ಪುಸ್ತಕ : ಭಾವಸುಧೆ
ಪ್ರಕಾರ : ಕವನ ಸಂಕಲನ
ಪ್ರಕಾಶಕರು : ಕಥಾಬಿಂದು, ಮಂಗಳೂರು
ಲೇಖಕಿ : ಕನ್ನಡತಿ ಬರಹಗಾರ್ತಿ ಲೋಕರತ್ನ ಭವ್ಯ ಸುಧಾಕರ ಜಗಮನೆ, ಶಿವಮೊಗ್ಗ
ನಾಡೋಜ ಡಾಕ್ಟರ್ ಮಹೇಶ ಜೋಶಿಯವರ ಶುಭನುಡಿಯೊಂದಿಗೆ ಲೋಕಾರ್ಪಣೆಗೊಂಡ ಈ ಹೊತ್ತಿಗೆಯ ಹೆಸರೇ “ಭಾವಸುಧೆ”.
ತಮ್ಮ ಚೊಚ್ಚಲ ಕವನ ಸಂಕಲನವನ್ನು ಅವರ ತಂದೆ ತಾಯಿಗೆ ಸಮರ್ಪಿಸಿದ ಅವರ ಕವಿಮನ ಹೆತ್ತವರ ಬಗ್ಗೆ ಅವರಿಗೆ ಇರುವ ಗೌರವದ ಸಂಕೇತವಾಗಿದೆ.
ಯುವಜೋಡಿ ಕೈ ಕೈ ಹಿಡಿದು ಸಂಜೆಯ ವೇಳೆ ಜೊತೆಯಾಗಿ ನಡೆವ ಸುಂದರ ಚಿತ್ರಣವುಳ್ಳ ಮುಖಪುಟ ಹೊತ್ತು ಬಂದ ಈ ಕವನ ಸಂಕಲನ ಪ್ರೇಮಕ್ಕೆ ಒತ್ತು ಕೊಟ್ಟಂತೆ ಕಾಣುವಲ್ಲಿ ಸಹಜವಾಗಿಯೇ ತಮ್ಮ “ಮೋಹಕ ನೋಟ” ದ ಕವನದಂತೆಯೇ ಮನಮೋಹಕವಾಗಿ ಮೂಡಿಬಂದಿದೆ.
ಲೇಖಕಿಯು ತಮ್ಮ ಜೀವನಾನುಭವವನ್ನು ಇತರರಿಗೆ ಕವನಗಳ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ. “ಆದಿ ಪೂಜಿತ ಗಣಪಗೆ ವಂದನೆ” ಎಂಬ ಕವನದೊಂದಿಗೆ ಪ್ರಾರಂಭಿಸಿದ ಕವನಗಳ ಯಾತ್ರೆ ಪ್ರಥಮ ವಂದನೆ ಗಣಪತಿಗೆ ಅರ್ಪಿತ ಅಥವಾ ಮೀಸಲು ಎಂಬುದನ್ನು ಎತ್ತಿಹಿಡಿದಂತಿದೆ.
ಮುಂದುವರೆದಂತೆ “ತಾಯಿ ಮಗುವ ನಗು”, ತಾಯ್ತನ, ಅಮ್ಮ ಎಂಬ ಅರ್ಥಗರ್ಭಿತ ಕವನಗಳಲ್ಲಿ ಕವಯಿತ್ರಿಗೆ ಇರುವ ಅಮ್ಮನ ಬಗೆಗಿನ ಕಾಳಜಿ ಮಮತೆಯ ಮನದ ಮಡಿಲು ತಾಯಿತನದ ಹೊನಲು ಎಂಬ ಸುಂದರ ವರ್ಣನೆ ದಯಾಮಯಿ ಮೊದಲ ಗುರುವೆಂಬ ಹೆಗ್ಗಳಿಕೆಯನ್ನು ಸಾರುತ್ತದೆ. “ಅಪ್ಪ” ಶ್ರಮಜೀವಿ ಸದ್ಗುಣಗಳ ಅಕ್ಷಯ ಗಣಿ ಎಂಬ ಸಾಲಿನೊಂದಿಗೆ ಎಂದೆಂದಿಗೂ ಹೆಣ್ಣು ಮಕ್ಕಳಿಗೆ ಅಪ್ಪನೇ ನಾಯಕ ಎಂಬುದನ್ನು ನೇರವಾಗಿಯೇ ಹೇಳಿದ್ದಾರೆ.
