ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪರಮ ತಪಸ್ವಿ ವಿದ್ವಾಂಸ ಮತ್ತು ಕರುಣಾಮೂರ್ತಿ ಶ್ರೀ ಗುರುಬಸವ ಮಹಾಸ್ವಾಮಿಗಳು

ಸಕಲರಿಗೆ ಲೇಸನೇ ಬಯಸುವ ಆಕಾಂಕ್ಷಿಗಳಾದ ಹನ್ನೆರಡನೆಯ ಶತಮಾನದ ಶಿವಶರಣರು ಕಲ್ಯಾಣ ಕ್ರಾಂತಿಯ ನಂತರ ತಮ್ಮ ಅಮೂಲ್ಯ ನುಡಿ ಸಂಪತ್ತಾದ ವಚನಗಳ ಓಲೆ ಕಟ್ಟುಗಳನ್ನು ರಕ್ಷಿಸಲು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಕರ್ನಾಟಕದ ನಾಲ್ಕು ಮೂಲೆಗಳಿಗೆ ಗುಂಪು ಗುಂಪಾಗಿ ಹೊರಟರು. ಅಕ್ಕನಾಗಮ್ಮ ಮತ್ತು ಚನ್ನ ಬಸವಣ್ಣನವರ ಜೊತೆಗೆ ಕೆಲ ಶರಣ ಶರಣೆಯರು ಉಳವಿಯ ಕಡೆ ಸಾಗಿದರೆ, ಮತ್ತೆ ಕೆಲವರು ಆಂಧ್ರ ನಾಡಿನ ಕಡೆ ಹೊರಟರು. ಇನ್ನು ಕೆಲವರು ದಕ್ಷಿಣದ ಚಿಕ್ಕಮಗಳೂರು ಸಕಲೇಶಪುರದ ಕಡೆ ಸಾಗಿದರು. ಮತ್ತೆ ಕೆಲವರು ತಮಿಳುನಾಡಿನ ಗಡಿ ಭಾಗದ ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟನಾಡಿನ ಕಡೆಗೆ ನಡೆದರು.
ಈ ರೀತಿ ನಾಡಿನ ನಾನಾ ಕಡೆ ಚದುರಿ ಹೋದ ಶರಣರಲ್ಲಿ ಒಬ್ಬರಾದ ಗಂಗಾಧರಯ್ಯನವರು ದಕ್ಷಿಣದ ಕಡೆ ಸಾಗಿ ಬಂದು ಈಗಿನ ಶಿವಮೊಗ್ಗ ನಗರಕ್ಕೆ ಸಮೀಪವಿರುವ ಯಲವಟ್ಟಿ ಗ್ರಾಮದ ಪಕ್ಕದಲ್ಲಿರುವ ಹಸಿರು ಪರಿಸರದ ನಡುವೆ ತಲೆ ಎತ್ತಿ ನಿಂತಿರುವ ಚಿಕ್ಕ ಬೆಟ್ಟದ ಮೇಲೆ ಇದ್ದ ಗವಿಯೊಂದರಲ್ಲಿ ನೆಲೆ ನಿಂತು ಅನುಷ್ಠಾನ ಮಾಡುತ್ತಿದ್ದರು. ಅವರು ಪೂಜೆಯನ್ನು ಮಾಡುತ್ತಿದ್ದ ಸಮಯದಲ್ಲಿ ಎರಡು ಪುನುಗಿನ ಬೆಕ್ಕುಗಳು ಆ ಬೆಟ್ಟದ ಗವಿಯಲ್ಲಿದ್ದವು. ಅವುಗಳಲ್ಲಿ ಒಂದು ಗಂಟೆ ಬಾರಿಸುವ ಮತ್ತೊಂದು ಜಾಗಟೆ ಸದ್ದು ಮಾಡುತ್ತಾ ಅಲ್ಲಿ ಅನುಷ್ಠಾನ ಮಾಡುತ್ತಿದ್ದ ಗುರುಗಳು ಮಮತೆ ಯಿಂದ ನೀಡುತ್ತಿದ್ದ ಹಾಲಿನ ಪ್ರಸಾದವನ್ನು ಸೇವಿಸುತ್ತಿದ್ದವು ಎಂಬುದು ಅಲ್ಲಿಯ ಗ್ರಾಮದ ಹಿರಿಯರು ತಲೆ ತಲಾಂತರದಿಂದ ಕೇಳಿ ಬಂದಿದ್ದ ಕಥೆಯಾಗಿತ್ತು. ಆದುದರಿಂದ ಗುರುಗಳು ಇದ್ದ ಮಠ ಕಲ್ಲಿನ ಗವಿಮಠವಾಗಿದ್ದುದು ಬೆಕ್ಕಿನಕಲ್ಮಠ ಎಂದು ಹೆಸರಾಯಿತು.
