ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರತಿದಿನದ ಬದುಕು ನಿತ್ಯೋತ್ಸವ

ಭಗವಂತ ಜಗವ ಸೃಜಿಸಿ ನಮ್ಮನ್ನು ಈ ಸೃಷ್ಟಿಯಲ್ಲಿ ಇರಿಸಿರುವುದೇ
ನಾವು ನಮ್ಮ ಕರ್ಮ ಕಳೆದುಕೊಂಡು ಈ ಬಂಧನದಿಂದ ಮುಕ್ತರಾಗಲಿ ಎಂದು…

ಗುರುಗಳ ಬಳಿಗೆ ಬಂದ ಒಬ್ಬ ವ್ಯಕ್ತಿ ಕೇಳಿದನಂತೆ : ನನಗೆ ಸಂತೋಷ ಬೇಕು, ನನಗೆ ನೆಮ್ಮದಿ ಬೇಕು.
ಆಗ ಗುರುಗಳು ನಗುತ್ತಾ ಹೇಳಿದರಂತೆ, ಮೊದಲು ‘ನನಗೆ’ ಎಂಬುದನ್ನು ತೆಗಿ, ಬಳಿಕ ‘ಬೇಕು’ ಎಂಬುದನ್ನು ತೆಗಿ. ಅಲ್ಲಿಗೆ ಉಳಿಯುವುದು ಸಂತೋಷ, ನೆಮ್ಮದಿ.. ಸಾಕಲ್ಲವೇ ಎಂದು ಕೇಳಿದರಂತೆ.
ಗೆಳೆಯರೇ ಸಂತೋಷಕ್ಕೆ, ನೆಮ್ಮದಿಯ ಬದುಕಿಗೆ ಇದು ಅತ್ಯುತ್ತಮ ಸೂತ್ರವಂತೂ ಹೌದು. ಹಬ್ಬ, ಸಂಭ್ರಮ, ಉತ್ಸವ ಅಂದಾಗಲೆಲ್ಲ ಕೆಲವರಿಗೆ ಊರಿನ ಜಾತ್ರೆ ನೆನಪಾಗಬಹುದು, ಕೆಲವರಿಗೆ ಅವರ ಹುಟ್ಟುಹಬ್ಬ, ಇನ್ನು ಕೆಲವರಿಗೆ ಹೊಸ ವರ್ಷ, ಮತ್ತೆ ಕೆಲವರಿಗೆ ಪ್ರೇಮಿಗಳ ದಿನಾಚರಣೆ ಹೀಗೆ.
ಉತ್ಸವ ಎಂದರೆ ನೂರಾರು ಜನ ಸೇರುವುದು, ಏನೇನೋ ಖರೀದಿಸಿ ತಿನ್ನುವುದು, ಹತ್ತಾರು ಜನರ ಬಳಿ ಮಾತನಾಡುವುದು, ಹಿತವಾದ ಸಂಗೀತಕ್ಕೆ ಕುಣಿಯುವುದು, ಮೈಮರೆತು ಖುಷಿಪಡುವುದು ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಾವು ಉತ್ಸವಗಳಿಗೆ ಕಾಯುತ್ತೇವೆ, ಸ್ನೇಹಿತರನ್ನು ಬೇಟಿಯಾಗಲು ಹಾತೊರೆಯುತ್ತೇವೆ, ಮನೆಗೆ ಯಾರಾದರೂ ಬರಲಿ ಎಂದು ಎದುರು ನೋಡುತ್ತೇವೆ. ಇಷ್ಟದ ವ್ಯಕ್ತಿಯ ಭೇಟಿ, ಒಂದು ಸಿನಿಮಾ, ಯಕ್ಷ ಗಾನ, ಗೆಳೆಯರ ಜತೆ ಟೂರ್‌ ಇವೆಲ್ಲವೂ ಸಂಭ್ರಮದ ಹುಡುಕಾಟಗಳೇ.

