ಬಳ್ಳಾರಿ / ಕಂಪ್ಲಿ : ಎರಡನೇ ಬಾರಿಗೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಸಚಿವ ಸ್ಥಾನ ಕೈತಪ್ಪಿರುವುದು ತೀವ್ರ ಅಸಮಧಾನ ತಂದಿದೆ, ಆದರೂ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರುತ್ತೇನೆ ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.
ಅವರು ಸೋಮವಾರ ತಮಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಮಾತನಾಡಿ, ಸತತ ಎರಡನೇ ಬಾರಿಗೆ ಕಂಪ್ಲಿ ವಿಧಾನಸಭಾ ಕ್ಷೇತ್ರದಿಂದ ದಾಖಲೆ ಮತಗಳಿಂದ ಜಯಗಳಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ, ಆಗ ಸಮಾಧಾನ ಪಡಿಸಿದ್ದರು. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಚಿವ ಸಂಪುಟದ ಎರಡನೇ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎರಡನೇ ಬಾರಿಗೆ ಗೆದ್ದಿರುವ ಹಾಗೂ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಸುಭದ್ರವಾಗಿ ಕಟ್ಟಿದ್ದು, ಜಿಲ್ಲೆಯ ಎಲ್ಲಾ 5 ಕ್ಷೇತ್ರಗಳಲ್ಲಿಯೂ ಕಾಂಗ್ರೇಸ್ ಪಕ್ಷದ ಶಾಸಕರಿದ್ದೇವೆ. ಜೊತೆಗೆ ಕ್ಷೇತ್ರದಲ್ಲಿ ನಿರಂತರವಾಗಿ ರೈತರು, ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಮತದಾರರು ನಿರೀಕ್ಷೆ ಮಾಡದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಮಾಜಿ ಮಖ್ಯಮಂತ್ರಿ, ಹಾಲಿ ಮುಖ್ಯಮಂತ್ರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಕಳೆದ ಎರಡು ತಿಂಗಳಿಂದ ಸಚಿವ ಸ್ಥಾನಕ್ಕಾಗಿ ಶ್ರಮಿಸಿದ್ದೆ, ತಮಗೆ ಸಚಿವರಾಗುವ ಬಗ್ಗೆ ಮುಖಂಡರು ಆಶ್ವಾಸನೆಯನ್ನು ನೀಡಿದ್ದರು. ಜೊತೆಗೆ ಕಂಪ್ಲಿ ಕ್ಷೇತ್ರದಿಂದ ನೂರಾರು ಮುಖಂಡರು, ಕಾರ್ಯಕರ್ತರು ತಾವು ಸಚಿವರಾಗುತ್ತಾರೆ ಮತ್ತು ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಲಿದ್ದಾರೆಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ, ತಮಗೆ ಸಚಿವ ಸ್ಥಾನ ಸಿಕ್ಕಿಲ್ಲದಿರುವುದು ಕ್ಷೇತ್ರದ ಜನತೆಗೆ ನಿರಾಸೆಯಾಗಿದೆ. ಕ್ಷೇತ್ರದ ಜನತೆಯೊಂದಿಗೆ ನಿರಂತರವಾಗಿ ಶಾಸಕನಾಗಿಯೇ ಕೆಲಸ ನಿರ್ವಹಿಸುತ್ತೇನೆ. ಮುಂದೆ ಸಚಿವನಾಗುವ ಅವಕಾಶಗಳು ಸಿಗಬಹುದೆಂದು ತಿಳಿಸಿದರು.
ಕ್ಷೇತ್ರದ ಜನತೆಯಿಂದಲೂ ತೀವ್ರವಾದ ಅಸಮಾಧಾನ ವ್ಯಕ್ತವಾಗುತ್ತಿದೆ. ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ನಮ್ಮ ಶಾಸಕರು ಸಚಿವರಾಗುತ್ತಾರೆಂದು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಹಾಗೂ ಕ್ಷೇತ್ರದಲ್ಲಿ ಭಾರಿ ನಿರೀಕ್ಷೆಯಲ್ಲಿದ್ದರು. ಆದರೆ, ನಮ್ಮ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ತೀವ್ರವಾದ ಅಸಮಧಾನವನ್ನು ವ್ಯಕ್ತಪಡಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















