ಕಂಪ್ಲಿ: ಕ್ಷೇತ್ರದ ಪಂಪ್ಸೆಟ್ (ಐಪಿ ಸೆಟ್) ಆಧಾರಿತ ರೈತರಿಗೆ ಸತತ ಏಳು ತಾಸು ವಿದ್ಯುತ್ ಸರಬರಾಜು ಮಾಡುವ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ನಿರ್ಧಾರವು ಅತ್ಯಂತ ಸ್ವಾಗತಾರ್ಹವಾಗಿದ್ದು, ಇದರಿಂದ ಮಳೆ ಇಲ್ಲದೆ ಸಂಕಷ್ಟದಲ್ಲಿದ್ದ ಅನ್ನದಾತರಲ್ಲಿ ಹೊಸ ಆಶಾಕಿರಣ ಮೂಡಿದೆ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಹೇಳಿದ್ದಾರೆ.
ಪಟ್ಟಣದ ಶಾಸಕರ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರೈತರ ಐಪಿ ಸೆಟ್ಗಳಿಗೆ ದಿನಕ್ಕೆ ಕೇವಲ ಆರು ತಾಸು ಮಾತ್ರ ವಿದ್ಯುತ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಕ್ಷೇತ್ರದಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿತ್ತು. ನೀರಿಲ್ಲದೆ ಬೆಳೆಗಳು ಒಣಗುವ ಸ್ಥಿತಿ ತಲುಪಿದ್ದರಿಂದ ರೈತರು ತೀವ್ರ ಆತಂಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ರೈತರ ಕಷ್ಟಕ್ಕೆ ಸ್ಪಂದಿಸಿ ಸತತ 7 ಗಂಟೆಗಳ ಕಾಲ ವಿದ್ಯುತ್ ನೀಡುವಂತೆ ತಾವು ಇಂಧನ ಸಚಿವರಿಗೆ ವಿಶೇಷ ಮನವಿ ಸಲ್ಲಿಸಿದ್ದಾಗಿ ಅವರು ತಿಳಿಸಿದರು.
ತಮ್ಮ ಮನವಿಗೆ ಸಚಿವರು ತಕ್ಷಣವೇ ಸ್ಪಂದಿಸಿದ್ದು, ಶನಿವಾರ ಬೆಳಿಗ್ಗೆಯಿಂದಲೇ ರೈತರ ಪಂಪ್ಸೆಟ್ಗಳಿಗೆ ಸತತ ಏಳು ತಾಸು ವಿದ್ಯುತ್ ಸರಬರಾಜು ಮಾಡಲು ಇಲಾಖೆಗೆ ಒಪ್ಪಿಗೆ ಸೂಚಿಸಿದ್ದಾರೆ. ಸರ್ಕಾರದ ಈ ತ್ವರಿತ ಕ್ರಮದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರೈತರು ಸಮೃದ್ಧಿಯಾಗಿದ್ದರೆ ಮಾತ್ರ ಇಡೀ ನಾಡು ಸಮೃದ್ಧಿಯಾಗಲು ಸಾಧ್ಯ. ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಶಾಸಕರು ಆಶಯ ವ್ಯಕ್ತಪಡಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















