
ಅಸ್ತಿತ್ವ ಹಾಗೂ ಅಧಿಕಾರಕ್ಕಾಗಿ ಸಮಾಜ ಸಂಘಟನೆ ಅಗತ್ಯ
ಬಾಗಲಕೋಟೆ/ ಬಾದಾಮಿ: ಮುಂದಿನ ಅಸ್ತಿತ್ವ ಹಾಗೂ ಅಧಿಕಾರಕ್ಕಾಗಿ ಎಲ್ಲರೂ ಬಣಜಿಗ ಸಮಾಜದ ಸಂಘಟನೆ ಮಾಡುವ ಅಗತ್ಯವಿದೆ ಎಂದು ಮಾಜಿ ಶಾಸಕ ಎಂ. ಕೆ. ಪಟ್ಟಣಶೆಟ್ಟಿ ಹೇಳಿದರು.
ಅವರು ರವಿವಾರ ನಗರದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಬಸವಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ.) ದ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ “ಬಣಜಿಗ ಸಮಾಜದ ತಾಲೂಕಾ ಬೃಹತ್ ಸಮಾವೇಶ ಹಾಗೂ ನಗರ ಘಟಕ ಉದ್ಘಾಟನಾ ಸಮಾರಂಭ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ”ವನ್ನು ಉದ್ದೇಶಿಸಿ ಮಾತನಾಡಿದರು. ಸಮಾಜ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಣಜಿಗ ಸಮಾದ ಬಾಂಧವರು ಮೂಲಕ ಉದ್ಯೋಗದ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಐಎಎಸ್, ಐಪಿಎಸ್, ಕೆಎಎಸ್ ಹುದ್ದೆಗೆ ಪ್ರಯತ್ನ ಮಾಡಿಸಬೇಕು, ಮುಂಬರುವ ಜಿ.ಪಂ, ತಾ.ಪಂ. ಚುನಾವಣೆಯಲ್ಲಿ ಸಮಾಜ ಬಾಂಧವರು ಸ್ಪರ್ಧೆ ಮಾಡಿ ಅಧಿಕಾರ ಪಡೆಯಬೇಕು ಎಂದು ಸಲಹೆ ನೀಡಿದರು.
ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ ಎ. ಸಿ. ಪಟ್ಟಣದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಇಂದು ಜಾತಿಗೊಂದು ಸಂಘಟನೆ ನಡೆಯುತ್ತಿದೆ. ಇದು ಬಹಳ ಬೇಸರ ತಂದಿದೆ. ಇಂದು ಹಿರಿಯ ಮಾರ್ಗದರ್ಶನದಂತೆ ಎಲ್ಲರೂ ಸಂಘಟಿತರಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ ಮಾತನಾಡಿ ಲಿಂಗಾಯತ ಸಮಾಜದಲ್ಲಿಯೇ ಬಣಜಿಗ ಶ್ರೇಷ್ಟವಾಗಿದ್ದು ಎಲ್ಲರೂ ಸಂಸ್ಕಾರದ ಜೀವನ, ಸೌಹಾರ್ಧತೆ, ಅನ್ಯವರ್ಗದವರೊಡನೆ ಉತ್ತಮ ಸಂಬಂಧದೊಂದಿಗೆ ಎಲ್ಲರೂ ಸಂಘಟಿತರಾಗಬೇಕಿದೆ ವೀರಶೈವ ಲಿಂಗಾಯತ ಸಮಾಜ ರಾಜ್ಯ, ದೇಶ ಆಳುವ ಯೋಗ್ಯತೆ ಇದೆ ಆದರೆ ಒಗ್ಗಟ್ಟಿನ ಕೊರತೆ ಇದೆ ಎಂದು ಹೇಳಿದರು.
ಶ್ರೀ ರಾಮಾರೂಢ ಮಠ, ಶಿರೋಳ ಇವರು ಸಾನಿಧ್ಯ ವಹಿಸಿ ಮಾತನಾಡಿದರು. ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಡಾ. ಅವಿನಾಶ ಜೆ. ಮಮದಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಬಣಜಿಗ ಸಮಾಜಕ್ಕೆ ಶಿಕ್ಷಣಕ್ಕಾಗಿ ೨ಎ ಹಾಗೂ ನೌಕರಿಗಾಗಿ ೩ಎ ಮೀಸಲಾತಿ ಇತ್ತು. ಏಪ್ರಿಲ್ ೨೦೨೫ ರಲ್ಲಿ ಶಿಕ್ಷಣಕ್ಕಾಗಿ ೨ಎ ಮೀಸಲಾತಿ ಅಮಾನ್ಯ ಮಾಡಿದೆ. ಇದಕ್ಕಾಗಿ ಎಲ್ಲರೂ ಅಸ್ತಿತ್ವ ಹಾಗೂ ಮುಂದಿನ ಅಧಿಕಾರಕ್ಕಾಗಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ ಎಂದರು ಹೇಳಿದರು.
ಸಂಸ್ಥೆಯ ನಿರ್ದೇಶಕ ಜಯದೇವ ಎಸ್. ಮಮದಾಪೂರ ಮಾತನಾಡಿದರು. ವೇದಿಕೆಯ ಮೇಲೆ ತಾಲೂಕಾ ಬಣಜಿಗ ಸಮಾಜದ ಗೌರವಾಧ್ಯಕ್ಷ ಸಿದ್ದಣ್ಣ ಆರ್. ಟೆಂಗಿನಕಾಯಿ, ಕೆರೂರ ಘಟಕದ ಬಣಜಿಗ ಸಮಾಜದ ಅಧ್ಯಕ್ಷ ಚನಮಲ್ಲಪ್ಪ ಎಂ. ಘಟ್ಟದ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರೈತರಿಗೆ, ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ರಾಚಣ್ಣ ಪಟ್ಟಣದ ಸ್ವಾಗತಿಸಿದರು. ಬಿ.ಸಿ.ಪ್ಯಾಟಿ, ಎಸ್.ಕೆ.ಜವಳಗದ್ದಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿ.ಎಸ್.ಶೆಟ್ಟರ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿದ ಭಾಗಗಳಿಂದ ಸಹಸ್ರಾರು ಬಣಜಿಗ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.
ವರದಿ : ನಿಂಬಯ್ಯ ಕುಲಕರ್ಣಿ, ಬಾದಾಮಿ



















