ಬಳ್ಳಾರಿ / ಕಂಪ್ಲಿ : ಪರಿಸರ ಸಂರಕ್ಷಣೆಗೆ ಎಚ್ಚರವಹಿಸದಿದ್ದರೆ, ಬೆನ್ನಿಗೆ ಆಕ್ಸಿಜನ್ ಕಿಟ್ ಕಟ್ಟಿಕೊಂಡು ಓಡಾಡುವ ಸ್ಥಿತಿ ಬರಲಿದೆ’ ಎಂದು ಕೆಸಿಬಿ ಎಜ್ಯುಕೇಷನಲ್ ಟ್ರಸ್ಟ್ ನ ಕಾರ್ಯದರ್ಶಿ ಕೆ.ಎಸ್.ಚಾಂದ್‌ಬಾಷಾ ತಿಳಿಸಿದರು.
ಅವರು ಸ್ಥಳೀಯ ಸಣಾಪುರ ರಸ್ತೆಯಲ್ಲಿರುವ ಕೆಸಿಬಿ ಎಜ್ಯುಕೇಷನಲ್ ಟ್ರಸ್ಟ್, ರೈನ್‌ಬೋ ಸಮೂಹ ವಿದ್ಯಾಸಂಸ್ಥೆಯ ರೈನ್ ಬೋ ಗ್ಲೋಬಲ್ ಸ್ಕೂಲ್ ಮತ್ತು ರೈನ್‌ಬೋ ಕಾಲೇಜಿನಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ನಾಗರಿಕರು ಮನೆ ಬಳಿ ಒಂದು ಗಿಡವನ್ನಾದರೂ ನೆಟ್ಟು ಬೆಳೆಸಲು ಯತ್ನಿಸಬೇಕು’ ಎಂದು ಸಲಹೆ ಮಾಡಿದರು.
ಶಾಲಾ ಕಾಲೇಜು, ಅವರಣದಲ್ಲಿ ಸಸಿಗಳನ್ನು ನೆಟ್ಟು ಹಾಗೂ ಪಾಲಕರಿಗೆ ಸಸಿಗಳನ್ನು ನೀಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಶುಕ್ರವಾರ ಆಚರಿಸಲಾಯಿತು.
ವಿದ್ಯಾರ್ಥಿಗಳಿಗೆ ‘ಕಾಡು ಉಳಿಸಿ ನಾಡು ಬೆಳೆಸಿ’ ಎಂಬ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಾಲಾ ಕಾಲೇಜಿನ ಗುರುವೃಂದ ಪರಿಸರ ದಿನಾಚರಣೆಯ ಬಗ್ಗೆ ತಿಳಿಸಿಕೊಟ್ಟರು.
ಪರಿಸರ ಮತ್ತು ಮಾನವೀಯತೆಯ ಉಳಿವಿಗಾಗಿ, ಪ್ರಕೃತಿ, ಪರಿಸರ, ಸಸ್ಯಗಳ ಮಹತ್ವವನ್ನು ಸಮಾಜದ ಎಲ್ಲರಿಗೂ ಸಾರುವುದಕ್ಕಾಗಿ, ಪರಿಸರ ಜಾಗೃತಿ ಮತ್ತು ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವುದಕ್ಕಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಂತರ ಶಾಲಾ ಕಾಲೇಜಿನ ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಸಸಿ ಗಿಡಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟ್ ನ ಅಧ್ಯಕ್ಷ ಕೆ.ಎಸ್.ಶಾರುಖ್ ಪದಾಧಿಕಾರಿಗಳಾದ ಕೆ ಎಸ್ ಮಹೇಬೂಬ್, ಪ್ರಾಂಶುಪಾಲರು, ಉಪನ್ಯಾಸಕ ವರ್ಗ, ಶಿಕ್ಷಕ ವೃಂದ ಸೇರಿದಂತೆ ಪಾಲಕ ಪೋಷಕರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















