ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಿಳಾ ಕೊಠಡಿಯಲ್ಲಿ ಮದ್ಯದ ವಾಸನೆ, ಪ್ಯಾಂಟ್‌ಗಳು ಪತ್ತೆ

ಬೇಜವಾಬ್ದಾರಿ ಅಧಿಕಾರಿಗಳಿಂದ ಮಹಿಳೆಯರ ರಕ್ಷಣೆ ಸಾಧ್ಯವೇ? ಅವ್ಯವಸ್ಥೆ ಪ್ರಶ್ನಿಸಿದ ಕರವೇ ಸ್ವಾಭಿಮಾನಿ ಬಣಕ್ಕೆ ಕುಶಾಲನಗರ ಟಿಸಿ ದರ್ಪದ ಧಮಕಿ

ತಾಯಂದಿರು ಹಾಲುಣಿಸುವ ಪವಿತ್ರ ಜಾಗದಲ್ಲೇ ಅಕ್ರಮ ಚಟುವಟಿಕೆಯ ಭೀಕರ ಶಂಕೆ: ಗಬ್ಬೆದ್ದು ನಾರುತ್ತಿರುವ ವಿಶ್ರಾಂತಿ ಗೃಹ ತಪ್ಪು ಒಪ್ಪಿ ಸರಿಪಡಿಸುವ ಬದಲು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳ ಮೇಲೆಯೇ ಪೊಲೀಸ್ ಕೇಸ್ ಹಾಕುವುದಾಗಿ ಬೆದರಿಸಿದ ಟ್ರಾಫಿಕ್ ಕಂಟ್ರೋಲರ್.

ಕೊಡಗು ಜಿಲ್ಲೆಯ ಕುಶಾಲನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿಯು ಅತ್ಯಂತ ಕೀಳು ಮಟ್ಟದ ಅವ್ಯವಸ್ಥೆಯಿಂದ ಕೂಡಿದ್ದು, ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ ಎಂದು ಕರವೇ ಸ್ವಾಭಿಮಾನಿ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಕಾರಣಾಂತರಗಳಿಂದ ಕುಶಾಲನಗರ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋದಾಗ, ಅಲ್ಲಿ ನೆರೆದಿದ್ದ ಸಾರ್ವಜನಿಕ ಮಹಿಳೆಯರು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳ ಬಳಿ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮಹಿಳಾ ವಿಶ್ರಾಂತಿ ಕೊಠಡಿಯು ವಿಪರೀತ ವಾಸನೆಯಿಂದ ಕೂಡಿದ್ದು, ಒಳಗೆ ಕಾಲಿಡಲು ಸಹ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ದೂರಿನ ಮೇರೆಗೆ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಜಯಶ್ರೀ ಮುರುಗೇಶ್ ಹಾಗೂ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷರಾದ ಭವ್ಯ ಅವರು ತಕ್ಷಣವೇ ವಿಶ್ರಾಂತಿ ಕೊಠಡಿಯ ಒಳಗೆ ಹೋಗಿ ವೀಕ್ಷಿಸಿದಾಗ ಆಘಾತಕಾರಿ ದೃಶ್ಯಗಳು ಕಂಡುಬಂದಿವೆ. ಕೊಠಡಿಯೊಳಗೆ ಮದ್ಯಪಾನ ಮಾಡಿರುವುದು, ಮಹಿಳೆಯರ ಪ್ಯಾಂಟ್‌ಗಳು, ಬಟ್ಟೆಗಳು ಹಾಗೂ ಎಲೆ ಅಡಿಕೆ ಚೀಲ ಸೇರಿದಂತೆ ತರಹೇವಾರಿ ಕಸದ ವಸ್ತುಗಳು ಬಿದ್ದಿರುವುದು ಬೆಳಕಿಗೆ ಬಂದಿದೆ.
ಮಹಿಳಾ ಕೊಠಡಿಯಲ್ಲಿ ಇಂತಹ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಹಲವು ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬೇರೆಲ್ಲಾ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಸಣ್ಣ ಸಣ್ಣ ಮಕ್ಕಳು ಬಂದರೆ ಅವರನ್ನು ಮಲಗಿಸಲು ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ತೊಟ್ಟಿಲಿನ ವ್ಯವಸ್ಥೆ ಇರುತ್ತದೆ. ಆದರೆ ಅತ್ಯಂತ ಪ್ರಮುಖ ಪ್ರವಾಸಿ ಕೇಂದ್ರವಾದ ಕುಶಾಲನಗರದ ಈ ಬಸ್ ನಿಲ್ದಾಣದಲ್ಲಿ ಅಂತಹ ಯಾವುದೇ ತೊಟ್ಟಿಲಿನ ವ್ಯವಸ್ಥೆ ಇಲ್ಲದಿರುವುದನ್ನು ಕರವೇ ಪದಾಧಿಕಾರಿಗಳು ಗಮನಿಸಿದ್ದಾರೆ.
ಈ ಮೂಲಭೂತ ಸೌಕರ್ಯದ ಕೊರತೆಯ ಬಗ್ಗೆ ಅಲ್ಲಿನ ಅಧಿಕಾರಿಗಳನ್ನು ಪ್ರಶ್ನಿಸಿದರೆ, ತಪ್ಪು ಒಪ್ಪಿಕೊಳ್ಳುವ ಬದಲು ಅಧಿಕಾರಿಗಳು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳ ಮೇಲೆಯೇ ಉರಿದುಬಿದ್ದು, ಅತ್ಯಂತ ಉಡಾಫೆಯಿಂದ ವರ್ತಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಸಂಘಟನೆಯ ಪದಾಧಿಕಾರಿಗಳು ಸ್ಥಳದಲ್ಲಿದ್ದ ಬಸ್ ನಿಲ್ದಾಣದ ಟ್ರಾಫಿಕ್ ಕಂಟ್ರೋಲರ್ (ಟಿಸಿ) ಅವರನ್ನು ಸ್ಥಳಕ್ಕೆ ಕರೆಸಿ, ಅವ್ಯವಸ್ಥೆಯನ್ನು ತೋರಿಸಿ ಪ್ರಶ್ನಿಸಿದ್ದಾರೆ.
ಆದರೆ, ಸರಿಪಡಿಸುವ ಗೋಜಿಗೆ ಹೋಗದ ಅಧಿಕಾರಿ, ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳ ಮೇಲೆಯೇ ತೀವ್ರ ದರ್ಪ ತೋರಿದ್ದಾರೆ. “ನಾವೇನು ಮಾಡುವುದಕ್ಕಾಗುವುದಿಲ್ಲ, ಸಂಘಟನೆಯ ವಿರುದ್ಧವೇ ಪೊಲೀಸ್ ದೂರು ನೀಡಲಾಗುವುದು” ಎಂದು ಬಹಿರಂಗವಾಗಿ ಧಮಕಿ ಹಾಕಿ ಗೂಂಡಾವರ್ತನೆ ಪ್ರದರ್ಶಿಸಿದ್ದಾರೆ.

