
ಕೊಪ್ಪಳ ಬಸ್ ಸ್ಟಾಂಡ್ ಹತ್ತಿರ ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಗೆ ಕೊಪ್ಪಳ -ಗದಗ ಹೆದ್ದಾರಿಯಲ್ಲಿ ವಾಹನಗಳು ಬಹಳ ನಿಧಾನವಾಗಿ ಸಾಲು ಸಾಲು ಆಗಿ ಚಲಿಸುತ್ತಿದ್ದವು. ಕೆಲವರು ಮುಂದೆ ಟ್ರಾಫಿಕ್ ಜಾಮ್ ಆಗಿರಬಹುದು ಎಂದುಕೊಂಡರು. ಇನ್ನೂ ಕೆಲವರು ರಸ್ತೆ ಕಾಮಗಾರಿ ನಡೆಯುತ್ತಿರಬಹುದು ಅಂದುಕೊಂಡು ಮುಂದೆ ಸಾಗಿದಂತೆ ಅಲ್ಲಿ ಒಂದು ದೃಶ್ಯ ಸ್ಪಷ್ಟವಾಗಿ ಕಾಣುತ್ತಿತ್ತು.
ಅಲ್ಲಿ ಹೆಗಲು ಮೇಲೆ ಟವಲ್ ಹಾಕಿಕೊಂಡು, ಕೈಯಲ್ಲಿ ಬುತ್ತಿ ಹಿಡಿದುಕೊಂಡು ರಸ್ತೆ ಪಕ್ಕದಲ್ಲಿ ಕೂಲಿ ಕೆಲಸಕ್ಕಾಗಿ ಸುಮಾರು ಜನರು ನಮ್ಮನ್ನು ಇಂದು ಯಾರಾದರೂ ಕೆಲಸಕ್ಕೆ ಕರೆಯಬಹುದು ಎಂಬ ಭರವಸೆಯಿಂದ ನಿಂತಿದ್ದರು. ಒಂದು ವೇಳೆ ಇಂದು ನಮಗೆ ಕೆಲಸ ಸಿಗದೇ ಇದ್ದರೆ ಹೇಗೆ ಎಂಬ ಮುಖದಲ್ಲಿನ ಆತಂಕದಿಂದ ಎದುರಿಗೆ ಬರುವ ಜನರನ್ನು ನೋಡುತ್ತಿದ್ದರು. ಇದು ಕೊಪ್ಪಳ ಬಸ್ ನಿಲ್ದಾಣ ಹತ್ತಿರ ಲೇಬರ್ ಸರ್ಕಲ್ ನಲ್ಲಿ ಕಂಡು ಬಂದ ದೃಶ್ಯ.
ಈ ಲೇಬರ್ ಸರ್ಕಲ್ ಗೆ ಕೊಪ್ಪಳದ ಸುತ್ತ ಮುತ್ತ ಇರುವ ಹಳ್ಳಿಯ ಜನರು ಬರುತ್ತಾರೆ. ಯಾರಿಗೆ ಕೆಲಸಕ್ಕೆ ಜನ ಬೇಕೋ ಅವರು ಈ ಸರ್ಕಲ್ ಗೆ ಬಂದು ಇಲ್ಲಿಂದ ಜನರನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಕೂಲಿ ಕಾರ್ಮಿಕರು ಸಾಯಂಕಾಲ ಕೆಲಸ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗಿ ಬೆಳಿಗ್ಗೆ ಮತ್ತೆ ಇದೇ ಸರ್ಕಲ್ ಗೆ ಬರುತ್ತಾರೆ.
ಅಲ್ಲಿ ನಿಂತಿರುವ ಕೂಲಿ ಕೆಲಸಕ್ಕೆ ಬಂದಿರುವವರನ್ನು ಮಾತನಾಡಿಸಿದಾಗ ಬರಗಾಲದ ಮೊದಲು ಸಂತ್ರಸ್ತರು ಅಂದರೆ ಅದು ರೈತರು ಎನ್ನುತ್ತಾರೆ ಕರ್ಕಿಹಳ್ಳಿಯಿಂದ ಕೆಲಸಕ್ಕೆ ಬಂದಿರುವ ಯುವಕರು.
ಈ ವರ್ಷ ಬಹಳ ಕಡಿಮೆ ಮಳೆ ಬಂದು, ಭೂಮಿಯಲ್ಲಿ ನೀರಿನ ಹಂಪು ಆರಿ ಹೋಗುವ ಸ್ಥಿತಿ ಉಂಟಾಗಿದೆ.
ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗುವ ಪರಿಸ್ಥಿತಿ ಬರಬಹುದು.
ರೈತರಿಗೆ ಬೆಳೆ ನಾಶವಾಗಿ ನಷ್ಟವಾಗುತ್ತದೆ.
ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಉಂಟಾಗುತ್ತದೆ, ಜನಜೀವನ ಮತ್ತು ಆರ್ಥಿಕತೆಗೆ ತೊಂದರೆಯಾಗುತ್ತದೆ ಎಂದು ಲೇಬರ್ ಸರ್ಕಲ್ ಗೆ ವಿವಿಧ ಹಳ್ಳಿಗಳಿಂದ ಕೆಲಸಕ್ಕೆ ಬಂದಿರುವ ಕೂಲಿ ಕಾರ್ಮಿಕರು ಆತಂಕ ವ್ಯಕ್ತಪಡಿಸಿದರು.
ಈ ಕೂಲಿ ಕಾರ್ಮಿಕರು ದಿನನಿತ್ಯದ ಬದುಕಿನಲ್ಲಿ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಡಿಮೆ ಕೂಲಿ, ಪ್ರತಿ ದಿನ ಕೆಲಸ ಸಿಗದೇ ಇರುವುದು, ಸಕಾಲದಲ್ಲಿ ವೇತನ ಸಿಗದಿರುವುದು, ಕೆಲಸದ ಅಸುರಕ್ಷತೆ, ಸಾಮಾಜಿಕ ಭದ್ರತೆಯ ಕೊರತೆ ಮತ್ತು ಉದ್ಯೋಗದ ಅಸ್ಥಿರತೆ ಇತ್ಯಾದಿ.
ಇಂದು ಗ್ರಾಮೀಣ ಪ್ರದೇಶಗಳಲ್ಲಿ ವರ್ಷ ಪೂರ್ತಿ ಸರಿಯಾಗಿ ಕೆಲಸ ಸಿಗುತ್ತಿಲ್ಲ. ನಗರಗಳು ನಮಗೆ ಬದುಕು ನೀಡಿ ಉದ್ಯೋಗ ನೀಡುತ್ತಿವೆ ಎಂಬ ಮನೋಭಾವನೆಯಿಂದ ಜನರು ಪಟ್ಟಣಗಳಿಗೆ ಕೆಲಸಕ್ಕೆ ಬರುತ್ತಾರೆ. ಉದ್ಯೋಗಕ್ಕಾಗಿ ಮತ್ತು ಜೀವನಕ್ಕಾಗಿ ಇಂದು ಬಹಳಷ್ಟು ಬಡ ಜನರು ಬೆಂಗಳೂರು, ಬಾಂಬೆ, ಗೋವಾ ಮತ್ತು ಮಂಗಳೂರು ನಂತಹ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ.
ನಮ್ಮ ದೇಶ ಕೃಷಿ ಪ್ರಧಾನವಾದ ದೇಶ. ಇಲ್ಲಿ ಸುಮಾರು ಶೇ. 60 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಇಂದು ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಜನರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾಗಿ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ. ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲ. ಗೊಬ್ಬರಗಳಿಗೆ ಸಬ್ಸಿಡಿ ಸಿಗುತ್ತಿಲ್ಲ. ಇಂದು ಕೃಷಿ ಕ್ಷೇತ್ರ ಬಹಳ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕೃಷಿಯಲ್ಲಿ ವೆಚ್ಚ ಹೆಚ್ಚು ಇದೆ. ಲಾಭ ಕಡಿಮೆ ಇದೆ. ರೈತರು ಸಾಲ ತಿರಿಸಲಾಗದೇ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಮಳೆ ಹೆಚ್ಚಾಗಿ ಬೆಳೆ ನಾಶ ಆಗುತ್ತದೆ. ಕೆಲವೊಮ್ಮೆ ಮಳೆ ಕಡಿಮೆ ಆಗಿ ಬೆಳೆ ನಾಶ ಆಗುತ್ತದೆ. ಈ ಕಾರಣಗಳಿಂದ ಇಂದು ಸುಮಾರು ಎಂಟು ಹತ್ತು ಎಕರೆ ಜಮೀನು ಇದ್ದವರು ಸಹ ವಲಸೆ ಹೋಗುತ್ತಿದ್ದಾರೆ. ಸುಮಾರು ಇಪ್ಪತ್ತು ವರ್ಷಕ್ಕಿಂತ ಮೊದಲು ಬೆಂಗಳೂರು, ಮಂಗಳೂರಿನಂತಹ ನಗರಗಳಿಗೆ ಕೊಪ್ಪಳದಂತಹ ವಿವಿಧ ನಗರಗಳಿಂದ ಸರಕಾರಿ ಬಸ್ ಗಳು ಪ್ರತಿ ದಿನ ಸುಮಾರು ಒಂದೆರಡು ಬಸ್ ಗಳು ಸಂಚಾರಿಸುತ್ತಿದ್ದವು. ಆದರೆ ಇಂದು ಪ್ರತಿ ದಿನ ಸುಮಾರು ಎಂಟು ಹತ್ತು ಸರಕಾರಿ ಕೆಂಪು ಬಸ್ ಗಳು ಸಂಚಾರಿಸುತ್ತಿವೆ. ಇದರ ಅರ್ಥ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ದುಡಿಯುವುದಕ್ಕೆ ಜನರ ವಲಸೆ ಪ್ರಮಾಣ ಹೆಚ್ಚಾಗಿದೆ ಎಂದರ್ಥ.
