ಸಾವಿತ್ರಿ ಬಾಯಿ ಫುಲೆ ಅವರ ಬಾಲ್ಯ ಜೀವನ
ಇವರು ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯ ನೈಗಾಂನ್ ಎಂಬಲ್ಲಿ ಜನಿಸಿದರು. ಇವರ ತಂದೆ ನೇವಸಿ ಪಾಟೀಲ, ಇವರು ಬಾಲ್ಯದಲ್ಲಿರುವಾಗಲೇ ಅಂದರೆ ೮ ನೇ ವಯಸ್ಸಿಗೆ ಶ್ರೀ ಮಹಾತ್ಮಾ ಜ್ಯೋತಿ ಬಾ ಫುಲೆ ಅವರ ಜೊತೆ ವಿವಾಹವಾಯಿತು. ಆಗ ಇವರ ಗಂಡನಿಗೆ ಕೇವಲ ೧೩ ವರ್ಷ ವಯಸ್ಸಾಗಿತ್ತು. ಸಾವಿತ್ರಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿ ಬಾ ಫುಲೆ ಅವರೇ ಗುರುಗಳಾದರು. ೧೮೪೭ ರಲ್ಲಿ ಸಾವಿತ್ರಿಯವರು ಶ್ರೀಮತಿ ಮಿಚೆಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು.
ಆಗ ಅವರಿಗೆ ಕೇವಲ ೧೭ ವರ್ಷ ವಯಸ್ಸಾಗಿತ್ತು. ಆಗ ಅವರು ಮಹಾರಾಷ್ಟ್ರ ರಾಜ್ಯದಲ್ಲಿ ತರಭೇತಿ ಪಡೆದ ಮೊದಲ ಶಿಕ್ಷಕಿಯಾಗಿದ್ದರು.
ಶಿಕ್ಷಕಿಯಾಗಿ ಸಾವಿತ್ರಿ ಬಾಯಿ ಫುಲೆ:
ಮೊದಲು ಇವರು ಶ್ರೀ ಭಿಡೆಯವರ ಮನೆಯಲ್ಲಿ ಆರಂಭವಾದ ಕನ್ಯಾಶಾಲೆಯ ಮುಖ್ಯಗುರುಗಳಾದರು. ಅಂದು ಹಿಂದೂ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆಯಿತ್ತು. ಇವರು ಪಾಠಶಾಲೆಗೆ ಹೊರಟಾಗ ಕೆಲವರು ಕೇಕೆ ಹಾಕಿ ನಗುತ್ತಿದ್ದರು. ಅವರ ಮೇಲೆ ಕೆಸರು, ಸಗಣಿ, ಕಲ್ಲುಗಳನ್ನು ಎಸೆಯುತ್ತಿದ್ದರು. ತೂರುವ ಕಲ್ಲುಗಳನ್ನು ಹೂವುಗಳೆಂದು ಭಾವಿಸಿ ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಮತ್ತೊಂದು ಸೀರಯುಟ್ಟು ಪಾಠಕ್ಕೆ ಸಿದ್ಧರಾಗುತ್ತಿದ್ದರು. ಹೀಗೆ ೧೮೪೮ ರಿಂದ ೧೮೫೨ ರ ವರೆಗೆ ಒಟ್ಟು ೧೮ ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದಿದ್ದರು. ಈ ಸಾಧನೆಯನನು ಮೆಚ್ಚಿ ಬ್ರಿಟಿಷ್ ಸರ್ಕಾರ ಇವರಿಗೆ ಇಂಡಿಯಾಸ್ ಫಸ್ಟ್ ಲೇಡಿ ಟೀಚರ್’ ಬಿರುದು ಕೊಟ್ಟಿದೆ.
ಲೇಖಕಿಯಾಗಿ ಸಾವಿತ್ರಿ ಬಾಯಿ ಫುಲೆ
೧೮೫೪ ರಲ್ಲಿ ಇವರು ಕಾವ್ಯಫೂಲೆ ಎಂಬ ಕವನ ಸಂಕಲನ ಬರೆದರು ಅದರ ಅರ್ಥ ಕಾವ್ಯ ಅರಳಿದೆ. ಈ ಕೃತಿಯನ್ನು ಅಭಂಗ್ ಶೈಲಿಯಲ್ಲಿ ರಚಿಸಲಾಗಿದೆ. ಈ ಕೃತಿಯಿಂದ ಇವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆದಿದ್ದಾರೆ.
೧೮೯೧ ರಲ್ಲಿ ‘ಭವನಕಾಶಿ ಸುಭೋಧ ರತ್ನಾಕರ’ ಎಂಬ ಕೃತಿ ರಚಿಸಿದರು ಇದರ ಅರ್ಥ ಅಪ್ಪಟ ಮುತ್ತುಗಳ ಸಾಗರ ಎಂದು ಇದು ಜ್ಯೋತಿ ಬಾಫುಲೆ ಅವರ ಕುರಿತ ಬಯೋಗ್ರಫಿ ಕೂಡಾ.
೧೮೯೨ ರಲ್ಲಿ ಜ್ಯೋತಿ ಬಾ ಫುಲೆ ಅವರ ಭಾಷಣಗಳ ಸಂಪಾದಿತ ಕೃತಿ ರಚನೆಯಾಯಿತು.
ಇವರ ನಾಲ್ಕನೇ ಕೃತಿ ಕರ್ಜೆ ಅಂದರೆ ಸಾಲ. ಇದು ಇವರ ಸಾಮಾಜಿಕ ಕಳಕಳಿಯ ಕೃತಿಯಾಗಿದೆ.
