ಜನಸೇವೆಯ ಹೆಸರಿನಲ್ಲಿ ನೂರಾರು ಆಸೆ ಆಮೀಷಗಳ ಪ್ರಣಾಳಿಕೆ ಪತ್ರದಲ್ಲಿ ಪ್ರಕಟಿಸಿ ಜನರ ಮತಗಳಿಂದ ಆರಿಸಿ ಬಂದು ಅಧಿಕಾರದ ಕುರ್ಚಿಗಾಗಿ ರೆಸಾರ್ಟ ರಾಜಕಾರಣ ಮಾಡಿ,ಸಚೀವ ಸ್ಥಾನ, ನಿಗಮ ಮಂಡಳಿಗಾಗಿ ಬಡಿದಾಡುತ್ತ ನಿಮ್ಮ ತಲೆಮಾರಿನ ಬಳಿಕ ನಿಮ್ಮ ಮಕ್ಕಳು ಮೊಮ್ಮಕಳಿಗೆ ಟಿಕೆಟ್ ಕೊಡಿಸಲು ಹವಣಿಸುವ ಮತ್ತು ಅದೇ ಅಧಿಕಾರಕ್ಕಾಗಿ ಅದೇ ಕುರ್ಚಿಗಾಗಿ ಪಕ್ಷಗಳ ತತ್ವ ಸಿದ್ದಾಂತಗಳನ್ನೂ ಗಾಳಿಗೆ ತೂರಿ ಸಂಧರ್ಬಕ್ಕೆ ತಕ್ಕಂತೆ ಪಕ್ಷಾಂತರ ನಿಷೇಧ ಕಾಯಿದೆಯನ್ನೂ ಮರೆತು ಪಕ್ಷದಿಂದ ಪಕ್ಷಕ್ಕೆ ನೆಗೆದು ಜನ ಸೇವೆಯೇ ಜನಾರ್ಧನ ಸೇವೆ ಅನ್ನುವ ಸೋಗು ಹಾಕಿಕೊಂಡು ಕಾಮಗಾರಿಗಳ ಕಮಿಷನ್ ತಿನ್ನುತ್ತ, ನಿಗಮ ಮಂಡಳಿಗಳ ಅಭಿವೃದ್ಧಿಗೆ ಕಾಯ್ದಿಟ್ಟ ಹಣವನ್ನೂ ಬಿಡದೆ ಕೊಳ್ಳೆ ಹೊಡೆಯುತ್ತ,ಜನರು ಯಾವ ಗ್ಯಾರಂಟಿಯನ್ನೂ ಕೇಳದೆ ಉದ್ಯೋಗ ಭದ್ರತೆ,ಅಗತ್ಯ ವಸ್ತುಗಳ ಬೆಲೆ ಇಳಿಕೆ ಕೇಳುವದನ್ನು ಮರೆತು ಬಿಟ್ಟಿ ಭಾಗ್ಯಗಳನ್ನು ಕೊಟ್ಟಂತೆ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತ ಬೊಕ್ಕಸ ಬರಿದಾಗಿಸಿ ಕೈ ಕೈ ಹಿಸುಕಿಕೊಂಡು,ಜನಪರ ಕಾಳಜಿ ಇದ್ದ ಹಿರಿಯ ರಾಜಕಾರಣಿಗಳನ್ನ,ಮತ್ತು ಮುತ್ಸದ್ದಿಗಳನ್ನ ಮೂಲೆಗುಂಪು ಮಾಡಿದ ಬಿಜೆಪಿ,ಜೆಡಿಎಸ್,ಕಾಂಗ್ರೆಸ್ ಎಲ್ಲರೂ ಒಂದೇ ನಾಣ್ಯದ ಎರಡು ಮುಖಗಳು ಅನ್ನುವದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅರ್ಥವಾಗುತ್ತಿದೆ
ರಾಸ ಲೀಲೆ,ಹನಿಟ್ರ‌್ಯಾಪ್ ಅನ್ನುವ ಸುದ್ದಿ ಅಥವಾ ಪೆನ್ ಡ್ರೈವ್ ಸಿ.ಡಿ ಅಂದಾಗ ಫತರುಗುಟ್ಟಿ ನಡಗುತ್ತ ಓಡೋಡಿ ಹೋಗಿ ನ್ಯಾಯಾಲಯಗಳಿಂದ ಸ್ಟೇ ತರುವ ಹಾಗೂ ಕೊಲೆ,ಸುಲಿಗೆ,ಬೆದರಿಕೆ ಹಾಕುವದಕ್ಕೆಂದೆ ಪಟಾಲಮ್ ಒಂದನ್ನು ಜೊತೆಗಿಟ್ಟುಕೊಂಡು ಸಿಕ್ಕಿ ಬಿದ್ದಾಗಲೂ ಮೀಸೆ ಮಣ್ಣಾಗಲಿಲ್ಲ ಎಂದು ಹೂಂಕರಿಸುತ್ತ ಖಾದಿ ತೊಟ್ಟ ಕಾರಣಕ್ಕೆ ಖಾವಿಗಳ ಸಂಭಂಧ ಬಳಸಿ ಗೆಲುವಿಗೆ ಕಾತರಿಸುತ್ತ,ಆಗಾಗ ಮೊಸಳೆ ಕಣ್ಣೀರು ಸುರಿಸಿ ಮೈಕು ಕೈಗೆ ಸಿಕ್ಕರೆ ಗಂಟೆಗಟ್ಟಲೆ ಮಾತನಾಡುವ ಭರದಲ್ಲಿ ಎಲುಬಿಲ್ಲದ ನಾಲಿಗೆಯಿಂದ ಅಸಂವಿಧಾನಿಕ ಪದಗಳ ಬಳಕೆ ಮಾಡಿ ಸಮಾಜದ ಶಾಂತಿ ಕದಡಿ ಸಾಮರಸ್ಯದಿಂದ ಬದುಕುವ ಜನರ ನಡುವೆ ಹುಳಿ ಹಿಂಡುವ ಕೆಲಸ ಮಾಡಿದವರು ನಿಮ್ಮ ಗುಂಪಿನಲ್ಲೇ ಇದ್ದಾರೆ ಅಲ್ಲವಾ?
