ಬಳ್ಳಾರಿ/ ಕಂಪ್ಲಿ: ತಾಲ್ಲೂಕಿನ ತುಂಗಭದ್ರಾ ಬಲದಂಡೆ ಕೆಳಮಟ್ಟದ ಮತ್ತು ಮೇಲ್ಮಟ್ಟದ ಕಾಲುವೆ, ವಿಜಯನಗರ ಕಾಲುವೆಗಳು ಸೇರಿದಂತೆ ಕೆರೆಗಳಿಗೆ ಜಲಾಶಯದಿಂದ ನೀರನ್ನು ಬಿಡಲಾಗಿದ್ದು, ಇವುಗಳ ವ್ಯಾಪ್ತಿಯಲ್ಲಿ ಭತ್ತ ನಾಟಿಗೆ ಪೂರ್ವ ಸಿದ್ಧತೆಗಳು ನೆಡೆದಿರುವುದು ಒಂದೆಡೆಯಾದರೆ, ನದಿ ತೀರ ಹಾಗೂ ಪಂಪ್ಸೆಟ್ ಆಧಾರಿತ ಜಮೀನುಗಳಲ್ಲಿ ಭತ್ತದ ನಾಟಿ ಕಾರ್ಯಗಳು ಭರದಿಂದ ಸಾಗಿರುವುದು ಮತ್ತೊಂದೆಡೆಯಾಗಿದ್ದು, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕು ಪಡೆದಿದ್ದು, ಕಂಪ್ಲಿ ತಾಲ್ಲೂಕಿನಲ್ಲಿ ರೈತರ ಚಿತ್ತ ಭತ್ತ ನಾಟಿಯಾತ್ತ ಸಾಗಿದೆ.
ಕೊಳವೆಬಾವಿ ಮತ್ತು ಏತ ನೀರಾವರಿ ವ್ಯಾಪ್ತಿಯಲ್ಲಿ ಜಮೀನಿನ ಒಂದು ಭಾಗದಲ್ಲಿ ಸೋನಾ ಮಸೂರಿ, ಆರ್ಎನ್ಆರ್, ನೆಲ್ಲೂರುಸೋನಾ ಮತ್ತು 1010 ತಳಿಯ ಭತ್ತದ ಸಸಿಗಳು ನಾಟಿಗಾಗಿ ಸಿದ್ಧವಾಗಿವೆ. ಗದ್ದೆಯ ಮಣ್ಣಿನ ಫಲವತ್ತತೆಗಾಗಿ ಹಲವು ರೈತರು ಹಸಿರೆಲೆ ಗೊಬ್ಬರಗಳಾದ ಸೆಣಬು, ಡಯಾಂಚ,ಪಿಳ್ಳೆ ಪಿಸಿರು ಬೆಳೆದಿದ್ದು, ಅವುಗಳನ್ನು ನಾಟಿಗೂ ಮುನ್ನ ಮಣ್ಣಿಗೆ ಸೇರಿಸುವ ಕಾರ್ಯವನ್ನು ಮಾಡುತ್ತಾರೆ. ಇನ್ನು ಕೆಲವು ರೈತರು ಜಮೀನುಗಳನ್ನು ಹದಗೊಳಿಸುವಂತ ಮಗ್ನರಾಗಿದ್ದಾರೆ.
ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಜು.10 ರಂದು ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಹಾಗೂ ಕೆಳಮಟ್ಟದ ಕಾಲುವೆಗಳಿಗೆ, ವಿಜಯನಗರ ಕಾಲುವೆಗಳಿಗೆ, ಕೆರೆಗಳಿಗೆ ಹಾಗೂ ವಿತರಣಾ ನಾಲೆಗಳಿಗೆ ನೀರನ್ನು ಬಿಡುಗಡೆ ಮಾಡಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಎಲ್ಎಲ್ಸಿ ಮತ್ತು ಎಚ್ಎಲ್ಸಿ ಕಾಲುವೆಗಳ ವಿತರನಾ ನಾಲೆ (ರೂಬು) ಗಳ ದುರಸ್ತಿಯಾದರೆ ಕೊನೆ ಅಚ್ಚುಕಟ್ಟು ಜಮೀನುಗಳಿಗೆ ನೀರು ತಲುಪತ್ತದೆ.ಅಧಿಕಾರಿಗಳು ಶೀಘ್ರವಾಗಿ ಗಮನ ಹರಿಸಬೇಕು ಎಂದು ರೈತ ಸಂಘದ ವಿವಿಧ ಸಂಘಟನೆಗಳು ಆಗ್ರಹಿಸಿದರು.