ಇದು ಗ್ರಾಮದವರು ಹೇಳಿ ಕೇಳಿ ಬಂದ ಜನಜನಿತ ಕಥೆಯಾದರೆ, ಇತಿಹಾಸ ಸಂಶೋಧಕರು ಮತ್ತೊಂದು ರೀತಿಯಲ್ಲಿ ತಿಳಿಸುತ್ತಾರೆ. ಬಹುಪೂರ್ವದಲ್ಲಿ ಬೌದ್ಧ ಭಿಕ್ಷುಗಳು ಇಲ್ಲಿ ಧ್ಯಾನ ಮಾಡುತ್ತಿದ್ದದ್ದು ಇದಾಗಿತ್ತು.
ಆ ಬೌದ್ಧ ಭಿಕ್ಷುಗಳು ಇದ್ದ ಸ್ಥಳ ಇದಾಗಿದ್ದು ಗ್ರಾಮಸ್ಥರ ಮಾತಿನಲ್ಲಿ ಭಿಕ್ಷುಗಳು ಇದ್ದ ಮಠ ಭಿಕ್ಷು ಬಿಕ್ಕು ಎಂದಾಗಿ ಕಡೆಗೆ ಬೆಕ್ಕಿನ ಕಲ್ಮಠ ಎಂದಾಯಿತು ಎಂದು ಹೇಳುವಲ್ಲಿ ಈ ಮಠದ ಅಸ್ತಿತ್ವದ ಗುರುತನ್ನು ಬುದ್ಧನ ಕಾಲಕ್ಕೆ ಕೊಂಡೊಯ್ಯುವವರು ಇದ್ದಾರೆ.

ಈ ಮಠದ ಪರಂಪರೆ ಆಲ್ಲಮ ಪ್ರಭುಗಳು ಶೂನ್ಯಪೀಠದ ಹಿನ್ನಲೆಯಲ್ಲಿ ಅನುಭವ ಮಂಟಪದ ಶೂನ್ಯ ಪೀಠದ ಮೊದಲ ಗುರು ಅಥವಾ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭುವಿನ ಪರಂಪರೆಗೆ ಸೇರಿದ್ದಾಗಿದ್ದು, ನಂತರದ ಗುರು ಶಿವಯೋಗಿ ಸಿದ್ದರಾಮರ ಅಧ್ಯಕ್ಷತೆಯಲ್ಲಿ ಮುಂದುವರೆದ ಶೂನ್ಯಪೀಠದ ಪರಂಪರೆಗೆ ಸೇರಿದುದ್ದಾಗಿದೆ. ಈ ಪರಂಪರೆಯಲ್ಲಿ ಬಂದ ೧೪ನೇ ಗುರುಗಳಾಗಿದ್ದವರು ಶ್ರೀ ಗುರುಬಸವ ಸ್ವಾಮಿಗಳವರು. ಇವರ ಕಾಲದಲ್ಲಿಯೇ ಶಿವಮೊಗ್ಗ ನಗರದ ಭಕ್ತರಿಗೆ ದರ್ಶನ ಆಶೀರ್ವಾದ ಮತ್ತು ಶಿವಮೊಗ್ಗದ ಸದ್ಭಕ್ತರಿಗೆ, ಸಮಾಜದವರಿಗೆ ಸನ್ಮಾರ್ಗದ ಮಾರ್ಗದರ್ಶನ ಮಾಡಲೋಸುಗ ಶಿವಾನುಭವ ಗೋಷ್ಟಿಗಳನ್ನು ಏರ್ಪಡಿಸುವ ಕಾರಣದಿಂದ ತುಂಗಾತೀರದ ದಡದಲ್ಲಿ ಬೆಕ್ಕಿನಕಲ್ಮಠವನ್ನು ಸ್ಥಾಪಿಸಿದರು. ಇಂದು ಯೋಗ್ಯ ಸಾಮಾಜಿಕರಾಗಿ ಬದುಕುತ್ತಿದ್ದಾರೆ. ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರತಿ ವರ್ಷ ನೂರಾರು ಶಿಕ್ಷಕ – ಶಿಕ್ಷಕಿಯರು ತಯಾರಾಗುತ್ತಿದ್ದಾರೆ. ಇಲ್ಲಿರುವ ವಸ್ತು ಸಂಗ್ರಹಾಲಯ ಇತಿಹಾಸ, ಪರಂಪರೆಯನ್ನು ಇಂದಿನ ನವ ಪೀಳಿಗೆಗೆ ಪರಿಚಯಿಸುತ್ತಿದೆ. ಇತ್ತೀಚೆಗೆ ಈಗಿನ ಗುರುಗಳು ಶ್ರೀಮಠದ ಪರಂಪರೆಯನ್ನು ಸೇರಿದ್ದಾಗಿದ್ದು ನಂತರದ ಗುರು ಶಿವಯೋಗಿ ಸಿದ್ಧರಾಮರ ಅಧ್ಯಕ್ಷತೆಯಿಂದ ಮುಂದುವರಿದ ಶೂನ್ಯ ಪೀಠ ಪರಂಪರೆಗೆ ಸೇರಿದುದಾಗಿದೆ.
