ಜಗತ್ತಿನಲ್ಲಿ ಎಷ್ಟೋ ಸಂಬಂಧಗಳಿರಬಹುದು, ಆದರೆ ತಾಯಿ ಮತ್ತು ಮಗುವಿನ ನಡುವಿನ ಬಂಧಕ್ಕೆ ಸಾಟಿಯೇ ಇಲ್ಲ. ಇದು ಕೇವಲ ರಕ್ತದ ಸಂಬಂಧವಲ್ಲ, ಬದಲಿಗೆ ಎರಡು ಆತ್ಮಗಳ ನಡುವಿನ ಅವಿನಾಭಾವ ಬೆಸುಗೆ.
ಕೆಲವು ಉದಾಹರಣೆಗಳನ್ನು ನೋಡುವುದಾದರೆ, ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ಅರಸ ಶ್ರೀ ಕೃಷ್ಣದೇವರಾಯ ಕೇವಲ ಒಬ್ಬ ಶೂರ ಯೋಧ ಅಥವಾ ದಕ್ಷ ಆಡಳಿತಗಾರ ಮಾತ್ರವಲ್ಲ, ಆತ ಒಬ್ಬ ಪರಮ ಮಾತೃಭಕ್ತ ಕೂಡ ಹೌದು. ಇತಿಹಾಸದ ಪುಟಗಳಲ್ಲಿ ರಾಜರು ತಮ್ಮ ವೈಭವಕ್ಕಾಗಿ ಅರಮನೆಗಳನ್ನು ಅಥವಾ ಪ್ರೇಯಸಿಯರಿಗಾಗಿ ಸ್ಮಾರಕಗಳನ್ನು ಕಟ್ಟಿದ್ದು ಉಂಟು. ಆದರೆ, ಹೆತ್ತ ತಾಯಿಯ ನೆನಪು ಸದಾ ಹಸಿರಾಗಿರಲಿ ಎಂದು ಇಡೀ ಒಂದು ನಗರವನ್ನೇ ನಿರ್ಮಿಸಿದ ಕೀರ್ತಿ ಶ್ರೀ ಕೃಷ್ಣದೇವರಾಯನಿಗೆ ಸಲ್ಲುತ್ತದೆ. ಕೃಷ್ಣದೇವರಾಯನ ತಾಯಿ ನಾಗಲಾಂಬಿಕೆ ಆಕೆಯ ಮೇಲೆ ಕೃಷ್ಣ ದೇವರಾಯನಿಗೆ ಅಪಾರ ಗೌರವವಿತ್ತು. ತನ್ನ ತಾಯಿ ತೀರಿಕೊಂಡ ನಂತರ, ಅವರ ನೆನಪು ಅಜರಾಮರವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಹೊಸಪೇಟೆಯ ಸಮೀಪ ಒಂದು ಸುಂದರ ನಗರವನ್ನು ನಿರ್ಮಿಸಿದನು. ಆ ನಗರಕ್ಕೆ ತನ್ನ ತಾಯಿಯ ಹೆಸರು ನಾಗಲಾಂಬಿಕೆ ಅದರಲ್ಲಿ ಕೆಲವು ಅಕ್ಷರಗಳನ್ನು ತೆಗೆದು ಆ ಊರಿಗೆ ‘ನಾಗಲಾಪುರ’ ಎಂದು ಹೆಸರಿಟ್ಟನು ಆ ಊರಿನ ಮಣ್ಣಿನ ಮೇಲೆ ನಡೆಯುವಾಗ, ಅಲ್ಲಿ ಒಬ್ಬ ಶ್ರೇಷ್ಠ ದೊರೆಯು ತನ್ನ ತಾಯಿಗಾಗಿ ಮಿಡಿದ ಹೃದಯದ ಮಿಡಿತವನ್ನು ಕೇಳಬಹುದು. ತಾಯಿಗಾಗಿ ಇಡೀ ಊರನ್ನೇ ಉಡುಗೊರೆಯಾಗಿ ನೀಡಿದ ಕೃಷ್ಣದೇವರಾಯ, ಇಂದಿನ ತಲೆಮಾರಿಗೂ ಮಾತೃಭಕ್ತಿಯ ಶ್ರೇಷ್ಠ ಮಾದರಿಯಾಗಿದ್ದಾರೆ.
