
ಶಾಸಕರ ಮುಂದೆ ಅಳಲು ತೋಡಿಕೊಂಡ ಸಾರ್ವಜನಿಕರು
ಬಳ್ಳಾರಿ / ಕಂಪ್ಲಿ: ಕ್ಷೇತ್ರದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರು ಶನಿವಾರ (ಅಕ್ಟೋಬರ್ 24) ರಾತ್ರಿ ಕಂಪ್ಲಿಯ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರ ಭೇಟಿಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿರಬೇಕಾದ ವೈದ್ಯರು ಗೈರುಹಾಜರಾಗಿರುವುದು ಕಂಡು ಬಂದಿತು. ಈ ವೇಳೆ ಆಸ್ಪತ್ರೆಯಲ್ಲಿದ್ದ ರೋಗಿಗಳು ಶಾಸಕರ ಮುಂದೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, “ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಬರುವ ತುರ್ತು ರೋಗಿಗಳನ್ನು ವೈದ್ಯರಿಲ್ಲದೆ ಹೇಗೆ ನೋಡಿಕೊಳ್ಳುತ್ತೀರಿ?” ಎಂದು ಅಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲಿ ವೈದ್ಯರು ಇಲ್ಲದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ತಕ್ಷಣವೇ ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ (DHO) ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಈ ವೇಳೆ ಜಿಲ್ಲಾ ವೈದ್ಯಾಧಿಕಾರಿಗಳು ಪ್ರತಿಕ್ರಿಯಿಸಿ, ಸಾರ್ವಜನಿಕರ ಸೇವೆಗೆ ಯಾವುದೇ ತೊಂದರೆಯಾಗದಂತೆ ಆಸ್ಪತ್ರೆಗೆ ತಕ್ಷಣವೇ ಪರ್ಯಾಯ ವೈದ್ಯರ ವ್ಯವಸ್ಥೆ ಕಲ್ಪಿಸುವುದಾಗಿ ಹಾಗೂ ಕರ್ತವ್ಯ ಲೋಪ ಎಸಗಿದ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸುವುದಾಗಿ ಶಾಸಕರಿಗೆ ಭರವಸೆ ನೀಡಿದರು. ಶಾಸಕರ ಭೇಟಿಯ ಬೆನ್ನಲ್ಲೇ ತಡವಾಗಿ ಆಸ್ಪತ್ರೆಗೆ ಆಗಮಿಸಿದ ಕರ್ತವ್ಯ ನಿರತ ವೈದ್ಯರು, ಶಾಸಕರಲ್ಲಿ ತಮ್ಮ ತಪ್ಪಿಗೆ ಕ್ಷಮೆಯಾಚಿಸಿ ತಕ್ಷಣವೇ ರೋಗಿಗಳ ಉಪಚಾರಕ್ಕೆ ಹಾಜರಾದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷರಾದ ಹಬೀಬ್ ರೆಹಮಾನ್ ಹಾಗೂ ಪ್ರಮುಖ ಮುಖಂಡರಾದ ಬಿ. ಸಿದ್ದಪ್ಪ, ಕೆ.ಎಸ್. ಚಾಂದಭಾಷಾ, ಬಿ. ಜಾಫರ್, ಸಿ.ಆರ್. ಹನುಮಂತ, ಷಣ್ಮುಖಪ್ಪ, ಮೇಟ್ರಿ ಗಿರೀಶ, ಕುಮಾರ್, ವಾಸು ಸೇರಿದಂತೆ ಇತರರು ಶಾಸಕರಿಗೆ ಸಾಥ್ ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್




