ಈ ಪರಂಪರೆಯಲ್ಲಿ ಬಂದ ೧೪ನೆಯ ಗುರುಗಳಾಗಿದ್ದವರು ಶ್ರೀ ಗುರುಬಸವ ಸ್ವಾಮಿಗಳವರು.
ಇವರ ಕಾಲದಲ್ಲಿಯೆ ಶಿವಮೊಗ್ಗ ನಗರದ ಭಕ್ತರಿಗೆ ದರ್ಶನಾಶೀರ್ವಾದ ಮತ್ತು ಶಿವಮೊಗ್ಗದ ಸದ್ಭಕ್ತರಿಗೆ, ಸಮಾಜದದವರಿಗೆ ಸನ್ಮಾರ್ಗದ ಮಾರ್ಗದರ್ಶನ ಮಾಡಲೋಸುಗ ಶಿವಾನುಭವ ಗೋಷ್ಠಿಗಳನ್ನು ಏರ್ಪಡಿಸುವ ಕಾರಣದಿಂದ ತುಂಗಾ ತೀರದ ದಡದಲ್ಲಿ ಬೆಕ್ಕಿನ ಕಲ್ಮಠವನ್ನು ಸ್ಥಾಪಿಸಿದರು.
ಸಂಸ್ಕೃತ ವಿದ್ವತ್ ಗೋಷ್ಠಿಯ ಅಧ್ಯಕ್ಷರು ಶ್ರೀ ಗುರು ಬಸವ ಸ್ವಾಮಿಗಳು ಕನ್ನಡ ಮತ್ತು ಸಂಸ್ಕೃತ ಉಭಯ ಭಾಷೆಗಳಲ್ಲಿ ವಿದ್ವತ್‌ಅನ್ನು ಸಂಪಾದಿಸಿದವರಾಗಿದ್ದರು. ಅವರು ಕಾಶಿಯಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡಿದ ಮೇಧಾವಿ ಪಂಡಿತರಾಗಿದ್ದರು. ಉಭಯ ಭಾಷಾ ಪ್ರವೀಣರಾದ ಶ್ರೀಗಳನ್ನು ಶಿವಮೊಗ್ಗ ನಗರದ ಸಂಸ್ಕೃತ ವಿದ್ವಾಂಸರು ಕೋಟೆ ಪ್ರದೇಶದ, ತುಂಗಾತೀರದ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಆಗಾಗ ನಡೆಯುತ್ತಿದ್ದ ಬ್ರಾಹ್ಮಣ ಪಂಡಿತೋತ್ತಮರ ಸಂಸ್ಕೃತ ವಿದ್ವಾಂಸರು ಸೇರುತ್ತಿದ್ದ ವಿದ್ವತ್ ಗೋಷ್ಟಿಯ, ವಿದ್ವತ್ ಚರ್ಚಾ ಸ್ಪರ್ಧೆಗಳಲ್ಲಿ ಶ್ರೀ ಗುರುಬಸವ ಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಿಕೊಂಡು ಗೋಷ್ಠಿಗಳನ್ನು ಸುಸೂತ್ರವಾಗಿ ತಮ್ಮ ಘನ ವಿದ್ವತ್‌ನ ಅಧ್ಯಕ್ಷೀಯ ಭಾಷಣದಿಂದ ನಾಡಿನ ನಾನಾ ಕಡೆಯಿಂದ ಬರುತ್ತಿದ್ದ ಸಂಸ್ಕೃತ ವಿದ್ವಾಂಸರ ಮೆಚ್ಚುಗೆಯನ್ನು ಪಡೆದಿದ್ದರೆಂದು ನಮ್ಮ ತಾತನಿಂದ ನಾನು ಕೇಳಿ ತಿಳಿದಿದ್ದೇನೆ.