ಮೊಘಲ್ ಸಾಮ್ರಾಜ್ಯದ ಸ್ಥಾಪಕ ಬಾಬರ್ ಕೂಡಾ ಎಲ್ಲರಿಗೂ ಚಿರಪರಿಚಿತ ಹಾಗೆಯೇ ತನ್ನ ತಾಯಿಯನ್ನು ಇವರೂ ಕೂಡಾ ಅಷ್ಟೇ ಪ್ರೀತಿ ಮಾಡುತ್ತಿದ್ದ ತನ್ನ ತಾಯಿಯ ನೆನಪು ಸದಾ ಇರಬೇಕು ಎಂದು ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟುತ್ತಾನೆ. ಆ ಸಾಮ್ರಾಜ್ಯಕ್ಕೆ ಏನು ಹೆಸರು ಇಡಬೇಕೆಂದು ಯೋಚನೆ ಮಾಡಿದನು. ಅವರ ತಾಯಿಯ ಹೆಸರು ಮೊಘಲ್ ಬೇಗಂ ಅದರಲ್ಲಿ ಬೇಗಂ ಎಂಬ ಪದ ತೆಗೆದು ಆ ಸಾಮ್ರಾಜ್ಯಕ್ಕೆ ಮೊಘಲ್ ಎಂದು ತಾಯಿಗಾಗಿ ಆ ಸಾಮ್ರಾಜ್ಯಕ್ಕೆ ಮೊಘಲ್ ಎಂಬ ಹೆಸರು ಇಡುತ್ತಾನೆ. ಇತಿಹಾಸದ ಪುಟದಲ್ಲಿ ತನ್ನ ತಾಯಿಗಾಗಿ ಒಂದು ಸಾಮ್ರಾಜ್ಯ ಕಟ್ಟಿದ ಕೀರ್ತಿ ಬಾಬರ್ ಅವರಿಗೆ ಹೋಗುತ್ತೆ. ಇಂದು ನಾವು ಮೊಘಲ್ ಇತಿಹಾಸವನ್ನು ಓದುವಾಗ ಬಾಬರನ ಶೌರ್ಯವನ್ನು ಹೊಗಳುತ್ತೇವೆ. ಆದರೆ ಆ ಶೌರ್ಯಕ್ಕೆ ಸಾಣೆ ಹಿಡಿದವರು ಅವರ ತಾಯಿ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ತಾಯಿ ಇರುತ್ತಾಳೆ ಎಂಬ ಮಾತಿಗೆ ಬಾಬರ್ ಮತ್ತು ಆತನ ತಾಯಿಯ ಬಾಂಧವ್ಯವೇ ಸಾಕ್ಷಿ. ತಾಯಿಯ ನೆನಪು ಬಾಬರನನ್ನು ಸೋಲಿನ ಹತಾಶೆಯಿಂದ ಮೇಲೆಬ್ಬಿಸಿ, ಸಾಮ್ರಾಟನನ್ನಾಗಿ ರೂಪಿಸಿತು.