ಆದರೆ, ಒಮ್ಮೆ ಯೋಚಿಸಿ ನೋಡಿ. ಹೀಗೆ ಏನೋ ಖುಷಿಯಾಗಿದ್ದು ಸಂಭವಿಸುತ್ತದೆ ಎಂದು ಕಾಯುವುದಕ್ಕಿಂತ ಪ್ರತಿಕ್ಷ ಣವೂ ಒಂದು ಸಂಭ್ರಮ ಎಂದು ಭಾವಿಸಿ ಮುಂದಡಿ ಇಟ್ಟರೆ ಬದುಕು ಎಷ್ಟೊಂದು ಖುಷಿಯಾಗಿರುತ್ತದೆ ಅಲ್ಲವೇ?
ಸಂಭ್ರಮ ಎನ್ನುವುದು ಆಂತರಿಕ ವಿಚಾರ. ಆದರೆ, ನಾವು ಅದನ್ನು ಹೊರಗೆ ಹುಡುಕುತ್ತಿದ್ದೇವೆ ಅಷ್ಟೆ. ಸುಮ್ಮನೆ ಗಮನಿಸಿ, ಮನಸಿನೊಳಗೆ ನೋವೋ ಯಾತನೆಯೋ ಇದ್ದರೆ ಎಂಥ ಪಾರ್ಟಿಗೆ ಹೋದರೂ ನಾವು ಖುಷಿಯಾಗಿರಲು ಸಾಧ್ಯವೇ? ಯಾವ ಹಬ್ಬ ಬಂದರೂ ನಮ್ಮ ಮನಸಿನ ಸೂತಕ ಕಳೆದೀತೇ? ಅದೇ ರೀತಿ ಮನಸು ಪ್ರಫುಲ್ಲವಾಗಿದ್ದರೆ ಯಾವ ಕಿರಿಕಿರಿಯೇ ಎದುರಾದರೂ ನಿರುಮ್ಮಳವಾಗಿ ಇರುವುದಿಲ್ಲವೇ?
ನಮ್ಮ ಬದುಕು ಇರುವುದು ಗರಿಷ್ಠ ಎಂದರೆ 80 ವರ್ಷ. ಅದಕ್ಕಿಂತ ಹೆಚ್ಚು ಬಾಳಿದರೆ ಬೋನಸ್‌ ಅಥವಾ ಯಾವ ಕ್ಷ ಣ ಬೇಕಾದರೂ ಈ ಜೀವನ ಅಂತ್ಯಗೊಳ್ಳಬಹುದು. ಜೀವನದ ಅರ್ಧ ಭಾಗವನ್ನು ನಾವು ನಿದ್ದೆಯಲ್ಲೇ ಕಳೆಯುತ್ತೇವೆ. ಉಳಿದ ನಲವತ್ತು ವರ್ಷಗಳಷ್ಟೇ ನಮ್ಮದು. ಅದರಲ್ಲೂ ಜೀವನ ಅಂದರೆ ಏನು ಎನ್ನುವುದು ಅರಿವಾಗುವ ಹೊತ್ತಿಗೆ 20 ವರ್ಷಗಳು ಕಳೆದುಹೋಗಿರುತ್ತದೆ. ಕೊನೆಯ ಕೆಲವು ವರ್ಷಗಳು ನಾವು ಬಯಸಿದಂತೆ ಬದುಕಲು ಕಷ್ಟವಾಗುತ್ತದೆ. ಹಾಗಿರುವಾಗ ಯೌವನ ಮತ್ತು ವೃದ್ಧಾಪ್ಯದ ನಡುವಿನ ಕೆಲವು ವರ್ಷಗಳಷ್ಟೇ ನಮ್ಮ ಪಾಲಿಗೆ ನಿಜವಾಗಿ ಸಿಗುವಂಥದ್ದು, ನಾವು ಸಂಭಾಳಿಸಬೇಕಾದದ್ದು.