ಮಾಸಿಕ ಶಿವಾನುಭವಗಳ ಗೋಷ್ಠಿಗಳ ಏರ್ಪಾಟು : ಶತಮಾನದ ಹಿಂದೆಯೆ ಶ್ರೀ ಗುರುಬಸವ ಸ್ವಾಮಿಗಳು ಆನಂದಪುರದ ಮುರುಘಾಮಠ ಹಾಗೂ ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿಗಳನ್ನು ಏರ್ಪಡಿಸಿ ನಡೆಸಿಕೊಂಡು ಬರುವುದರ ಮೂಲಕ ಗ್ರಾಮೀಣ ಹಾಗೂ ನಗರದ ನಾಗರಿಕ ಜನರಲ್ಲಿ ಶರಣರು, ದಾರ್ಶನಿಕರು ತಿಳಿಸಿದ ಸಚ್ಚಾರಿತ್ರ್ಯದ, ಸದಾಚಾರದ ಬದುಕನ್ನು ನಡೆಸುವ ಸನ್ಮಾರ್ಗವನ್ನು ತಿಳಿಸುತ್ತಿದ್ದರು. ನಾಡಿನ ಘನ ವಿದ್ವಾಂಸರನ್ನು ಆಚಾರವಂತ ಗುರುಗಳನ್ನು ಗೋಷ್ಠಿಗೆ ಕರೆಸಿಕೊಂಡು ಜನರಿಗೆ ಜಾತಿ, ಮತ, ಲಿಂಗ, ಮೇಲು-ಕೀಳು ಮುಂತಾದ ಸಾಮಾಜಿಕ ಪಿಡುಗುಗಳನ್ನು ನಿವಾರಿಸುವ ಎಲ್ಲಾ ಜನರೂ ಸ್ನೇಹ ಸೌಹಾರ್ದತೆಯಿಂದ ಬಾಳುವ ಪರಿಯನ್ನು ತಿಳಿಸುತ್ತಿದ್ದರು. ಶ್ರೀ ಗುರುಬಸವಸ್ವಾಮಿಗಳ ಆಶೀರ್ವಚನವಂತೂ ಎಲ್ಲಾ ಜನರನ್ನೂ ಅರಿವಿನ ತಿಳಿ ಜಲದಿಂದ ಅಂತಃರಂಗ – ಬಹಿರಂಗವನ್ನು ಸ್ವಚ್ಛಗೊಳಿಸುವಂತೆ ಇರುತ್ತಿತ್ತು ಎಂಬುದನ್ನು ಹಲವು ಹಿರಿಯರಿಂದ ಕೇಳಿ ತಿಳಿದು ಧನ್ಯತಾ ಭಾವದಿಂದ ತುಂಬಿದ್ದೇನೆ.
ಶಿವಮೊಗ್ಗದಲ್ಲಿ ಮಾಸಿಕ ಶಿವಾನುಭವಗೋಷ್ಠಿ ಪ್ರತಿ ಹುಣ್ಣಿಮೆ ದಿನ ನಡೆದರೆ ಆನಂದಪುರದ ಶ್ರೀ ಮುರುಘಾಮಠದಲ್ಲಿ ಪ್ರತಿ ಅಮಾವಾಸ್ಯೆಗೊಮ್ಮೆ ನಡೆಯುತ್ತಿತ್ತು. ಆನಂದಪುರದ ಶ್ರೀಮಠವು ಕೆಳದಿ ಅರಸರ ಭಕ್ತಿ ಶ್ರದ್ಧೆಗಳಿಗೆ ಒಳಗಾಗಿ ಶ್ರೀಗುರುಗಳನ್ನು ಅವರು ರಾಜಗುರುಗಳೆಂದೆ ಗೌರವಿಸುತ್ತಿದ್ದುದು ಇತಿಹಾಸವಾಗಿದೆ. ಗುರುಗಳಿಂದ ಮಾರ್ಗದರ್ಶನ ಪಡೆದ ಕೆಳದಿ ಅರಸು ಮನೆತನ ತನ್ನ ಶೌರ್ಯ, ಸಾಹಸ, ದಾನ, ಧರ್ಮ ಮತ್ತು ಸಾಮಾಜಿಕ ಕಾರ್ಯಗಳಿಂದ ಉಳುವ ಕೃಷಿಕರಿಂದ ಮೊದಲುಗೊಂಡು ವಿದ್ಯಾಭ್ಯಾಸದ, ಅಧ್ಯಯನ, ಶ್ರದ್ಧಾಭಕ್ತಿಗಳ ದ್ಯೋತಕವಾಗಿ ಬೆಳಗಿರುವುದು. ಕೆಳದಿ ಅರಸು ಮನೆತನದ ಶಿವಪ್ಪ ನಾಯಕ, ಕೆಳದಿ ಚೆನ್ನಮ್ಮ ಆದಿಯಾಗಿ ಹಲವರು ತಮ್ಮ ಶೌರ್ಯ, ದಯೆ ಮತ್ತು ಧರ್ಮ ಕಾರ್ಯಗಳಿಗೆ ಎಂದಿಗೂ ನೆನಪಿರುವ ವ್ಯಕ್ತಿಗಳಾಗಿದ್ದಾರೆ.