ಪುರಾಣಗಳ ಪುಟಗಳಲ್ಲಿ ಪರಶುರಾಮ ಎಂದರೆ ನಮಗೆ ಮೊದಲು ನೆನಪಿಗೆ ಬರುವುದು ಅವನ ಕೈಯಲ್ಲಿರಬೇಕಾದ ಪರಶು
ಮತ್ತು ಅವನ ಉಗ್ರ ಕೋಪ. ಆದರೆ, ಆ ಕಠೋರ ವ್ಯಕ್ತಿತ್ವದ ಹಿಂದೆ ಒಬ್ಬ ಅಪ್ರತಿಮ ಮಾತೃಭಕ್ತನಿದ್ದಾನೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ತಾಯಿಯ ಮುತ್ತೈದೆ ಭಾಗ್ಯವನ್ನು (ಸೌಭಾಗ್ಯವನ್ನು) ತನ್ನ ದೃಢ ಸಂಕಲ್ಪ ಮತ್ತು ತಂದೆಯ ಮೇಲಿನ ಭಕ್ತಿಯ ಮೂಲಕ ಮರಳಿ ಪಡೆದ ಪರಶುರಾಮನ ಕಥೆ ಇಂದಿಗೂ ನಮಗೆ ಸ್ಫೂರ್ತಿದಾಯಕ. ಅಂದರೆ ಪರಶುರಾಮನು ಕೂಡ ತನ್ನ ತಾಯಿಯನ್ನು ಅತಿ ಪ್ರೀತಿ ಮಾಡುತ್ತಿದ್ದ ಹೀಗೆ ಒಂದು ದಿನ ತಂದೆ ಅಕಾಲಿಕ ಮರಣದಿಂದ ತೀರಿಕೊಂಡಾಗ, ತಾಯಿಯ ಹಣೆ ಮೇಲೆ ಕುಂಕುಮ ಬಳೆ ಹೂವು ಇವೆಲ್ಲವನ್ನು ತೆಗೆದಾಗ, ಆ ಸಮಯದಲ್ಲಿ ಪರಶುರಾಮ ತನ್ನ ತಾಯಿಯನ್ನು ನೋಡಿ ನಂತರ ತಾಯಿಗೆ ಅಮ್ಮ ಬೆಳಿಗ್ಗೆ ನಿನ್ನ ಹಣೆಯಲ್ಲಿ ಕುಂಕುಮ, ಕೈಯಲ್ಲಿ ಬಳೆ, ತಲೆಯಲ್ಲಿ ಹೂವು ಎಲ್ಲವೂ ಇತ್ತು ಮುತ್ತೈದೆಯಾಗಿ ಕಾಣುತ್ತಿದ್ದಿ ಆದರೆ ಇವಾಗ ಈ ರೀತಿ ಕಾಣುತ್ತಿದ್ದೀಯಮ್ಮ ಎಂದು ತಾಯಿಗೆ ಕೇಳುತ್ತಾನೆ. ಆಗ ತಾಯಿ ಇಲ್ಲ ನಿನ್ನ ತಂದೆ ತೀರಿಕೊಂಡ ಕಾರಣ ಅದೆಲ್ಲವನ್ನು ನಾನು ತೆಗೆದೆ ಎಂದು ಹೇಳುತ್ತಾಳೆ. ಆಗ ಪರಶುರಾಮ ತನ್ನ ತಾಯಿಗೆ ನೀನು ಮೊದಲು ಮುತ್ತೈದೆಯಾಗಿ ಯಾವ ರೀತಿ ಇದ್ದಿ? ಆ ರೀತಿ ನಿನ್ನನ್ನು ನಾನು ನೋಡಬೇಕು ಎಂದು ತಾಯಿಗೆ ಕೇಳುತ್ತಾನೆ. ಆಗ ತಾಯಿ ಒಂದು ಗಿಡ ಮೂಲಿಕೆ ಸಿಗುತ್ತೆ ಅದನ್ನು ತಂದು ಕೊಟ್ಟರೆ ನಿನ್ನ ತಂದೆಯ ಜೀವ ಉಳಿಸಬಹುದೆಂದು ಹೇಳಿದಾಗ, ಆ ಕಾಲದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ, ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಗಿಡಮೂಲಿಕೆಯನ್ನು ಹುಡುಕಿ ತರುವುದು ಅಸಾಮಾನ್ಯ ಸಾಹಸ. ಪರಶುರಾಮ ಆ ದಿವ್ಯ ಮೂಲಿಕೆಯನ್ನು ತಂದು ಜಮದಗ್ನಿಗೆ ಮರುಜೀವ ನೀಡಿದರು. ಇದರ ಮೂಲಕ ರೇಣುಕಾದೇವಿಯ ಮುತ್ತೈದೆ ಭಾಗ್ಯವು ಪುನಃ ಸ್ಥಾಪಿತವಾಯಿತು. ಇದು ಕೇವಲ ಒಂದು ಪವಾಡವಲ್ಲ, ಬದಲಿಗೆ ಒಬ್ಬ ಮಗ ತನ್ನ ಹೆತ್ತವರಿಗಾಗಿ ತೋರಿದ ಅತ್ಯುನ್ನತ ಸೇವೆ.
