಣ್ಣು, ಸೀರೆ, ಹಸಿರು ಬಳೆ, ಎಲೆ, ಅಡಿಕೆ, ಉತ್ತತ್ತಿ, ಅರಸಿನಕೊಂಬು, ಬಾಳೆಹಣ್ಣು ಸೇರಿದಂತೆ ಮಧ್ಯಾಹ್ನದವರೆಗೆ ಸಾವಿರಾರು ಭಕ್ತರ ಸಮೂಹದವರು ದೇವತೆಗಳಿಗೆ ಉಡಿ ತುಂಬುತ್ತಾರೆ.

ರಥೋತ್ಸವಕ್ಕೆ ಹಗ್ಗ ಮತ್ತು ಕಳಸ ತರುವುದು :
ತೆಗ್ಗಿ ಗ್ರಾಮದ ಕುರಿಯವರ ಮನೆಯಿಂದ ರಥದ ಕಳಸವನ್ನು ತರುತ್ತಾರೆ, ಮೇಟಿ ಅವರ ಮನೆಯಿಂದ ರಥದ ಹಗ್ಗವನ್ನು ವಾದ್ಯಗಳೊಂದಿಗೆ ತಂದು ರಥೋತ್ಸವಕ್ಕೆ ಸಿದ್ಧತೆ ಮಾಡುತ್ತಾರೆ.

ಗ್ರಾಮದೇವತೆಗಳ ಮೂರ್ತಿಗಳೊಂದಿಗೆ ಮಹಾರಥೋತ್ಸವ :
ಮಹಾರಥೋತ್ಸವದಲ್ಲಿ ಗ್ರಾಮದೇವತೆಗಳ ಮೂರ್ತಿಗಳನ್ನು ಇರಿಸಿ ರಥೋತ್ಸವ ಜರುಗುವುದು. ತೆಗ್ಗಿ, ರಾಘಾಪೂರು, ತಿಮ್ಮಸಾಗರ, ಕೆಲವಡಿ, ತೋಗಣಸಿ, ಹಂಸನೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಗೂ ಗೋವಾ ರಾಜ್ಯದ ಭಕ್ತರು ಸೇರಿದಂತೆ ಸಾವಿರಾರು ಭಕ್ತಿ ಸಾಗರದಲ್ಲಿ ಗ್ರಾಮ ದೇವತೆಗಳ ಮಹಾರಥೋತ್ಸವ ಸಂಭ್ರಮ ಸಡಗರದಿಂದ ಜರುಗುತ್ತದೆ.

ಒಂದೊತ್ತಿನವರಿಗೆ ಉಡಿ ತುಂಬುವುದು : ಮಹಾರಥೋತ್ಸವದ ನಂತರ ಗ್ರಾಮದ ಮುಖ್ಯ ಆವರಣದಲ್ಲಿರುವ ಗ್ರಾಮ ದೇವತೆಗಳ ಹಂದರದಲ್ಲಿ ದೇವತೆಗಳನ್ನು ಇಡಲಾಗುತ್ತದೆ. ನಂತರ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಜಾತ್ರೆಯ ನಿಮಿತ್ತ ಒಂದೊತ್ತು (ಉಪವಾಸ) ಇದ್ದವರಿಗೆ ದೇವತೆಗಳ ಹಂದರದಲ್ಲಿ ಜಾತ್ರೆಯ ಕಮೀಟಿಯವರಿಂದ ಉಡಿ ತುಂಬುತ್ತಾರೆ. ನಂತರ ಒಂದೊತ್ತಿನವರು ಅಲ್ಲಿಯೇ ಪ್ರಸಾದ ಮಾಡುತ್ತಾರೆ.

ಗ್ರಾಮದೇವತೆಯ ಹಂದರದಲ್ಲಿ ರಂಗ ಒಯ್ಯುವುದು (ಹಾಕುವುದು) :
ಗ್ರಾಮ ದೇವತೆಗಳ ಜಾತ್ರೆಯ ಮತ್ತೊಂದು ವಿಶೇಷ ಅಂದರೆ, ರಂಗ ಒಯ್ಯುವುದು ಮತ್ತು ಹಾಕುವುದು. ಈ ಕಾರ್ಯವನ್ನು ಸಂಬಂಧಿಸಿದ ಬಾಬದವರಿಂದ ಹಂದರದಲ್ಲಿರುವ ದೇವತೆಗಳ ಮುಂದೆ ಬಿಳಿಜೋಳದಿಂದ ನಿಯಮಗಳ ಪ್ರಕಾರ ರಂಗವನ್ನು ಹಾಕುತ್ತಾರೆ.

ಸೊನ್ನಿಮಗಿ, ಘಟೆಗಡಿಗಿ, ಮೇಟಿ ಮತ್ತು ಹೂವಿನ ಮಾಲೆ ತರುವುದು :
ದೇವತೆಗಳ ಹಂದರದಲ್ಲಿ ರಂಗವನ್ನು ಹಾಕಿದ ಮೇಲೆ ಹೊಸಗೌಡ್ರ ಮನೆಯಿಂದ ಸೊನ್ನಿಮಗಿ, ತಳವಾರ ಮನೆಯಿಂದ ಘಟೆಗಡಿಗಿ, ಮೇಟಿ ಅವರ ಮನೆಯಿಂದ ಮೇಟಿ, ಮತ್ತು ಕಾಳನ್ನವರ ಮನೆಯಿಂದ ಹೂವಿನ ಮಾಲೆಯನ್ನು ಡೊಳ್ಳಿನ ವಾದ್ಯಗಳೊಂದಿಗೆ ಕಳಸದವರೊಂದಿಗೆ ದೇವತೆಗಳ ಹಂದರಕ್ಕೆ ತರುತ್ತಾರೆ.

ಭಕ್ತರಿಂದ ದೇವತೆಗಳಿಗೆ ವಿಶೇಷ ಪೂಜೆ :
ಗುರುವಾರ ದಿನ ಗ್ರಾಮದೇವತೆಗಳಿಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಬಂದು ದೇವತೆಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವರು. ಗುರುವಾರ ರಾತ್ರಿ ಜಾತ್ರೆಯ ಅಂಗವಾಗಿ ಒಂದನೆಯ ಓಣೆಯ ನಾಟ್ಯ ಸಂಘದವರಿಂದ ನಾಟಕೋತ್ಸವ ನಡೆಯುವುದು.

ಗಾಮದೇವತೆಗಳಿಗೆ ಭಕ್ತರಿಂದ ದೀಡನಮಸ್ಕಾರ, ಹರಕೆ ಮುಟ್ಟಿಸುವುದು :
ಶುಕ್ರವಾರ ದಿನ ಸ್ವಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದವರು ಗ್ರಾಮದೇವತೆಗಳಿಗೆ ಹರಕೆಯನ್ನು ಬೇಡಿಕೊಂಡಿರುವ ಭಕ್ತರು ತಮ್ಮ ಹರಕೆಗಳನ್ನು ಮುಟ್ಟಿಸುವುದು ಹಾಗೂ ದೀಡನಮಸ್ಕಾರವನ್ನು ಹಾಕುವ ಮೂಲಕ ಭಕ್ತಿ ಸಮರ್ಪಣೆಯನ್ನು ಸಲ್ಲಿಸುವರು ಇದೇ ದಿನವೂ ರಾತ್ರಿ ಎರಡನೆಯ ಓಣಿಯ ನಾಟ್ಯ ಸಂಘದವರಿಂದ ನಾಟಕೋತ್ಸವ ಜರುಗುವುದು.

ಶನಿವಾರ ಮುಂಜಾನೆ ಭಕ್ತರಿಂದ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ :
ವಿವಿಧ ಗ್ರಾಮಗಳ ಮತ್ತು ಸ್ವಗ್ರಾಮದ ಭಕ್ತರಿಂದ ಶನಿವಾರ ಮುಂಜಾನೆ ವಿವಿಧ ಪೂಜೆಗಳನ್ನು ಸಲ್ಲಿಸುತ್ತಾರೆ.

ಮುತ್ತಲಗೇರಿ ಅವರ ಮನೆಯಿಂದ ಗ್ರಾಮದೇವತೆಗಳಿಗೆ ಕಾರಬಾನ ತರುವುದು :
ತೆಗ್ಗಿ ಗ್ರಾಮದ ಗ್ರಾಮದೇವತೆಗಳ ಜಾತ್ರೆಯ ಮತ್ತೊಂದು ವೈಶಿಷ್ಟತೆ ಎಂದರೆ ಕಾರಬಾನ ತರುವುದು. ಅದು ಗ್ರಾಮದ ಮುತ್ತಲಗೇರಿಯವರ ಮನೆಯಿಂದ ಮಡಿ ಹುಡಿಯಿಂದ, ಡೊಳ್ಳಿನ ವಾದ್ಯಗಳೊಂದಿಗೆ ಒಂಬತ್ತು ಬಾಬದ ಮನೆಯವರ ಕಳಸದವರೊಂದಿಗೆ ಸಾಂಪ್ರದಾಯ ಬದ್ಧವಾಗಿ ಕಾರಬಾನನ್ನು ದೇವತೆಗಳ ಹಂದರಕ್ಕೆ ತರುತ್ತಾರೆ.

ಗ್ರಾಮದೇವತೆಗಳ ಹಂದರದಲ್ಲಿಯ ರಂಗ ಬಳಿಯುವುದು ಮತ್ತು ಬೀಜ ಕೊಡುವುದು : ಮುತ್ತಲಗೇರಿ ಅವರ ಮನೆಯಿಂದ ಕಾರಬಾನ ಬಂದ ಮೇಲೆ ದೇವತೆಗಳ ಮುಂದೆ ಹಾಕಿರುವ ರಂಗವನ್ನು ಬಳೆಯುತ್ತಾರೆ. ನಂತರ ರೈತ ಕುಟುಂಬಗಳಿಗೆ ಮತ್ತು ಭಕ್ತರಿಗೆ ಬೀಜವನ್ನು ಕೊಡುವ ಪರಂಪರೆ ಸಂಪ್ರದಾಯ ನಡೆಯುತ್ತದೆ. ನಂತರ ದೇವತೆಗಳ ಮುಂದೆ ತೆಂಗಿನ ಕಾಯಿಯನ್ನು ಉರುಳಿಸುವ ಮೂಲಕ ದೇವತೆಗಳನ್ನು ಹಂದರದಿಂದ ಎಬ್ಬಿಸುತ್ತಾರೆ.