“ಪ್ರೀತಿಯ ಮಹಿಮೆ” ಎಂಬ ಕವನ ಪ್ರೀತಿಯ ರಾಯಭಾರಿಯಂತೆ ಪ್ರೇಮದ ಹೊನಲನ್ನು ಎಲ್ಲರಿಗೂ ಬಯಸುವ ಪ್ರೀತಿಯೇ ತುಂಬಿರಲಿ ಮನವೆಲ್ಲಾ ಎಂಬುದನ್ನು ತಿಳಿಸುತ್ತಾ ಪ್ರಕೃತಿಯ ಸುಂದರ ಸಹಜ ವರ್ಣನೆಯನ್ನು ವರ್ಣಿಸಿದ್ದಾರೆ. ಭೂತಾಯಿ ನಿನಗಾಗಿ ಕಾದಿಹಳು ಸಸ್ಯ ಶ್ಯಾಮಲೆ ಸೊರಗಿಹಳು ಕೃಪೆ ತೋರು ಮಳೆರಾಯ ಎಂಬ ಕವನದಲ್ಲಿ ಮಳೆರಾಯನನ್ನು ಆಹ್ವಾನಿಸಿದ್ದಾರೆ. “ನಲ್ಲನ ಸಿಹಿ ಚುಂಬನ ಸಖನ ಸವಿ ಆಲಿಂಗನ ಬೇಕಿದೆ ತಣಿಸಲು ದಾಂಪತ್ಯದ ವಿರಹ ಎಂಬ ಸಾಲುಗಳು ಅವರ ಜೀವನನುಭವವೇನೋ ಎಂಬಂತೆ ವೇದ್ಯವಾಗಿದೆ. ಪ್ರೀತಿಯ ಕವನಗಳನ್ನು ಒಂದಾದ ಮೇಲೊಂದರಂತೆ ಬರೆದ ಕವಯಿತ್ರಿ ನಾನೊಬ್ಬ ಪ್ರೇಮಕವಿ ಎಂಬುದನ್ನು ನಿರೂಪಿಸಿದ್ದಾರೆ. ಅಕ್ಕಮಹಾದೇವಿ, ಭಗವದ್ಗೀತೆಯ ಸಾರಸುತೆ ಮೊದಲಾದ ಕವನಗಳು ಲೇಖಕಿಯ ಜ್ಞಾನದ ಹಸಿವನ್ನು ವಿವರಿಸುತ್ತದೆ.
ತೇಜಸ್ವಿ ಕಾರಂತಜ್ಜ ಚಂದ್ರಯಾನ ವಿಶ್ವ ಮಾನವತೆ ದೇಶಾಭಿಮಾನ ಮೊದಲಾದವುಗಳು ಲೇಖಕಿಯ ದೃಷ್ಟಿ ಸಮಾಜದೊಳಗೆ ಹೇಗಿದೆ ಎಂಬುದನ್ನು ವರ್ಣಿಸುತ್ತದೆ.
ಡಾಂಭಿಕತೆ ಬಿಡಿ ಅರ್ಥಪೂರ್ಣವಾಗಿ ಮಾಡಿ ಎಂಬ ಕವನದಲ್ಲಿ ಲೋಕದ ಡೊಂಕನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾರೆ.
