
ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಚಿಕ್ಕಜಂತಕಲ್ ಗ್ರಾಮದಲ್ಲಿ ಭಕ್ತರ ಆರಾಧ್ಯ ದೇವರಾದ ಶ್ರೀ ದ್ಯಾವಮ್ಮ ಮತ್ತು ಮಾರೆಮ್ಮ ದೇವಿಯ ಗಂಗೆಸ್ಥಳ ಮಹೋತ್ಸವ ಅತ್ಯಂತ ಸಡಗರ ಸಂಭ್ರಮ ಮತ್ತು ಶ್ರದ್ಧಾಭಕ್ತಿಯಿಂದ ಶುಭ ಮಂಗಳವಾರದಂದು ಜರುಗಿತು.
ಬೆಳಿಗ್ಗೆ ದ್ಯಾವಮ್ಮ ಮತ್ತು ಮಾರೆಮ್ಮ ದೇವಸ್ಥಾನದಲ್ಲಿ ಪೂಜಾರಿಗಳಾದ ಅಂಬಣ್ಣ, ಯಂಕೋಬ ಇವರ ನೇತೃತ್ವದಲ್ಲಿ ವಿಶೇಷ ಅಲಂಕಾರ, ಕುಂಕುಮಾರ್ಚನೆ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಇಲ್ಲಿನ ದೇವಸ್ಥಾನಗಳಲ್ಲಿ ಅಲಂಕೃತಗೊಂಡ ಪಲ್ಲಕ್ಕಿ ಉತ್ಸವದಲ್ಲಿ ದ್ಯಾವಮ್ಮ ಮತ್ತು ಮಾರೆಮ್ಮ ದೇವಿ ಮೂರ್ತಿ ಕೂರಿಸಲಾಗಿತ್ತು. ನಂತರ ಭಕ್ತರು ಹಾಗೂ ಜನರು ದೇವಿಯರ ದೇವಸ್ಥಾನಕ್ಕೆ ತೆರಳಿ, ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸುವ ಮೂಲಕ ದೇವರ ದರ್ಶನ ಪಡೆದು ಪುನೀತರಾದರು. ತದನಂತರ ಪಲ್ಲಕ್ಕಿ ಉತ್ಸವದಲ್ಲಿ ದೇವರನ್ನು ಕೂರಿಸಿ ಹೆಗಲ ಮೇಲೆ ಹೊತ್ತುಕೊಂಡು ಪಕ್ಕದ ತುಂಗಭದ್ರ ನದಿ ತೀರಕ್ಕೆ ತೆರಳಿದರು. ಗಂಗೆಪೂಜೆ, ಗಂಗೆ ಆರತಿ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಶ್ರದ್ಧೆಯಿಂದ ನಡೆದವು. ತದ ನಂತರ ಇಲ್ಲಿನ ತುಂಗಭದ್ರ ನದಿ ತಟದಿಂದ ಆರಂಭಗೊಂಡ ಗಂಗೆಸ್ಥಳ ಭವ್ಯ ಮೆರವಣಿಗೆ ಗ್ರಾಮದ ಎದುರು ಬಸವೇಶ್ವರ ದೇವಸ್ಥಾನ, ಹುಸೇನ್ ಬಾಷಾ ದೇವಸ್ಥಾನ, ಪಂಪಾಪತಿ ದೇವಸ್ಥಾನ, ವಾಲ್ಮೀಕಿ ನಾಯಕ ಓಣಿ ಮುಖಾಂತರ ತಡರಾತ್ರಿವರೆಗೂ ದೇವಿಯರ ಹೇಳಿಕೆ(ಕಾರಣಿಕ) ಕೇಳುವ ಮೂಲಕ ಭಕ್ತರು ದೇವರಲ್ಲಿ ಇಷ್ಟಾರ್ಥ ಪ್ರಾಪ್ತಿಗಾಗಿ ಬೇಡಿಕೊಂಡರು. ನಂತರ ಆಯಾ ದೇವಾಲಯದಲ್ಲಿ ಮೆರವಣಿಗೆ ಸಂಪನ್ನಗೊಂಡಿತು.
ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷಾರಾಂಡೋಲ್, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾಪ್ರಕಾರಗಳು ಪಾಲ್ಗೊಂಡಿದ್ದರು. ಗಂಗೆಸ್ಥಳ ಮಹೋತ್ಸವ ಹಿನ್ನಲೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅತ್ಯಾಕರ್ಷಣೆಯ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು.
ಈ ಸಂದರ್ಭದಲ್ಲಿ ಸ್ಥಳೀಯ ಮತ್ತು ಸುತ್ತಮುತ್ತಲಿನ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