ಶಿವಮೊಗ್ಗ ಹಾಗೂ ಆನಂದಪುರದ ಮಠಗಳಲ್ಲಿ ನಡೆಯುತ್ತಿದ್ದ ಮಾಸಿಕ ಶಿವಾನುಭವ ಗೋಷ್ಠಿಗಳಿಗೆ ದಾವಣಗೆರೆಯ ಮುರುಘಾಮಠದ ಶ್ರೀ ಮೃತ್ಯುಂಜಯ ಸ್ವಾಮಿಗಳ ತಪ್ಪದೆ ಹಾಜರಾಗಿ ಶ್ರೀ ಗುರುಬಸವ ಸ್ವಾಮಿಗಳಿಂದ ಮಾರ್ಗದರ್ಶನ ಪಡೆದು ಮುಂದೆ ಅವರು ಧಾರವಾಡದ ಶ್ರೀ ಮುರುಘಾಮಠದಲ್ಲಿ ಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಿದ್ದರು. ಅಲ್ಲದೆ
`ಶಿವಾನುಭವ’ ಎಂಬ ಹೆಸರಿನ ಕನ್ನಡ ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಾ ಅದರ ಮೂಲಕ ಶರಣರ, ಶರಣೆಯರ ವಿಚಾರಧಾರೆಯನ್ನು ವಿದ್ವಾಂಸರ, ಬಲ್ಲವರ ಲೇಖನಗಳ ಮೂಲಕ ಸಾಮಾಜಿಕರಿಗೆ ತಲುಪಿಸುತ್ತಿದ್ದರು. ಆ ಪತ್ರಿಕೆ ಇಂದಿಗೂ ಧಾರವಾಡದ ಮುರುಘಾಮಠದಿಂದ ಪ್ರಕಟವಾಗುತ್ತಿದೆ.

ವಿದ್ಯಾದಾನದ ಮಹತ್ವ ಅರಿತ ವಿದ್ಯಾ ಪ್ರೇಮಿ ಶ್ರೀಗಳು :
ವಿದ್ಯೆ ಮತ್ತು ವಿದ್ಯಾದಾನದ ಮಹತ್ವವನ್ನು ಬಹು ಚೆನ್ನಾಗಿ ಅರಿತವರಾಗಿದ್ದರು. ಸ್ವಾಮಿಗಳು ಅಕ್ಷರದ ಮತ್ತು ಕಾಯಕದ ನಿಷ್ಠೆಯನ್ನು ಅವರು ಯಾವಾಗಲೂ ಹೇಳುತ್ತಿದ್ದರು. ಜನರು ಕಾಯಕ ಮಾಡಿ ಶ್ರಮಜೀವಿಗಳಾಗಿ ಬಾಳಬೇಕು. ಕಾಯಕ ಮಾಡಲು ಕೌಶಲವಿರಬೇಕು. ಕೌಶಲ ಕರಗತವಾಗುವುದು ವಿದ್ಯೆಯಿಂದ ಮಾತ್ರ. ಜನರಿಗೆ ಅನ್ನವನು ಕೊಟ್ಟರೆ ಸಾಲದು ಅನ್ನವನು ಗಳಿಸುವ ವಿದ್ಯೆಯನ್ನು ಕಲಿಸಬೇಕು ಎಂಬುದು ಅವರ ವಿಚಾರವಾಗಿತ್ತು. ಅದಕ್ಕಾಗಿ ಅವರು ಯಲವಟ್ಟಿ, ಶಿವಮೊಗ್ಗ, ಆನಂದಪುರದಲ್ಲಿ ಶಾಲೆಗಳನ್ನು ತೆರೆದರು. ಗ್ರಾಮೀಣ ಪರಿಸರದಲ್ಲಿ ವಸತಿ ಶಾಲೆಗಳನ್ನು ತೆರೆದರು. ಅನಾಥಾಲಯಗಳಲ್ಲಿ ವಿದ್ಯಾರ್ಥಿಗಳಿದ್ದು, ಗುರುಗಳ ವಾತ್ಸಲ್ಯದಲ್ಲಿ ಬೆಳೆದು ಬಂದರು. ಶ್ರೀ ಮಠದಲ್ಲಿ ಜಾತಿ-ಮತ ಬೇಧವಿಲ್ಲದೆ ಕ್ರಿಶ್ಚಿಯನ್, ಮುಸ್ಲಿಂ, ದಲಿತ ಮುಂತಾಗಿ ಸಕಲರೂ ಸಹಪಂಕ್ತಿ ಭೋಜನ ಸೇವಿಸಿ, ಜೊತೆ ಜೊತೆಯಲ್ಲಿ ಕಲಿತು ನಾಡಿನ ನಾನಾ ಸ್ಥಳಗಳಲ್ಲಿ ಇಂದು ಯೋಗ್ಯ ರೀತಿಯಿಂದ ಸಾಮಾಜಿಕವಾಗಿ ಬದುಕುತ್ತಿದ್ದಾರೆ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷ ನೂರಾರು ಶಿಕ್ಷಕ- ಶಿಕ್ಷಕಿಯರು ತಯಾರಾಗುತ್ತಿದ್ದಾರೆ. ಇಲ್ಲಿರುವ ವಸ್ತು ಸಂಗ್ರಹಾಲಯ ಇತಿಹಾಸ ಪರಂಪರೆಯನ್ನು ಇಂದಿನ ನವ ಪೀಳಿಗೆಗೆ ಪರಿಚಯಿಸುತ್ತಿದೆ. ಇತ್ತೀಚೆಗೆ ಈಗಿನ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳವರು ಶ್ರೀಮಠದ ಪರಂಪರೆಯನ್ನು ಮುಂದುವರೆಸಿಕೊಂಡು ಬಂದು ಆಯುರ್ವೇದ ಚಿಕಿತ್ಸಾಲಯ ಒಂದನ್ನು ಪ್ರಾರಂಭಿಸಿರುವರು.

ನೂರೆಂಟು ಪುಷ್ಪ ಪೂಜೆ :
ಅದೊಂದು ದಿನ ಶ್ರೀಗಳವರು ಜಳಕ ಪೂರೈಸಿ ಪೂಜೆಗೆ ಬಂದು ಕೂತರು. ಶಿಷ್ಯ ಹೂವಿನ ಪುಟ್ಟಿಯಲ್ಲಿ ನೋಡಿದರೆ ಹೂವುಗಳು ಕೆಲವೇ ಕೆಲವಿವೆ! ಹೂಗಳ ಕೊರತೆಯನ್ನು ಗುರುಗಳಲ್ಲಿ ಹೇಗೆ ಅರಿಕೆ ಮಾಡುವುದು ಎಂದು ಚಿಂತಿಸುತ್ತ ಬೇಗ ಹೋಗಿ ಹೂ ತರಲು ಹೊರಟ ಶಿಷ್ಯನ ಸ್ಥಿತಿಯನ್ನು ಮನಗಂಡ ಗುರುಗಳು,`ಚಿಂತೆ ಮಾಡಬೇಡ, ಶಿವ ನಡೆಸುತ್ತಾನೆ ಎಂದು ಪೂಜೆಗೆ ಕೂತರು. ಗುರುಗಳು ಶಿವಲಿಂಗದ ಮೇಲೆ ಒಂದು ಪುಷ್ಪ ಧರಿಸುವಲ್ಲಿಯೆ ಭಕ್ತರೊಬ್ಬರು ಒಂದು ಬುಟ್ಟಿ ತುಂಬಾ ಹೂತಂದು ಶಿಷ್ಯನ ಕಡೆ ಕೊಟ್ಟರು. ಶಿಷ್ಯನು ತಂದ ಹೂವಿನ ಪುಟ್ಟಿಯಿಂದ ನೂರೆಂಟು ಪುಷ್ಪಗಳ ಅರ್ಚನೆ ಅದೂ ನೆರವೇರಿತು!

ಯೋಗದಾಗೆ ಎಲ್ಲಾ ಐತೆ!
