ಶಿರಸಿ: ದೇಹವೇ ದೇವಾಲಯ; ಅಂತರಂಗ ಶುದ್ದಿ ಇರಬೇಕು; ಮನಸ್ಸು ಅತ್ಯದ್ಭುತ, ಸಾವಿರಾರು ಚಟುವಟಿಕೆಗಳನ್ನು ಒಮ್ಮೆಲೇ ಮಾಡುತ್ತದೆ; ದೇವತ್ವದ ಸಮೀಪದಲ್ಲಿರುವುದೇ ಉಪವಾಸ; ಜಪ-ತಪ ಹೋಮ -ಹವನಾದಿಗಳು ಅಧ್ಯಾತ್ಮವೇ ; ಆದರೆ ಮನುಷ್ಯತ್ವದಿಂದ, ಉದಾತ್ತ ಆಚಾರ- ವಿಚಾರಗಳಿಂದ ಬದುಕುವುದೇ ನಿಜವಾದ ಅಧ್ಯಾತ್ಮ ಎಂದು ವೇದಮೂರ್ತಿ ನಾಗಪತಿ ಭಟ್ಟ ನೀರಗಾನ ಅವರು ಹೇಳಿದರು. ಅವರು ಇತ್ತೀಚಿಗೆ ಶಿರಸಿಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜಸ್ಟಿಸ್ ಜಿ ಎನ್ ಸಭಾಹಿತ, ಜಸ್ಟಿಸ್ ವಿಷ್ಣು ಸಭಾಹಿತ ಸ್ಮರಣೆ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು. ಪ್ರಪಂಚ ಮಾಯೆಯಿಂದ ಕೂಡಿದೆ; ಬೇಕು ಬೇಕು, ಇನ್ನಷ್ಟು ಬೇಕು ಎನ್ನುತ್ತಲೇ ಇರುತ್ತೇವೆ. ನಾವು ಪ್ರಸನ್ನ ಚಿತ್ತರಾಗಿರಬೇಕು; ಮನ್ನಣೆಯ ದಾಹದಿಂದ ದೂರ ಇರಬೇಕು ; ನಾವು ಪಡೆದಿರುವ ಸಂಸ್ಕಾರದಿಂದ ಉತ್ತಮರಾಗುತ್ತೇವೆ; ಮನುಷ್ಯನಿಗೆ ಗುರಿ ಇರಬೇಕು, ಕ್ರೋಧ ಜೀವನ ತ್ಯಜಿಸಿ ಪರೋಪಕಾರ ಭಾವನೆಯಿಂದ ಜೀವನ ಸಾರ್ಥಕಗೊಳಿಸಿಕೊಳ್ಳಬೇಕೆಂದು, ಶಂಕರರ, ಡಿವಿಜಿಯವರ ಉಕ್ತಿಗಳ ಸಹಿತ ಬೋಧಪ್ರಧ ಉಪನ್ಯಾಸ ನೀಡಿದರು. ಅವರಿಗೆ ಆತ್ಮೀಯ ಗೌರವ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಅನಾಥ ಪಶು ಪಕ್ಷಿಗಳ ಪೋಷಕರಾದ ಪೂಜಾ ಹಾಗೂ ಡಾಕ್ಟರ್ ರಾಜೇಂದ್ರ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸುತ್ತಾ ಪೂಜಾ ಅವರು, ಬಾಲ್ಯದಿಂದಲೇ ಇಂತಹ ಪ್ರಾಣಿ ಪಕ್ಷಿಗಳ ಕುರಿತು ಅನುಕಂಪದ ಭಾವನೆ ಇತ್ತು; ದೇಶದಲ್ಲಿಯೇ ಇದು ಅಪರೂಪದ ಸೇವೆ ಎಂದು ಭಾವಿಸಿ, ಮುಂದುವರಿಯುತ್ತಿರುವುದಾಗಿ ಹೇಳಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಡಾಕ್ಟರ್ ರಾಜೇಂದ್ರ ಅವರು, ಪ್ರಾಣಿಗಳಲ್ಲಿರುವ ಕೃತಜ್ಞತೆ, ಅದ್ಭುತ ನೆನಪಿನ ಶಕ್ತಿಯ ಕುರಿತು ಹಲವು ಉದಾಹರಣೆಗಳನ್ನು ಹೇಳಿದಾಗ ಸಭಿಕರು ರೋಮಾಂಚನಗೊಂಡರು. ಅನಾಥ ಪಶು ಪಕ್ಷಿಗಳ ಸೇವೆ ಮಾಡುತ್ತಿರುವ ಇವರ ಮನೋಭಾವಕ್ಕೆ ಜನರು ಆಶ್ಚರ್ಯ ವ್ಯಕ್ತಪಡಿಸಿದರು. ಶ್ರೀ ಎಸ್ ಎಮ್ ಹೆಗಡೆಯವರು ಸನ್ಮಾನ ಪತ್ರ ವಾಚಿಸಿ, ಭಾವಗೀತೆಯೊಂದನ್ನು ಸುಶ್ರಾವ್ಯವಾಗಿ ಹಾಡಿದರು.
ಅಧ್ಯಕ್ಷತೆ ವಹಿಸಿದ ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆಯವರು, ಮಾಧ್ಯಮ ಮಿತ್ರರು ಸಹಕರಿಸುತ್ತಿರುವುದನ್ನು ಕೊಂಡಾಡಿ, ಉಪನ್ಯಾಸಕರನ್ನು, ಸನ್ಮಾನಿತರನ್ನು ಸಂಪರ್ಕಿಸಿ, ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕತ್ವವನ್ನು ವಹಿಸಿ, ಪ್ರಾರ್ಥನೆ ಹಾಡಿ, ಸ್ವಾಗತಿಸಿ, ಪರಿಚಯಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದ ಹಿರಿಯ ಸಾಹಿತಿ ಜಿ ವಿ ಭಟ್ ಕೊಪ್ಪಲತೋಟ ಅವರನ್ನು ಬಹುವಾಗಿ ಶ್ಲಾಘಿಸಿದರು ಹಾಗೂ ಈ ರೀತಿ ಕಾರ್ಯಕ್ರಮ ಆಯೋಜಿಸುವ ಸರ್ವರಿಗೂ ಸ್ವಾಗತವಿದೆ ಎಂದೂ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ. ಕೆ ಎನ್ ಹೊಸಮನಿ, ವರ್ಗಾಸರ ಗಣಪತಿ ಭಟ್, ಕೆ ಆರ್ ಹೆಗಡೆ ಕಾನಸೂರ, ಜಯಪ್ರಕಾಶ ಹಬ್ಬು, ಇಂದಿರಾ ಬೈಲಕೇರಿ, ತ್ರಿವೇಣಿ ಹೆಗಡೆ, ಆಶಾ ಸಭಾಹಿತ , ಪಾರ್ವತಿ ಹೆಗಡೆ, ಲಕ್ಷ್ಮಿ ಹೆಗಡೆ, ಆರ್ ಎಸ್ ಬೈಲಕೇರಿ, ಶ್ರೀಧರ ಶಾಸ್ತ್ರಿ, ಆರ್ ಆರ್ ಹೆಗಡೆ, ಡಿ ಎ ಹೆಗಡೆ, ಎಸ್ ವಿ ಹೆಗಡೆ, ಎನ್ ಎಂ ಶೆಟ್ಟಿ, ಆರ್ ಎಸ್ ಹೆಗಡೆ, ಡಿ ಜಿ ಹೆಗಡೆ, ಶಾಂತರಾಮ ಹೆಗಡೆ, ವಿ ಜಿ ಹೆಗಡೆ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















