ಕೊಳ್ಳೇಗಾಲ : ತಾಲ್ಲೂಕಿಗೆ ಒಳಪಡುವ
ಹನೂರು ವಿಧಾನಸಭಾ ವ್ಯಾಪ್ತಿಗೆ ಸೇರಿದ
ಚಿಕ್ಕಲ್ಲೂರು ರಸ್ತೆಯಲ್ಲಿ 5.5 ಕೋಟಿ ರೂ. ವೆಚ್ಚದಲ್ಲಿ ಎರಡು ಸೇತುವೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ ಹನೂರು ಶಾಸಕ ಎಂ.ಆರ್ ಮಂಜುನಾಥ್ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಘೋಷಿಸಿದರು.
ಕೊಳ್ಳೇಗಾಲ ಕ್ಷೇತ್ರದ ಗ್ರಾಮೀಣ ಭಾಗಗಳ ಮೂಲಸೌಕರ್ಯ ಬಲಪಡಿಸುವ ನಿಟ್ಟಿನಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಚಿಕ್ಕಲ್ಲೂರು ರಸ್ತೆಯಲ್ಲಿ ಗೋನಾಳ ಬಸವೇಶ್ವರ ದೇವಸ್ಥಾನದ ಸಮೀಪ ಹಳ್ಳದಲ್ಲಿ ಲೋಕೋಪಯೋಗಿ ಇಲಾಖೆಯ 2.50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಹಾಗೂ ಕೊತ್ತನೂರಿನ ಜಿ.ವಿ. ಗೌಡ ಶಾಲೆ ಸಮೀಪ ಹಳ್ಳದಲ್ಲಿ 3.ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಒಟ್ಟು 5.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ. ಆರ್. ಮಂಜುನಾಥ್ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಶಾಸಕ ಎಂ.ಆರ್. ಮಂಜುನಾಥ್ ರವರು ಮಾತನಾಡಿ
ಬಹುದಿನಗಳಿಂದ ಈ ಭಾಗದ ಜನರು ಎದುರಿಸುತ್ತಿದ್ದ ಸಂಚಾರದ ಸಮಸ್ಯೆಗಳಿಗೆ ಸೇತುವೆಗಳ ಅಭಿವೃದ್ಧಿ ಪರಿಹಾರ ಒದಗಿಸಲಿದ್ದು, ಮಳೆಗಾಲದಲ್ಲಿ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಳ್ಳುವಂತಹ ಪರಿಸ್ಥಿತಿಯನ್ನು ತಪ್ಪಿಸಲು ಸೇತುವೆಗಳ ನಿರ್ಮಾಣದಿಂದ ಸುತ್ತಮುತ್ತಲಿನ ಗ್ರಾಮಗಳ ಜನರು, ವಿದ್ಯಾರ್ಥಿಗಳು, ರೈತರು ಹಾಗೂ ವಾಹನ ಸವಾರರಿಗೆ ಸುಗಮ, ಸುರಕ್ಷಿತ ಹಾಗೂ ನಿರಂತರ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜನರ ದೈನಂದಿನ ಬದುಕಿಗೆ ನೇರವಾಗಿ ಅನುಕೂಲವಾಗುವ ರಸ್ತೆ, ಸೇತುವೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಕುಮಾರ್, ನಾಗರಾಜು, ಭದ್ರ, ಲೋಕೇಶ್, ಷಣ್ಮುಖ, ಮಹೇಶ್, ಮಹದೇವಸ್ವಾಮಿ, ಪಾಪಣ್ಣ, ಮಲಯಪ್ಪ, ನಾಗಣ್ಣ, ಬಸವರಾಜು, ರಾಜಗೋಪಾಲ್, ಮಂಜೇಶ್ ಗೌಡ, ಮಣಿ, ಗೋವಿಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ ಬೆಂಗಳೂರು.




