ಶ್ರೀಗುರುಬಸವ ಸ್ವಾಮಿಗಳು ವಿದ್ವಾಂಸರು, ವಾಗ್ಮಿಗಳು ಆಗಿರುವಂತೆಯೇ ಪರಮ ತಪಸ್ವಿಗಳೂ ಆಗಿದ್ದರು. ಒಮ್ಮೆ ಅವರು ೧೦೪ ಡಿಗ್ರಿ ಜ್ವರದ ತಾಪದಿಂದ ಅವರ ಮೈ ಎಲ್ಲಾ ಬೆಂಕಿಯತಾಗಿತ್ತು. ಆದರೂ ವೈದ್ಯರು ಸ್ನಾನ ಮಾಡಬಾರದು ಎಂದು ತಿಳಿಸಿ ಉಪಚರಿಸಿ ಅತ್ತ ಹೋದರು. ಶ್ರೀಗಳು ಸ್ನಾನ ಅನುಷ್ಠಾನ ನಿಲ್ಲಿಸಲು ಒಪ್ಪಲಿಲ್ಲ. ತಮ್ಮ ಕೈಯಲ್ಲಿದ್ದ ಬೆತ್ತಕ್ಕೆ ತಮ್ಮ ಮೈಯಲ್ಲಿದ್ದ ಜ್ವರವನ್ನು ವರ್ಗಾಯಿಸಿ ಸ್ನಾನ ಜಪ, ಪೂಜಾದಿಗಳನ್ನು ಮುಗಿಸಿ, ಗಂಜಿ ಪ್ರಸಾದ ಸೇವಿಸಿದರು. ಶ್ರೀಗಳು ಇಷ್ಟೆಲ್ಲಾ ಮಾಡುವಾಗ ಜ್ವರದ ತಾಪದಿಂದ ಬಾಗಿಲ ಹೊರಗಿದ್ದ ಬೆತ್ತ ಬಿಸಿಯಾಗಿ ನಡುಗುತ್ತಿತ್ತಂತೆ. ನಂತರ ವಾಪಸ್ಸು ಜ್ವರವನ್ನು ತಾವು ಆಹ್ವಾನಿಸಿಕೊಂಡು ಕಂಬಳಿ ಹೊದ್ದು ವಿಶ್ರಾಂತಿ ಪಡೆದರಂತೆ ! `ಯೋಗದಾಗೆ ಎಲ್ಲಾ ಐತೆ’ ಎನ್ನುವ ಮಾತು ನೆನಪಾಯಿತು.

ಕರುಣಾಮೂರ್ತಿ,
ಜೀವ ಪ್ರೀತಿಯ ಖನಿ :
ಒಮ್ಮೆ ತುಂಗಾನದಿಯ ಆಚೆಯ ದಡದ ಮಠಕ್ಕೆ ಸಮೀಪದ ಗ್ರಾಮದಲ್ಲಿ ಜಾನುವಾರುಗಳಲ್ಲಿ ಕಾಯಿಲೆ ಕಾಣಿಸಿಕೊಂಡಿತು. ಜನರಿಗೂ ಸೋಂಕು ತಗುಲಿ ಎಲ್ಲರೂ ಜ್ವರ, ವಾಂತಿಯಿಂದ ನರಳುತ್ತಾ ಕೊರಗತೊಡಗಿದರು. ಶ್ರೀ ಗುರುಬಸವ ಸ್ವಾಮಿಗಳು ವಿಷಯ ತಿಳಿದ ಕೂಡಲೆ ಆ ಗ್ರಾಮಕ್ಕೆ ಹೊರಟರು. ಸೋಂಕು ರೋಗವೆಂದು ಹೆದರಿದ್ದ ಜನರು ಯಾರೂ ಅಲ್ಲಿಗೆ ಹೋಗಲು ಹೆದರುತ್ತಿದ್ದರು. ಗುರುಗಳು ತಕ್ಷಣ ಗ್ರಾಮಕ್ಕೆ ಹೋಗಿ ಮನೆ – ಮನೆಗೆ ಭೇಟಿಕೊಟ್ಟು ಜನರಲ್ಲಿ ಧೈರ್ಯ ತುಂಬಿದರು.