ಉದ್ಯೋಗ ಅಥವಾ ಬದುಕಿಗಾಗಿ ಜನರು ವಲಸೆ ಹೋಗುತ್ತಾರೆ ಈ ವಲಸೆಯಿಂದ ಆರ್ಥಿಕ ಲಾಭಗಳಿದ್ದರೂ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ನಗರಗಳಲ್ಲಿ ಸರಿಯಾದ ವಸತಿ ಇಲ್ಲದಿರುವುದು, ಕಡಿಮೆ ಕೂಲಿ, ಆರೋಗ್ಯ ಮತ್ತು ಶಿಕ್ಷಣದ ಕೊರತೆ ಹಾಗೂ ಸಾಮಾಜಿಕ ಭದ್ರತೆಯಿಲ್ಲದೆ ತೀವ್ರ ತೊಂದರೆಗಳನ್ನು ಎದುರಿಸುತ್ತಾರೆ. ದೊಡ್ಡ ನಗರಗಳಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿ ಇರಲು ಸೂಕ್ತವಾದ ಮನೆಗಳಿಲ್ಲದೆ ಕೊಳೆಗೇರಿಗಳಲ್ಲಿ ವಾಸಿಸಬೇಕಾಗುತ್ತದೆ. ಸ್ವಚ್ಛತೆಯ ಕೊರತೆ ಮತ್ತು ಪೌಷ್ಟಿಕ ಆಹಾರ ಸಿಗದ ಕಾರಣ ಅನಾರೋಗ್ಯ ಕಾಡುತ್ತದೆ. ಸರಿಯಾದ ವೈದ್ಯಕೀಯ ಸೌಲಭ್ಯ ಸಿಗುವುದಿಲ್ಲ. ವಲಸೆಯಿಂದ ಮಕ್ಕಳು ಶಾಲೆ ಬಿಡಬೇಕಾಗುತ್ತದೆ. ಅವರ ಮಕ್ಕಳ ಶಿಕ್ಷಣ ನಿರಂತರವಾಗಿ ಮುಂದುವರಿಯುವುದಿಲ್ಲ. ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡಿಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಕೆಲಸದ ಸ್ಥಳಗಳಲ್ಲಿ ತಾರತಮ್ಯ ಮತ್ತು ಹಿಂಸೆಯನ್ನು ಎದುರಿಸಬೇಕಾಗುತ್ತದೆ.
ಕೃಷಿಯು ಮಾನವ ನಾಗರೀಕತೆಯ ಆರಂಭಕ್ಕೆ ಕಾರಣವಾಗಿದೆ. ಇಂದು ಕೃಷಿಯು ಲಾಭದಾಯಕ ಕ್ಷೇತ್ರವಲ್ಲ ಎಂಬ ಭಾವನೆ ರೈತರಲ್ಲಿದೆ.
ನಮ್ಮ ಕೃಷಿ ಕ್ಷೇತ್ರವು ಮಳೆಯ ಮೇಲೆ ಅತಿಯಾದ ಅವಲಂಬನೆಯಾಗಿದೆ. ಕೃಷಿಯು ಸಣ್ಣ ಸಣ್ಣ ಭೂ ಹಿಡುವಳಿಗಳನ್ನು ಹೊಂದಿದೆ. ನಮ್ಮ ದೇಶದ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸುತ್ತಿಲ್ಲ. ಗುಣಮಟ್ಟದ ಬೀಜಗಳ ಕೊರತೆ ಇದೆ. ನೀರಾವರಿ ಸೌಲಭ್ಯದ ಕೊರತೆ ಇದೆ. ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗದಿರುವುದು ಹಲವಾರು ಸವಾಲುಗಳಿವೆ.
ನಮ್ಮ ದೇಶದಲ್ಲಿ ಶೇಕಡಾ 60ಕ್ಕೂ ಹೆಚ್ಚು ಕೃಷಿಯು ಮಳೆಯನ್ನು ನಂಬಿದೆ. ಹವಾಮಾನ ವೈಪರೀತ್ಯ ಮತ್ತು ಅನಿಯಮಿತ ಮಳೆಯಿಂದ ರೈತರಿಗೆ ನಷ್ಟವಾಗುತ್ತದೆ. ಕೃಷಿಯು ರಾಷ್ಟ್ರದ ಜಿ ಡಿ ಪಿ ಗೆ ಅತಿದೊಡ್ಡ ಕೊಡುಗೆಯಾಗಿದೆ. ಕೃಷಿ ಕ್ಷೆತ್ರವು ಅತೀ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರ ಆಗಿದೆ. ಇಂತಹ ಕೃಷಿ ಕ್ಷೇತ್ರವನ್ನು ನಾವು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಆಹಾರಕ್ಕೆ ಪರದಾಡುವ ಪರಿಸ್ಥಿತಿ ಬರಬಹುದು. ಆದ್ದರಿಂದ ನಮ್ಮ ಕೃಷಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.
- ಡಾ. ನರಸಿಂಹ ಗುಂಜಹಳ್ಳಿ
ಸಹಾಯಕ ಪ್ರಾಧ್ಯಾಪಕರು
ಗಂಗಾವತಿ.




















