ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡಮಾತೆಯ ಪ್ರೀತಿಯ ಪಾಪು : ಪಾಟೀಲ್ ಪುಟಪ್ಪ

( ಪಾಟೀಲ್ ಪುಟ್ಟಪ್ಪ ಅವರ ಜನುಮ ದಿನ. ತನ್ನಿಮಿತ್ತ ಈ ಲೇಖನ )

ನಾಡೋಜ ಪಾಟೀಲ್ ಪುಟ್ಟಪ್ಪ ಅವರು ಸಾಹಿತಿ, ಪತ್ರಕರ್ತ ಮತ್ತು ಕನ್ನಡ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದವರು.‘ಪಾಪು’ ಎಂದೇ ಜನಮಾನಸದಲ್ಲಿ ಪ್ರಸಿದ್ಧರಾಗಿದ್ದ ಪಾಟೀಲ್ ಪುಟ್ಟಪ್ಪ ಅವರು ಸಾಹಿತ್ಯ ಹಾಗೂ ಪತ್ರಿಕೋದ್ಯಮಕ್ಕೆ ಅವರು ನೀಡಿರುವ ಕೊಡುಗೆ ಅಮೂಲ್ಯವಾದದ್ದು. ಕನ್ನಡ ಪರ ಕಾಳಜಿಯಿಂದಲೇ ಕನ್ನಡಿಗರ ಮನದಲ್ಲಿ ಉಳಿದಿರುವ ಪುಟ್ಟಪ್ಪ ಅವರ ಜಯಂತಿ ನಾಳೆ.

ಜನವರಿ ೧೪, ೧೯೧೯ರಲ್ಲಿ ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಸಿದ್ದಲಿಂಗಪ್ಪ ಹಾಗೂ ಮಲ್ಲಮ್ಮ ದಂಪತಿಗಳಿಗೆ ಪಾಟೀಲ್ ಪುಟ್ಟಪ್ಪ ಜನಿಸುತ್ತಾರೆ. ಹಾವೇರಿಯ ಹಲಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸುವ ಪಾಪು, ೧೯೪೩ರಲ್ಲಿ ಬೆಳಗಾವಿಯ ಕಾನೂನು ಕಾಲೇಜಿಗೆ ಸೇರ್ಪಡೆಯಾಗಿ ೧೯೪೫ರಲ್ಲಿ ಕಾನೂನು ಪದವಿ ಪಡೆಯುತ್ತಾರೆ. ನಂತರ, ವಿಜಾಪುರದ ಡಾ.ಬಿ.ಎಂ.ಪಾಟೀಲರ ಮಗಳು ಇಂದುಮತಿಯವರೊಡನೆ ಸಪ್ತಪದಿ ತುಳಿಯುತ್ತಾರೆ. ಮುಂಜುಳಾ, ಶೈಲಜಾ, ಅಶೋಕ ಎಂಬ ಮಕ್ಕಳನ್ನು ಹೊಂದಿದ್ದಾರೆ.
ಅಂದಿನ ಬಿಜಾಪುರದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ವಕೀಲ ವೃತ್ತಿಯ ಆರಂಭದಲ್ಲಿ ಬಿಜಾಪುರದಲ್ಲಿ ಪುಟ್ಟಪ್ಪ ಅವರಿಗೆ ಸರಿಯಾದ ಕಕ್ಷಿದಾರರು ಸಿಗದೆ ಊಟಕ್ಕೂ ಪರದಾಡುವಂತಹ ಕಷ್ಟಕರ ಬದುಕನ್ನು ಅನುಭವಿಸಿದ್ದರು. ಬಳಿಕ ಅಲ್ಲಿಂದ ಹೈಕೋರ್ಟ್ ನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಬಾಂಬೆಗೆ ತೆರಳಿ, ಅಲ್ಲಿ ಪತ್ರಿಕೋದ್ಯಮದ ಸಖ್ಯ ಬೆಳೆಸಿಕೊಂಡರು. ಅಲ್ಲಿ ಒಂದಿಷ್ಟು ಪತ್ರಕರ್ತರ ಜೊತೆ ಸ್ನೇಹ ಬೆಳೆಸಿದ ಪಾಪು, ಪತ್ರಕರ್ತರಾಗಬೇಕೆಂಬ ಆಸೆಯಿಂದ ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಪತ್ರಿಕೋದ್ಯಮದ ಕ್ಷೇತ್ರದ ದಿಗ್ಗಜರಾಗಿ :

