
ಚನ್ನರಾಯನದುರ್ಗ ಕೋಟೆ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ, ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಒತ್ತಾಯ.
ಕೊರಟಗೆರೆ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವು ಮಾನವೀಯ ಮೌಲ್ಯಗಳು, ಮಾತೃ-ಪಿತೃ ಭಕ್ತಿ, ಸಹೋದರತ್ವ ಹಾಗೂ ಕುಟುಂಬ ಸಂಬಂಧಗಳ ಸಾಮರಸ್ಯವನ್ನು ಸಾರುವ ಮಹಾಗ್ರಂಥವಾಗಿದೆ. ರಾಮಾಯಣದ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಪ್ರೀತಿ, ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ತಹಶೀಲ್ದಾರ್ ಶರತ್ ಕುಮಾರ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣ ಹಾಗೂ ಪುರಸಭೆ ಕಚೇರಿ ಮುಂಭಾಗದಲ್ಲಿ ವಾಲ್ಮೀಕಿ ಸಮುದಾಯದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಐತಿಹಾಸಿಕ ಕೋಟೆಗಳ ಸಂರಕ್ಷಣೆಗೆ ಒತ್ತು ನೀಡಲಿ
ನಾಯಕ ಸಮುದಾಯದ ಐತಿಹಾಸಿಕ ಕೊಡುಗೆಗಳು ನಾಡಿನ ವಿವಿಧ ಕೋಟೆಗಳಲ್ಲಿ ಇಂದಿಗೂ ಕಾಣಸಿಗುತ್ತವೆ. ಕೊರಟಗೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಚನ್ನರಾಯನದುರ್ಗ ಕೋಟೆ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ. ಆದರೆ ಕೋಟೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಯ ವಿಚಾರದಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ ಎಂದು ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಸಮುದಾಯದ ಮುಖಂಡ ಓಬಳರಾಜು ಅಸಮಾಧಾನ ವ್ಯಕ್ತಪಡಿಸಿದರು.
ಕೋಟೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಐತಿಹಾಸಿಕ ಮಹತ್ವವನ್ನು ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.
ಮಕ್ಕಳಿಗೆ ರಾಮಾಯಣದ ಸಂದೇಶ ತಿಳಿಸಿ
ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು. ಪೋಷಕರು ವಾರದಲ್ಲಿ ಕನಿಷ್ಠ ಒಂದು ದಿನವಾದರೂ ರಾಮಾಯಣದ ಪ್ರಸಂಗಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಇದರಿಂದ ಮಕ್ಕಳಲ್ಲಿ ಸತ್ಯ, ಧರ್ಮ, ಪ್ರೀತಿ, ತ್ಯಾಗ ಹಾಗೂ ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಲು ಸಾಧ್ಯ ಎಂದು ಸಮುದಾಯದ ಮಹಿಳಾ ಮುಖಂಡೆ ಕವಿತಾ ಮನವಿ ಮಾಡಿದರು.
ವಾಲ್ಮೀಕಿ ಆದರ್ಶಗಳು ಬದುಕಿನಲ್ಲಿ ಅಳವಡಿಕೆಯಾಗಲಿ ತಳಸಮುದಾಯದಲ್ಲಿ ಜನಿಸಿ ಇಡೀ ಮನುಕುಲಕ್ಕೆ ಅಮೂಲ್ಯವಾದ ರಾಮಾಯಣ ಮಹಾಕಾವ್ಯವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರ ಸಾಧನೆ ಅನನ್ಯವಾದುದು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಬೆಸ್ಕಾಂ ಇಲಾಖೆಯ ಅಧಿಕಾರಿ ರಾಘವೇಂದ್ರ ತಿಳಿಸಿದರು.
ಪೂಜೆ, ಪುಷ್ಪನಮನ, ಪ್ರಸಾದ ವಿನಿಯೋಗ
ಪುರಸಭೆ ಕಚೇರಿ ಮುಂಭಾಗದಲ್ಲಿ ನಡೆದ ಜಯಂತ್ಯುತ್ಸವದಲ್ಲಿ ತಹಶೀಲ್ದಾರ್ ಶರತ್ ಕುಮಾರ್ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು, ಮಹಿಳಾ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮುದಾಯದ ಸದಸ್ಯರು ಭಾಗವಹಿಸಿದ್ದರು.
ವರದಿ. ಪ್ರಸನ್ನ ಕುಮಾರ್.ಎಸ್. ಕೊರಟಗೆರೆ




















