ಸಾಹಿತ್ಯವೆಂಬುದು ಸಾಗರವಿದ್ದಂತೆ.ಅದು ಇಂದು-ನಿನ್ನೆಯದಲ್ಲ,ಶತಶತಮಾನಗಳಿಂದ ಲೇಖಕರ ಲೇಖನಿಗಳಿಂದ ಹೊರ ಚಿಮ್ಮಿದ ಲಾವಾರಸ ಹನಿ ಹನಿ ಸೇರಿ ಹಳ್ಳವಾಗುವಂತೆ ಇಂದು ಸಾಹಿತ್ಯ ಕ್ಷೇತ್ರ ಎಂಬುದು ತನ್ನ ಎರಡು ಕೈಗಳನ್ನು ದಿಗಂತದಾಚೆಗೂ ವಿಸ್ತರಿಸಿಕೊಂಡಿರುವುದು ವಿಶೇಷ ಸಾಹಿತ್ಯವೆಂಬ ಹೃದಯಕ್ಕೆ ಭಾಷೆಯೇ ಉಸಿರು ಭಾಷೆ ಹೊರತಾಗಿ ಸಾಹಿತ್ಯವನ್ನು ಕಲ್ಪಿಸಿಕೊಳ್ಳುವುದು ಕಷ್ಟಸಾಧ್ಯ ಹಾಗೆ ಭಾಷೆಯು ಬಹಳ ಕಾಲದವರೆಗೆ ಬದುಕಿರಬೇಕಾದರೆ ಅದಕ್ಕೆ ಲಿಪಿ ಎಂಬುದೊಂದು ಇರಲೇಬೇಕು ಭಾಷೆ ಮತ್ತು ಲಿಪಿಗಳೆರಡೂ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ ಆದಿಕಾಲದ ಮಾನವರಲ್ಲಿ ಭಾಷೆ ಕೇವಲ ಭಾವನಾತ್ಮಕ ಸಂಜ್ಞೆಗಳ ಮೂಲಕ ಅಭಿವ್ಯಕ್ತಿಸಲ್ಪಡುತ್ತಿತ್ತು,ಕ್ರಮೇಣ ಮನುಕುಲ ಮಾತನಾಡಲು, ಆಡಿದ ಮಾತಿಗೆ ತನ್ನದೇ ಆದ ಒಂದು ವಿಶಿಷ್ಟ ಲಿಪಿಯನ್ನು ಕಂಡುಕೊಂಡ ಮೇಲೆಯೇ ಇತಿಹಾಸವನ್ನು ಇಂದು ನಾವು ಅನ್ವೇಷಿಸಿ, ಅಧ್ಯನಕ್ಕೋಳಪಡಿಸಿ ಹಾಗೂ ತದನಂತರದಲ್ಲಿ ಅನ್ವಯಿಸಿಕೊಳ್ಳಲು ಸಾಧ್ಯವಾಗಿರುವುದು. ಭಾಷೆಯು ಭಾವಕೆ ಜೀವತುಂಬುವ ಧ್ವನಿಯ ತರಂಗಗಳ ಮೂಲಕ ಹೃದಯವನ್ನು ತಟ್ಟಿದಾಗ ಮಾತ್ರ ಅದನ್ನು ನಾವು ಅನುಭವಿಸಲು ಸಾಧ್ಯ….
