ಚಾಮರಾಜನಗರ/ ಗುಂಡ್ಲುಪೇಟೆ: ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ-ಲಿಂಗಾಯಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬಸವೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಪಟ್ಟಣದ ಜೆ.ಎಸ್.ಎಸ್ ಕಾಲೇಜು ಬಳಿ ಬಸವೇಶ್ವರ ಪ್ರತಿಮೆಯನ್ನು ಮೂರ್ತಿಯನ್ನು ಅಲಂಕೃತ ವಾಹನದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಾಸಕ ಎಚ್.ಎಂ.ಗಣೇಶಪ್ರಸಾದ್ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಇದಕ್ಕೆ ಸಾಥ್ ನೀಡಿದರು.
ಬಸವ ಜಯಂತಿ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣಗಳಿಂದ ಅಲಂಕಾರಗೊಳಿಸಲಾಗಿತ್ತು. ಬಸವೇಶ್ವರರ ಭಾವಚಿತ್ರ ಇರುವ ಬಂಟಿಂಗ್ಸ್ ಗಳನ್ನು ಕಟ್ಟಲಾಗಿತ್ತು ಹಾಗೂ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಬೃಹತ್ ಗಾತ್ರದ ಕಟೌಟ್ ಹಾಕಿ ದೀಪಾಲಂಕಾರ ಮಾಡಲಾಗಿತ್ತು. ಜಯಂತಿ ಹಿನ್ನೆಲೆಯಲ್ಲಿ ಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಬಳಿ ಸೋಮವಾರ ಬೆಳಗ್ಗೆ ವೀರಶೈವ-ಲಿಂಗಾಯಿತ ಸಮುದಾಯದ ಮಂದಿ ಸಾವಿರ ಸಂಖ್ಯೆಯಲ್ಲಿ ಸೇರಿದ್ದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಯುವಕರು ಕೇಸರಿ ಟವಲ್ ಧರಿಸಿ ಬಸವೇಶ್ವರಿಗೆ ಜೈಕಾರ ಹಾಕುತ್ತಾ ಡಿಜೆ ಶಬ್ದಕ್ಕೆ ಕುಳಿದು ಕುಪ್ಪಳಿಸಿದ ದೃಶ್ಯ ಕಂಡುಬಂದಿತು.
ವಿಜೃಂಭಣೆಯ ಮೆರವಣಿಗೆ: ಪಟ್ಟಣ ಜೆಎಸ್ಎಸ್ ಕಾಲೇಜು ಬಳಿಯಿಂದ ಆರಂಭವಾದ ಬಸವೇಶ್ವರರ ಪ್ರತಿಮೆ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂದಿಧ್ವಜ, ವೀರಭದ್ರ ಕುಣಿತ, ಗೊರವರ ಕುಣಿತ, ಡೊಳ್ಳುಕುಣಿತ, ಕೇರಳದ ಚೆಂಡೆ ವಾದ್ಯ, ಬ್ಯಾಂಡ್ ಸೆಟ್, ಮಂಗಳವಾದ್ಯ, ಹುಲಿ ವೇಷ ಮತ್ತು ನಗಾರಿ ಸೇರಿದಂತೆ ಹಲವು ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ ಮೂಲಸ್ಥಾನದಲ್ಲಿ ಕೊನೆಗೊಂಡಿತು.
ವರದಿ ಗುಂಡ್ಲುಪೇಟೆ ಕುಮಾರ್



















