
ಕಂಪ್ಲಿ: ತೀವ್ರ ಭ್ರಷ್ಟಾಚಾರ ಮತ್ತು ಸಾರ್ವಜನಿಕರ ಅಲೆದಾಟದ ದೂರುಗಳ ಹಿನ್ನೆಲೆಯಲ್ಲಿ ಕಂಪ್ಲಿ ಪಟ್ಟಣದ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಗೆ ಶಾಸಕ ಜೆ.ಎನ್.ಗಣೇಶ್ ಮಂಗಳವಾರ ದಿಢೀರ್ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಚೇರಿಯಲ್ಲಿ ಸರ್ಕಾರಿ ಶುಲ್ಕಕ್ಕಿಂತ ಅತಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಮತ್ತು ಸಾರ್ವಜನಿಕರನ್ನು ಸತಾಯಿಸುತ್ತಿರುವ ಕುರಿತು ಆಕ್ರೋಶ ಹೊರಹಾಕಿದ ಶಾಸಕರು, “ಜನರ ಕೆಲಸ ಮಾಡಲು ಸರ್ಕಾರ ಸಂಬಳ ನೀಡುತ್ತದೆ. ಅದನ್ನು ಬಿಟ್ಟು ಬಡವರ, ರೈತರ ರಕ್ತ ಹೀರುತ್ತಿದ್ದೀರಾ?” ಎಂದು ಗುಡುಗಿದರು.
ಐದು ನಕಲಿ ಸಹಿ ಪತ್ತೆ :
ಪರಿಶೀಲನೆ ವೇಳೆ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಗಾದಿಲಿಂಗಪ್ಪ ಎಂಬುವವರು ಶಾಸಕರ ಕಣ್ಣೆದುರೇ ಹಾಜರಾತಿ ಪುಸ್ತಕದಲ್ಲಿ ಗೈರುಹಾಜರಾದ ಐದು ಸಿಬ್ಬಂದಿಗಳ ನಕಲಿ ಸಹಿ ಹಾಕಿ ಸಿಕ್ಕಿಬಿದ್ದರು. ಈ ಅಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಗಾದಿಲಿಂಗಪ್ಪ ಅವರಿಗೆ ಸ್ಥಳದಲ್ಲೇ ನೋಟಿಸ್ ಜಾರಿಗೊಳಿಸಿ ಮುಂದಿನ ಕಾನೂನು ಕ್ರಮಕ್ಕೆ ನಿರ್ದೇಶನ ನೀಡಲಾಗುವುದು ಎಂದರು.
ಇದೇ ವೇಳೆ ಕಚೇರಿಯಲ್ಲಿದ್ದ ಪತ್ರ ಬರಹಗಾರರನ್ನು ಕರೆದು, ಸಾರ್ವಜನಿಕರಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಸಿದರು.
ಹೆಚ್ಚು ಹಣ ಕೇಳಿದರೆ ಅರ್ಜಿ ಅಲ್ಲೇ ಬಿಡಿ:
“ಪಹಣಿ ಬದಲಾವಣೆ, ದಾನಪತ್ರ, ನಿವೇಶನ ನೋಂದಣಿಗೆ ಅಧಿಕಾರಿಗಳು 20 ರಿಂದ 30 ಸಾವಿರ ರೂ. ಹೆಚ್ಚುವರಿ ಹಣ ಕೇಳಿದರೆ ಸಾರ್ವಜನಿಕರು ಹಾಗೂ ರೈತರು ಅರ್ಜಿಗಳನ್ನು ಅಲ್ಲೇ ಬಿಟ್ಟು ನೇರವಾಗಿ ನನ್ನನ್ನು ಸಂಪರ್ಕಿಸಬೇಕು. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















