ಬೆಂಗಳೂರು: ಚಿತ್ರಕಲಾ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಕಲಾ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕರ್ನಾಟಕ ಮೀಡಿಯಾ ಕ್ಲಬ್ ಬೆಂಗಳೂರು ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಕರುನಾಡ ರತ್ನ’ ಬಿರುದು ಪ್ರಶಸ್ತಿಗೆ ಖ್ಯಾತ ಚಿತ್ರಕಲಾವಿದ ಬಿ. ತಿರುಪತಿ ಶಿವನಗುತ್ತಿ ಅವರು ಆಯ್ಕೆಯಾಗಿದ್ದಾರೆ.
ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕರ್ನಾಟಕ ಮೀಡಿಯಾ ಕ್ಲಬ್ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ವಿವಿಧ ಮೂಲಗಳಿಂದ ಸಾಧನೆಗಳನ್ನು ಅವಲೋಕಿಸಿ ಬಿ. ತಿರುಪತಿ ಶಿವನಗುತ್ತಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯು ಅಧಿಕೃತ ಅಭಿನಂದನಾ ಪತ್ರದ ಮೂಲಕ ತಿಳಿಸಿದೆ.
ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಕಲಾ ಅಭಿವ್ಯಕ್ತಿ, ಸೃಜನಶೀಲತೆ ಹಾಗೂ ಕಲಾ ಸೇವೆಯ ಮೂಲಕ ಗುರುತಿಸಿಕೊಂಡಿರುವ ತಿರುಪತಿ ಶಿವನಗುತ್ತಿ ಅವರಿಗೆ ರಾಜ್ಯಮಟ್ಟದ ಈ ಪ್ರತಿಷ್ಠಿತ ಗೌರವ ಲಭಿಸುತ್ತಿರುವುದು ಕಲಾ ವಲಯದಲ್ಲಿ ಸಂತಸ ಮತ್ತು ಹೆಮ್ಮೆಗೆ ಕಾರಣವಾಗಿದೆ.
ದಿನಾಂಕ 29-11-2026, ಭಾನುವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಮೀಡಿಯಾ ಕ್ಲಬ್ನ ಅಧ್ಯಕ್ಷರಾದ ರಮೇಶ್ ಎಸ್. ಜಿ. ಅವರು ತಿಳಿಸಿದ್ದಾರೆ.
ತಮ್ಮ ಕಲಾ ಸೇವೆಯನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಿದ ಕರ್ನಾಟಕ ಮೀಡಿಯಾ ಕ್ಲಬ್ನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಎಲ್ಲಾ ಸದಸ್ಯರಿಗೆ ಬಿ. ತಿರುಪತಿ ಶಿವನಗುತ್ತಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಚಿತ್ರಕಲಾ ಕ್ಷೇತ್ರದ ಸಾಧಕರಿಗೆ ಸಂದಿರುವ ಈ ಗೌರವಕ್ಕೆ ವಿವಿಧ ಗಣ್ಯರು, ಕಲಾವಿದರು, ಹಿತೈಷಿಗಳು ಹಾಗೂ ಸ್ನೇಹಿತರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.




















