ಬಳ್ಳಾರಿ / ಕಂಪ್ಲಿ: ಧರ್ಮದ ಭೌತಕ ಲಾಂಚನಗಳಿಂದ ಎಲ್ಲರೂ ಒಂದಾಗದಿದ್ದರೂ, ಗಿಡ ಮರಗಳನ್ನು ಬೆಳೆಸುವ ಮೂಲಕ ಹಾಳಾಗುತ್ತಿರುವ ಪರಿಸರವನ್ನು ಉಳಿಸುವ, ಪ್ರೀತಿಸುವ ಮೂಲಕ ಎಲ್ಲರೂ ಒಂದಾಗೋಣ, ಈ ನಿಟ್ಟಿನಲ್ಲಿ ಶ್ರೀಮಠದಲ್ಲಿ ಜು. 26 ರಿಂದ ಜು.31ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಮ್ಮಿಗನೂರು ಹಂಪಿ ಸಾವಿರದೇವರು ಶ್ರೀಗುರು ಮಹಾಂತರ ಮಠದ ಪೀಠಾಧಿಪತಿಗಳಾದ ಷ.ಬ್ರ. ಶ್ರೀಗುರು ವಾಮದೇವ ಮಹಾಂತ ಶಿವಾಚಾರ್ಯ ಶ್ರೀಗಳು ತಿಳಿಸಿದರು. ಅವರು ಎಮ್ಮಿಗನೂರು ಗ್ರಾಮದ ಶ್ರೀಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಶ್ರೀಮಠದ ಲಿಂ ಶ್ರೀ.ಷ.ಬ್ರ. ಶ್ರೀಗುರುಸಿದ್ದಲಿಂಗಮಹಾತ ರಾಜದೇಶೀಕೇಂದ್ರ ಶೀವಾಚಾರ್ಯ ರಾಜಗುರುಗಳ ಲಿಂಗಾಂಗ ಸಾಮರಸ್ಯದ 25ನೇ ಪುಣ್ಯ ಸ್ಮರಣೋತ್ಸವ, ಶ್ರೀಮಠದ ಮಹಾದ್ವಾರ ಉದ್ಘಾಟನೆ, ಪ್ರತಿಭಾ ಪುರಸ್ಕಾರ , ಗುರುವಂದನ, ವೈದ್ಯದೇವೋಭವ, ದೇಶಸೇವೆ, ಈಶಸೇವೆ, ಕೃಷಿಸೇವೆ, ತುಲಾಬಾರ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಶ್ರೀಮಠದ ಆವರಣದೊಳಗೆ ಜು.26ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಅಂದು ಸಂಜೆ 6-45ಕ್ಕೆ ಸಿದ್ಧಾಂತ ಶಿಖಾಮಣಿ ಪ್ರವಚನ ಹಾಗೂ ಭಾವೈಕ್ಯ ಚಕ್ರವರ್ತಿ ಸಂತ ಶಿಶುನಾಳ ಷರಿಫರ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ.
ಮಸ್ಕಿಯ ಗಚ್ಚಿನಮಠದ ಷ.ಬ್ರ. ವರರುದ್ರಮುನಿ ಶಿವಾಚಾರ್ಯರು ಸಿದ್ಧಾಂತ ಶಿಖಾಮಣಿ ಪ್ರವಚನ ಮತ್ತು ಬಸವನಬಾಗೇವಾಡಿ ಹಿರೇಮಠದ ಪ್ರವಚನ ಭಾಸ್ಕರ ಷ.ಬ್ರ. ಶಿವ ಪ್ರಕಾಶ ಶಿವಾಚಾರ್ಯರು ಶಿಶುನಾಳ ಷರಿಫರ ಪುರಾಣ ಪ್ರವಚನ ನಡೆಸಿಕೊಡಲಿದ್ದು, ತಾಳಿಕೋಟೆಯ ಪರಶುರಾಮ ಚಟ್ನಳ್ಳಿ ಸಂಗೀತ ಸೇವೆ ಮತ್ತು ತಾಳಿಕೋಟೆಯ ಯಲ್ಲಪ್ಪ ಗುಂಡಳ್ಳಿ ತಬಲಾ ಸೇವೆಯನ್ನು ನೀಡಲಿದ್ದಾರೆ.
ಜು.28ರಂದು ವೈದ್ಯದೇವೋಭವ ಕಾರ್ಯಕ್ರಮದಡಿಯಲ್ಲಿ ಪ್ರಖ್ಯಾತ ವೈದ್ಯರನ್ನು ಸ್ಮರಿಸುವ ಮೂಲಕ ಗೌರವ ಸಮರ್ಪಣೆ ನಡೆಯಲಿದೆ. ಜು.29ರಂದು ಗುರುಪೌರ್ಣಿಮೆ, ಗುರುವಂದನ ಹಾಗೂ ತುಲಾಭಾರ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳಿಗೆ ಈಶಸೇವೆ ತುಲಾಭಾರ, ನಿವೃತ್ತ ಸೈನಿಕರಿಗೆ ದೇಶಸೇವೆ ತುಲಾಭಾರ ಮತ್ತು ಋಷಿ ಕೃಷಿ ಸೇವೆಯಲ್ಲಿ ವೇದಮೂರ್ತಿ ಪಂಪಾಪತಿ ಶಾಸ್ತ್ರಿಗಳಿಗೆ ಹಾಗೂ ಪ್ರಗತಿಪರ ರೈತರಿಗೆ ತುಲಾಭಾರ ಕಾರ್ಯಕ್ರಮಗಳು ಹಾಗೂ ಶ್ರೀಮಠದ ವಾಮದೇವ ಮಹಾಂತ ಶಿವಾಚಾರ್ಯರಿಗೆ ವಿಶೇಷ ತುಲಾಭಾರ ಕಾರ್ಯಕ್ರಮಗಳು ಜರುಗಲಿವೆ. ಜು.30ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ತಾಲ್ಲೂಕಿನಲ್ಲಿ ಹತ್ತನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಜು.31ರಂದು ಕತೃಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪುರಾಣ ಮಹಾಮಂಗಳ ಹಾಗೂ ಮಹಾ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದ ಅವರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಾಸಕರು, ಸಂಸದರು, ಸಚಿವರು, ಹಾಲಿ,ಮಾಜಿ ಜನಪ್ರತಿನಿಧಿಗಳು, ನಾಡಿನ ವಿವಿಧ ಮೂಲೆಗಳಿಂದ ಹರಗುರು ಚರಮೂರ್ತಿಗಳು, ಅಧಿಕಾರಿಗಳು ಭಾಗವಹಿಸಲಿದ್ದು, ತಾಲ್ಲೂಕು ಮತ್ತು ಜಿಲ್ಲೆಯ ಎಲ್ಲಾ ಧರ್ಮಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು
ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















