ಬಳ್ಳಾರಿ : ಬಳ್ಳಾರಿ ಗಡಿ ಭಾಗವಾದ ಅನಂತಪುರ
ಜಿಲ್ಲೆಯ ಡಿ.ಹಿರೇಹಾಳ್ ಮಂಡಲದ ಜಾಜರಕಲ್ಲು ಟೋಲ್ ಪ್ಲಾಜಾ ಸಮೀಪ ರಾಷ್ಟ್ರೀಯ ಹೆದ್ದಾರಿ-150ಎ ಮೇಲೆ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕನೊಬ್ಬ ಸಜೀವ ದಹನಗೊಂಡ ಘಟನೆ ನಡೆದಿದೆ.
ಕಂಕರ್ (ಜಲ್ಲಿ) ತುಂಬಿಕೊಂಡು ತೆರಳುತ್ತಿದ್ದ ಲಾರಿ ಹಾಗೂ ಜಿಂದಾಲ್ನಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಸಿಮೆಂಟ್ ಟ್ಯಾಂಕರ್ ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ಪರಿಣಾಮ ಸಿಮೆಂಟ್ ಟ್ಯಾಂಕರ್ನ ಡೀಸೆಲ್ ಟ್ಯಾಂಕ್ ಸ್ಪೋಟಗೊಂಡು ಎರಡೂ ವಾಹನಗಳಿಗೆ ಬೆಂಕಿ ತಗುಲಿದೆ.
ಅಪಘಾತದಲ್ಲಿ ಕಂಕರ್ ಲಾರಿ ಚಾಲಕ ದೀಕ್ಷಿತ್ (32) ಬೆಂಕಿಯಲ್ಲಿ ಸಿಲುಕಿ ಸಜೀವ ದಹನಗೊಂಡಿದ್ದಾರೆ. ಸಿಮೆಂಟ್ ಟ್ಯಾಂಕರ್ ಚಾಲಕ ಮುತ್ತುರಾಜ್ ಸಮಯಪ್ರಜ್ಞೆ ತೋರಿಸಿ ವಾಹನದಿಂದ ಹೊರಬಂದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
ಘಟನಾ ಸ್ಥಳಕ್ಕೆ ರಾಯದುರ್ಗ ಗ್ರಾಮೀಣ ವಲಯದ ಸಿಐ ವೆಂಕಟರಮಣ ಹಾಗೂ ಬೊಮ್ಮನಹಳ್ಳಿ ಎಸ್.ಐ. ನಬಿ ರಸೂಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಕಂಕರ್ ಲಾರಿ ಚಾಲಕ ನಿದ್ರಾಮತ್ತಿನಲ್ಲಿ ತಪ್ಪು ಮಾರ್ಗದಲ್ಲಿ ಅತಿವೇಗವಾಗಿ ಚಲಾಯಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದೀಕ್ಷಿತ್ ಅವರು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೌಡನವಾಳ್ಳಿ ಗ್ರಾಮದ ನಿವಾಸಿಯಾಗಿದ್ದು, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ ಎಂದು ತಿಳಿದುಬಂದಿದೆ.
ರಾಯದುರ್ಗ, ಬಳ್ಳಾರಿ ಹಾಗೂ ಅನಂತಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















