
ಮಹಾರಾಣ ಪ್ರತಾಪಸಿಂಹರ ಅದ್ದೂರಿ ಜಯಂತ್ಯುತ್ಸವ
ಬಳ್ಳಾರಿ / ಕಂಪ್ಲಿ : ರಜಪೂತ್ ಸಮಾಜ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರಪ್ರೇಮಿ ಶ್ರೀ ಮಹಾರಾಣಾ ಪ್ರತಾಪಸಿಂಹರ 486ನೇ ಜಯಂತ್ಯುತ್ಸವ ನಿಮಿತ್ತ ಮಹಾರಾಣ ಪ್ರತಾಪಸಿಂಹರ ಭಾವಚಿತ್ರ ಮೆರವಣಿಗೆ, ವೀರಶೈವ ಭವನದಲ್ಲಿ ಜಯಂತ್ಯುತ್ಸವ ಸಮಾರಂಭ ನಡೆಯಿತು.
ಬೆಂಗಳೂರಿನ ಕರ್ನಾಟಕ ಕ್ಷತ್ರೀಯ ರಜಪೂತ್ ಮಹಾಸಭಾದ ರಾಜ್ಯಾಧ್ಯಕ್ಷ ಆರ್. ಬಾಲಾಜಿ ಸಿಂಗ್ ಸಮಾರಂಭಕ್ಕೆ ಚಾಲನೆ ನೀಡಿ, ರಾಜ್ಯದ ರಜಪೂತರನ್ನು ಒಂದೇ ವೇದಿಕೆಯಲ್ಲಿ ತಂದು ಸಂಘಟಿತರನ್ನಾಗಿಸಲು ರಾಜ್ಯ ಸಂಚಾರ ಕೈಗೊಳ್ಳಲಾಗುವುದು. ಸದ್ಯ ಮಹಾಸಭಾದ ಕಾರ್ಯಕಾರಣಿ ಸಮಿತಿ ಪದಾಧಿಕಾರಿಗಳ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ರಾಜ್ಯದ ರಜಪೂತರು ಭಿನ್ನಾಭಿಪ್ರಾಯ ತೊರೆದು ಸರ್ವ ಸಂಘಟಿತರಾಗಬೇಕಿದೆ ಎಂದರು.
ಕಂಪ್ಲಿ ರಜಪೂತ್ ಸಮಾಜದ ತಾಲೂಕು ಅಧ್ಯಕ್ಷ ಇಂದ್ರಜಿತ್ಸಿಂಗ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ಕ್ಷತ್ರಿಯ ರಜಪೂತ ಅಭಿವೃದ್ಧಿ ನಿಗಮ ರಚಿಸುವಲ್ಲಿ ಸರ್ಕಾರ ಮುಂದಾಗಬೇಕು. ಇದಕ್ಕಾಗಿ ಡಿಜಿಟಲೀಕರಣ ಪ್ರಕ್ರಿಯೆ ಮುನ್ನಡೆದಿದೆ. ತಾಲೂಕಿನಲ್ಲಿ ಶೇ.100ರಷ್ಟು ಡಿಜಿಟಲೀಕರಣ ಸಾಧಿಸಿದೆ. ಪಟ್ಟಣದಲ್ಲಿ ರಾಣಾ ಪ್ರತಾಪಸಿಂಹರ ಪುತ್ಥಳಿ ಸ್ಥಾಪನೆಯೊಂದಿಗೆ ವೃತ್ತ ನಿರ್ಮಾಣ, ರಸ್ತೆ ಪ್ರತಾಪಸಿಂಹರ ಹೆಸರಿಡುವಲ್ಲಿ ರಜಪೂತ್ ಸಮುದಾಯ ಭವನ ನಿರ್ಮಿಸಿಕೊಡುವಲ್ಲಿ ಶಾಸಕರು, ಪುರಸಭಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಶ್ರೀ ರಾಣಾ ಪ್ರತಾಪಸಿಂಹರ ಭಾವಚಿತ್ರ ಮೆರವಣಿಗೆ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಕಂಪ್ಲಿ ರಜಪೂತ ಸಮಾಜದ ಕಾರ್ಯದರ್ಶಿ ಮಾರುತಿ ವಕೀಲ, ಉಪಾಧ್ಯಕ್ಷ ಲಕ್ಷ್ಮಣ ಸಿಂಗ್, ವೀರಶೈವ ಲಿಂಗಾಯತ ಯುವ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ, ಕರ್ನಾಟಕ ಕ್ಷತ್ರಿಯ ರಜಪೂತ ಮಹಾಸಭಾದ ಮಹಿಳಾ ಅಧ್ಯಕ್ಷೆ ಅನ್ನಪೂರ್ಣ ಸಿಂಗ್, ಬಳ್ಳಾರಿ ಜಿಲ್ಲಾಧ್ಯಕ್ಷ ಬಾಲಾಜಿ ಸಿಂಗ್, ರಜಪೂತ್ ಸಮಾಜದ ಅಧ್ಯಕ್ಷರಾದ ಹೊಸಪೇಟೆಯ ಶೇರ್ಸಿಂಗ್, ಕಾರಟಗಿಯ ಶಂಕರ್ಸಿಂಗ್, ಗಂಗಾವತಿಯ ಘನಶಾಮಸಿಂಗ್, ಮುದ್ದೇಬಿಹಾಳದ ಉದಯಸಿಂಗ್, ತಾವರೆಗೆರೆಯ ನಾರಾಯಣಸಿಂಗ್, ಮಸ್ಕಿಯ ಅಶೋಕಸಿಂಗ್ ಟಾಕೂರ್, ವಿಜಯಪುರದ ಅಧ್ಯಕ್ಷ ಭೀಮ್ಸಿಂಗ್ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