ನಾನೇ ಎಲ್ಲವನ್ನೂ ಬರೆಯುತ್ತೇನೆ… ಎನ್ನುವ ಅಹಂ ಬೇಡ… ದಿನಕ್ಕೆ ಸಾವಿರಾರು ಪುಸ್ತಕಗಳು ಮುದ್ರಣವಾಗುತ್ತಲೇ ಇವೆ .ಜಾಸ್ತಿ ಓದಿದಿನಿ ಎನ್ನುವ ಗರ್ವ ಬೇಡ… ಓದಲು ಸಾಗರದಷ್ಟಿದೆ ಇನ್ನೂ…
ಎಲ್ಲ ಬಲ್ಲವರಿಲ್ಲ !!ಬಲ್ಲವರು ಬಹಳಿಲ್ಲ!!! ಮಗುವಿನಿಂದ ಗುರು ಹಿರಿಯರವರೆಗೂ ನಾವಿನ್ನೂ ಕಲಿಯುವದು ತುಂಬಾ ಇದೆ ಇಷ್ಟೇ ಮುಗಿಯಿತು ಬೆಳಗಾಯಿತು ಎಂದರೆ ರಾತ್ರಿಯು ಬರುವುದು… ರಾತ್ರಿಯಾಯ್ತು ಅಂತ ತಿಳಿದರೆ ಇನ್ನೆಲ್ಲೋ ಬೆಳಕಿನ ಆರಂಭವಾಗಿರುತ್ತದೆ ..

ನೀ ಸಾಗುವ ಪಥ ಹೊಸ ಹೊಸ ಪಾಠಗಳನ್ನು ಕಲಿಸುತ್ತ ಅನುಭವಗಳನ್ನು ನೀಡುತ್ತಾ ಸಾಗುತ್ತದೆ. ಕೆಡಕನ್ನು ಒಳಿತನ್ನು ಆಯ್ಕೆ ಮಾಡಿಕೊಳ್ಳುವದು ನಿನಗೆ ಬಿಟ್ಟಿದ್ದು.. ಏಕೆಂದರೆ ಪ್ರತಿಯೊಂದಕ್ಕೂ ಫಲಾಫಲ ನಮಗಿದೆ.
ಬಲು ಚಾಲಾಕಿ ಈ ಬದುಕು
ಇಂದು ಕಸಿಯುತಿದೆ, ನಾಳೆಗಳ ಕೊಟ್ಟು….
ಪ್ರಪಂಚವೆಂದರೆ ಒಂದು ಕ್ಷಣ ಸುಖ, ಒಂದು ಕ್ಷಣ ದುಃಖ. ನಶ್ವರವಾದ ಜಗದಲ್ಲಿ ಎಲ್ಲವೂ ಒಂದು ದಿನ ಮರೆಯಾಗುತ್ತದೆ.

ಎಲ್ಲವನ್ನೂ ನೋಡುತ್ತಿರುವ ಆ ಭಗವಂತ ಅಲ್ಲಿ ಕುಳಿತು ನಮ್ಮಾಟವ ನೋಡುತ್ತಿರುತ್ತಾನೆ… ಇದು ಅವನ ಮೈದಾನ ನಾವಿಲ್ಲಿ ಆಟಗಾರರಷ್ಟೇ… ಎಂಬ ಸತ್ಯದ ಅರಿವಾಗಬೇಕು …
ಮನುಷ್ಯ ಮತ್ತು ದೇವರ ನಡುವಿನ ಕೊಂಡಿಯೇ ನಂಬಿಕೆ
ಅದೇ ಈ ಬದುಕನ್ನು ಜೀವಂತವಾಗಿರುಸುತ್ತೆ ಮತ್ತು ಮುನ್ನೆಡೆಸುತ್ತೆ.
ಸಾಮಾನ್ಯವಾಗಿ ಲೋಕದ ಜನ ಹಗಲನ್ನು
ತಮ್ಮ ಕುಟುಂಬ ಪೋಷಣೆಯ ಚಿಂತೆಯಲ್ಲಿ ಹಾಗೂ
ಇರುಳನ್ನು ವಿಷಯ ಸುಖ, ನಿದ್ರೆಯಲ್ಲಿ ಕಳೆಯುತ್ತಾರೆ.
ಆತ್ಮಜ್ಞಾನದಲ್ಲಿ ಬಹುಪಾಲು ಜನರಿಗೆ ಆಸಕ್ತಿ ಇರುವುದಿಲ್ಲ.
ಲೋಕದಲ್ಲಿ ನಿರಂತರ ಸಾವನ್ನು ಕಣ್ಣಾರೆ
ಕಾಣುತ್ತಿದ್ದರೂ ದೇಹ ಅನಿತ್ಯವೆಂಬುದು
ಅರ್ಥವಾಗುವುದಿಲ್ಲ.ಸಂಸಾರ ಬಂಧದಿಂದ ಪಾರಾಗಬೇಕೆಂದರೆ ಆಧ್ಯಾತ್ಮ ದ ದೀಪ ಮನದಿ ಬೆಳಗಬೇಕು.
ಗುರು ಕಲಿಸಿದ ವಿದ್ಯೆ.. ತಾಯಿ ನೀಡಿದ ಮಮತೆ.. ತಂದೆ, ಹಿರಿಯರು ಹೇಳಿದ ಸಲಹೆ.. ಕಿರಿಯರು ನೀಡಿದ ಪ್ರೀತಿ.. ರೈತ ಕೊಟ್ಟ ಅನ್ನ..ಯೋಧ ನೀಡಿದ ರಕ್ಷಣೆ ..ನಿನ್ನ ಹೊತ್ತ ಭೂಮಿತಾಯಿ ..ನಿನಗೆ ಭಾಷೆ ಸಂಸ್ಕೃತಿ ಕಲಿಸಿದ ನಾಡು,ದೇಶ… ಕಷ್ಟಕಾಲದಲ್ಲಿ ಜೊತೆಯಾದ ಸ್ನೇಹ ಬಾಂದವ್ಯಗಳನ್ನು ಎಂದಿಗೂ ಮರೆಯದಿರು..

