
ಗಮನ ಸೆಳೆದ ಪ್ರೇಮದ ಊರಲಿ ಚಿತ್ರ ತಂಡದ ವಂದನಾ ರೈ ಮತ್ತು ಮಕ್ಕಳ ಹಾಡು.
ಕಂಪ್ಲಿ: ಸರ್ಕಾರಿ ಶಾಲಾ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಸಮಾಜದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಜೆ.ಎನ್ ಗಣೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕೊಟ್ಟಾಲ್ ರಸ್ತೆಯ ಸತ್ಯನಾರಾಯಣ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಂಜೆ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ನೃತ್ಯ ವೈಭವ ಹಾಗೂ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೋಟ್ಯಾಂತರ ಅನುದಾನದಲ್ಲಿ ಹಾಸ್ಟೆಲ್, ಶಾಲಾ ಕಟ್ಟಡ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ರೈತಾಪಿ ವರ್ಗದವರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಬೇಕು. ಶಿಕ್ಷಣದಿಂದ ರಾಜಕೀಯ ಸೇರಿದಂತೆ ಪ್ರತಿಯೊಂದು ರಂಗದಲ್ಲಿ ಬೆಳೆಯಲು ಸಾಧ್ಯ. ಇಂದಿನ ಆಧುನಿಕ ಯುಗದಲ್ಲಿ ವಾಟ್ಸಪ್, ಫೇಸ್ಬುಕ್ ಸೇರಿದಂತೆ ಮೊಬೈಲ್ ಬಳಕೆಯಿಂದಾಗಿ ಮಕ್ಕಳಲ್ಲಿ ಜ್ಞಾನದ ಕೊರತೆ ಉಂಟಾಗುವ ಜೊತೆಗೆ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಪೋಷಕರು ಶಿಕ್ಷಕರಿಗೆ ಸಹಕಾರ ನೀಡಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.
ನಂತರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ವಿ.ವಸಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂಬಂತೆ ಶಿಕ್ಷಣ ಜೊತೆಗೆ ಪ್ರತಿಯೊಂದು ಕಲೆಗಳನ್ನು ಒಳಗೊಂಡಾಗ ಮಾತ್ರ ಒಳ್ಳೆಯ ಭವಿಷ್ಯ ಕಂಡುಕೊಳ್ಳಲು ಮೂಲಕ ಉತ್ತಮ ಪ್ರಜೆಗಳಾಗಲು ಸಾಧ್ಯ. ಪ್ರಾಥಮಿಕ ಶಾಲಾ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ನಾನಾ ಪ್ರಶಸ್ತಿ ಕಾರ್ಯಕ್ರಮಗಳ ಮೂಲಕ ಶಿಕ್ಷಕರ ಮತ್ತು ಮಕ್ಕಳ ಸಾಧನೆಗೆ ಪ್ರೋತ್ಸಾಹ ನೀಡುವಂತಹ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಎಂದರು.
ಈ ಸಮಾರಂಭದಲ್ಲಿ ಬಡ್ತಿ ಮುಖ್ಯಗುರು ಹನುಮನಗೌಡ ಮತ್ತು ಜೆಸ್ಕಾಂ ಸಹಾಯಕ ಎಂ.ದೊಡ್ಡಬಸಪ್ಪ ಇವರಿಗೆ ಉತ್ತಮ ಸೇವಾ ಪ್ರಶಸ್ತಿ ಹಾಗೂ ಶಿಕ್ಷಕರಾದಂತಹ ಎಂ ರೇವಣ್ಣ, ಜ್ಞಾನಲಕ್ಷ್ಮಿ, ಮಹಾದೇವಿ, ಮಮ್ಮದ್ ಕೊಯಲ್, ಸದ್ದೋ ಜಾತಪ್ಪ, ರೇಣುಕಾ, ಸುಮಿತ್ರ, ಸುನಿತಾ, ರಂಗಪ್ಪ ಕಟ್ಟಿಮನಿ, ಸವಿತಾ, ಗೋಣಿಬಸಪ್ಪ, ಸವಿತಾ, ಸಾಬೀರ ಬೇಗಂ ಇವರಿಗೆ ವಿದ್ಯಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಪ್ರೇಮದ ಊರಲಿ ಚಿತ್ರ ತಂಡದ ವಂದನಾ ರೈ ಮತ್ತು ಮಕ್ಕಳು ಹಾಡು ಹಾಡುವ ಮೂಲಕ ಗಮನ ಸೆಳೆದರು. ತದನಂತರ ಮಕ್ಕಳ ಭರತನಾಟ್ಯ, ನೃತ್ಯ, ಯೋಗ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮೆಚ್ಚುಗೆಗೆ ಪಾತ್ರರಾಗುವ ಜೊತೆಗೆ ಕಾರ್ಯಕ್ರಮಕ್ಕೆ ಮೆರಗು ನೀಡಲಾಯಿತು.
ಕಾರ್ಯಕ್ರಮ ಯಶಸ್ವಿ ಹಿನ್ನಲೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸ್ರಾವ್, ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಜೆಸ್ಕಾಂ ನಿರ್ದೇಶಕ ಕೆ.ಷಣ್ಮುಖಪ್ಪ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಸ್ಥಾಪಕ ಕಾರ್ಯಾಧ್ಯಕ್ಷ ನಾಗನಗೌಡ ಎಂ.ಎ, ಪ್ರಧಾನ ಕಾರ್ಯದರ್ಶಿ ಜೋಗಿ ರುದ್ರಪ್ಪ ನಾಯಕ್, ಗೌರವಾಧ್ಯಕ್ಷ ಚಂದ್ರಶೇಖರ ಶೆಟ್ರು, ಕಾರ್ಯಧ್ಯಕ್ಷ ಎಚ್.ಪಿ.ಸೋಮಶೇಖರ್, ಹಿರಿಯ ಉಪಾಧ್ಯಕ್ಷರಾದ ಹನುಮನಗೌಡ, ಖಲೀಲ್ ಸಾಬ್, ರೂಪಕಲಾ, ಉಪಾಧ್ಯಕ್ಷರಾದ ರೇವಣಸಿದ್ದೇಶ್, ಶಾಂತಾ ಗಡ್ಡದ, ಖಜಾಂಚಿ ಪರಶುರಾಮ್ ಪವಾರ್, ಸಹಕಾರ್ಯದರ್ಶಿಗಳಾದ ಶಂಕರ ಮೂರ್ತಿ, ನಜಾಹತ್ ಜಬೀಲ್, ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜ್ ಶಿಡೆಗಲ್, ರತ್ನಮ್ಮ ಬಡಿಗೇರ್, ಮುಖಂಡರಾದ ಜಿ.ರಾಮಣ್ಣ, ಬಿ.ಸಿದ್ದಪ್ಪ, ಜಾಫರ್ ಸೇರಿದಂತೆ ಮುಖ್ಯಗುರುಗಳು, ಶಿಕ್ಷಕರು, ಪೋಷಕರು, ಶಿಕ್ಷಣ ಪ್ರೇಮಿಗಳು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















