
ಸಿರುಗುಪ್ಪ: ಕೃಷಿ ಇಲಾಖೆಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಸಹಾಯಧನ ಹಾಗೂ ತಾಂತ್ರಿಕ ಸೇವೆಗಳನ್ನು ರೈತರಿಗೆ ಸ್ಥಳೀಯವಾಗಿಯೇ ಒದಗಿಸುವ ಉದ್ದೇಶದಿಂದ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ರೈತಮಿತ್ರರಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಕೆ. ಸೋಮಸುಂದರ್ ಹೇಳಿದರು.
ತಾಲೂಕಿನ ಕರೂರು ಗ್ರಾಮದಲ್ಲಿ ಮಂಗಳವಾರ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸುಸಜ್ಜಿತ ರೈತ ಸಂಪರ್ಕ ಕೇಂದ್ರವನ್ನು ಶಾಸಕ ಬಿ.ಎಂ. ನಾಗರಾಜ್ ಉದ್ಘಾಟಿಸಿದರು.
ನಂತರ ಮಾತನಾಡಿ, ಕೇಂದ್ರದ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಪ್ರಮಾಣಿತ ಬಿತ್ತನೆ ಬೀಜಗಳು, ಸಸ್ಯ ಸಂರಕ್ಷಣಾ ಪರಿಕರಗಳು, ಮಣ್ಣು ಆರೋಗ್ಯ ಚೀಟಿ ಸೇರಿದಂತೆ ಕೃಷಿ ಇಲಾಖೆಯ ವಿವಿಧ ಸೇವೆಗಳು ಲಭ್ಯವಾಗಲಿವೆ. ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ. ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಲು ಮುಂದಾಗಬೇಕು ಎಂದು ತಿಳಿಸಿದರು.
ಉಪ ಕೃಷಿ ನಿರ್ದೇಶಕ ಎನ್. ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರಿಯಾಯಿತಿ ದರಕ್ಕೆ ಪಡೆಯಬಹುದು. ರೈತರಿಗೆ ಕೃಷಿ ಚಟುವಟಿಕೆ, ಕೃಷಿ ಸಲಕರಣೆ ಹಾಗೂ ಸಹಾಯಧನ ಸೌಲಭ್ಯಗಳ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಫಲಕ ಅಳವಡಿಸಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್ ರೆಡ್ಡಿ ಮಾತನಾಡಿ, ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರ ಖರೀದಿಸುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಡಿ.1ರಿಂದ ಕ್ಯೂಆರ್ ಕೋಡ್ ಬಳಸಿ ರೈತರು ತಮಗೆ ಅಗತ್ಯವಿರುವ ರಸಗೊಬ್ಬರ ಖರೀದಿಸಬಹುದು. ಇದರಿಂದ ರಸಗೊಬ್ಬರ ಖರೀದಿಗಾಗಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಕಾಯುವ ಹಾಗೂ ನೂಕುನುಗ್ಗಲು ಅನುಭವಿಸುವ ಸಮಸ್ಯೆ ತಪ್ಪಲಿದೆ ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್, ಕೃಷಿ ಅಧಿಕಾರಿಗಳಾದ ಪುರುಷೋತ್ತಮ್ ವೈ., ಪರಮೇಶ್ವರ ರೆಡ್ಡಿ, ಬಾಲಾಜಿ ನಾಯಕ್, ಜಿಕೆವಿಕೆ ತಾಂತ್ರಿಕ ಅಧಿಕಾರಿ ಕುಲ್ಸುಂಬಿ ಕೆ. ಸಿದ್ದೇಶ್ವರ, ಆತ್ಮ ಸಿಬ್ಬಂದಿ ಹಾಗೂ ರೈತ ಮುಖಂಡರಾದ ಪಿ. ರಂಗಾರೆಡ್ಡಿ, ಹುಲುಗಪ್ಪ, ಈರಪ್ಪಯ್ಯ, ದೇವರೆಡ್ಡಿ, ರುದ್ರಮುನಿಸ್ವಾಮಿ, ಈರಯ್ಯಸ್ವಾಮಿ, ಪ್ರತಾಪ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