ಅಧಿಕಾರಿಯ ಈ ಬೇಜವಾಬ್ದಾರಿ ವರ್ತನೆಗೆ ಕರವೇ ಸ್ವಾಭಿಮಾನಿ ಬಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಹಿಳಾ ಕೊಠಡಿಯಲ್ಲಿ ಮದ್ಯಪಾನದ ಕುರುಹು ಹಾಗೂ ಮಹಿಳೆಯರ ಬಟ್ಟೆಗಳು, ಪ್ಯಾಂಟ್‌ಗಳು ಬಿದ್ದಿರುವುದನ್ನು ನೋಡಿದರೆ ಇಲ್ಲಿ ಏನೋ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಸಂಶಯ ವ್ಯಕ್ತವಾಗುತ್ತಿದೆ.
ಇಂತಹ ಪರಿಸ್ಥಿತಿ ಇದ್ದರೆ ಬಸ್ ನಿಲ್ದಾಣಕ್ಕೆ ಬರುವ ಮಹಿಳೆಯರಿಗೆ ರಕ್ಷಣೆ ಎಲ್ಲಿದೆ? ಇಂತಹ ಅಧಿಕಾರಿಗಳಿದ್ದರೆ ಮಹಿಳೆಯರ ಸುರಕ್ಷತೆ ಹೇಗೆ ಸಾಧ್ಯ? ಸಣ್ಣ ಮಕ್ಕಳನ್ನು ಎತ್ತುಕೊಂಡು ಬಂದು ಹಾಲು ಕುಡಿಸಲು ಹಾಗೂ ಮಲಗಿಸಲು ತಾಯಂದಿರು ಇದೇ ಕೊಠಡಿಯನ್ನು ಅವಲಂಬಿಸಿರುತ್ತಾರೆ.
ಇಂತಹ ವಾಸನೆ ಮತ್ತು ಗಲೀಜು ವಾತಾವರಣದಿಂದ ಆ ಮುಗ್ಧ ಮಕ್ಕಳಿಗೆ ತೊಂದರೆಯಾದರೆ ಜವಾಬ್ದಾರರು ಯಾರು? ಇಂತಹ ದರ್ಪ ತೋರುವ ಅಧಿಕಾರಿಗಳು ನಮಗೆ ಬೇಕೇ? ಎಂದು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ನೇರ ಸವಾಲು ಹಾಕಿದರು

ಕೆಎಸ್ಆರ್ಟಿಸಿ ಉನ್ನತ ಅಧಿಕಾರಿಗಳು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಮಹಿಳಾ ವಿಶ್ರಾಂತಿ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮಹಿಳೆಯರಿಗೆ ಕೂರಲು ಯೋಗ್ಯವಾಗಿಸಬೇಕು ಹಾಗೂ ತಕ್ಷಣವೇ ಸಣ್ಣ ಮಕ್ಕಳಿಗೆ ತೊಟ್ಟಿಲಿನ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರ ಪರವಾಗಿ ಪ್ರಶ್ನಿಸಿದ ಸಂಘಟನೆಗೆ ಬೆದರಿಕೆ ಹಾಕಿ, ಉರಿದುಬಿದ್ದ ಕುಶಾಲನಗರ ಟಿಸಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು.
ಇಲ್ಲದಿದ್ದರೆ ಮಹಿಳೆಯರ ಸುರಕ್ಷತೆ ಮತ್ತು ಹಕ್ಕಿಗಾಗಿ ಕರವೇ ಸ್ವಾಭಿಮಾನಿ ಬಣದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಸ್ವಾಭಿಮಾನಿ ಬಣ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ, ಕರವೇ ಸ್ವಾಭಿಮಾನಿ ಬಣದ ಗೌರವಾಧ್ಯಕ್ಷರಾದ ಚಂದ್ರು, ಕರವೇ ಸ್ವಾಭಿಮಾನಿ ಬಣದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್, ಕುಶಾಲನಗರ ತಾಲೂಕು ಅಧ್ಯಕ್ಷರಾದ ಶಿವು ಮತ್ತು ಕರವೇ ಸ್ವಾಭಿಮಾನಿ ಬಣದ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷರಾದ ಭವ್ಯ ಅವರು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!