ಹಾವೇರಿಯಲ್ಲಿ ಓದುತ್ತಿರುವಾಗನಮ್ಮ ನಾಡು’ ಕೈ ಬರಹದ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ೧೯೩೬ರಲ್ಲಿ ವಾರ ಪತ್ರಿಕೆಯವಿಶಾಲ ಕರ್ನಾಟಕ ’ದ ಸಂಪಾದಕತ್ವ ವಹಿಸುತ್ತಾರೆ. ನಂತರ, ಅದು ಆಗಸ್ಟ್ ೯, ೧೯೪೭ರಂದು ದಿನಪತ್ರಿಕೆಯಾಯಿತು. ಕ್ಯಾಲಿಫೋರ್ನಿಯಾದಿಂದ ಬಂದ ನಂತರ, ೧೯೫೨ರಲ್ಲಿ ನವಯುಗ, ೧೯೫೪ರಲ್ಲಿ ಪ್ರಪಂಚ ಸಾಪ್ತಾಹಿಕ, ೧೯೫೬ರಲ್ಲಿ ಸಂಗಮ ಮಾಸಿಕ, ೧೯೫೯ರಲ್ಲಿ ವಿಶ್ವವಾಣಿ, ೧೯೬೧ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, ೧೯೬೪ರಲ್ಲಿ ಸ್ತ್ರೀ ಮಾಸಿಕ ಸೇರಿ ಹಲವು ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಪಾಪು ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಯೋಗಾತ್ಮಕ ಹಾದಿಯನ್ನು ತುಳಿದರು. ಜತೆಗೆ ಹಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಗುರುತಿಸಿಕೊಂಡರು.

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಪು :

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಟೀಲ್ ಪುಟ್ಟಪ್ಪನವರು ಸಕ್ರಿಯವಾಗಿ ಭಾಗವಹಿಸಿದ್ದರು. ೧೯೪೯ರ ಆರಂಭದಲ್ಲಿ ಕಲಬುರಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತಿನಲ್ಲಿ ಮೈಸೂರು ಸಹಿತ ಕರ್ನಾಟಕವಾಗಬೇಕೆನ್ನುವ ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು. ಪಾಟೀಲ್ ಪುಟ್ಟಪ್ಪನವರು ಒಳಗೊಂಡ ಬಿ.ಎನ್.ದಾತಾರ ನೇತೃತ್ವದ ತಂಡದಿಂದ ಕರ್ನಾಟಕ ಏಕೀಕರಣಕ್ಕಾಗಿ ಮೈಸೂರಲ್ಲಿ ಸರದಾರ ಪಟೇಲರನ್ನು ಭೇಟಿ ಮಾಡ್ತಾರೆ.

ಗೋಕಾಕ್ ಚಳುವಳಿಯಲ್ಲಿ ಪಾಪು : ೧೯೮೨ರಲ್ಲಿ ಗೋಕಾಕ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ ಮಾಡಿದರು. ಆಂದೋಲನ, ಸಂಘಟನೆಯಿಂದ ಸರಕಾರ ಗೋಕಾಕ ವರದಿಯನ್ನು ಒಪ್ಪುವಂತೆ ಮಾಡಿದರು. ೧೯೮೫ರಲ್ಲಿ ಕರ್ನಾಟಕ ಸರಕಾರ ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿ ರಚಿಸಿ, ಅಧ್ಯಕ್ಷರನ್ನಾಗಿ ಮಾಡಿದರು. ಇದರಿಂದ ಕಚೇರಿಗಳಲ್ಲಿ ಕನ್ನಡ ತರುವ ಪ್ರಯತ್ನಕ್ಕೆ ಭಾರೀ ಯಶಸ್ಸು ಸಿಕ್ಕಿತು. ಇಷ್ಟೇ ಅಲ್ಲದೆ ವಿದ್ಯಾರ್ಥಿಯಾಗಿದ್ದಾಗಲೇ ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಕರ್ನಾಟಕ ಕಾಲೇಜಿನ ಮುಖಂಡರಾಗಿ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧೀ ಟೋಪಿ ಹಾಕಿ ಆ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದರು.