ಕಾವೇರಿ ಬರಿದಾಗದಿರಲಿ ಸದಾ ತುಂಬಿರಲಿ ಎಂಬ ಕವನದ ಮೂಲಕ ಕನ್ನಡಿಗರ ಜೀವನದಿ ಕಾವೇರಿ ಎಂಬುದನ್ನು ಒತ್ತಿ ಹೇಳಿ ರಾಜ್ಯಗಳ ನಡುವೆ ಕದನ ಬೇಡ ಶಾಂತಿ ನೆಲೆಸಿಲಿ ಎಂಬ ಸುಂದರ ಮಾತನ್ನು ಹೇಳುತ್ತಾ “ಹಸಿವಿಗೆ ಹಲವು ಮುಖ” ಹತ್ತು ಹಲವು ಮುಖಗಳ ಪರಿಚಯವನ್ನು ಮಾಡುತ್ತಾ ತನಗೆ ಮಗುವಿನ ಮೇಲೆ ಇರುವ ಮಮಕಾರವನ್ನು “ಮಗುವಿನ ಮುದ್ದಾದ ಮೊಗ” ಎಂಬ ಕವನದಲ್ಲಿ ಮಗುವಿನ ನಗುವು ಸ್ವರ್ಗವನ್ನೇ ಸೆಳೆಯುವಂತಿದೆ ಎಂದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ತಮಗಿರುವ ಅಸಮಾಧಾನವನ್ನು ಮತ್ತು ಭ್ರಷ್ಟರನ್ನು ಇಲ್ಲವಾಗಿಸಿ ನೀತಿ ನಿಷ್ಠೆಯೊಳಗೆ ನಮ್ಮ ಮುಂದಿನ ಭವಿಷ್ಯವನ್ನ ರೂಪಿಸಬೇಕು ಎಂಬ ಕಾಳಜಿಯೊಂದಿಗೆ, ಹಳ್ಳಿಗಳು ಮರೆಯಾಗದಿರಲಿ ಸ್ವಚ್ಛಂದ ಪರಿಸರ ಉಳಿಯಲಿ ಪೇಟೆಗೆ ಸಹಜವಾಗಿಯೇ ಇರುವ ವ್ಯಾಮೋಹ ಮತ್ತು ಅದರ ಚಂಬಕ ಶಕ್ತಿ ಆಧಾರವಾಗದಿರಲಿ ಹಳ್ಳಿಗಳಲ್ಲಿನ ಬದುಕು ಪರಸ್ಪರ ಪ್ರೀತಿಯಿಂದ ಇರುವ ಭಾವ ಮುಂದುವರೆಯಲಿ ಎಂಬುದನ್ನು ಸಾರುತ್ತ ನೇತ್ರದಾನದ ಮಹತ್ವವನ್ನು ನೇತ್ರದಾನ ಪವಿತ್ರದಾನ ಎಂಬ ಕವಿತೆಯಲ್ಲಿ ಅಂಧತ್ವ ಅಳಿಸಿ ಹಾಕೋಣ ಎಂಬುದನ್ನು ಪ್ರತಿಪಾದಿಸಿದ್ದಾರೆ.
