ಬಳ್ಳಾರಿ / ಕಂಪ್ಲಿ: ಎಂಎಲ್ಸಿ ತಿಪ್ಪಣ್ಣಪ್ಪ ಕಮಕ್ನೂರು, ಶಾಸಕ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡದೆ, ಗಂಗಾಮತಸ್ಥರ ಸಮಾಜ ಕಡೆಗಣಿಸುವ ಜೊತೆಗೆ ಅನ್ಯಾಯವಾಗಿದ್ದು, ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಎಚ್ಚರವಹಿಸಿ, ಗಂಗಾಮತ ಸಮಾಜದ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರು, ಶಾಸಕ ಮಂಕಾಳ ವೈದ್ಯಗೆ ಸಚಿವ ಸ್ಥಾನ ಅಥವಾ ಉನ್ನತ ಸ್ಥಾನ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಗಂಗಾಮತ ಸಮಾಜ(ಬೆಸ್ತರು)ದ ತಾಲೂಕು ಅಧ್ಯಕ್ಷ ಎಲೆಗಾರ ನಾಗರಾಜ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಮಂಗಳವಾರ ಪಟ್ಟಣದ ತಾಯಮ್ಮ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ಮಾತನಾಡಿ, ಶಾಸಕ ಮಂಕಾಳು ಎಸ್.ವೈದ್ಯ ಇವರು ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಶ್ರಮಿಸಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಎರಡನೇ ಹಂತದ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಮಂಕಾಳು ವೈದ್ಯರ ಹೆಸರಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಅವರ ಹೆಸರನ್ನು ಕೈಬಿಡುವ ಮೂಲಕ ಅಪಮಾನ ಮಾಡಿದೆ. ರಾಜ್ಯದಲ್ಲಿ ಗಂಗಾಮತ, ಮೊಗವೀರ, ಕೋಲಿ ಕಬ್ಬಲಿಗ, ಅಂಬಿಗ, ಬೆಸ್ತರು ಸೇರಿದಂತೆ ಗಂಗಾಮತ ಸಮಾಜವು ಸುಮಾರು 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಆದರೆ, ಈ ಹಿಂದುಳಿದ ಗಂಗಾಮತ ಸಮಾಜದ ಶಾಸಕ ಮಂಕಾಳು ವೈದ್ಯಗೆ ಸಚಿವ ಸ್ಥಾನ ನೀಡದೆ, ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಎಂಎಲ್ಸಿ ತಿಪ್ಪಣ್ಣಪ್ಪ ಕಮಕ್ನೂರು ಇವರಿಗೂ ಸಹ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಗಂಗಾಮತ ಸಮಾಜಕ್ಕೆ ಸಚಿವ ಸ್ಥಾನ ನೀಡದೇ, ದ್ರೋಹ ಬಗೆದಿದೆ. ಈಗಲಾದರೂ ಸಮಾಜದವರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಅಥವಾ ಉನ್ನತ ಸ್ಥಾನ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟದ ಮೂಲಕ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕರೇಕಲ್ ಮನೋಹರ, ಅಯೋಧ್ಯ ವೆಂಕಟೇಶ, ಬಿ.ಸಿದ್ದಪ್ಪ, ಅಯೋಧ್ಯ ವಾಸು, ಆನೆಗುಂದಿ ತಾಯಣ್ಣ, ಕೆ.ಬಿ.ವೀರಭದ್ರಪ್ಪ, ಅಯೋಧ್ಯ ರಮೇಶ, ಜೋಳಮಾರೋ ಈರಪ್ಪ, ಲಬೇದ್ ವಿರೇಶ, ಕೋಟೆ ಮ್ಯಾಗಾಳ್ ನಾಗರಾಜ, ಉಡೆಗೋಳ್ ಶರಣಪ್ಪ, ಇಟಗಿ ಈರಣ್ಣ, ಉಡೆಗೋಳ್ ದ್ಯಾವಣ್ಣ, ಅಂಬಿಗರ ಯಲ್ಲಪ್ಪ, ಕೆ.ಪ್ರಕಾಶ, ಜೋಳಮಾರೋ ವೀರಭದ್ರಪ್ಪ, ನಾಗೇಶ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