ಇತಿಹಾಸವನ್ನು ಓದುವಾಗ ಲಿಪಿ-ಶಾಸನಗಳ ಕುರಿತಾಗಿ ಯಥೇಚ್ಛವಾದ ಆಧಾರಗಳ ಮೂಲಕ ಅಧ್ಯಯನ ಮಾಡಿದ್ದೇವೆ. ಕೇವಲ ನಮ್ಮ ಭಾರತೀಯ ನಾಗರಿಕತೆಯಾದ ಸಿಂಧೂ ನಾಗರಿಕತೆ ಮಾತ್ರವಲ್ಲದೇ, ವಿದೇಶಿಯ ನಾಗರಿಕತೆಗಳಾದ ಈಜಿಫ್ಟ್, ಮೆಸೋಪೋಟಮಿಯ, ಚೀನಾ ನಾಗರಿಕತೆಗಳಲ್ಲಿಯೂ ಸಹ ನಾವು ಲಿಪಿಯ ಬೆಳವಣಿಗೆಯ ಜೊತೆಗೆ ಬರವಣಿಗೆಗಳು ಕಾಣ ಸಿಗುತ್ತವೆ. ಅಲ್ಲಿಂದ ಶುರುವಾದ ಬರಹದ ರಹದಾರಿ ನಮ್ಮ ಶಾಸನಗಳಲ್ಲಿ ಸ್ವಲ್ಪಮಟ್ಟಿಗೆ ಅರ್ಥವಾಗುವ ರೂಪಕ್ಕೆ ಬಂದು ತಲುಪಿತು. ಕನ್ನಡದ ಮೊಟ್ಟಮೊದಲ ಶಾಸನವಾದ “ಹಲ್ಮಿಡಿ”, ಮತ್ತು ಇತ್ಯಾದಿ ದೇಶಿಯ ಶಾಸನಗಳಲ್ಲಿ ನಮ್ಮ ಮಾತೃಭಾಷೆ ಕುರುಹುಗಳನ್ನು ಕಾಣಬಹುದಾಗಿದೆ. ಅಂದಿನ ಸಾಹಿತ್ಯ, ಶಾಸನಗಳು ಆ ಕಾಲದ ರಾಜಕೀಯ ಧಾರ್ಮಿಕ, ಆರ್ಥಿಕ, ಸಾಮಾಜಿಕ ಅದರಲ್ಲಿಯೂ ತಮಗೆ ಆಶ್ರಯವಿತ್ತ ಸ್ವಾಮಿ(ರಾಜ)ಯ ಕುರಿತಾಗಿ ಬರೆಯಲ್ಪಡುತ್ತಿದ್ದು, ನಾಡು- ನುಡಿ-ಗಡಿಯ ಕುರಿತಾದ ಕೃತಿಗಳು ನಮ್ಮಲ್ಲಿ ಕಡಿಮೆಯೇನಿಲ್ಲ. ಅಲ್ಲಿಂದ ಮುಂದೆ ನೋಡಿದರೆ ಬೇಂದ್ರೆ,ಕುವೆಂಪು, ಕಾರಂತ್, ಡಿವಿಜಿ,ವಿ.ಕೃ. ಗೋಕಾಕ್, ತೇಜಸ್ವಿ ಸರ್, ಸಾರಾ ಅಬೂಬಕ್ಕರ್, ಮಹದೇವಪ್ಪ,ಬೀಚಿ, ಇತ್ಯಾದಿ ಅಗ್ರ ಗಣ್ಯ ಸಾಹಿತಿಗಳಲ್ಲಿ ನಮ್ಮ ಭಾಷೆ ಮತ್ತಷ್ಟು ಉತ್ಕೃಷ್ಟ ಮತ್ತು ಉನ್ನತ ಮಟ್ಟಕ್ಕೆ ಏರಿತು ಎಂದರೆ ಅತಿಶಯೋಕ್ತಿಯಾಗಲಾರದು. ಪಂಪರಿಂದ ಹಿಡಿದು ಭೈರಪ್ಪರ ತನಕ ಬಂದ ಬರಹಗಳು ನಮ್ಮ ಸಂಸ್ಕೃತಿ-ಸಂಪ್ರದಾಯವನ್ನು ಅದರ ಶ್ರೇಷ್ಠತೆಯನ್ನು ಜಗತ್ತಿಗೆ ಪ್ರಸ್ತುತ ಪಡಿಸಿದ್ದಾರೆ.