ಸಾಮಾಜಿಕ ಸುಧಾರಕಿಯಾಗಿ ಸಾವಿತ್ರಿ ಬಾಯಿ ಫುಲೆ:
೧೫೦ ವರ್ಷಗಳ ಹಿಂದೆಯೇ ಶಾಲೆ ಬಿಡದ ಮಕ್ಕಳಿಗಾಗಿ ವಿದ್ಯಾರ್ಥಿವೇತನ / ಸ್ಕಾಲರ್ಷಿಪ್ ಜಾರಿಗೊಳಿಸಿದರು.
ವಿಧವೆಯರಿಗೆ ತಲೆ ಬೋಳಿಸುವ ಪದ್ಧತಿ ಖಂಡಿಸಿದರು.
ವಿವಾಹಬಾಹಿರವಾಗಿ ಮಕ್ಕಳನ್ನು ಹೆರುವವರಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿದರು.
ಶಿಶುಕೇಂದ್ರ ಸ್ಥಾಪಿಸಿದರು.
೧೮೫೫ ರಲ್ಲಿ ಕೂಲಿ ಕಾರ್ಮಿಕರಿಗೆ ರಾತ್ರಿ ಪಾಳೆಯದಲ್ಲಿ ಶಾಲೆ ತೆರೆದರು.
೧೮೬೮ ರಲ್ಲಿ ದಲಿತರಿಗೆ ಮನೆಯ ಕುಡಿಯುವ ನೀರಿನ ಟ್ಯಾಂಕ್ ಬಿಟ್ಟುಕೊಟ್ಟರು.
ಬ್ರಾಹ್ಮಣ ವಿಧವೆಯ ಮಗುವನ್ನು ದತ್ತು ಪಡೆದರು.
ಪಶ್ಚಿಮ ಮಹಾರಾಷ್ಟçದ ಕ್ಷಾ/ ಬರಗಾಲ ಪ್ರದೇಶಗಳಲ್ಲಿ ೨ ವರ್ಷ ಸೇವೆ ಸಲ್ಲಿಸಿದರು.
ಸಾವಿತ್ರಿ ಬಾಯಿ ಫುಲೆ ಇವರ ಪ್ರಸ್ತುತತೆ:
ಇಂದು ಶಿಕ್ಷಣ ಎಲ್ಲರಿಗೂ ಉಚಿತವಾಗಿ ಸಿಗುತ್ತಿದೆ. ಸಾಕಷ್ಟು ಸೌಲಭ್ಯಗಳೂ ಇವೆ. ಶಿಕ್ಷಣ ನೀಡುವ ಜನರ ಮನಸ್ಥಿತಿಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ೧೮೪ ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗಿಲ್ಲ. ಅದ್ಯಾಗ್ಯು ಕೂಡಾ ಇಂದಿಗು ಸಾಕಷ್ಟು ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅದಕ್ಕೆ ಕಾರಣ ನಾವು ನೀವು ಮತ್ತು ಎಲ್ಲರೂ ಕೂಡಾ. ಇಂದಿಗೂ ಕೂಡಾ ಸಾವಿತ್ರಿ ಬಾಯಿ ಫುಲೆ ಮತ್ತು ಜ್ಯೋತಿ ಬಾಫುಲೆ ಅವರಂತ ಶಿಕ್ಷಕರ, ಸಮಾಜ ಸುಧಾರಕರ, ದಾರ್ಶನಿಕರ, ಮಾನವೀಯ ಮನಸ್ಸುಗಳ ಅಗತ್ತತೆ ಇದೆ. ಅವರು ಕೆರಳಬೇಕಿದೆ. ಅರಳಬೇಕಿದೆ. ಅಂದಾಗಲೇ ಅಂದು ಇವರ ಕಂಡ ಕನಸುಗಳು ನನಸಾಗಲು ಸಾಧ್ಯ.
ಸಾವಿತ್ರಿ ಬಾಯಿ ಫುಲೆ ಅವರ ಕೊನೆಯ ದಿನಗಳು :
ಶಿಕ್ಷಕಿ, ಸಂಚಾಲಕಿ, ಮುಖೋಪಾಧ್ಯಾಯಿನಿ, ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ, ಭಾರತದ ಮೊಟ್ಟ ಮೊದಲ ಶಿಕ್ಷಕಿಯಗಿ, ದಣಿವರಿಯದ ಸತ್ಯಶೋಧಕಿಯಗಿ, ಆಧುನಿಕ ಶಿಕ್ಷಣದ ತಾಯಿಯಾಗಿ ಬದುಕಿದ ಧೀಮಂತ ಮಹಿಳೆ ಸಾವಿತ್ರಿ ಬಾಯಿ ಫುಲೆಯವರು ೧೮೯೭ ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಪ್ಲೇಗ್ರೋಗಕ್ಕೆ ತುತ್ತಗಿ ತೀರಿಕೊಂಡರು. ಅಲ್ಲಿಗೆ ಭಾರತ ಮಾತೆಯ ಕೀರ್ತಿ ಪತಾಕೆ ಹಾರಿಸಿದ್ದ ಒಂದು ಹೆಮ್ಮರ ಬುಡಮೇಲಾಯಿತು.

- ಡಾ. ಪ್ರಸನ್ನ ದೇವರಮಠ ಅನಿಲಕುಮಾರ್, ಮಾಗಳ
ಪದವೀಧರ ಪ್ರಾಥಮಿಕ ಶಿಕ್ಷಕರು
ಸ.ಹಿ.ಪ್ರಾ.ಶಾಲೆ ಮುದೇನೂರು
ತಾ. ಹೂವಿನ ಹಡಗಲಿ ಜಿ.ವಿಜಯನಗರ.




















