
ಬಳ್ಳಾರಿ / ಕಂಪ್ಲಿ: ಮದುವೆ ಎಂದರೆ ಅಲ್ಲಿ ಬೀಗರ ಗೌಜು ಗದ್ದಲ ಇದ್ದೇ ಇರುತ್ತದೆ. ಆದರೆ, ಮಾತು ಬೆಳ್ಳಿ, ಮೌನ ಬಂಗಾರ ಎನ್ನುವಂತೆ ಮೂಕ ವಧು-ವರ ಮದುವೆ ಸಂಭ್ರಮಕ್ಕೆ ಪಟ್ಟಣದ ರಾಘವೇಂದ್ರ ಕಲ್ಯಾಣಮಂಟಪ ಶುಕ್ರವಾರ ಸಾಕ್ಷಿಯಾಯಿತು.
ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ್ದ ಮೂಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ದಂಪತಿಗೆ ಅವರದೇ ಹಾವಭಾವದ ಭಂಗಿಯಲ್ಲಿ ಶುಭ ಹಾರೈಕೆ, ಆಶೀರ್ವಾದ ಮಾಡಿದ ದೃಶ್ಯಗಳು ನೆರೆದ ಜನರನ್ನು ಬೆರಗುಗೊಳಿಸಿದವು.
ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ಹೆಬ್ಬಾಳ್ ಚಂದ್ರಕಲಾ ವೆಂಕಟೇಶ ದಂಪತಿಯ ಪದವೀಧರ ಪುತ್ರ ಹೆಚ್.ನವೀನ್‌ಕುಮಾರ ಹಾಗೂ ಗುಲಬರ್ಗಾ ಜಿಲ್ಲೆಯ ಚಿತ್ತಪುರ ನಗರದ ನಿವಾಸಿ ಈರಮ್ಮ ಬಸಣ್ಣ ಸಿಂಪಿ ಇವರ ಪುತ್ರಿ ವಾಸವಿ (ಉಮಾದೇವಿ) ಇವರ ಮದುವೆ ಸಂಭ್ರಮಕ್ಕೆ ನೂರಾರು ಜನರು ಸಾಕ್ಷಿಯಾದರು.
ಇಲ್ಲಿನ ಕಲ್ಯಾಣಮಂಟಪದಲ್ಲಿ ಎತ್ತ ನೋಡಿದರತ್ತ ಮೂಕರ ಕಲರವ ಕಂಡುಬಂದಿತು. ವಧು-ವರನ ಮೂಕ ಗೆಳೆಯ-ಗೆಳತಿಯರು ಹಾಗೂ ಆಪ್ತ ಮಿತ್ರರು ಸೇರಿದಂತೆ 100ಕ್ಕೂ ಹೆಚ್ಚು ಮೂಕರು ಮದುವೆ ಮುನ್ನಾ ದಿನವಾದ ಗುರುವಾರ ಸಂಜೆಯೇ ಕಲ್ಯಾಣ ಮಂಟಪಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಮರು ದಿನದ ಮದುವೆ ಮುಗಿಯುವ ತನಕ ಗೆಳೆಯನ ಅದ್ಧೂರಿ ಮದುವೆ ನಡೆಸಿಕೊಟ್ಟರು. ಮದುವೆ ಬರುವವರನ್ನು ಸ್ವಾಗತಿಸುವುದು, ಊಟದ ವ್ಯವಸ್ಥೆ ನೋಡಿಕೊಳ್ಳುವುದು, ಹೀಗೆ ನಾನಾ ವಿವಿಧ ಮೂಕರು ತಮ್ಮದೇ ಆದ ಕೆಲಸದೊಂದಿಗೆ ನಾವಿದ್ದೇವೆ ಎಂಬ ಭಾವನೆಯೊಂದಿಗೆ ಗೆಳೆಯನ ಮದುವೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಮದುವೆಯಲ್ಲಿ ಮಾತೇ ವಿರಳ ಎನ್ನುವಂತಿತ್ತು. ಅಲ್ಲಿ ನೆರೆದಿದ್ದ ಮೂಕರೆಲ್ಲರೂ ಕೈ ಸನ್ನೆಗಳ ಮೂಲಕವೇ ಸಂವಹಿಸಿದ್ದಲ್ಲದೇ ಮದುವೆ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು.
ಮೂಕ ಗೆಳೆಯ ಗೆಳತಿಯರೇ ಮದುಮಕ್ಕಳನ್ನು ಅಲಂಕರಿಸಿ ಮದುವೆ ಮಂಟಪಕ್ಕೆ ಕರೆ ತಂದರು. ಸರಿಯಾಗಿ ಮಧ್ಯಾಹ್ನ 12.20ಕ್ಕೆ ಮೂಕ ಹಕ್ಕಿಗಳ ಅಕ್ಷತಾರೋಪಣ ನೆರವೇರಿತು. ನಂತರ ವಧು ವರನ ಮೂಕ ಗೆಳೆಯ, ಗೆಳತಿಯರು ತಮ್ಮದೇ ದಾಟಿಯಲ್ಲಿ ನವ ವಿವಾಹಿತರಿಗೆ ಶುಭ ಹಾರೈಸಿದರು. ಹಾಗೆಯೇ ನವ ದಂಪತಿಯೊಂದಿಗೆ ಮೊಬೈಲ್‌ನಲ್ಲಿ ಸೆಲ್ಫಿ ಸಹ ಕ್ಲಿಕ್ಕಿಸಿಕೊಂಡರು. ಅಲ್ಲದೇ ವಿಡಿಯೊ ಕಾಲ್ ಮೂಲಕ ತಮ್ಮ ದೂರದ ಗೆಳೆಯರೊಂದಿಗೆ ಮದುವೆ ಸಂಭ್ರಮವನ್ನು ತಮ್ಮದೆ ಆದ ದಾಟಿಯಲ್ಲಿ ವಿವರಿಸುತ್ತಿದ್ದರು.
ಗುರು ಹಿರಿಯರ, ತಂದೆ ತಾಯಿಗಳ ಹಾಗೂ ವಧು-ವರನ ಒಪ್ಪಿಗೆಯ ಮೇರೆಗೆ ಈ ವಿವಾಹ ನೆರವೇರಿತು. ಆರ್ಯವೈಶ್ಯ ಸಮಾಜ(ಶೆಟ್ರು)ದ ವರ ಹೆಚ್.ನವೀನ್ ಕುಮಾರ ಮತ್ತು ವೀರಶೈವ ಸಮಾಜದ ವಧು ವಾಸವಿ ಎಂಬ ಮೂಕ ಹಕ್ಕಿಗಳು ಸುಂದರ ಜೀವನಕ್ಕಾಗಿ ಜಾತಿ, ಭೇಧ ಇಲ್ಲದೇ ಮದುವೆಗೆ ಸಾಕ್ಷಿಯಾದರು. ವರ ನವೀನ್ ಇವರು ಬಳ್ಳಾರಿಯಲ್ಲಿ ಗುರುಗಳಾದ ವೆಂಕಟೇಶ ದೇಶಪಾಂಡೆ ಮತ್ತು ಗೋವಿಂದಪ್ಪ ಅವರ ಮಾರ್ಗದರ್ಶನದಲ್ಲಿ ಹಿರಿಯ ಮತ್ತು ಮೈಸೂರಿನ ಬುದ್ಧಿಮಾಂಧ್ಯ ಶಾಲೆಯಲ್ಲಿ ಪ್ರೌಢ ಹಂತದಿಂದ ಡಿಪ್ಲೋಮಾವರೆಗೆ ಶಿಕ್ಷಣ ಪಡೆದಿದ್ದಾರೆ. ಈಗ ಬೆಂಗಳೂರಿನ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಲ್ಲಿನ ಮೂಕ ಹಕ್ಕಿಗಳ ಮದುವೆಗೆ ಶಾಸಕ ಜೆ.ಎನ್.ಗಣೇಶ್ ಅವರ ಸುಪುತ್ರ ಜೆ.ಎನ್.ಗೋಕುಲ್ ಮತ್ತು ಅಳಿಯ ರಾಜೇಶ್‌ಸಿಂಗ್ ಸೇರಿದಂತೆ ಮುಖಂಡರು, ಸಮಾಜದವರು, ಗೆಳೆಯರು ಮೂಕ ವಧು-ವರರಿಗೆ ಆಶೀರ್ವದಿಸಿದರು.
ಪರಸ್ಪರರ ದೌರ್ಬಲ್ಯಗಳನ್ನು ಅರಿತು ಒಂದಾದ ಈ ಜೋಡಿಯ ನಿರ್ಧಾರಕ್ಕೆ ಮತ್ತು ಇವರನ್ನು ಒಂದು ಮಾಡಿದ ಕುಟುಂಬಸ್ಥರಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















