ಕೊಡಗು ಜಿಲ್ಲೆಯ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿ ಆರ್ ಎಫ್ ಅಡಿಯಲ್ಲಿ ₹೨೨ ಕೋಟಿ ಮಂಜೂರು: ಸಂಸದ ಯದುವೀರ್ ಒಡೆಯರ್
ಕೊಡಗು : ಜಿಲ್ಲೆಯ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRF) ಅಡಿಯಲ್ಲಿ ಜಿಲ್ಲೆಯ ಮೂರು ಪ್ರಮುಖ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು ₹22 ಕೋಟಿ ಮಂಜೂರು ಮಾಡಿದೆ.
ಈ ಮಂಜೂರಾತಿಯನ್ನು ಸ್ವಾಗತಿಸಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೊಡಗಿನ ಬಹುಕಾಲದ ರಸ್ತೆ ಅಭಿವೃದ್ಧಿ ಅಗತ್ಯಗಳಿಗೆ ಸ್ಪಂದಿಸಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಹಾಗೂ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಕೊಡಗು ಜಿಲ್ಲೆಗೆ ಸ್ಥಳೀಯರ ಹಾಗೂ ಪ್ರವಾಸಿಗರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಉತ್ತಮ ಗುಣಮಟ್ಟದ ರಸ್ತೆ ಮೂಲಸೌಕರ್ಯ ಅತ್ಯಗತ್ಯವಾಗಿದೆ. ಸಿಆರ್ ಎಫ್ ಅಡಿಯಲ್ಲಿ ದೊರೆತಿರುವ ಈ ಅನುದಾನವು ಬಹುಕಾಲದಿಂದ ಅಭಿವೃದ್ಧಿಗೆ ಕಾಯುತ್ತಿದ್ದ ಪ್ರಮುಖ ರಸ್ತೆ ಭಾಗಗಳ ಉನ್ನತೀಕರಣಕ್ಕೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಇನ್ನಷ್ಟು ಮೂಲಸೌಕರ್ಯ ಹೂಡಿಕೆಗಳು ಹಾಗೂ ಅಭಿವೃದ್ಧಿ ಯೋಜನೆಗಳನ್ನು ತರುವ ತಮ್ಮ ಬದ್ಧತೆಯನ್ನು ಯದುವೀರ್ ಒಡೆಯರ್ ಪುನರುಚ್ಚರಿಸಿದರು. ಈ ಮಂಜೂರಾತಿ ದೊರಕಲು ಸಹಕರಿಸಿದ ಕೇಂದ್ರ ಸರ್ಕಾರ, ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು.
ವರದಿ: ಪ್ರಿತುನ್ ಪೂವಣ್ಣ




















