ಮಾನವನೆಂದಾಗ ಎಲ್ಲರೂ ಒಂದೇ ಎಂಬ ಸಮಭಾವದ ಮನಸ್ಥಿತಿ ತಳೆದವನೇ ನಿಜ ಮನುಜ ಎಂದಿಗೂ ಭೇದ-ಭಾವದ ಕಲುಷಿತ ಮನದಿಂದ ಹೊರತಾಗಿರುವವನು.
ಜಾತಿಯ ಭ್ರಮೆಗೆ ಜೋತುಬಿದ್ದು,
ಧರ್ಮದ ಅಮಲಿನಲ್ಲಿ ತೇಲುವ ನರಮಾನವ,
ಬದುಕಿನಲ್ಲೂ ಬರಿ ವಿಷವನ್ನೇ ಕಕ್ಕಿ,ಬಿತ್ತಿ,ನರಕದಲ್ಲೂ ಜಾತಿಯತೆಯೆಂಬ ಕೂಪದ ಮತ್ತಿನಲ್ಲಿ ತೇಲುವನು.
ನಿತ್ಯವೂ ತನ್ನ ಜನ್ಮಜಾತಿಯನು ಮರೆಮಾಚಿ, ಸಮಾಜದ ಅನುಮಾನದ ನೋಟಕೆ ಯಾತನೆಯ ನೋವುಂಡವನಿಗೆ ಮಾತ್ರ ಗೊತ್ತು,
ಈ ಸೃಷ್ಟಿಯ ಸಮಾನತೆಯ ಮೂಲ ಆದರೆ,ಕಾಗದದ ನಿಯಮಗಳ ಸರಕಾರಗಳು ಮಾತ್ರ, ಮರೆಮಾಚಿದ ಜಾತಿಯ ಬಣ್ಣವನು ಬಹಿರಂಗವಾಗಿ ಸಾರುವುವು…
ಹೊಲೆಯ, ಮಾದಿಗ, ಲಂಬಾಣಿ,ಬೋವಿ-ವಡ್ಡ,ಕೊರಮ,ಕೊರಚ,ಕುರುಬ,ಗೌಡ, ಲಿಂಗಾಯತವೆಂಬ ಚೌಕಟ್ಟಿನಲ್ಲಿ…
ಅಬ್ಬಾ!
ಈ ಜಾತಿಯ ಗೋಡೆಗಳ ನಡುವೆ
ಹೇಗೆ ಬೆಸೆಯುವುದು ಕಡಿದುಬಿದ್ದ ಮಾನವ ಸಂಬಂಧವ?
ಹೇಗೆ ಮರೆಮಾಚುವುದು ಈ ಸಮಾಜವನ್ನಾವರಿಸಿದ ಜಾತಿಯತೆಯೆಂಬ ಕತ್ತಲೆಯ ಕೂಪವನು?.
- ಡಾ. ಸುರೇಶ್. ಎಸ್. ವಡಗಲಪುರ.




















