ಹುನಗುಂದ: ತಾಲೂಕಿನ ಚಿಕ್ಕಯರನಕೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಮುಖ್ಯಗುರು ಕಿರಣ ವಜ್ರಮಟ್ಟಿ ಪ್ರತಿ ವರ್ಷದಂತೆ ಈ ವರ್ಷವೂ ತಮ್ಮ ಶಾಲೆಯ 50ಕ್ಕೂ ಹೆಚ್ಚು ಮಕ್ಕಳಿಗೆ ಮೂರು ಕಿಂಗ್ ಸೈಜ್ ನೋಟ್ ಪುಸ್ತಕ, ಪೆನ್ನು, ಸೀಸ, ರಬ್ಬರ್, ಮೆಂಡರ್ ಮತ್ತು ಒಂದು ಸ್ಕೇಲನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಯಲಗುರದಪ್ಪ ಗರೇಬಾಳ ಮಾತನಾಡಿ, ಶಿಕ್ಷಕರು ತಮ್ಮ ಸ್ವಂತ ಖರ್ಚಿನಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಶಿಕ್ಷಕರ ಸಂಖ್ಯೆ ಹೆಚ್ಚಾಗಲಿ. ಸರಕಾರಿ ಶಾಲೆಗಳಲ್ಲಿ ಓದುವ ಬಡವರ ಮಕ್ಕಳಿಗೆ ನೆರವಾಗಲಿ ಎಂದರು.
ಸಮಾಜಸೇವಕ ಸೋಮಶೇಖರ ಬಲಕುಂದಿ ಮಾತನಾಡುತ್ತ, ಸರಕಾರಿ ಶಾಲೆಗಳಲ್ಲಿ ಈ ವರ್ಷದಿಂದ ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ, ಮೊಬೈಲ್ ಮೂಲಕ ಮಕ್ಕಳ ಹಾಜರಾತಿಯಂತಹ ಪ್ರಮುಖ ಬದಲಾವಣೆಯೊಂದಿಗೆ ಶಿಕ್ಷಣ ಸಾಗುತ್ತಿದ್ದು, ನಮ್ಮ ಶಾಲೆಗಳು ಸಹ ಯಾವುದೇ ಖಾಸಗೀ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಅಭಿವೃದ್ಧಿ ಪಥದತ್ತ ನಡೆದಿವೆ. ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಅವು ಮುಚ್ಚಿಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮುಖ್ಯ ಗುರು ಕಿರಣ ವಜ್ರಮಟ್ಟಿ ಮಾತನಾಡಿ, ಭವಿಷ್ಯದಲ್ಲಿ ನಮ್ಮ ಮಕ್ಕಳು ನಮಗೆ ಅನ್ನ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ; ಆದರೆ ನಮಗೆ ನಿತ್ಯ ಅನ್ನ ನೀಡುವ ಈ ಮಕ್ಕಳಿಗಾಗಿ ತುಸು ಹಣ ಖರ್ಚು ಮಾಡುವುದರಲ್ಲಿ ದೊಡ್ಡಸ್ತಿಕೆಯೇನೂ ಇಲ್ಲ. ಇದು ನಮ್ಮ ಆತ್ಮ ತೃಪ್ತಿಯ ಕಾರ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಇಲಾಖೆಯಿಂದ ಪೂರೈಸಲ್ಪಟ್ಟ ಎರಡು ಜೊತೆ ಉಚಿತ ಸಮವಸ್ತ್ರಗಳನ್ನು ಹೊನ್ನರಹಳ್ಳಿ ಶಾಲೆಯ ಮುಖ್ಯಗುರು ಪ್ರಭು ಮಾಲಗಿತ್ತಿ ಮಕ್ಕಳಿಗೆ ವಿತರಣೆ ಮಾಡಿದರು. ಶಿಕ್ಷಕಿ ಸಾವಿತ್ರಿ ಮಾಶ್ಯಾಳ, ಸಿದ್ದು ಶೀಲವಂತರ, ಅಶೋಕ ಬಳ್ಳಾ ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