ಗಾಜಿನ ಮನೆಯಲ್ಲಿ ಕುಳಿತು ಮತ್ತೊಬ್ಬರ ಮನೆಗೆ ಕಲ್ಲು ಎಸೆಯುವ ಮುನ್ನ ಸ್ವಲ್ಪ ಯೋಚಿಸಿ ನೋಡಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಬರ ಬೀಳುವ ಸಮಯದಲ್ಲಿ ನಾಡಿನ ಅನ್ನದಾತ ಕಣ್ಣೀರು ಹಖಾಉವ ಸಮಯದಲ್ಲಿ ಆಶಾ,ಅಂಗನವಾಡಿ, ಬಿಸಿಊಟ ಸಿಬ್ಬಂದಿ ಸೇರಿದಂತೆ ಕಾರ್ಮಿಕ ವರ್ಗಗಳು ನತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿ ಪ್ರತಿಭಟನೆ ನಡೆಸುತ್ತಿರುವಾಗ ಅದನ್ನು ಬ್ಲಾಕ್ ಮೇಲ್ ಅನ್ನುವ ರೀತಿಯಲ್ಲಿ ಮಾತನಾಡುವ ನಿಮ್ಮ ಅಂತರಂಗ ಇದನ್ನ ಒಪ್ಪುತ್ತದೆಯೇ?
ಹತ್ತು ದಿನಗಳಲ್ಲಿ ಆಶಾಗಳು ತಮ್ಮ ಕೆಲಸವನ್ನು ಬದಿಗಿಟ್ಟು ನಡೆಸುತ್ತಿರುವ ಫ್ರೀಡಂ ಪಾರ್ಕ್‌ನ ಹೋರಾಟದಿಂದ ಯಾವ ವ್ಯತ್ಯಾಸವೂ ಆಗಿಲ್ಲ ಅನ್ನುವ ಮುನ್ನ ಯೋಚಿಸಿ ನೋಡಿ. ರಾಜ್ಯ ರಾಜಕಾರಣದಲ್ಲಿ ಅದೆಷ್ಟೋ ಆಗಬಾರದ ಬೆಳವಣಿಗೆಗಳು ಆಗಿ ರಾಜಕೀಯದ ಆಶೋತ್ತರಗಳೇ ಮಣ್ಣಾಗಿ ಅದು ಯಾವುದೋ ಕಾಲವಾಗಿದೆ. ಯಾರು ಆರಿಸಿ ಬಂದರೂ ಅಷ್ಟೇ ಯಾರು ಅಧಿಕಾರದಲ್ಲಿ ಇದ್ದರೂ ಅಷ್ಟೇ ಅನ್ನುವ ಮನಸ್ಥಿತಿಗೆ ಜನಸಾಮಾನ್ಯರು ಬಂದು ಅದು ಯಾವುದೋ ಕಾಲವಾಗಿದೆ.ಬಹುಶಃ ನಿಮ್ಮ ಭಾಷಣಕ್ಕೂ ಮೊದಲಿನಷ್ಟು ಚಪ್ಪಾಳೆಗಳು ಬರದೆ ಇರುವದು ನಿಮ್ಮ ಗಮನಕ್ಕೂ ಬಂದಿರಬಹುದು ಅಲ್ಲವೇ?