ಸಾಹಿತಿಯಾಗಿ ಪಾಟೀಲ್ ಪುಟ್ಟಪ್ಪ : ಸಾಹಿತಿಯಾಗಿ ಅನೇಕ ಪುಸ್ತಕಗಳನ್ನು ಪುಟ್ಟಪ್ಪ ಬರೆದಿದ್ದಾರೆ, ನನ್ನದು ಈ ಕನ್ನಡ ನಾಡು, ನಮ್ಮದು ಈ ಭರತ ಭೂಮಿ, ಕರ್ನಾಟಕದ ಕಥೆ, ಸೋವಿಯತ್ ದೇಶ ಕಂಡೆ, ಸಾವಿನ ಮೇಜವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿದಳು, ಕಲಾ ಸಂಗಮ, ಬೆಳೆದ ಬದುಕು, ಭಾರತದ ಬೆಳಕು, ನೆಲದ ನಕ್ಷತ್ರಗಳು, ಸರ್ ಸಾಹೇಬರು, ಹೊಸಮನಿ ಸಿದ್ದಪ್ಪ, ಪ್ರಪಂಚ ಪಟುಗಳು, ನಮ್ಮ ಜನ ನಮ್ಮ ದೇಶ, ಈಗ ಹೊಸದನ್ನು ಕಟ್ಟೋಣ, ಪಾಪು ಪ್ರಪಂಚ ಬದುಕುವ ಮಾತು, ಅಮೃತವಾಹಿನಿ, ವ್ಯಕ್ತಿ ಪ್ರಪಂಚ, ಸುವರ್ಣ ಕರ್ನಾಟಕ ಪ್ರಮುಖವಾದವುಗಳು.

ಗೌರವ ಪ್ರಶಸ್ತಿಗಳು :
ಕನ್ನಡದ ಪ್ರಮುಖ ಸಾಹಿತಿ, ಪತ್ರಿಕೋದ್ಯಮಿ, ಹೋರಾಟಗಾರರಾಗಿ ಪುಟ್ಟಪ್ಪನವರ ಸಾಧನೆಗೆ ಮನ್ನಣೆಯಾಗಿ ಅನೇಕ ಗೌರವ, ಪ್ರಶಸ್ತಿಗಳು ಲಭಿಸಿವೆ. ಅವುಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭಾ ಸದಸ್ಯತ್ವ, ೨೦೦೩ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ.ಎಸ್.ಆರ್. ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ನೃಪತುಂಗ ಪ್ರಶಸ್ತಿಗಳು ಪ್ರಮುಖವಾಗಿದೆ. ಇದಲ್ಲದೆ ಪಾಪು ಅಭಿಮಾನಿಗಳೂ ಸಮರ್ಪಿಸಿದ ಗೌರವಗ್ರಂಥ ‘ಪ್ರಪಂಚದ ಪಾಪು’ ಮತ್ತು ‘ನಾನು ಪಾಟೀಲ ಪುಟ್ಟಪ್ಪ’ ಅವರ ಜೀವನ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
ಪಾಪು ಎಂದೇ ಗುರುತಿಸಲ್ಪಡುವ ಸಾಹಿತಿ, ಕನ್ನಡ ಪರ ಹೋರಾಟಗಾರ ಪಾಟೀಲ ಪುಟ್ಟಪ್ಪ. ಪತ್ರಿಕೋದ್ಯಮ, ಸಾಹಿತ್ಯ ಮತ್ತು ಕನ್ನಡ ಹೋರಾಟದಲ್ಲಿ ಎತ್ತಿದ ಕೈ ಆಗಿದ್ದ ಪಾಟೀಲ ಪುಟ್ಟಪ್ಪನವರು ತಮ್ಮ ೧೦೧ನೇ ವಯಸ್ಸಿನಲ್ಲಿ ಪಾಟೀಲ್ ಪುಟ್ಟಪ್ಪ ಅನಾರೋಗ್ಯದಿಂದ ಮಾರ್ಚ್ ೧೬, ೨೦೨೦ ರಲ್ಲಿ ನಿಧನರಾದರು.
ಪಾಟೀಲ್ ಪುಟ್ಟಪ್ಪ ನವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ಕನ್ನಡಿಗರೆಲ್ಲರಿಗೂ `ಪಾಪು’ ಎಂದೇ ಗುರುತಿಸಲ್ಪಡುವ ಪಾಟೀಲ್ ಪುಟ್ಟಪ್ಪ ಕನ್ನಡ ಪರ ಹೋರಾಟ, ಕಾಳಜಿಗಳಿಂದಲೇ ಕನ್ನಡಿಗರ ಮನದಲ್ಲಿ ಉಳಿದವರು. ಅವರ ಜನ್ಮದಿನಾಚರಣೆಯಂದು ಅವರಿಗೆ ಕನ್ನಡ ಸೇವೆಗೆ ಅನಂತ ನಮನಗಳನ್ನು ಸಲ್ಲಿಸೋಣ.

  • ಡಾ. ಪ್ರಸನ್ನ ದೇವರ ಮಠ ಅನಿಲಕುಮಾರ್, ಮಾಗಳ, ಪದವೀಧರ ಪ್ರಾಥಮಿಕ ಶಿಕ್ಷಕರು
    ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದೇನೂರು,
    ಹೂವಿನಹಡಗಲಿ, ಜಿ. ವಿಜಯನಗರ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!