ಸಂಕ್ರಾಂತಿಯ ಸೊಬಗು ಎಂಬ ಕವನದಲ್ಲಿ ಬೆಳ್ಳಕ್ಕಿಗಳ ನಡಿಗೆ ಕಾರ್ಮೋಡವ ಸೀಳುವಂತೆ ದಿನಕರನ ನೋಟಕ್ಕೆ ಬಾಯಿ ತೆರೆದಿದೆ ಕಮಲವು ಎಂಬ ಸುಂದರ ಉಪಮೆಯೊಂದಿಗೆ ತಿಳಿಸಿದ್ದಾರೆ. ಜಂಭದ ಕೋಳಿಗಳು ತಾನೇ ಮೇಲು ಎಂಬ ಅಹಂಕಾರಿಗಳು ಈ ಜಗದಲ್ಲಿ ಸ್ವಾಸ್ಥ್ಯ ಕೆಡಿಸುವವರು ಎಂಬ ಉದ್ಗಾರದೊಂದಿಗೆ ರಾಜಕಾರಣಿಗಳೇ ಸಮರ್ಪಕ ಆಡಳಿತ ಸಮರ್ಪಣಾ ಭಾವದಿ ಮಾಡಿ ಎಂಬ ಆಶಯದೊಂದಿಗೆ ಬರೆದ ಕವಿತೆ ದುರಾಢಳಿತ ಬಿಟ್ಟು ಸಮರ್ಪಕ ಆಡಳಿತ ಮಾಡಿ ಎಂಬುದು. ಕುಡಿತದ ದುಶ್ಚಟ ಹೆಂಡತಿ ಮಕ್ಕಳ ಉಪವಾಸ ಎಂಬುದನ್ನು ಸುಂದರ ಸಾಲುಗಳಲ್ಲಿ ದುಶ್ಚಟ ಬೇಡ ಸಾರುತ್ತ ಮತ್ತೆ ಮುಂದುವರೆದು ಇರುವುದೊಂದೆ ಭೂಮಿ ಸಕಲ ಜೀವರಾಶಿಗಳ ಆಶ್ರಯ ಕಾಪಾಡಿ ಈ ಭೂಮಿಯನ್ನು ಎನ್ನುವ ಅಳಲು ಎದ್ದು ಕಾಣುತ್ತದೆ. ಜೀವನ ಪಯಣ ಎಂಬ ಕವನದಲ್ಲಿ ಹುಟ್ಟು ಮತ್ತು ಸಾವು ಅನಿಶ್ಚಿತ ಇರುವಷ್ಟು ದಿನ ಚೆನ್ನಾಗಿ ಬದುಕು ಎಂಬ ಮಾತನ್ನು ಹೇಳುತ್ತಾ ಕನ್ನಡ ನಮ್ಮ ಜನ್ಮಭೂಮಿ ಕನ್ನಡ ನುಡಿಯೇ ಎಷ್ಟೊಂದು ಸವಿ ಭುವನೇಶ್ವರಿ ತಾಯಿಗೆ ನಮಿಸೋಣ ಎಂದು ತಮ್ಮ ಕನ್ನಡ ಪ್ರೇಮವನ್ನು ಸಾರಿದ್ದಾರೆ. ಈ ಕವನ ಸಂಕಲನದಲ್ಲಿ ಕವಯಿತ್ರಿಯು ತಮ್ಮ ಕಾಲೇಜು ದಿನಗಳಲ್ಲಿ ಬರೆದ ಕವನಗಳಿಂದ ಮೊದಲುಗೊಂಡು ತೀರ ಇತ್ತೀಚಿನವರೆಗೆ ಬರೆದ ಕವನಗಳನ್ನು ಸಂಕಲನವಾಗಿಸಿದ್ದಾರೆ.
ಶತಾಯು ಸಿದ್ದಮ್ಮನವರ ಬಗ್ಗೆ ಬರೆಯುತ್ತಾ ಅವರಿಗಿದ್ದ ಜೀವನ ಪ್ರೀತಿಯನ್ನು ವಿವರವಾಗಿ ಕವನದ ಮೂಲಕ ಬರೆದು ಅವರ ಹೋರಾಟದ ಜೀವನದ ಬಗ್ಗೆ ಓದುಗರಿಗೆ ತಿಳಿಸಿದ್ದಾರೆ. ಸಹಬಾಳ್ವೆಯ ಸುಂದರತೆಯನ್ನು ಸಾರುತ್ತಾ ಸಂತಸದಿ ಬಾಳೋಣ ನಲಿಯುತ ನಮ್ಮ ರಕ್ತದಲ್ಲಿನ ರೈತನ ಬೆವರಿಗೆ ತಲೆಬಾಗೋಣ ನಮ್ಮ ಕಾಯುವ ಯೋಧರಿಗೆ ಜೈ ಅನ್ನುವ ಎಂಬುದನ್ನು ತಮಗಿರುವ ರೈತ ಮತ್ತು ಯೋಧನ ಬಗೆಗಿನ ಗೌರವವನ್ನು ತಿಳಿಸಿದ್ದಾರೆ. ಅಣ್ಣ ತಂಗಿ ಈ ಕವನದ ಮೂಲಕ ಅಣ್ಣ ಮತ್ತು ತಂಗಿಯ ನಡುವೆ ಇರುವ ಭಾಂದವ್ಯದ ಸವಿಯನ್ನು ತಿಳಿಸುತ್ತಾ ಆರತಿಗೊಂದು ಕೀರುತಿಗೊಂದು ಎಂಬಂತೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವನ್ನು ಹೊಂದಿದವರ ಸಂತಸವನ್ನು ಸಂಭ್ರಮಿಸಿದ್ದಾರೆ.