ಅಮ್ಮ ಇಲ್ಲದ ಮನೆ ಬರಿದು, ಅಮ್ಮ ಇಲ್ಲದ ಬದುಕು ಶೂನ್ಯ. ತಂದೆ ಇಲ್ಲದಿದ್ದರೆ ಮಕ್ಕಳು ಅನಾಥರು ಆಗುವುದಿಲ್ಲ ತಾಯಿ ಇಲ್ಲದಿದ್ದರೆ ಮಾತ್ರ ಮಕ್ಕಳು ಅನಾಥರಾಗುತ್ತಾರೆ ಎಂಬ ಹಿರಿಯರ ಮಾತಿನಂತೆ.ಅಮ್ಮ ಇಲ್ಲದಿದ್ದರು ಅವಳನ್ನು ಅಜರಾಮರ ಮಾಡಿದ್ದಾನೆ ಒಬ್ಬ ಮಗ – ನಟ ವಿನೋದ್ ರಾಜ್. ಕನ್ನಡ ಚಿತ್ರರಂಗದ ವರನಟಿ ಡಾ. ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಕಟ್ಟಿದ ದೇಗುಲ ಇವತ್ತು ತಾಯಿ-ಮಗನ ಬಾಂಧವ್ಯಕ್ಕೆ ಜಗತ್ತೇ ನಮಿಸುವ ಸಾಕ್ಷಿ. 2023ರ ಡಿಸೆಂಬರ್ 8ರಂದು ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿದರು. ಅಂತ್ಯಕ್ರಿಯೆ ನಡೆದಿದ್ದು ಬೆಂಗಳೂರಿನ ಸೋಲದೇವನಹಳ್ಳಿಯ ಅವರ ತೋಟದಲ್ಲಿ. ಅದೇ ಜಾಗದಲ್ಲಿ ಮಗ ವಿನೋದ್ ರಾಜ್ ಒಂದು ಸಂಕಲ್ಪ ಮಾಡಿದರು. ಅಮ್ಮನಿಗೆ ದೇಗುಲ ಕಟ್ಟಬೇಕು. ಅಮ್ಮ ಸದಾ ಅಜರಾಮರವಾಗಿ ಇರಬೇಕು. ಇದು ಗರ್ಭಗುಡಿಯಲ್ಲಿ ವಿಗ್ರಹ ಇರುವ ದೇಗುಲ ಮಾತ್ರ ಅಲ್ಲ. ಇದು ಲೀಲಾವತಿ ಎಂಬ ತಾಯಿಯ 85 ವರ್ಷದ ಬದುಕಿನ ದರ್ಶನ. ಲೀಲಾವತಿ ಅವರು ಸಿನಿಮಾದಲ್ಲಿ ಮಾತ್ರ ತಾಯಿಯಲ್ಲ. ನಿಜ ಬದುಕಿನಲ್ಲೂ ನೂರಾರು ಜನರಿಗೆ ಅಮ್ಮ. ತಮ್ಮ ತೋಟದಲ್ಲಿ ಕೆಲಸ ಮಾಡುವ ಕುಟುಂಬಗಳಿಗೆ ಮನೆ ಕಟ್ಟಿಸಿಕೊಟ್ಟರು, ಮಕ್ಕಳನ್ನು