ವೈದ್ಯರು ಮತ್ತು ದಾದಿಯರ ಜೊತೆ ಸೇರಿ ರೋಗಿಗಳನ್ನು ಮುಟ್ಟಿ ಆರೈಕೆ ಮಾಡಿದರು. ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಗಂಜಿ -ನೀರು ಕುಡಿಸಿ ಓಡಾಡಿ, ಜೀವಿಗಳ ಸೇವೆ ಮಾಡಿದರು. ಎರಡು ದಿನಗಳ ನಂತರ ರೋಗ ಹತೋಟಿಗೆ ಬಂದು ವಾರದಲ್ಲಿ ಎಲ್ಲಾ ಮನೆಯ ಜನರು ಹಾಗೂ ದನಗಳು ಗುಣವಾದರು. ಗುರುಗಳ ಆ ಗ್ರಾಮದ ಹಿತ ದೃಷ್ಟಿಯಿಂದ ಮತ್ತು ಜನರಲ್ಲಿ ಮನೋಬಲ ಉಂಟಾಗಲೆಂದು ಅಲ್ಲಿಯೆ ಇದ್ದು ಒಂದು ಅನುಷ್ಟಾನವನ್ನು ಮಾಡಿ ಸುಬೋಧೆಯನ್ನು ನೀಡಿ ಬೆಕ್ಕಿನ ಕಲ್ಮಠಕ್ಕೆ ಹಿಂತಿರುಗಿದರು. ಅಂದಿನಿಂದ ಆ ಗ್ರಾಮ ಗುರುವಿನ ಕಾರುಣ್ಯಕ್ಕೆ ಪಾತ್ರವಾದ ಗ್ರಾಮ ಆದುದರಿಂದ ಆ ಗ್ರಾಮವನ್ನು `ಗುರುಪುರ’ ಎಂದು ಕರೆದರು. ಇಂದಿಗೂ ಆ ಸ್ಥಳ ಗುರುಪುರ ಎಂದೇ ಇದೆ. ಶ್ರೀಗುರುಗಳ ಗದ್ದುಗೆ ಹೊನ್ನಾಳಿಯ ಹಿರೇಕಲ್ಮಠದಲ್ಲಿದೆ.

ಶ್ರೀ ಮಠದ ಪರಂಪರೆಯಲ್ಲಿಯ ಈಗಿನ ಗುರುಗಳಾದ ಡಾ|| ಶ್ರೀ ಮಲ್ಲಿಕಾರ್ಜುನ ಮುರುಘಾಸ್ವಾಮಿಗಳು ಹಿಂದಿನ ಗುರುಗಳ ಆದರ್ಶವನ್ನು ಮುಂದುವರಿಸಿ ಕೊಂಡು ಬಂದಿದ್ದಾರೆ. ಶಿಷ್ಯರ ಅಭಿಮಾನಿಗಳ ನೆರವಿನಿಂದ ಹಳೆಯ ಮಂಗಳೂರು ಹೆಂಚಿನ ಮಠವು ಇಂದು ಅದೇ ತುಂಗಾತೀರದಲ್ಲಿ ಮೂರಂತಸ್ಥಿನ ಭವ್ಯ ಮಠವಾಗಿ ಕಂಗೊಳಿಸುತ್ತಿದೆ. ಇದೇ ತಿಂಗಳ ೬ ಮತ್ತು ೭ರ ಎರಡು ದಿನ ಶ್ರೀ ಲಿ|| ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ ೧೧೧ನೆಯ ಪುಣ್ಯ ಸ್ಮರಣೋತ್ಸವ ನಡೆಯುತ್ತಿದೆ. ಅದರ ಅಂಗವಾಗಿ ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನ ಕಾರ್ಯಕ್ರಮವಿದೆ. ಇದೇ ಸಮಯದಲ್ಲಿ ಅಲ್ಲಮ ಪ್ರಭು ಪ್ರಶಸ್ತಿ ಮತ್ತು ಶ್ರೀ ಗುರುಬಸವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಾಡಿನ ವಿದ್ವಾಂಸರು, ಮಂತ್ರಿ ಮಾನ್ಯರು ಹಾಗೂ ಹರಗುರು ಚರಮೂರ್ತಿಗಳು ಮತ್ತು ಉಡುಪಿಯ ಪೇಜಾವರ ಶ್ರೀಗಳವರು ಪಾಲ್ಗೊಳ್ಳಲಿದ್ದಾರೆ. ಇದರ ಅಂಗವಾಗಿ ೧೧೧ ಜನ ಮಹಿಳೆಯರ ಗಾಯನ, ವಿವಿಧ ಸ್ಪರ್ಧೆಗಳೂ ನಡೆಯುತ್ತವೆ.
ಬನ್ನಿ ಶ್ರೀಗುರುಗಳ ಸ್ಮರಣೆಯ ಈ ಭಕ್ತಿ ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗೋಣ.

ಲೇಖನ : ಪ್ರೊ. ಸಿ.ಯು. ಸೋಮಶೇಖರ್
ವಿಶ್ರಾಂತ ಪ್ರಾಚಾರ್ಯರು, ಶಿವಮೊಗ್ಗ.
ಮೊ. : ೯೭೪೧೪೪೫೯೬೩.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!