ಬಳ್ಳಾರಿ/ ಕಂಪ್ಲಿ : ಸ್ಥಳೀಯ ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇಂದು ಮಧ್ಯಾಹ್ನದಿಂದಲೇ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಸಂಜೆಯಾದರೂ ಜಿಟಿ ಜಿಟಿ ಮಳೆ ನಿರಂತರವಾಗಿ ಬರುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದ್ದು, ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖ ರಸ್ತೆಗಳು ಜನ,ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ.
ತಾಲ್ಲೂಕಿನಲ್ಲಿ ಮಂಗಳವಾರ ಸಂಜೆಯಿಂದ ರಾತ್ರಿಯವರೆಗೂ ನಿರಂತರವಾಗಿ ಮಳೆ ಸುರಿದಿತ್ತು. ಇಂದೂ ಸಹ ಮಧ್ಯಾಹ್ನದಿಂದಲೇ ನಿರಂತರವಾಗಿ ಆಗಾಗ ರಭಸದಿಂದ ಮತ್ತು ಆಗಾಗ ಜಿಟಿ ಜಿಟಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಜಿಟಿ ಜಿಟಿ ಮಳೆಯಿಂದಾಗಿ ದೈನಂದಿನ ಕೆಲಸ ಕಾರ್ಯಗಳಿಗೆ ಅಡಚಣೆಯಾಗಿದ್ದು, ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ.
ಕಾಲುವೆ, ಕೆರೆಗಳಿಗೆ ನೀರನ್ನು ಬಿಟ್ಟಿದ್ದು, ಮಳೆಯೂ ಚೆನ್ನಾಗಿ ಆಗಿದ್ದು, ಕೃಷಿ ಚಟುವಟಿಕೆಗಳು ಭರದಿಂದ ಸಾಗಿದ್ದವು,ಅದರಲ್ಲಿಯೂ ಭತ್ತದ ನಾಟಿ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದವು. ಆದರೆ ಕಳೆದೆರಡು ದಿನಗಳಿಂದ ಮಧ್ಯಾಹ್ನದಿಂದಲೇ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಹಾಗೂ ಭತ್ತದ ನಾಟಿ ಕಾರ್ಯಕ್ಕೆ ತಂದರೆಯಾಗಿದ್ದು, ಭತ್ತದ ನಾಟಿ ಕಾರ್ಯಕ್ಕೆ ತೆರಳಿದ್ದ ಕೃಷಿ ಕೂಲಿ ಕಾರ್ಮಿಕರು ಅರ್ಧದಲ್ಲಿಯೇ ಮನೆಗೆ ಹಿಂತಿರುಗುತ್ತಿದ್ದು, ಇದರಿಂದ ಜಮೀನಿನ ಮಾಲೀಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ನಿರಂತರ ಮಳೆಯಿಂದ ಆಗಾಗ ವಿದ್ಯುತ್ ಸಹಿತ ಕೈಕೊಡುತ್ತಿರುವುದು ಸಹಿತ ಜನರಿಗೆ ತೊಂದರೆಯಾಗಿದೆ.
ಸಂಜೆಯಾದರೂ ಮಳೆ ನಿರಂತರವಾದ್ದರಿಂದ ಶಾಲೆ, ಕಾಲೇಜುಗಳಿಗೆ ತೆರಳಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಸುರಿಯು ಮಳೆಯಲ್ಲಿಯೇ ಮನೆಗಳಿಗೆ ಹಿಂತಿರುಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಒಟ್ಟಾರೆ ಎರಡು ದಿನಗಳ ಮಳೆಯಿಂದ ತಾಲ್ಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ



















