
ಶಿವಮೊಗ್ಗ : ರಾಷ್ಟ್ರ ಸೇವಿಕಾ ಸಮಿತಿಯ ಶಿವಮೊಗ್ಗ ವಿಭಾಗದಲ್ಲಿ ಸಮಿತಿಯ ಸ್ಥಾಪನಾ ದಿನಾ ಹಾಗೂ ವಿಜಯದಶಮಿ ಪಥಸಂಚಲನ ಕಾರ್ಯಕ್ರಮವು ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿವಮೊಗ್ಗದ ಫಿಟ್ನೆಸ್ ತರಬೇತುದಾರರಾದ
ಶ್ರೀಮತಿ ಸುನೀತಾ ಚೇತನ್ ಅವರು ಮಾತನಾಡಿ, “ರಾಷ್ಟ್ರ ಸೇವಿಕಾ ಸಮಿತಿ ಕೈಗೊಂಡಿರುವ ವ್ಯಕ್ತಿ ನಿರ್ಮಾಣದ ಕಾರ್ಯವನ್ನು ಶ್ಲಾಘಿಸಿದರು. ಮಹಿಳೆಯರಲ್ಲಿ ದೈಹಿಕ ದೃಢತೆ, ಮಾನಸಿಕ ಸ್ಥೈರ್ಯ ಅತ್ಯಂತ ಅವಶ್ಯಕವಾಗಿದ್ದು ಅದರ ಕಡೆ ಗಮನನೀಡಬೇಕು ಎಂದು ತಿಳಿಸಿದರು “.
ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಸಮಿತಿಯ ಸುಳ್ಯ ತಾಲೂಕು ಬೌದ್ಧಿಕ್ ಪ್ರಮುಖ್ ಶ್ರೀಮತಿ ಯಶೋದಾ ರಾಮಚಂದ್ರ ಅವರು ಸ್ತ್ರೀಯರ ವ್ಯಕ್ತಿ ನಿರ್ಮಾಣದ ಅನಿವಾರ್ಯತೆಯನ್ನು ವಿವರಿಸಿದರು. “ಮಹಿಳೆಯ ವ್ಯಕ್ತಿತ್ವ ನಿರ್ಮಾಣದಿಂದ ಸಂಪೂರ್ಣ ಸಮಾಜವು ಸುಸಂಸ್ಕೃತವಾಗುವುದು ನಿಸ್ಸಂಶಯ” ಎಂದು ಅವರು ಹೇಳಿದರು.
ಸಭಾ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಸೇವಿಕೆಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿನೋಬ ನಗರದಲ್ಲಿ ಘೋಷ್ ಸಹಿತ ಪಥಸಂಚಲನ ನಡೆಯಿತು. ಶಿಸ್ತುಬದ್ಧ ಗಣವೇಷದಲ್ಲಿ, ಘೋಷ್ ವಾದನದೊಂದಿಗೆ ಪಥಸಂಚಲನ ನೆರವೇರಿತು ಹಾಗೂ ನಗರದ ನಾಗರಿಕರ ಕಣ್ಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಮದ್ಯ ಕ್ಷೇತ್ರದ ಸಹ ಕಾರ್ಯವಾಹಿಕಾ ಮಾ. ಅಂಬಿಕಾ ನಾಗಭೂಷಣ್ ಮತ್ತು ಪ್ರಾಂತದ ಹಾಗೂ ವಿಭಾಗದ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ /ಮೈಸೂರು.




















