ಹುನಗುಂದ: “ಓದುಗರ ಅಭಿಮತಕ್ಕೆ ತಕ್ಕಂತೆ ಕಾವ್ಯವನ್ನು ಬರೆಯಲಾಗುವುದಿಲ್ಲ. ವ್ಯಕ್ತಿಯ ಬದುಕಿನ ಅನುಭವಗಳಿಗೆ ಪೂರಕವಾದ ಸನ್ನಿವೇಶದಲ್ಲಿ ಉದ್ಭವಿಸುವ ಆಂತರಿಕ ಭಾವವೇ ಕಾವ್ಯದ ಹುಟ್ಟಿಗೆ ಮೂಲ ಕಾರಣ. ಅಂತಹ ಭಾವ ಮತ್ತು ಅನುಭವಗಳು ಸಮಾಗಮಗೊಂಡಾಗ ಮಾತ್ರ ಧ್ವನಿಪೂರ್ಣವಾದ ಕಾವ್ಯ ಮೂಡಿಬರಲು ಸಾಧ್ಯ” ಎಂದು ಇಳಕಲ್ಲಿನ ಎಸ್. ವಿ. ಎಂ. ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಡಾ. ವಸಂತಕುಮಾರ್ ಕಡ್ಲಿಮಟ್ಟಿ ಹೇಳಿದರು.
ಅವರು ಹುನಗುಂದದ ‘ಹೊನ್ನಕುಸುಮ ಸಾಹಿತ್ಯ ವೇದಿಕೆ’ಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕಾವ್ಯೋತ್ಸವ – 2026’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಮತ್ತೊಬ್ಬ ಅತಿಥಿ ಶ್ರೀ ಎಸ್. ಎಸ್. ಹಳ್ಳೂರ್ ಮಾತನಾಡಿ, “ಹುನಗುಂದದ ಸಾಹಿತ್ಯಿಕ ನೆಲದಲ್ಲಿ ಆಧುನಿಕ ಕಾವ್ಯದ ವಿನೂತನ ಪ್ರಭೇದಗಳು ಮೇಲ್ಪಂಕ್ತಿಗೆ ಬರುತ್ತಿರುವುದು ಸಂಭ್ರಮದ ಸಂಗತಿಯಾಗಿದೆ. ಹೊನ್ನಕುಸುಮ ಬಳಗದ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಹೊಸ ಕವಿಗಳ ಉದಯಕ್ಕೆ ಹಾಗೂ ಕಾವ್ಯ ಪ್ರಕಾರದ ಜೀವಂತಿಕೆಗೆ ಪ್ರೇರಣೆಯಾಗುತ್ತವೆ” ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿ. ಎಂ. ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಆರ್. ಗೋಲಗೊಂಡ ಮಾತನಾಡಿ, “ಹೊನ್ನಕುಸುಮ ಸಾಹಿತ್ಯ ವೇದಿಕೆಯ ಕಾರ್ಯಕ್ರಮಗಳು ‘ಹಳೆಬೇರು – ಹೊಸ ಚಿಗುರು’ ಎಂಬಂತೆ ಹಿರಿಯ ಹಾಗೂ ಕಿರಿಯ ಸಾಹಿತಿಗಳೆಲ್ಲರಿಗೂ ಸ್ಪೂರ್ತಿದಾಯಕವಾಗಿವೆ” ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಕದಳಿ ವೇದಿಕೆಯ ಅಧ್ಯಕ್ಷೆ ಡಾ. ಶಿವಗಂಗಾ ರಂಜಣಗಿ ಮಾತನಾಡಿ, “ಇತ್ತೀಚಿನ ಸಾಹಿತ್ಯ ವಲಯಕ್ಕೆ ಹುನಗುಂದ ಹಾಗೂ ಇಳಕಲ್ ಭಾಗದ ಹೊಸ ಪೀಳಿಗೆಯ ಕೊಡುಗೆ ದೊಡ್ಡದಾಗಿದ್ದು, ಇದು ಹೆಮ್ಮೆ ಪಡುವಂತಹ ಸಂಗತಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಹೊನ್ನಕುಸುಮ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಡಾ. ಡಿ. ಎಸ್. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿ-ಕಿರಿಯ ತಲೆಮಾರಿನ 10 ಜನ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಜೊತೆಗೆ 10 ಮಾದರಿ ಕವಿತೆಗಳ ವಾಚನವೂ ಯಶಸ್ವಿಯಾಗಿ ನಡೆಯಿತು.
ಈ ಕಾವ್ಯೋತ್ಸವದಲ್ಲಿ ಹುನಗುಂದ, ಇಳಕಲ್ ಹಾಗೂ ಅಮೀನಗಡ ಭಾಗದ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅಂದಾನಯ್ಯ ವಸ್ತ್ರದ ಪ್ರಾರ್ಥಿಸಿದರು. ಗೀತಾ ತಾರಿವಾಳ ನಿರೂಪಿಸಿದರೆ, ಎಂ. ಡಿ. ಚಿತ್ತರಗಿ ಕೊನೆಯಲ್ಲಿ ವಂದಿಸಿದರು.




















