ಕಂಪ್ಲಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಕಂಪ್ಲಿ ಯೋಜನಾ ಕಚೇರಿ, 2151ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಪಟ್ಟಣದ ಮಾರುತಿನಗರದ ಶಿಬಿರದಿನ್ನಿ ಸಮುದಾಯ ಭವನದಲ್ಲಿ ಆಯೋಜಿಸಿರುವ 2151ನೇ ಮದ್ಯವರ್ಜನ ಶಿಬಿರವು ಶುಕ್ರವಾರ (ನ. 27) ಉದ್ಘಾಟನೆಗೊಂಡಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು, “ಮದ್ಯಪಾನದಂತಹ ದುಶ್ಚಟಗಳು ವ್ಯಕ್ತಿಯ ಆರೋಗ್ಯವನ್ನು ಹಾಳು ಮಾಡುವುದಲ್ಲದೆ, ಇಡೀ ಕುಟುಂಬದ ನೆಮ್ಮದಿ ಮತ್ತು ಆರ್ಥಿಕ ಸ್ಥಿತಿಯನ್ನು ಬೀದಿಗೆ ತರುತ್ತವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಇಂತಹ ಮದ್ಯವರ್ಜನ ಶಿಬಿರಗಳು ಸಾವಿರಾರು ಕುಟುಂಬಗಳಿಗೆ ಹೊಸ ಬದುಕು ಕಟ್ಟಿಕೊಡುತ್ತಿವೆ. ಶಿಬಿರಾರ್ಥಿಗಳು ಈ ಸದಾವಕಾಶವನ್ನು ಬಳಸಿಕೊಂಡು ದುಶ್ಚಟಗಳಿಂದ ಮುಕ್ತರಾಗಿ, ಸಮಾಜದಲ್ಲಿ ಗೌರವಯುತ ಜೀವನ ನಡೆಸಬೇಕು” ಎಂದು ಕರೆ ನೀಡಿದರು.
ಕಂಪ್ಲಿ ಶ್ರೀ ಕ್ಷೇತ್ರ ಕಲ್ಮಠದ ಮ.ನಿ.ಪ್ರ. ಪ್ರಭುಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರಾದೇಶಿಕ ಯೋಜನಾಧಿಕಾರಿ ನಾಗೇಶ್ ವೈ, ಆಶಯ ನುಡಿಗಳನ್ನಾಡಿದರು. 2151ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ. ಮೌನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಲಾಯಿಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರದ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಡಿ. 4ರವರೆಗೆ ಈ ಶಿಬಿರ ನಡೆಯಲಿದೆ.
ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ, ರಾಜ್ಯ ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ಕೇಂದ್ರ ಸರ್ಕಾರದ ದಿಶಾ ಸಮಿತಿ ಸದಸ್ಯ ಎ.ಸಿ. ದಾನಪ್ಪ, ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ. ಡಿ. ಮಹಾದೇವ,
ತಾಲೂಕು ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ. ನಾಗರಾಜ್, ಡಾಕ್ಟರ್ ವೆಂಕಟೇಶ್ ಭರಮಕ್ಕನವರ್, ಎನ್ ರಾಮಾಂಜನೇಯ, ವೀರಶೈವ ಕಲ್ಯಾಣ ಮಂಟಪದ ಅಧ್ಯಕ್ಷ ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ಸಿ.ಆರ್.ಬಿ. ರಾವ್, ಡಾ. ಜಂಬುನಾಥಗೌಡರ, ಯೋಜನಾಧಿಕಾರಿ ರಾಘವೇಂದ್ರ ಎಲ್. ಕೃಷಿ ಅಧಿಕಾರಿ ಸಂಜೀವ್ ಕುಮಾರ್, ಮೇಲ್ವಿಚಾರಕ ಮಂಜುನಾಥ, ಮಂಜುಳಾ, ಜ್ಞಾನ ವಿಕಾಸ ತಾಲೂಕು ಅಧಿಕಾರಿ ಮಂಜುಳಾ, ಕೃಷ್ಣಮೋಹನ್, ಉಮಾ ಮಹೇಶ್ವರಿ, ಡಾ. ಶಾರದ ಹಿರೇಮಠ, ಕೃಷ್ಣ ಪೋಳ್, ಎಂ. ಪೂರ್ಣಿಮಾ ಜೋಷಿ, ಎಂ. ನಾಗರಾಜ, ನಿರ್ಮಲ, ಎನ್.ಎಂ. ಪತ್ರಯ್ಯಸ್ವಾಮಿ ಹಾಗೂ ರಜಿಯಾ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















