ಯಾದಗಿರಿ: ತಾಲೂಕಿನ ಯರಗೋಳ ಗ್ರಾಮದಲ್ಲಿ M/s Suchith Indane Durgam Kshatriya Vitarak Gas Agency ವತಿಯಿಂದ ನಡೆಯುತ್ತಿರುವ LPG ಸಿಲಿಂಡರ್ ವಿತರಣೆಯ ಅಕ್ರಮಗಳು ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದಲ್ಲಿನ ನೂರಾರು ಗ್ರಾಹಕರ ಪಾಸ್ ಬುಕ್ ಗಳನ್ನು ವಶಪಡಿಸಿಕೊಂಡಿರುವ ಏಜೆನ್ಸಿಯ ವ್ಯಕ್ತಿಗಳು, ನಿಯಮ ಬಾಹಿರವಾಗಿ ಕಪ್ಪು ಮಾರುಕಟ್ಟೆಯಲ್ಲಿ ಸಿಲಿಂಡರ್ ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರಾಹಕರ ಶೋಷಣೆ, ಮೊಬೈಲ್ ಸಂಖ್ಯೆಗಳ ದುರುಪಯೋಗ:
ಗ್ರಾಮದಲ್ಲಿ ಸಿಲಿಂಡರ್ ವಿತರಣೆ ಮಾಡುವ ಮೊಗಲಯ್ಯ ತಂದೆ ದಯಾನಂದ (ಗುತ್ತೇದಾರ) ಎಂಬುವರು, ಗ್ರಾಹಕರ ಅನುಮತಿಯಿಲ್ಲದೆ ಅವರ ಪಾಸ್ ಬುಕ್ ಗಳನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ. ಅಲ್ಲದೆ, ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗಳನ್ನು ಬದಲಾಯಿಸಿ, ಬೇರೆಯವರ ಸಂಖ್ಯೆಗಳನ್ನು ಲಿಂಕ್ ಮಾಡುವ ಮೂಲಕ ಅಕ್ರಮವಾಗಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಸದೇ, ಗೃಹಬಳಕೆಯ ಸಿಲಿಂಡರ್ ಗಳನ್ನು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪ್ರಾಣಾಪಾಯದ ಭೀತಿಯಲ್ಲಿ ಗ್ರಾಮಸ್ಥರು :
ಗ್ರಾಮದ ಜನವಸತಿ ಪ್ರದೇಶದಲ್ಲಿನ ಸಣ್ಣ ಕೊಠಡಿಯೊಂದರಲ್ಲಿ ಸುಮಾರು 100ಕ್ಕೂ ಹೆಚ್ಚು LPG ಸಿಲಿಂಡರ್ ಗಳನ್ನು ಯಾವುದೇ ಸುರಕ್ಷತಾ ಮಾನದಂಡಗಳಿಲ್ಲದೆ ಸಂಗ್ರಹಿಸಿಡಲಾಗಿದೆ. ಇಂತಹ ಅಪಾಯಕಾರಿ ಸಂಗ್ರಹಣೆಯಿಂದಾಗಿ ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಗಂಭೀರ ಅಪಾಯ ಉಂಟಾಗುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಲವು ಬಾರಿ ಸ್ಥಳೀಯ ಮಟ್ಟದಲ್ಲಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಸರ್ಕಾರದ ಮೌನಕ್ಕೆ ಬಿದ್ದಿರುವ ಬಿಸಿ:
‘Essential Commodities Act, 1955’, ‘Petroleum Act, 1934’, ‘Explosives Act, 1884’ ಮತ್ತು ‘Consumer Protection Act, 2019’ ರಡಿ ಈ ಕೃತ್ಯಗಳು ಗಂಭೀರ ಅಪರಾಧಗಳಾಗಿವೆ. ಕೂಡಲೇ ಜಿಲ್ಲಾಡಳಿತ ಮತ್ತು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯು ಸ್ಥಳ ಪರಿಶೀಲನೆ ನಡೆಸಿ, ಅಕ್ರಮ ಸಂಗ್ರಹಣೆ ಹಾಗೂ ಗ್ರಾಹಕರ ದಾಖಲೆಗಳ ದುರುಪಯೋಗದ ತನಿಖೆ ನಡೆಸಬೇಕು. ತಪ್ಪಿತಸ್ಥ ಏಜೆನ್ಸಿ ಮತ್ತು ವ್ಯಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ, ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕೆಂದು ಬಸವರಾಜ ಭೀಮಣ್ಣ ಗೋಡಿಕಾರ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















