ಮಡಿಕೇರಿ :ಕರ್ನಾಟಕ ರಾಜ್ಯ ಸರಕಾರ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ರವರ ಮಹತ್ವಕಾಂಕ್ಷೆಯ “ಪ್ರಜಾ ಸೇವೆ ಆಂದೋಲನ”ದ ಮೊದಲ ಸಭೆ ಇಂದು ಮಡಿಕೇರಿಯಲ್ಲಿ ಜರುಗಿತು.
ಮಡಿಕೇರಿಯ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಪ್ರಜಾಸೇವೆ’ ಕಾರ್ಯಕ್ರಮವನ್ನು ಇಂದು ಮಾನ್ಯ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ನರೇಂದ್ರ ಸ್ವಾಮಿ ರವರೊಂದಿಗೆ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಉದ್ಘಾಟಿಸಿ, ಸಾರ್ವಜನಿಕ ಸೇವೆಗಳಿಗೆ ಚಾಲನೆ ನೀಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯವರಾದ ಶ್ರೀ ಎ.ಎಸ್ ಪೊನ್ನಣ್ಣ ರವರು, ಜನರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಾ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶ್ರೀ ಡಿ.ಕೆ ಶಿವಕುಮಾರ್ ನೇತೃತ್ವದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರವು ಸದಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ಚಿಂತಿಸುತ್ತಿದೆ. ಅದರ ಭಾಗವಾಗಿ ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು “ಪ್ರಜಾ ಸೇವೆ” ಎಂಬ ಹೊಸ ಆಂದೋಲನವನ್ನು ಆರಂಭಿಸಿದ್ದು, ಈ ಕಾರ್ಯಕ್ರಮದಲ್ಲಿ ಪ್ರತಿ 15 ದಿನಗಳಿಗೊಮ್ಮೆ ರಾಜ್ಯದ ಸಚಿವರುಗಳು ಪ್ರತ್ಯೇಕ ತಾಲೂಕುಗಳಲ್ಲಿ ಅಧಿಕಾರಿಗಳ ಹಾಗೂ ಶಾಸಕರುಗಳ ಸಮ್ಮುಖದಲ್ಲಿ ವಿಶೇಷ ಸಭೆಗಳನ್ನು ನಡೆಸಿ ಜನರ ಸಮಸ್ಯೆಗಳನ್ನು ಆಲಿಸುವುದರೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಜನರ ಸೇವೆಯನ್ನು ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದಾರೆ. ಇಂದು ಮಡಿಕೇರಿಯಲ್ಲಿ ಈ ಕಾರ್ಯಕ್ರಮದ ಮೊದಲ ಸಭೆಯು ನಡೆಯುತ್ತಿದ್ದು ಕೊಡಗು ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ದೊರಕಿದಂತಾಗಿದೆ. ಮುಂದೆ ಸತತವಾಗಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಜನಸಾಮಾನ್ಯರಿಗೆ ಆಡಳಿತ ವರ್ಗಕ್ಕೆ ತಮ್ಮ ದೂರು ದುಮ್ಮಾನಗಳನ್ನು ಸಲ್ಲಿಸಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಇದು ಮತ್ತಷ್ಟು ಸಹಕಾರಿಯಾಗಲಿದೆ .
ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳು ಹಾಗೂ ಅಗತ್ಯ ನಾಗರಿಕ ಸೇವೆಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ನೇರವಾಗಿ, ಸುಲಭವಾಗಿ ತಲುಪಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಸರ್ಕಾರದ ಸೌಲಭ್ಯಗಳು ಪಾರದರ್ಶಕವಾಗಿ ಸಿಗಬೇಕು ಹಾಗೂ ಸಾರ್ವಜನಿಕರ ಕುಂದುಕೊರತೆಗಳು ಒಂದೇ ವೇದಿಕೆಯಲ್ಲಿ ಪರಿಹಾರವಾಗಬೇಕು ಎಂಬ ಆಶಯವನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಲಾಯಿತು.
ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅವರ ಏಳಿಗೆಗೆ ಶ್ರಮಿಸುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆಯೆಂದರು.
ಈ ಸಂದರ್ಭದಲ್ಲಿ ಮಡಿಕೇರಿ ಶಾಸಕರಾದ ಶ್ರೀ ಮಂತರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿಗಳಾದ ಶ್ರೀ ಸೋಮಶೇಖರ್, ಮಡಿಕೇರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಮಂದ್ರೀರ ಮೋಹನ್ ದಾಸ್, ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
✍️ವರದಿ: ಪ್ರಿತುನ್ ಪೂವಣ್ಣ



















