
ಬಳ್ಳಾರಿ / ಕಂಪ್ಲಿ : ಇಲ್ಲಿನ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ‘ಶಿಕ್ಷಕರ ದಿನಾಚರಣೆ’ಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಶಾಲೆಯ ಮುಖ್ಯಗುರುಗಳಾದ ಬಡಿಗೇರ್ ಜಿಲಾನಸಾಬ್ ಅವರು, “ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದೆ. ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳಿಗೆ ಇಂತಹ ಸಾಂಸ್ಕೃತಿಕ ಹಾಗೂ ಆದರ್ಶ ಹಿನ್ನೆಲೆಯ ಪರಿಚಯ ಮಾಡಿಸಬೇಕು,” ಎಂದು ಕರೆ ನೀಡಿದರು.
ದಿನಾಚರಣೆಯ ಅಂಗವಾಗಿ ಶಾಲೆಯ ಪುಟ್ಟ ಮಕ್ಕಳು ಆಕರ್ಷಕ ಸಾಂಸ್ಕೃತಿಕ ವೇಷಭೂಷಣಗಳನ್ನು ಧರಿಸಿ ಬಂದು ಎಲ್ಲರ ಗಮನ ಸೆಳೆದರು. ಮಕ್ಕಳ ಮುದ್ದಾದ ನೃತ್ಯ ಮತ್ತು ಸಡಗರವು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತ್ತು.
ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಗೌರವ ವಂದನೆ ಸಲ್ಲಿಸಿ ಕೇಕ್ ಕತ್ತರಿಸಿ ಕೃತಜ್ಞತೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಕೆ.ಶ್ವೇತಾ, ಜೆ.ಅಕ್ಷತಾ, ಕೊಲ್ಕರ್ ಉಮಾ, ವರ್ಷಾ ಮಜುಂದಾರ್, ಮಠದ ಸುನೀತಾ, ಡಿ.ಉಮಾ, ಖಜಾಬನಿ ಹಾಗೂ ಸಹಾಯಕಿ ಶರ್ಮಾಸಬಿ ಸೇರಿದಂತೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