ಕಂಪ್ಲಿ ತಾಲ್ಲೂಕು ಭತ್ತ ನಾಟಿ ಪ್ರದೇಶಃ- ತುಂಗಭದ್ರಾ ಬಲದಂಡೆ ಕೆಳಮಟ್ಟ,ಮೇಲ್ಮಟ್ಟ ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 12,800 ಹೆಕ್ಟೇರ್ ಜಮೀನಿಲ್ಲಿ ಭತ್ತದ ನಾಟಿ ಮಾಡಲಾಗುತ್ತಿದೆ. ತಾಲ್ಲೂಕಿನ ರಾಮಸಾಗರ,ನಂ10 ಮುದ್ದಾಪುರ,ಕಂಪ್ಲಿ,ಕೋಟೆ ಹಳೇ ಮಾಗಾಣಿ,ಬೆಳಗೋಡುಹಾಳು, ಸಣಾಪುರ,ಇಟಗಿ,ನಂ2 ಮುದ್ದಾಪುರ, ದೇವಸಮುದ್ರ, ಮೆಟ್ರಿ,ದೇವಲಾಪುರ,ಹಂಪದೇವನಹಳ್ಳಿ, ಸುಗ್ಗೇನಹಳ್ಳಿ ಸೇರಿದಂತೆ ವಿಜಯನಗರ ಕಾಲುವೆ, ತುಂಗಭದ್ರಾ ನದಿ ಪಾತ್ರದ ಇತರೆ ಗ್ರಾಮಗಳಲ್ಲಿ ಸುಮಾರು 8,870 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ನಡೆಯುತ್ತಿದೆ. ನದಿ ಪಾತ್ರದ ಕೆಲವು ಗ್ರಾಮಗಳಲ್ಲಿ ಹಾಗೂ ಪಂಪ್ಸೆಟ್ ಆಧಾರಿತ ಕೆಲವು ಜಮೀನುಗಳಲ್ಲಿ ಭತ್ತದ ನಾಟಿ ಕಾರ್ಯ ಮುಗಿಯುವ ಹಂತದಲ್ಲಿದೆ.
ಭತ್ತ ಸಸಿ ಮಡಿಗಳನ್ನು ತಯಾರಿಸುವ ಮೊದಲು ಭತ್ತದ ಬೀಜಗಳನ್ನು ಬೀಜೋಪಚಾರ ಮಾಡಬೇಕು, ಭತ್ತದ ನಾಟಿಗೂ ಮುನ್ನ ಗದ್ದೆಗೆ ಕೊಟ್ಟಿಗೆ ಗೊಬ್ಬರ, ಎರೆಹುಳ, ಹಸಿರೆಲೆ ಗೊಬ್ಬರ ಸೇರಿಸಬೇಕು.ಅಧಿಕೃತ ಮಾರಾಟಗಾರರ ಬಳಿ ಬಿತ್ತನೆ ಬೀಜ, ಕೃಷಿ ಪರಿಕರ ಖರೀದಿಸಿ ಕಡ್ಡಾಯವಾಗಿ ಬಿಲ್ ಪಡೆಯಬೇಕು.
- ಕೆ.ಸೋಮಶೇಖರ, ಪ್ರಭಾರಿ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕಂಪ್ಲಿ.
ಪ್ರಸಕ್ತ ಸಾಲಿನ ಮುಂಗಾರು ಬೆಳೆಗೆ ಜು.10ರಿಂದ ತುಂಗಭದ್ರಾ ಬಲಭಾಗದ ಎಲ್ಎಲ್ ಮತ್ತು ಎಚ್ಎಲ್ಸಿ ಕಾಲುವೆಗೆ ನೀರು ಹರಿಸಿದ ಹಿನ್ನಲೆ ಮೇಲ್ಮಟ್ಟದ ಮತ್ತು ಕೆಳಭಾಗದ ರೈತರು ಭತ್ತ ಸೇರಿದಂತೆ ನಾನಾ ಬೆಳೆಗಳ ನಾಟಿಯತ್ತ ಮುಖ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಪ್ರದೇಶದಲ್ಲಿ ಭೂಮಿ ಹದಗೊಳಿಸಿ ಭತ್ತದ ನಾಟಿ ಚುರುಕುಗೊಂಡಿದೆ. ನೀರನ್ನು ಮಿತವಾಗಿ ಬಳಕೆ ಮಾಡಿಕೊಂಡು, ಮುಂದಿನ ಬೆಳೆಗೆ ಬರುವ ನಿಟ್ಟಿನಲ್ಲಿ ಜಾಗೃತಿವಹಿಸಬೇಕು.
- ಎಲ್.ಎಸ್.ರುದ್ರಪ್ಪ, ರೈತ ಮುಖಂಡ, ಬುಕ್ಕಸಾಗರ.
ವರದಿ : ಜಿಲಾನಸಾಬ್ ಬಡಿಗೇರ



