ಬದುಕಿನಲ್ಲಿ ಬಾಗುವದನ್ನು ಕಲಿ
ಬದುಕುವದನ್ನು ಕಲಿ …

ಪ್ರತಿಕ್ಷಣವೂ ಅಮೂಲ್ಯ
ಹೀಗಾಗಿ ಜೀವನದ ಪ್ರತಿ ಕ್ಷ ಣವು ಅಮೂಲ್ಯ, ಇದನ್ನು ಉತ್ಸವ ಎಂಬಂತೆ ಸ್ವೀಕರಿಸುವುದೇ ನಿಜವಾದ ಬುದ್ಧಿವಂತಿಕೆ. ನಾವು ಯಾರ ಮೆಲೋ ಸಿಟ್ಟು ಮಾಡಿಕೊಂಡು, ಜಗಳ ಕಾಯುತ್ತಾ ಕುಳಿತರೆ ಅಮೂಲ್ಯ ಕ್ಷ ಣಗಳನ್ನು ಕಳೆದುಕೊಂಡಂತೆ. ಅದೇ ಇನ್ನೊಬ್ಬರಿಗೆ ಖುಷಿಯನ್ನು ಕೊಡುತ್ತಾ ನಾವೂ ಸಂಭ್ರಮಿಸುತ್ತಿದ್ದರೆ ಆ ಕ್ಷ ಣಗಳನ್ನು ನಮ್ಮದಾಗಿಸಿಕೊಂಡಂತೆ.
ಪ್ರತಿ ಕ್ಷ ಣವೂ ಸವಾಲಾಗಿರುವ ಬದುಕಿನಲ್ಲಿ ಇದೆಲ್ಲ ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ನಿಜವೆಂದರೆ, ಸಮಸ್ಯೆ ಎನ್ನುವುದು ಎಲ್ಲರಿಗೂ ಇರುತ್ತದೆ. ಆದರೆ, ಅದಕ್ಕೆ ತೋರುವ ಪ್ರತಿಕ್ರಿಯೆಗಳು ಭಿನ್ನವಾಗಿರುತ್ತವೆ. ಎಲ್ಲೋ ಒಂದು ಕಡೆ ಹೋಗಬೇಕಾಗಿರುತ್ತದೆ ಎಂದಿಟ್ಟುಕೊಳ್ಳಿ… ಅಯ್ಯೋ ಹೋಗಬೇಕಲ್ಲ ಎಂದು ಭಾವಿಸಿದರೆ ಅದು ಯಾತನೆಯಾಗುತ್ತದೆ. ಓ… ಇವತ್ತು ಅಲ್ಲಿಗೆ ಹೋಗಲಿಕ್ಕಿದೆ ಎಂದು ಭಾವಿಸಿದರೆ ಅದು ಸಂತೋಷ ಆಗುತ್ತದೆ.

ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಏನಾದರೂ ಕೆಲಸ ಹೇಳಿದ್ದಾರೆ ಎಂದಿಟ್ಟುಕೊಳ್ಳಿ. ‘ಅವರಿಗೆ ನಾನೇ ಕಾಣೋದು. ನಾನೇ ಯಾಕೆ ಮಾಡ್ಬೇಕು, ಬೇರೆಯವರು ಇಲ್ವಾ,’’ ಎಂದು ಭಾವಿಸಿದರೆ ಅದರಿಂದ ಮನಸು ಕದಡುತ್ತದೆ. ‘ಇಷ್ಟೊಂದು ಜನರಿದ್ದರೂ ನನ್ನಲ್ಲೇ ಹೇಳಿದ್ದಾರಲ್ಲಾ..’ ಅಂಥ ಭಾವಿಸಿದರೆ ನಮ್ಮ ಬಗ್ಗೆಯೇ ಹೆಮ್ಮೆ ಮೂಡುತ್ತದೆ.
ಸವಾಲುಗಳು ಕೂಡಾ ಎಲ್ಲರಿಗೂ ಬರುತ್ತದೆ. ಅದನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಆಧಾರದ ಮೇಲೆ ಪರಿಣಾಮ ನಿರ್ಧಾರವಾಗುತ್ತದೆ. ಸವಾಲನ್ನು ಖುಷಿಯಿಂದ ಸ್ವೀಕರಿಸಿದರೆ ಅದೊಂದು ಅನುಭವವಾಗುತ್ತದೆ. ಬೆನ್ನು ಹಾಕಿ ಕುಳಿತರೆ ಸೋಲೂ ಇಲ್ಲ, ಗೆಲುವೂ ಇಲ್ಲ. ಅನುಭವವೂ ಬೆಳೆಯುವುದಿಲ್ಲ.
ಹೆಚ್ಚಿನವರದ್ದೂ ನನಗೂ ಒಳ್ಳೆಯ ಕಾಲ ಬಂದೇ ಬರುತ್ತದೆ ಎನ್ನುವ ಆಟಿಟ್ಯೂಡ್‌. ಅದಕ್ಕಾಗಿಯೇ ಅವರು ಜಾತಕ ನೋಡುತ್ತಾರೆ. ಗುರು ದೆಸೆ ಯಾವಾಗ, ಶುಕ್ರ ದೆಸೆ ಯಾವಾಗ ಅಂತ ಕಾಯುತ್ತಾರೆ. ಕೆಲವೊಮ್ಮೆ ದೆಸೆಗಳ ಹೆಸರು ಹೇಳಿ ಒಳ್ಳೆಯ ಅವಕಾಶವನ್ನೂ ಮಿಸ್‌ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರಿರುತ್ತಾರೆ, ಅವರಿಗೆ ಪ್ರತಿ ಕ್ಷ ಣವೂ ಶುಕ್ರ ದೆಸೆಯೆ! ಏನೇ ಬಂದರೂ ಸ್ವೀಕರಿಸಲು ಮನಸನ್ನು ಸಜ್ಜುಗೊಳಿಸಿಬಿಟ್ಟರೆ ಪ್ರತಿ ಕ್ಷ ಣವೂ ಅವಕಾಶಗಳಾಗಿ ಪರಿವರ್ತನೆಯಾಗುತ್ತದೆ.

ಸುಮ್ಮನೆ ಆಲೋಚಿಸಿ ನೋಡಿ, ಬದುಕು ಎಂದು ಹಬ್ಬ, ಅದನ್ನು ಪ್ರೀತಿಯಿಂದ ಆಚರಿಸಬೇಕು. ಬದುಕು ಎಂದು ಕನಸು. ಅದನ್ನು ನಾವೇ ಅದ್ಭುತವಾಗಿ ಸಾಕಾರಗೊಳಿಸಬೇಕು. ಬದುಕು ಒಂದು ಹೋರಾಟ, ಅದನ್ನು ಧೈರ್ಯವಾಗಿ ಎದುರಿಸಬೇಕು. ಬದುಕು ಒಂದು ಸುಂದರ ಭಾವಗೀತೆ, ಅದನ್ನು ಖುಷಿಯಿಂದ ಹಾಡುತ್ತಿರಬೇಕು. ಹಾಗೆ ಮಾಡಿದಾಗಲೇ ಅದೊಂದು ನಿತ್ಯ ಉತ್ಸವ.

  • ಪ್ರಶಾಂತ ಭಟ್
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!