ಗ್ರಾಮದೇವತೆಗಳು ಸೀಮಿಗೆ ಹೋಗುವುದು : ಗ್ರಾಮದೇವತೆಗಳ ಹಂದರದಿಂದ ಎಬ್ಬಿಸಿದ ಮೇಲೆ ದೇವತೆಗಳ ತವರ ಮನೆಯವರು, ಬಾಬದ ಮನೆಯವರು, ಗ್ರಾಮದ ಸಮಸ್ತ ಗುರು ಹಿರಿಯರು ಗ್ರಾಮದೇವತೆಗಳನ್ನು ಸೀಮೆಗೆ ಹೋಗುವುದು ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತದೆ.

ಸೀಮೆಗೆ ಹೋಗಿರುವ ಗ್ರಾಮದೇವತೆಗಳನ್ನು ಮರಳಿ ಗ್ರಾಮದ ದೇವಸ್ಥಾನಕ್ಕೆ ತರುವುದು :
ಶನಿವಾರ ರಾತ್ರಿ ಹನ್ನೆರುಡು ಗಂಟೆಗೆ ತೆಗ್ಗಿ ಗ್ರಾಮದ ಸೀಮೆಯಲ್ಲಿರುವ ಗ್ರಾಮದೇವತೆಗಳನ್ನು ಗ್ರಾಮದ ಗ್ರಾಮದೇವತೆಗಳ ದೇವಸ್ಥಾನಕ್ಕೆ ತರುತ್ತಾರೆ.

ಸೀಮೆಗೆ ಹೋದವರಿಗೆ ಪ್ರಸಾದ :
ಶನಿವಾರ ದಿನ ರಾತ್ರಿ ಗ್ರಾಮದೇವತೆಗಳೊಂದಿಗೆ ಸೀಮೆಗೆ ಹೋಗಿರುವ ಅರ್ಚಕರಿಗೆ, ಬಾಬದ ಮನೆಯವರಿಗೆ, ಭಕ್ತರಿಗೆ ಮತ್ತು ಹಿರಿಯರಿಗೆ ರಾತ್ರಿ ಪ್ರಸಾದ ವ್ಯವಸ್ಥೆಯನ್ನು ಮುತ್ತಲಗೇರಿ ಹಾಗೂ ಕಾಳನ್ನವರ ಮನೆಯಲ್ಲಿ ದೈವದವರು ಪ್ರಸಾದ ವ್ಯವಸ್ಥೆ ಮಾಡಿಸಿರುತ್ತಾರೆ. ಗ್ರಾಮದೇವತೆಗಳ ದೇವಾಲಯದಲ್ಲಿ ನೀರು ತೆಗೆದುಕೊಂಡು ಬಂದು ಪ್ರಸಾದ ಮಾಡುವರು. ಗ್ರಾಮದೇವತೆಗಳ ಸೀಮೆಗೆ ಹೋಗಿ ಬಂದ ನಂತರ ಬರುವ ಮಂಗಳವಾರ ರಥ ಹೊಂದಿಸುವುದು: ಪ್ರತಿ ಮೂರು ವರುಷಕ್ಕೊಮ್ಮೆ ನಡೆಯುವ ಗ್ರಾಮದೇವತೆಗಳ ಜಾತ್ರೆಯು ದ್ಯಾಮಾಂಭಿಕಾದೇವಿ ಮತ್ತು ದುರ್ಗಾಂಭಿಕಾದೇವಿ ಶನಿವಾರ ಸೀಮೆಗೆ ಹೋಗಿ ಬಂದ ನಂತರ ಬರುವ ಮಂಗಳವಾರ ದೇವತೆಗಳನ್ನು ಗುಡಿಯಲ್ಲಿ ರಥ ಹೊಂದಿಸುವರು. ನಂತರ ಕಳಸ, ಡೊಳ್ಳಿನ ವಾದ್ಯಗಳೊಂದಿಗೆ ಗ್ರಾಮದ ಸಮಸ್ತ ಭಕ್ತರ ಸಮೂಹದವರು ಕಡೆದೀಪವನ್ನು ಕೊಡುತ್ತಾರೆ. ನಂತರ ಗ್ರಾಮದೇವತೆಗಳ ಮುತೈದತನದೊಂದಿಗೆ ಇಲ್ಲಿಗೆ ಜಾತ್ರೆಯು ಸಂಪನ್ನಗೊಳ್ಳುವುದು.

ಲೇಖನ ಸಂಗ್ರಹ : ಡಾ.ಚಂದ್ರಶೇಖರ ಮುತ್ತಪ್ಪ ಕಾಳನ್ನವರ, ಕನ್ನಡ ಉಪನ್ಯಾಸಕರು, ತೆಗ್ಗಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!