ಬಳ್ಳಾರಿ / ಕಂಪ್ಲಿ : ದೇಶಾದ್ಯಂತ ಬರಿ ಸದ್ದು ಮಾಡುತ್ತಿರುವ ಮತದಾರರ ವಿಶೇಷ (ಎಸ್ಐಆರ್) ಸಮಗ್ರ ಪರಿಷ್ಕರಣೆ ಬಗ್ಗೆ ಹಲವಾರು ಆರೋಪ ಪ್ರತ್ಯಾರೋಪಗಳಿದ್ದರೂ ಸಹಿತ ಕಂಪ್ಲಿ ತಾಲ್ಲೂಕಿನ ಸಣಾಪುರ ಗ್ರಾ.ಪಂ.ವ್ಯಾಪ್ತಿಯ ಅರಳಹಳ್ಳಿ ತಾಂಡದಲ್ಲಿ ಎಸ್ ಐ ಆರ್ ಪ್ರಕ್ರಿಯೆ ನೂರಕ್ಕೆ ನೂರು ಪ್ರಗತಿ ಸಾಧಿಸಿದ್ದು, ಈ ಸಾಧನೆಗೆ ಕಾರಣರಾದ ಅರಳಹಳ್ಳಿ ತಾಂಡದ ಮತಗಟ್ಟೆ ಅಧಿಕಾರಿ ಕಟ್ಟಿಮನಿ ಸರಸ್ವತಿ ಅವರನ್ನು ತಾಲ್ಲೂಕು ಆಡಳಿತದಿಂದ ತಹಸಿಲ್ದಾರ್ ಜೂಗಲ್ ಮಂಜುನಾಯಕ ಆತ್ಮೀಯವಾಗಿ ಸನ್ಮಾನಿಸುವ ಮೂಲಕ ತಾಲ್ಲೂಕು ಆಡಳಿತದಿಂದ ಗೌರವ ಸಲ್ಲಿಸಿದರು. ಅರಳಹಳ್ಳಿ ತಾಂಡದಲ್ಲಿ 683 ಮತದಾರರಿದ್ದು, ಈ ಎಲ್ಲಾ ಮತದಾರರ ಮನೆಗಳಿಗೆ ಎನ್ಯುಮರೇಷನ್ ಅರ್ಜಿಗಳನ್ನು ಸಮರ್ಪಕವಾಗಿ ವಿತರಿಸಿದ್ದಲ್ಲದೆ, ಪುನಃ ಭರ್ತಿ ಮಾಡಿದ ಅರ್ಜಿಗಳನ್ನು ವಾಪಸ್ಸು ಪಡೆದು ಆ ಎಲ್ಲಾ ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸುವಲ್ಲಿ ಮತಗಟ್ಟೆ ಸಂಖ್ಯೆ 5ದರ ಮತಗಟ್ಟೆ ಅಧಿಕಾರಿ ಕಟ್ಟೆಮನಿ ಸರಸ್ವತಿಯವರು ಯಶಸ್ವಿಯಾಗಿದ್ದು, ತಾಲ್ಲೂಕು ಆಡಳಿತದಿಂದ ಗೌರವವನ್ನು ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಂಪ್ಲಿ ತಾಲ್ಲೂಕು ತಹಸಿಲ್ದಾರರು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಜೂಗಲ್ ಮಂಜುನಾಯಕ ಅವರು ನಮ್ಮ ತಾಲ್ಲೂಕಿನಲ್ಲಿ ಎಸ್ ಐ ಆರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಅದರಲ್ಲೂ ಮುಖ್ಯವಾಗಿ ತಾಲ್ಲೂಕಿನ ಸಣಾಪುರ ಗ್ರಾ.ಪಂ.ವ್ಯಾಪ್ತಿಯ ಅರಹಳ್ಳಿ ತಾಂಡದಲ್ಲಿ ಬಿಎಲ್ಒ ಕಟ್ಟೆಮನಿ ಸರಸ್ವತಿ ನೂರಕ್ಕೆ ನೂರು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಇತರೆ ಮತಗಟ್ಟೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಯಶಸ್ಸಿಗೆ ಗ್ರಾಮಾಡಿಳಿತಾಧಿಕಾರಿ ಲಕ್ಷ್ಮಣ ನಾಯಕ ಅವರು ಕಾರಣರಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿ ತಾಲ್ಲೂಕಿನಲ್ಲಿ ಎಲ್ಲಾ ಮತಗಟ್ಟೆ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆಯಲು ಸಹಕರಿಸಬೇಕು
ಎಂದರು.
ಈ ಸಂದರ್ಭದಲ್ಲಿ ಶಿರಸ್ತೆದಾರರಾದ ಜಿ.ಪಂಪಪಾತಿ, ಎಸ್.ಕೆ.ರಮೇಶ್, ಕಂದಾಯಾಧಿಕಾರಿ ವೈ.ಎಂ.ಜಗದೀಶ್, ಚುನಾವಣಾ ವಿಷಯ ನಿರ್ವಾಹಕ ಸುರೇಶ್, ಕಂದಾಯ ಮತ್ತು ತಾ.ಪಂ.ಸಿಬ್ಬಂದಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