ಯಾವುದೋ ಒಬ್ಬ ರಾಜಕಾರಣಿಯ ಅಕ್ರಮ ಗಳಿಕೆ ಅಥವಾ ವಿದೇಶಿ ಹೂಡಿಕೆಯ ಆದಾರದ ಮೇಲೆ ಇ.ಡಿ, ಐಟಿ, ದಾಳಿಗಳಾದರೂ ಅದೊಂದು ರಾಜಕೀಯ ಪಿತೂರಿ ಎಂದು ಅನುಕಂಪ ಗಿಟ್ಟಿಸಿಕೊಂಡು ಐದು ವ ರ್ಷಕ್ಕೊಮ್ಮೆ ಜನರ ಮನೆಯ ಬಾಗಿಲಿಗೆ ಬಂದು ಕೈ ಕಾಲು ಬಿದ್ದು ಆಸೆ ಆಮೀಷಗಳ ಒಡ್ಡುತ್ತ ಕೊನೆಯ ಅವಕಾಶ ಕೊಡಿ ಎಂದು ಮೊಸಳೆ ಕಣ್ಣೀರು ಹಾಕಿ ಗೆದ್ದು ಗುಲಾಲು ಹಾರಿಸಿದ ಮರುದಿನವೇ ನಿಷ್ಠಾವಂತ ಕಾರ್ಯಕರ್ತರನ್ನು ಬದಿಗೊತ್ತಿ ಸ್ವಾರ್ಥ ಮೆರೆಯುವ ರಾಜಕಾರಣಿಗಳೇ ಸಂಬಳದ ಹೆಸರಿನಲ್ಲಿ ಮತ್ತು ಸೌಲಭ್ಯಗಳ ಹೆಸರಿನಲ್ಲಿ ಹಾಗೂ ನಿವೃತ್ತಿಯ ನಂತರವೂ ಲಕ್ಷಾಂತರ ಹಣ ಪಡೆಯುವವರು ಅಭಿವೃದ್ಧಿ ಕೆಲಸ ಮಾಡದೆ ಕಡು ಬಡವರಿಗೆ ಸಹಾಯ ಮಾಡದೆ ದೀನ ದಲಿತರ ಸೇವೆ ಮಾಡದೆ ಇದ್ದರೆ ನೀವುಗಳಾದರೂ ಈ ಅಧಿಕಾರ ಮತ್ತು ಪದವಿಗಳಲ್ಲಿ ಇದ್ದರೆಷ್ಟು ಬಿಟ್ಟರೆಷ್ಟು?
ದುಡಿಯುವ ಜನರು ನಿಮಗೆ ಮತ ಚಲಾಯಿಸಿದ್ದಕ್ಕೆ ಪಡುತ್ತಿರುವ ಪಶ್ಚಾತ್ತಾಪ ಮತ್ತು ಹತ್ತಾರು ದಿನಗಳಿಂದ ಹದಿನೈದು ಸಾವಿರ ಗೌರವ ಧನಕ್ಕಾಗಿ ಬೆಂಗಳೂರಿನ ಬೀದಿಗಳಲ್ಲಿ ಹೋರಾಟದ ಸ್ಥಳದಲ್ಲಿ ಕೊರೆಯುವ ಚಳಿ ಯಲ್ಲಿ ಅಹೋರಾತ್ರಿಯ ಧರಣಿ ನಡೆಸಿ ಹಕ್ಕೊತ್ತಾಯ ಮಾಡುತ್ತಿರುವ ಆಶಾಗಳ ಕಣ್ಣೀರಿನ ಶಾಪ ನಿಮ್ಮನ್ನು ಸುಡದೆ ಇರಲಿ.ಅಧಿಕಾರ, ಆಸ್ತಿ,ಅಂತಸ್ತು ಯಾವುದೂ ಶಾಸ್ವತವಲ್ಲ ಅನ್ನುವ ಕನಿಷ್ಠ ಅರಿವಿನ ಜೊತೆಗೆ ಜಗತ್ತಿಗೆ ಬಂದ ಈ ಕಾಯವೂ ಶಾಸ್ವತ ಅಲ್ಲ ಅನ್ನುವ ಸಹಜ ಜ್ಞಾನ ನಿಮ್ಮೊಳಗೆ ಮೂಡುವ ಮೂಲಕ ಸಾಧ್ಯವಾದಷ್ಟು ದಿನ ನೊಂದವರ ಕಣ್ಣೀರು ಒರೆಸಿ,ನಿರಾಶ್ರಿತರ ಬದುಕಿಗೆ ಆಸರೆ ಆಗಿ ಹೋರಾಟದ ವಿಷಯಗಳಲ್ಲಿ ರಾಜಕಾರಣ ಮಾಡುವ ದುಸ್ಸಾಹಸ ಮಾಡದೇ ಒಂದು ಭರವಸೆಯ ದೀಪ ಬೆಳಗಿಸಿ ನಿಮ್ಮ ಬದುಕಿಗೆ ಅಂಟಿದ ಕಳಂಕಗಳಿಂದ ಹೊರಗೆ ಬನ್ನಿ.
ಬರಹಗಾರರು ದೀಪಕ ಶಿಂಧೆ




