ಓದಿಸಿದರು. ಆ ಗುಣವನ್ನೇ ಮಗ ಮುಂದುವರೆಸಿದ್ದಾನೆ. ತಾಯಿ ಸ್ಥಾನ ದೇವರಿಗಿಂತ ದೊಡ್ಡದು ವಿನೋದ್ ರಾಜ್ “ತಾಯಿಯೇ ದೇವರು ಎಂಬ ಸಂದೇಶ ಸಾರಿದ್ದಾರೆ”. ದೇಗುಲಕ್ಕೆ ಹೋಗಿ ಕೈಮುಗಿಯುವ ಮೊದಲು ಮನೆಯಲ್ಲಿ ಅಮ್ಮನ ಕಾಲಿಗೆ ನಮಸ್ಕರಿಸಿ. 2024ರಲ್ಲಿ ಕರ್ನಾಟಕದ ಒಬ್ಬ ಮಗ ತಾಯಿಗಾಗಿ ದೇಗುಲ ಕಟ್ಟಿ “ಅಮ್ಮ ಅಜರಾಮರ” ಎಂದು ತೋರಿಸಿಕೊಟ್ಟಿದ್ದಾನೆ. ಹೆತ್ತ ತಾಯಿಗೆ ದೇಗುಲ ಕಟ್ಟಿದ ಮಗ ಇದ್ದರೆ, ಆ ತಾಯಿ ಸತ್ತ ಮೇಲೂ ದೇವರಾಗಿ ಬದುಕುತ್ತಾಳೆ. ಶ್ರವಣ ಕುಮಾರನು ಬಿದಿರಿನ ಬುಟ್ಟಿಯಲ್ಲಿ ತಂದೆ ತಾಯಿಗಳನ್ನ ಹೊತ್ತುಕೊಂಡು ಇಡೀ ವಿಶ್ವವನ್ನು ತೋರಿಸಿರುವುದು ನಿಜಕ್ಕೂ ಅಮೋಘವಾದದ್ದು. ಜಿಜಾಬಾಯಿಯೂ ಛತ್ರಪತಿ ಶಿವಾಜಿ ಮಹಾರಾಜರಿಗೆ ಕೊಂಡಾನುದುರ್ಗ ಪ್ರದೇಶವನ್ನು ನನಗೆ ಗೆದ್ದು ಕೊಡಬೇಕು ಎಂದು ಶಿವಾಜಿಯು ಚಿಕ್ಕವಯಸ್ಸಿನಲ್ಲಿ ಇರುವಾಗಲೇ ತನ್ನ ಆಸೆಯನ್ನು ವ್ಯಕ್ತಪಡಿಸುತ್ತಾರೆ. ತಾಯಿಯ ಆಸೆಯಂತೆ ಆ ಪ್ರದೇಶವನ್ನು ಗೆದ್ದು ತಂದು ತಾಯಿಯ ಪಾದಗಳಿಗೆ ಅರ್ಪಿಸಿದವರು ಛತ್ರಪತಿ ಶಿವಾಜಿ ಮಹಾರಾಜರು. ತಾಯಿ ಎಂಬ ಪದವೇ ಅತ್ಯಮೂಲ್ಯವಾದದ್ದು. ತಬ್ಬಲಿಯಾಗುವ ಮುಂಚೆ ತಬ್ಬಿಕೊಳ್ಳಿ ಹೆತ್ತ ತಾಯಿಯನ್ನು.

- ಶ್ರೀ ಮುತ್ತು ಯ. ವಡ್ಡರ , ಶಿಕ್ಷಕರು




