ಬಾಲ್ಯ ಎಂಬ ಕವನದಲ್ಲಿ ತಾನು ಕಳೆದ ಬಾಲ್ಯವನ್ನು ನೆನಪಿಸುತ್ತ ಅವಕಾಶವಿದ್ದರೆ ಮತ್ತೆ ಬಾಲ್ಯವನ್ನು ಹೊಕ್ಕರೆ ಚೆನ್ನಾಗಿರುತ್ತದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಕವಯಿತ್ರಿಯು ತಮ್ಮ ಮನದಾಳದ ಮಾತಿನಲ್ಲಿ ಹೇಳಿದಂತೆ ಸಾಹಿತ್ಯ ಕೃಷಿಯಲ್ಲಿ ತನ್ನನ್ನೇ ತಾನು ಸಮರ್ಪಿಸಿಕೊಂಡು ಸಾಧ್ಯವಾದ ಮಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿ ಅಳಿಲು ಸೇವೆಯನ್ನು ಮಾಡಬೇಕೆಂಬ ಸದಾಶಯಗಳೊಂದಿಗೆ ಮುಂದುವರಿಯಬೇಕೆನ್ನುವ ತಮ್ಮ ಆಶಯವನ್ನು ತೋರ್ಪಡಿಸಿದ್ದಾರೆ. ಉತ್ತಮ ಭಾಷಾ ಪ್ರೌಢಿಮೆಯುಳ್ಳ ಕವಯಿತ್ರಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಶ್ರಮದೊಂದಿಗೆ ಸಾಹಿತ್ಯ ಸೃಷ್ಟಿಗೆ ಪ್ರಯತ್ನಿಸಬೇಕೆಂಬ ಮತ್ತು ಇನ್ನೂ ಹೆಚ್ಚಿನ ಓದಿನೊಂದಿಗೆ ಹೊಸ ಶಬ್ದಗಳ ಜೋಡಣೆಯೊಂದಿಗೆ ತಮ್ಮ ಬೌದ್ಧಿಕ ಮಟ್ಟವನ್ನು ಮತ್ತಷ್ಟು ಏರಿಕೆ ಮಾಡಿ ನಮ್ಮ ಚಿನ್ನದ ಕನ್ನಡ ಭಾಷೆಯಲ್ಲಿ ಕವಿತೆಗಳ ಸವಿಯನ್ನು ಓದುಗರಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಂಚನೆಯಿಂದ ಮಾಡಲಿ ಎಂಬ ಆಶಯ.

ವಿಮರ್ಶಕರು:
ಎ. ಹರೀಶ ಡೋಂಗ್ರೆ, ಅಲ್ಲೆತ್ತಿಮಾರು,
ಮಾಳ (ವಾಸ – ಬೆಂಗಳೂರು)
ಮೊಬೈಲ್ : 7483398835
ಇಮೈಲ್ : harish_dongre@yahoo.com




















