ಬಳ್ಳಾರಿ / ಕಂಪ್ಲಿ : ಕಾರ್ಮಿಕ ಕಾನೂನುಗಳಲ್ಲಿ ಬಂಡವಾಳಿಗರ ಪರವಾದ ತಿದ್ದುಪಡಿಗಳನ್ನು ಮಾಡದಂತೆ ಆಗ್ರಹಿಸಿ, ಪ್ರಗತಿಪರ ಮತ್ತು ರೈತಪರ ಹೋಗಾಟಗಾರರ ಸಂಘದಿಂದ ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಮಂಜುನಾಥ ನಾಯಕಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.
ನಂತರ ಮುಖಂಡ ಕರಿಯಪ್ಪ ಗುಡಿಮನಿ ಮಾತನಾಡಿ, ‘ರಾಸ್ ಆಫ್ ಡೂಯಿಂಗ್ ಬ್ಯುಸಿನೆಸ್” ಎಂಬ ನೆಪದಲ್ಲಿ ರಾಜ್ಯ ಸರ್ಕಾರದ ಮೇಲೆ ಕಾರ್ಪೊರೇಟ್ ಬಂಡವಾಳಿಗರು ಹಾಗು ಕೇಂದ್ರ ಸರ್ಕಾರವು ಹಲವು ರೀತಿಯ ಒತ್ತಡಗಳನ್ನು ಹೇರುವ ಮೂಲಕ ರಾಜ್ಯದಲ್ಲಿ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತಿರುವುದು ಬಹಿರಂಗವಾಗಿದೆ. ಈ ತಿದ್ದುಪಡಿಗಳು ಜಾರಿಯಾದಲ್ಲಿ ರಾಜ್ಯದ ಬಹುಸಂಖ್ಯೆಯ ಸಂಘಟಿತ, ಅಸಂಘಟಿತ ಕಾರ್ಮಿಕರು ಹಾಗೂ ದುಡಿಯುವ ಜನ ಕಾನೂನುಗಳ ರಕ್ಷಣೆಯಿಂದ ಹೊರಗಾಗುತ್ತಾರೆ. ಹಾಗೂ ಈಗಾಗಲೇ ಉದ್ಯೋಗದಲ್ಲಿರುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸಂಭವಗಳು ಹೆಚ್ಚಾಗುತ್ತದೆ. ಕನಿಷ್ಟ ವೇತನವನ್ನು ಅವೈಜ್ಞಾನಿಕವಾಗಿ ನಿಗಧಿಪಡಿಸುವುದು. ಕೈಗಾರಿಕಾ ವಿವಾದಗಳನ್ನು ಇತ್ಯರ್ಥ ಮಾಡಲು ಕಾಲಹಗರಣ ಮಾಡುವುದು. ಹೀಗೆ ಹಲವು ಸಮಸ್ಯೆಗಳು ಕಾರ್ಮಿಕರ ಹೊಟ್ಟೆ ಮೇಲೆ ಬರೆಯುವುದು ಸತ್ಯ. ಆದ್ದರಿಂದ ಕಾರ್ಮಿಕ ಕಾನೂನುಗಳಲ್ಲಿ ಬಂಡವಾಳಿಗರ ಪರವಾದ ತಿದ್ದುಪಡಿಗಳನ್ನು ಮಾಡದಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತರಾಜ ಕಹಳೆ, ಬಂಡಿ ಬಸವರಾಜ, ನೀಲಪ್ಪ ಪೇಂಟರ್ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