ಸಾಹಿತ್ಯ ಮತ್ತು ಸಾಹಿತಿಯಲ್ಲಿ ಯಾರು ಪ್ರಥಮರು ಎಂದು ಕೇಳಿದರೆ...ಕೋಳಿ ಮೊದಲ..?! ಅಥವಾ ಮೊಟ್ಟೆ ಮೊದಲ..?!ಎಂದು ಹೇಳಿದಂತಾಗುತ್ತದೆ.ಸಾಹಿತ್ಯ ಮೊದಲೆ ಇದ್ದಿತ್ತು, ಅದನ್ನ ಸಾಹಿತಿ ಹೊರತೆಗೆದನೆಂದು ಹೇಳುವ ಮೂಲಕ ಈ ತರ್ಕಕ್ಕೆ ತೆರೆ ಬೆಳೆಯಬಹುದು. ಉದಾಹರಣೆಗೆ ಭಾರತ ಮೊದಲೇ ಇತ್ತು,ಅದಕ್ಕೆ ಜಲಮಾರ್ಗದ ಮುಖಾಂತರವಾಗಿ ವಾಸ್ಕೊ-ಡಿ-ಗಾಮಾ ಭಾರತದ ಇರುವಿಕೆಯನ್ನು ಅನ್ವೇಷಿಸಿದಂತೆ ಇದು ಕೂಡ.ಒಬ್ಬ ಸಾಹಿತಿ ತಾನು ಸಾಹಿತ್ಯ ಆಗುವುದಕ್ಕೂ ಮುನ್ನ,ಮೊದಲು ಒಬ್ಬ ಸಂಶೋಧಕನಾಗಲು ಪ್ರಯತ್ನಿಸಬೇಕು.ಹಾಗಾದರೆ ಆತ ಏನನ್ನು ಸಂಶೋಧಿಸಬೇಕು??ಎಂದು ಕೇಳಿದರೆ ಸಮಾಜದ ಆಗು-ಹೋಗುಗಳನ್ನು, ಜನರ ಪರಿಸ್ಥಿತಿ ಮತ್ತು ಮನಸ್ಥಿತಿಗಳ ನಡುವಿನ ವ್ಯತ್ಯಾಸ, ಪರಿಸರದ ಪರಿವರ್ತನೆಗಳನ್ನು, ಪ್ರಸ್ತುತ ಸ್ಥಿತಿಗತಿಗಳ ವಿಚಾರಗಳನ್ನು, ಭವಿಷ್ಯತ್ತಿನ ಬದಲಾವಣೆಗಳನ್ನು ವರ್ತಮಾನದಲ್ಲಿ ಅದರ ಪರಿಣಾಮಗಳನ್ನು, ಆಡು ಮುಟ್ಟದ ಸೊಪ್ಪಿಲ್ಲ... ಸಾಹಿತಿ ಮುಟ್ಟಲಾಗದ ವಿಷಯವೇ ಯಾವುದು ಇಲ್ಲವೆಂದೆ ಹೇಳಬಹುದು. ಅಂಡಾಣುವಿನಿಂದ ಹಿಡಿದು ಬ್ರಹ್ಮಾಂಡದವರೆಗೂ ಸಾಹಿತಿ ತನ್ನ ಲೇಖನಿಯ ಅಂಚನ್ನು ತಲುಪಿಸಬಲ್ಲ. ಒಬ್ಬ ಸಾಹಿತಿ ಮನಸ್ಸು ಮಾಡಿದರೆ ಜಗತ್ತಿನ ಚಿತ್ರಣವನ್ನೇ ಬದಲಾಯಿಸಬದುದು ಎಂಬುದನ್ನು ಕಾರ್ಲ್ ಮಾರ್ಕ್ಸ್,ಲೆನಿನ್,ತಿಲಕ್,ಗಾಂಧೀಜಿ ಮುಂತಾದ ಇತಿಹಾಸ ಪುರುಷರು ಸಾಧಿಸಿ- ಸಿದ್ದಪಡಿಸಿ ತೋರಿಸಿದ ಉದಾಹರಣೆ ನಮ್ಮಲ್ಲಿದೆ. ದಾಸ ಶ್ರೇಷ್ಠರಾದ ಪುರಂದರದಾಸ ಕನಕದಾಸರಾಗಿರಬಹುದು..ವಚನ ಶ್ರೇಷ್ಠರಾದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯಾಗಿರಬಹುದು..ಸರ್ವಕಾಲಿಕ ಸಂತ-ಸರ್ವಜ್ಞ ಆಗಿರಬಹುದು...ಆಧುನಿಕ ಸಮಾಜ ಸುಧಾರಕರ ಬರವಣಿಗೆಗಳನ್ನು ನಾವು ಉದಾಹರಣೆಯಾಗಿ ತೆಗೆದುಕೊಂಡರೆ ಅವರೆಲ್ಲ ಮೊದಲು ಮಾಡಿರುವುದು ಸಮಾಜದ ಸಂಶೋಧನೆ ತದನಂತರದಲ್ಲಿ ಅವುಗಳನ್ನು ತಮ್ಮ ವಚನ,ಕೀರ್ತನೆ,ಕಾವ್ಯಗಳಲ್ಲಿ ಕೃತಿಯನ್ನಾಗಿಸಿದರು. ಅಂದಿನ ಸಮಾಜದಲ್ಲಿದ್ದ ಬಡತನ,ದರಿದ್ರ ಆಚರಣೆ, ಜಾತೀಯತೆ, ಮೌಢ್ಯತೆ, ಇತ್ಯಾದಿ ವಿಷಯಗಳ್ಳನ್ನು ಮೊದಲು ಅವಲೋಕಿಸಿ, ಅನುಭವಿಸಿ, ವಿಮರ್ಶಿಸಿ, ಆ ನಂತರ ಅವುಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದರು. ಇಲ್ಲಿ ಮೊದಲು ಒಬ್ಬ ಸಂಶೋಧಕನ ಜನನವಾಗಿ, ಆ ಶಿಶು ತನ್ನ ವ್ಯವಸ್ಥೆಯಲ್ಲಿನ ಅವಸ್ಥೆಗಳನ್ನು ಬರಹದ ಮುಖೇನವಾಗಿ ಸಮಾಜದ ಪರಿವರ್ತನೆಯ ಕಾರ್ಯ ಮಾಡಿದರು. ಇಲ್ಲಿ ಇವರ ಮೂಲ ಉದ್ದೇಶ ಸಾಹಿತ್ಯ ರಚನೆಯಾಗಿರದೆ, ಸಮಾಜದ ಪರಿವರ್ತನೆಯಾಗಿತ್ತು ಎಂಬುದು ಇಲ್ಲಿ ನಾವು ಗುರುತಿಸಬೇಕಾದ ವಿಷಯ.
ಸಾಹಿತಿಯು ವ್ಯಕ್ತಿ ಸ್ಥಿತಿ, ವಸ್ತುಸ್ಥಿತಿ ಹಾಗೂ ಮನಸ್ಥಿತಿ ಈ ಮೂರನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಯನ್ನ ಮಾಡಬೇಕಾಗುತ್ತದೆ. ಸಂಶೋಧನೆಯಿಂದ ಹೊರಬರುವ ಫಲಿತಾಂಶಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರಬಹುದು ಅಥವಾ ಒಂದೇ ರೀತಿಯದ್ದಾಗಿರಬಹುದು. ಆದರೆ ಅವುಗಳನಲ್ಲಿನ ತಪ್ಪು ಸರಿಗಳನ್ನು ವಿಮರ್ಶೆಗೊಳಪಡಿಸಿದ ನಂತರದಲ್ಲಿ ಓದುಗರ ಮುಂದಿಡಬೇಕಾಗುತ್ತದೆ. ಏಕೆಂದರೆ ಒಬ್ಬ ಸಾಹಿತಿ ಮನಸ್ಸು ಮಾಡಿದರೆ ಇಡೀ ಸಮಾಜವನ್ನು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಆದರೂ ಪರಿವರ್ತಿಸುವ ತಾಕತ್ತು ಅವರಲ್ಲಿರುತ್ತದೆ. ಸ್ವಾತಂತ್ರ್ಯಪೂರ್ವದ ಹೋರಾಟದ ಸಂದರ್ಭದಲ್ಲಿ ತಿಲಕ್ ಗೋಖಲೆ, ದಾದಾಬಾಯಿ ನವರೋಜಿ, ಗಾಂಧೀಜಿ, ಅಂಬೇಡ್ಕರ್ ಇತ್ಯಾದಿ ಮಹಾನ್ ಚೇತನಗಳ ಲೇಖನಗಳು ಭಾರತದ ಮೂಲೆ ಮೂಲೆಯಲ್ಲಿದ್ದ ಭಾರತೀಯರ ಹೃದಯವನ್ನು ತಟ್ಟಿ ಪ್ರತಿಯೊಬ್ಬರೂ ಸ್ವತಂತ್ರವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಪ್ರೇರಣೆಯನ್ನು ನೀಡಿತು ಇದು ಬರಹಗಳಿಂದಾದ ಧನಾತ್ಮಕ ಬದಲಾವಣೆ, ಇವರೆಲ್ಲರ ಈ ಬರವಣಿಗೆಯಲ್ಲಿ ಅಂದಿನ ಸ್ಥಿತಿಯ ಅವಲೋಕನ ಆಧಾರಿತ ಸಂಶೋಧನೆ ಇದಕ್ಕೆ ಕಾರಣವಾಗಿರಬಹುದು.. ಅದೇ ರೀತಿ ದೇಶ ವಿಭಜನೆಯ ಸಂದರ್ಭದಲ್ಲಿ ಪ್ರಕಟಿಸಲ್ಪಟ್ಟ ಕೆಲವು ಪ್ರಚೋದನಕಾರಿ ಬರಹಗಳು ದೇಶ ವಿಭಜನೆಗೆ ಕಾರಣವಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು ಇದು ಸಾಹಿತ್ಯದಿಂದ ಅಥವಾ ಬರಹಗಳಿಂದ ಉಂಟಾಗುವ ಋಣಾತ್ಮಕ ಬದಲಾವಣೆಗೆ ಉದಾಹರಣೆಯಾಗಿದೆ. ಇವೆರಡು ಸಾಹಿತಿಯ ಶಾಯಿಯಲ್ಲಿರುವ ಶಕ್ತಿ ಏನೆಂಬುದುಕ್ಕೆ ನೀಡಿದ ಉದಾಹರಣೆಯಷ್ಟೇ… ಆದ್ದರಿಂದ ಸಾಹಿತಿಯಾದವನು ಒಬ್ಬ ಸಂಶೋಧಕನಾಗಿದ್ದರೇ ತುಂಬಾ ಒಳ್ಳೆಯದು. ಪೂರ್ಣಚಂದ್ರ ತೇಜಸ್ವಿಯವರು ಒಂದು ಕಡೆ ಹೇಳುತ್ತಾರೆ – “ಸಾಹಿತ್ಯ ರಚನೆಗೆ ಕಾಲ್ಪನಿಕ ಸನ್ನಿವೇಶಗಳ ಆಯ್ಕೆಗಿಂತ ವಾಸ್ತವಾಂಶವನ್ನು ತೆರೆದಿರುವ ಪ್ರಯತ್ನ ಮಾಡುವುದು ತುಂಬಾ ಉತ್ತಮವೆಂದು”. ಇದರರ್ಥ ನಮ್ಮ ಸುತ್ತಮುತ್ತಲಿನವರ ಜೀವನಕ್ರಮ, ಅವರು ನಡೆದು ಬಂದ ದಾರಿ,”ಒಬ್ಬ ವೃದ್ಧನಲ್ಲಿರುವ ಅನುಭವಗಳು ಒಂದು ಭಗವದ್ಗೀತೆಗೆ ಸಮ”. ಬದುಕು ಕಲಿಸಿಕೊಡುವ ಜೀವನ ಪಾಠಗಳನ್ನು ಯಾವ ವಿಶ್ವವಿದ್ಯಾಲಯಗಳು ನೀಡಲಾರದು ಎಂಬುದು ಅಕ್ಷರಶಃ ಸತ್ಯವಾದ ಮಾತು. “ಜನರ ಬದುಕೆಂಬ ಬಾವಿಯೊಳಗೆ ಸಾಹಿತ್ಯವೆಂಬ ಹಗ್ಗವ ಹಾಕಿ, ಲೇಖನ ಎಂಬ ಬಿಂದಿಗೆಯಿಂದ ದಣಿದವರ ದಾಹ ತೀರಿಸುವುದು ನಿಜವಾದ ಸಾಹಿತಿಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ”. ಎಲ್ಲರೂ ಒಪ್ಪುವ ಮತ್ತು ಅಪ್ಪುವ ವಿಷಯಗಳನ್ನು ವಿಭಿನ್ನವಾಗಿ ಹೇಳುವ ಮೂಲಕ ಆತನಲ್ಲಿರುವ ಕ್ರಿಯಾಶೀಲತೆಯನ್ನು ಬರಹದಲ್ಲಿ ಪ್ರದರ್ಶಿಸಬೇಕಾಗುತ್ತದೆ. ಅಂತಿಮವಾಗಿ ಸಾಹಿತ್ಯ ಇಂದು ಸಮಾಜದ ಮುಖ್ಯ ಭೂಮಿಕೆಯಿಂದ ಬದಿಗೆ ಸರಿಯುತ್ತಿರುವುದು ನಮಗೆಲ್ಲ ತಿಳಿದ ವಿಷಯ. ಸಾಮಾಜಿಕ ಜಾಲತಾಣಗಳ ಹೊಡೆತಕ್ಕೆ ಸಿಕ್ಕಿ ಇಂದು ಸಾಹಿತ್ಯ ಮತ್ತು ಸಾಹಿತಿಗಳು ಮಾನ್ಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ” ಪತ್ರಿಕೆ ಎಲ್ಲಾ ಮಧ್ಯಮಗಳ ತಾಯಿ ” ಎಂದು ನಾನು ಅಭಿಪ್ರಾಯ ಪಡುತ್ತೇನೆ. ಏಕೆಂದರೆ ಆಧುನಿಕ ತಂತ್ರಜ್ಞಾನಗಳೇ ಇಲ್ಲದ ಸಮಯದಲ್ಲಿ ಪತ್ರಿಕೆಗಳು ಜನ ಸಾಮಾನ್ಯರ ಮತಿ ಮತ್ತು ಮನಸ್ಸನ್ನು ಕೃಷಿ ಮಾಡುವ ಕಾರ್ಯವನ್ನು ಮಾಡಿದ್ದವು.
ಒಂದು ಕಾಲದಲ್ಲಿ ಊಟ ನಿದ್ರೆಗಳನ್ನು ಬಿಟ್ಟು ಕಾದಂಬರಿಗಳನ್ನು ಓದಿ ಮುಗಿಸುತ್ತಿದ್ದರಂತೆ, ತಲೆದಿಂಬಿನಂತಿದ್ದ ಪುಸ್ತಕಗಳನ್ನು ಕೊಂಡುಕೊಳ್ಳಲು ಶಕ್ತಿ ಇಲ್ಲದೆ ಹೋದರೆ ಇದ್ದವರ ಬಳಿ ಕೇಳಿ ಪಡೆದುಕೊಂಡು ಹೋಗಿ ಓದಿ ಹಸಿವಿನ ದಾಹ ನಿಗಿಸಿಕೊಳ್ಳುತ್ತಿದ್ದ ಕಾಲವೊಂದಿತ್ತು. ಆದರೇ ಇಂದು “ಮಸ್ತಕದ ಮುಂದೆ ಉಚಿತವಾಗಿ ಪುಸ್ತಕವನ್ನು ನಾವೇ ತಂದು ಹಿಡಿಯುತ್ತೇವೆ ಎಂದರು ಖಚಿತವಾಗಿ ನಿರಾಕರಿಸುವ ಯುವ ಸಮಾಜವೊಂದು ನಮ್ಮಲ್ಲಿ ಸೃಷ್ಟಿ ಆಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ”. ವಾಟ್ಸಪಲ್ಲಿ ಬಂದ ಒಂದು ಸಂದೇಶವನ್ನು ಇಲ್ಲಿ ಹೇಳ ಬಯಸುತ್ತೇನೆ – ಪುಸ್ತಕ ಮತ್ತು ಮೊಬೈಲ್ ಗಳ ನಡುವಿನ ಮಾತುಕತೆಯಲ್ಲಿ.. ಪುಸ್ತಕ ಹೇಳಿತಂತೆ – “”ತಲೆ ತಗ್ಗಿಸಿ ನನ್ನನ್ನು ಓದು ನಿನ್ನನ್ನ ತಲೆಯೆತ್ತಿ ನಿಲ್ಲುವಂತೆ ಮಾಡುತ್ತೇನೆ”” ಅದಕ್ಕೆ ಪ್ರತ್ಯುತ್ತರ ಮೊಬೈಲ್ ಹೀಗೆ ನೀಡಿತಂತೆ – ತಲೆ ತಗ್ಗಿಸಿ ನನ್ನ ನೋಡು ನಿನ್ನನ್ನು ಎಂದಿಗೂ ತಲೆಯೆತ್ತದಂತೆ ಮಾಡುತ್ತೇನೆ… ಪ್ರಿಯ ಓದುಗ ಮಿತ್ರರೆ ಜಗತ್ತು ಆಯ್ಕೆಗಳನ್ನು ಉಚಿತವಾಗಿ ನೀಡಿದೆ. ಇದಕ್ಕೆ ಯಾವುದೇ GST ಅನ್ನು ಅದು ವಿಧಿಸಿಲ್ಲ ಆದರೆ ನಾವು ಆಯ್ಕೆ ಮಾಡಿಕೊಳ್ಳುವಲ್ಲಿ ನಿರಂತರವಾಗಿ ಎಡವುತ್ತಲೇ ಇದ್ದೇವೆ. ಮಸ್ತಕವನ್ನು ಪುಸ್ತಕಗಳಿಂದ ತುಂಬಿದರೆ ಅದು ಹೊನ್ನಾಗುವುದು ಅದೇ ಮಸ್ತಕವನ್ನು ಮೊಬೈಲಿನಿಂದ ತುಂಬಿದರೆ ಅದು ಬರಡು ಮಣ್ಣಾಗುವುದು. ಆದ್ದರಿಂದ ಸಾಮಾಜಿಕ ಜಾಲತಾಣಗಳ ಜಾಲಗಳಿಂದ ಹೊರಬಂದು ಈ ಜಗತ್ತನ್ನು ಸಾಹಿತ್ಯದ ಕಣ್ಣುಗಳಿಂದ ಒಮ್ಮೆ ನೋಡಿ, ಹೊಸದೊಂದು ಪ್ರಪಂಚ ನಿಮಗೆ ಕಾಣಿಸದೇ ಇರದು. ಸಾಹಿತಿಗಳು ವಿಶ್ವಕರ್ಮನ ಅನುಜರಿದ್ದಂತೆ, ಮನಸ್ಸು ಮಾಡಿದರೆ ಅದ್ಬುತ ಮಾಯಾ ಲೋಕವನ್ನೇ ಲೇಖನಿಯ ಅಡಿಯಿಂದ ಸೃಷ್ಟಿ ಮಾಡಿ ಬಿಡಬಲ್ಲರು. ಆದ್ದರಿಂದ “ಸಾಹಿತಿ ಸಂಶೋಧಕನಾದರೂ.. ಅಥವಾ ಸಂಶೋಧಕನೇ ಸಾಹಿತಿ ಆದರೂ ಹೊರಬರುವುದು ಅತ್ಯದ್ಭುತ ಸಾಹಿತ್ಯ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ””
-ನಿರಂಜನ್ ವಂದಿಗೆ, ಅಂಕೋಲಾ (ಉ.ಕ ಜಿಲ್ಲೆ )
ವೃತ್ತಿ-ಉಪನ್ಯಾಸಕರು




















